Select Your Language

Notifications

webdunia
webdunia
webdunia
webdunia

ಭಾರತಕ್ಕೆ ಚೊಚ್ಚಲ ಟ್ವೆಂಟಿ20 ಕಿರೀಟ

ಭಾರತಕ್ಕೆ ಚೊಚ್ಚಲ ಟ್ವೆಂಟಿ20 ಕಿರೀಟ
ಜೊಹಾನ್ಸ್‌ಬರ್ಗ್ , ಸೋಮವಾರ, 24 ಸೆಪ್ಟಂಬರ್ 2007 (21:41 IST)
PTI
ಅಕ್ಷರಶಃ ಕದನವೇ ಏರ್ಪಟ್ಟಂತಿದ್ದ ಫೈನಲ್ ಪಂದ್ಯದ ಕೊನೆಯ ಓವರಿನ ಥ್ರಿಲ್ಲರ್‌ನಲ್ಲಿ ಭಾರತ ಮೇಲುಗೈ ಸಾಧಿಸಿ ಚೊಚ್ಚಲ ಐಸಿಸಿ ಟ್ವೆಂಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತಲ್ಲದೆ, ಇತಿಹಾಸ ಸೃಷ್ಟಿಸಿತು.

ಅದ್ಭುತ ಬೌಲಿಂಗ್ ಸಂಘಟಿಸಿದ ಭಾರತೀಯ ಪಾಳಯದ ಬೌಲರುಗಳು ಪಾಕಿಸ್ತಾನೀ ದಾಂಡಿಗರ ಹೆಡೆಮುರಿ ಕಟ್ಟಿದರು. ಮಧ್ಯೆ ಮಧ್ಯೆ ಸಿಕ್ಸರ್ ಹೊಡೆಸಿಕೊಳ್ಳುತ್ತಿದ್ದಾಗಲೆಲ್ಲಾ ಕೆರಳುತ್ತಿದ್ದ ಬೌಲರುಗಳು ಅದೇ ವೇಗದಲ್ಲಿ ವಿಕೆಟ್‌ಗಳನ್ನೂ ಪಡೆಯುತ್ತಿದ್ದರು. ಅರ್ಹವಾಗಿಯೇ ಇರ್ಫಾನ್ ಪಠಾಣ್ (4 ಓವರ್ 16 ರನ್ 3 ವಿಕೆಟ್ ) ಪಂದ್ಯಶ್ರೇಷ್ಠರಾಗಿ ಪುರಸ್ಕೃತರಾದರು.

ಪಠಾಣ್ ಮತ್ತು ರುದ್ರಪ್ರತಾಪ್ ಸಿಂಗ್ (4 ಓವರ್ 26 ರನ್ 3 ವಿಕೆಟ್) ಅವರ ಬೌಲಿಂಗ್ ರೌದ್ರಾವತಾರಕ್ಕೆ ಜೋಗಿಂದರ್ ಶರ್ಮಾ (3.3 ಓವರ್ 20 ರನ್ 2 ವಿಕೆಟ್) ಹೆಗಲು ನೀಡಿದರು. ಶ್ರೀಶಾಂತ್ 44 ರನ್ ತೆತ್ತರಾದರೂ ಒಂದು ವಿಕೆಟ್ ಕಿತ್ತರು. ಹರಭಜನ್ ಸಿಂಗ್ 36 ರನ್ ನೀಡಿದ್ದು, ವಿಕೆಟ್ ಗಿಟ್ಟಿಸುವಲ್ಲಿ ವಿಫಲರಾದರು.

ಉಭಯ ಬಣಗಳೂ ಅತ್ಯುತ್ತಮ ಹೋರಾಟ ಮನೋಭಾವ ಪ್ರದರ್ಶಿಸಿದ ಈ ಪಂದ್ಯದಲ್ಲಿ, ಜೋಗಿಂದರ್ ಶರ್ಮಾ ಎಸೆದ ಕೊನೆಯ ಓವರಿನಲ್ಲಿ 13 ರನ್ ಮಾಡಬೇಕಿದ್ದ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್ ಮಿಸ್ಬಾ ಉಲ್ ಹಕ್ (43 ರನ್, 38 ಎಸೆತ, 4 ಸಿಕ್ಸರ್) ಓವರಿನ ಮೂರನೇ ಎಸೆತಕ್ಕೆ ಬ್ಯಾಟು ಬೀಸಿದಾಗ ಚೆಂಡು ಶ್ರೀಶಾಂತ್ ಕೈಯಲ್ಲಿ ಭದ್ರವಾಗಿ ಕುಳಿತುಕೊಳ್ಳುವುದರೊಂದಿಗೆ 5 ರನ್ ಅಂತರದ ವಿಜಯ ಭಾರತದ ಪಾಲಿಗೆ ದಕ್ಕಿತು.

ಓವರಿನ ಎರಡನೇ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ಸಿಕ್ಸರ್ ಸಿಡಿಸಿದಾಗ ಭಾರತದ ಕೈಯಿಂದ ಜಯಮಾಲೆ ಜಾರಿತು ಎಂದೇ ಭಾವಿಸಲಾಗಿತ್ತು. ಮೂರನೇ ಎಸೆತವನ್ನೂ ಆತ ತಿರುಗಿ ನಿಂತು ಬಲವಾಗಿ ಹೊಡೆದಾಗ, ಅಲ್ಲಿಗೆ ಭಾರತದ ಕನಸು ಛಿದ್ರವಾಯಿತು ಎಂದೇ ಭಾವಿಸಿದ್ದರು. ಆದರೆ ಹೊಡೆತದ ವೇಗಕ್ಕೆ ತಕ್ಕಂತೆ ಮೇಲಕ್ಕೆ ಚಿಮ್ಮಿದ ಚೆಂಡು, ಶ್ರೀಶಾಂತ್ ಕೈಯಲ್ಲಿ ಕುಳಿತಾದ ಭಾರತದ ಪಾಳಯಕ್ಕೆ ನೆಮ್ಮದಿಯ ನಿಟ್ಟುಸಿರು.

ಭಾರತ ಒಡ್ಡಿದ 158 ರನ್ ಗುರಿಯನ್ನು ಬೆಂಬತ್ತಿದ ಪಾಕಿಸ್ತಾನಿ ದಾಂಡಿಗರು ಆರಂಭದಿಂದಲೇ ಕಾಲಕಾಲಕ್ಕೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು.

ಮಹಮ್ಮದ್ ಹಫೀಝ್ 1, ಇಮ್ರಾನ್ ನಾಝೀರ್ 33 (ರನೌಟ್, 14 ಎಸೆತ, 4 ಬೌಂಡರಿ 2 ಸಿಕ್ಸ್), ಕಮ್ರಾನ್ ಅಕ್ಮಲ್ 0, ಯೂನುಸ್ ಖಾನ್ 24 (24 ಎಸೆತ 4 ಬೌಂಡರಿ), ಶೋಯೆಬ್ ಮಲ್ಲಿಕ್ 8, ಶಾಹೀದ್ ಅಫ್ರಿದಿ 0 ರನ್ ಗಳಿಸಿದ್ದರು. ಅಂತೆಯೇ, ಯಾಸಿರ್ ಅರಾಫತ್ 15, ಸೊಹೈಲ್ ತನ್ವೀರ್ 12, ಉಮರ್ ಗುಲ್ 0 ಗಳಿಸಿ ಔಟಾದರೆ ಮಹಮದ್ ಆಸಿಫ್ ಅಜೇಯರಾಗುಳಿದರು.

ಇದಕ್ಕೆ ಮೊದಲು, ಪಾಕ್ ವಿರುದ್ಧ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಉಮರ್ ಗುಲ್ ದಾಳಿಗೆ ನಲುಗುತ್ತಾ, ನಿಗದಿತ 20 ಓವರುಗಳಲ್ಲಿ ಐದು ವಿಕೆಟ್ ಕಳೆದುಕೊಂಡು 157 ರನ್ ಮಾಡಿತ್ತು.

ಭಾರತದ ಪರ ಆರಂಭಿಕ ದಾಂಡಿಗ ಗೌತಮ್ ಗಂಭೀರ್ (54 ಎಸೆತ, 75 ರನ್, 8 ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕ ತಂಡವನ್ನು ಅಪಾಯದಂಚಿನಿಂದ ಮೇಲೆತ್ತಿತು. ಪಾಕಿಸ್ತಾನದ ವೇಗದ ಬೌಲರ್ ಉಮರ್ ಗುಲ್ ಅವರು ಗೌತಮ ಗಂಭೀರ್, ಮಹೇಂದ್ರ ಸಿಂಗ್ ಧೋನಿ, ಮತ್ತು ರಾಬಿನ್ ಉತ್ತಪ್ಪರನ್ನು ಪೆವಿಲಿಯನ್‌ಗೆ ಮರಳಿಸಿದರು.

ರೋಹಿತ್ ಶರ್ಮಾ ಅವರ ಅಜೇಯ 30 (16 ಎಸೆತ, 2 ಬೌಂಡರಿ, 1 ಸಿಕ್ಸರ್) ರನ್‌ಗಳು ಭಾರತ 157 ರನ್ ‌ಕೂಡಿ ಹಾಕುವುದಕ್ಕೆ ನೆರವಾದವು. ಆರಂಭಿಕ ಮತ್ತು ಚೊಚ್ಚಲ ಪಂದ್ಯ ಆಡಿದ ಯೂಸುಫ್ ಪಠಾಣ್ 8 ಎಸೆತದಲ್ಲಿ ಒಂದು ಬೌಂಡರಿ ಒಂದು ಸಿಕ್ಸರ್ ಸೇರಿದ 15 ರನ್ ಸೇರಿಸಿ ಮರಳಿದರು. ನಿರೀಕ್ಷಿತ ಆಟವಾಡದ ಯುವರಾಜ್ ಸಿಂಗ್ 19 ಎಸೆತದಲ್ಲಿ 14 ರನ್ ಮಾಡಲಷ್ಟೇ ಶಕ್ತರಾದರು.

Share this Story:

Follow Webdunia kannada