ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಕಪ್ತಾನ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿಯ ಮಾಲಕ ವಿಜಯ್ ಮಲ್ಯ ಸ್ಪಷ್ಟಪಡಿಸಿದ್ದಾರೆ.
ಕಪ್ತಾನನಾಗಿ ರಾಹುಲ್ ದ್ರಾವಿಡ್‌ರನ್ನೇ ಮುಂದುವರಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, "ಹಾಗಂತ ಯಾರು ಹೇಳಿದರು? ಅಷ್ಟಕ್ಕೂ ತಂಡದ ಮಾಲಕ ನಾನು. ಯಾರು ನಾಯಕನಾಗಬೇಕೆಂದು ನಾನು ನಿರ್ಧರಿಸಬೇಕು" ಎಂದುತ್ತರಿಸಿ ಬಾಯ್ಮುಚ್ಚಿಸಿದ್ದರು.
ರಾಹುಲ್ ದ್ರಾವಿಡ್‌ರನ್ನೇ ಈ ಅವಧಿಯಲ್ಲೂ ಕಪ್ತಾನನಾಗಿ ಮುಂದುವರಿಸಲು ಮಲ್ಯ ನಿರ್ಧರಿಸಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, "ಅಂತಿಮ ನಿರ್ಧಾರಕ್ಕೆ ಮೊದಲು ದ್ರಾವಿಡ್ ಜತೆ ಸಮಾಲೋಚನೆ ನಡೆಸುತ್ತೇನೆ. ಅವರು ಅನುಭವಿ, ವಿದ್ಯಾವಂತ ಮತ್ತು ಚಾಣಾಕ್ಷರಾಗಿರುವುದರಿಂದ ಹೆಚ್ಚಿನ ಚರ್ಚೆಗಳ ಅಗತ್ಯವಿಲ್ಲ" ಎಂದು ತಿಳಿಸಿದರು.
"ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನೀವು ನಿರೀಕ್ಷಿಸಿದರೆ ತಪ್ಪಾದೀತು. ಆದರೆ ಅಗತ್ಯಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದಿಗಿಂತ ಪ್ರಬಲ ತಂಡವನ್ನಾಗಿಸುವುದೇ ನನ್ನ ಉದ್ದೇಶ" ಎಂದು ತಂಡದ ಸದಸ್ಯರ ಬದಲಾವಣೆ ಬಗೆಗಿದ್ದ ಊಹಾಪೋಹಗಳಿಗೆ ಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿ ಮಲ್ಯ ತನ್ನ ಪಾಡಿಗೆ ಹೊರಟು ಹೋದರು.