Select Your Language

Notifications

webdunia
webdunia
webdunia
webdunia

ದ್ರಾವಿಡ್‌ಗೆ ಬೆಂಬಲ; ಈಗ ಗಂಗೂಲಿ ಸರದಿ

ದ್ರಾವಿಡ್‌ಗೆ ಬೆಂಬಲ; ಈಗ ಗಂಗೂಲಿ ಸರದಿ
ಕೊಲ್ಕತ್ತಾ , ಶನಿವಾರ, 13 ಡಿಸೆಂಬರ್ 2008 (18:43 IST)
ರಾಹುಲ್ ದ್ರಾವಿಡ್ ಫಾರ್ಮ್‌ ಕಳೆದುಕೊಂಡಿದ್ದಾರೆ ಎಂಬುದು ಜನಜನಿತವಾಗಿರುವಾಗ ತನ್ನ ಕರ್ನಾಟಕದ ಜತೆಗಾರನ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಬೆಂಬಲ ವ್ಯಕ್ತಪಡಿಸುತ್ತಾ, 'ಗೋಡೆ' ದುರ್ಬಲವಾಗಿದೆ ಎಂಬ ವಾದಗಳನ್ನು ತಳ್ಳಿ ಹಾಕಿದ್ದಾರೆ.

"ದ್ರಾವಿಡ್ ಒಬ್ಬ ಶ್ರೇಷ್ಠ ಕ್ರಿಕೆಟಿಗನಾಗಿದ್ದು, ಪ್ರಬುದ್ಧ ಆಟಗಾರ. ಅವರ ಅವಧಿ ಮುಗಿದಿದೆ ಎಂದು ಹೇಳುವುದು ತಪ್ಪಾಗುತ್ತದೆ" ಎಂದು ಈಡನ್ ಗಾರ್ಡನ್‌ನಲ್ಲಿ ಅಭ್ಯಾಸ ಮುಗಿಸಿದ ನಂತರ ಗಂಗೂಲಿ ಪತ್ರಕರ್ತರ ಜತೆ ಮಾತನಾಡುತ್ತಾ ಹೇಳಿದರು.

ವಿದೇಶಗಳಲ್ಲಿ ಹಲವು ಪಂದ್ಯಗಳನ್ನು ನಾಯಕನಾಗಿ ಗೆಲ್ಲಿಸಿದ್ದ ದ್ರಾವಿಡ್, ಟೆಸ್ಟ್‌ನಲ್ಲಿ 10,366 ರನ್ನುಗಳನ್ನು ದಾಖಲಿಸಿದ್ದಾರೆ. ಇತ್ತೀಚಿನ ಎರಡು ವರ್ಷಗಳ 48 ಇನ್ನಿಂಗ್ಸ್‌ಗಳಲ್ಲಿ ಅವರು ಎರಡು ಶತಕ, 9 ಅರ್ಧ ಶತಕ ದಾಖಲಿಸಿದ್ದಾರೆ.

ಅವರ ಇತ್ತೀಚಿನ ಐದು ಇನ್ನಿಂಗ್ಸ್‌ಗಳು 11, 11, 0, 3 ಮತ್ತು 3ರಲ್ಲಿ ಅಂತ್ಯಗೊಂಡಿತ್ತು. ಆದರೆ ಈ ಬಗ್ಗೆ ದ್ರಾವಿಡ್‌ಗೆ ಬೆಂಬಲವಾಗಿ ನಿಲ್ಲುತ್ತಾ ಗಂಗೂಲಿ, "ಕೇವಲ ಕೆಲವು ವೈಫಲ್ಯಗಳಿಂದ ಅವರ ಸಾಮರ್ಥ್ಯವನ್ನು ಅಳೆಯಲಾಗದು. ಅವರು ತಾತ್ಕಾಲಿಕವಾಗಿ ತನ್ನ ಆಟದಿಂದ ದೂರವಿದ್ದಾರೆ ಅಷ್ಟೇ. ಆದರೆ ಈ ವಿಚಾರಗಳನ್ನೆಲ್ಲಾ ತಣ್ಣಗೆ ಮಾಡಲು ಅವರು ದೊಡ್ಡ ಮಟ್ಟದ ಯಶಸ್ಸಿನೊಂದಿಗೆ ಬರಲಿದ್ದಾರೆ ಎಂಬ ಭರವಸೆ ನನಗಿದೆ" ಎಂಬುದು ಅವರ ಅಭಿಮತ.

ಪಶ್ಚಿಮ ಬಂಗಾಲದ ಪರವಾಗಿ ರಣಜಿ ಸೆಮಿಫೈನಲ್‌ನಲ್ಲಿ ಆಡಿ ತಂಡವನ್ನು ಸೂಪರ್‌ಲೀಗ್‌ನತ್ತ ಏರಿಸುವ ಬಗ್ಗೆ ಗಮನ ಹರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಇದೀಗ ಅಭ್ಯಾಸ ನಡೆಸುತ್ತಾ ತನ್ನ ಫಾರ್ಮನ್ನು ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ.

Share this Story:

Follow Webdunia kannada