ಭಾರತ ಕ್ರಿಕೆಟ್ ತಂಡದ ನಾಯಕ ಹಾಲಿ ನಾಯಕ ರಾಹುಲ್ ದ್ರಾವಿಡ್. ಭಾರತದ ತಂಡದ ಗೋಡೆ ಎಂದು ಕರೆಸಿಕೊಂಡಿರುವ ದ್ರಾವಿಡ್, ಮೂರನೆ ಕ್ರಮಾಂಕದ ಬ್ಯಾಟ್ಸ್‌ಮನ್.
ಇವರು ಹಳೆಕಾಲದ ಶಾಸ್ತ್ರೀಯತೆ ಮತ್ತು ಹೊಸಕಾಲದ ವೃತ್ತಿಪರತೆಗಳ ಸಮ್ಮಿಶ್ರಣ. ಸೌರವ್ ಗಂಗೂಲಿಯ ನಾಯಕತ್ವದಲ್ಲಿ ತಂಡ ಮುನ್ನಡೆಯುತ್ತಿದ್ದ ವೇಳೆ ದ್ರಾವಿಡ್ ಅವರ ಸಂಪೂರ್ಣ ಸಾಮರ್ಥ್ಯ ಹೊರಬಂದಿತ್ತು.
ಮೊದಲಿಗೆ ಏಕದಿನ ಪಂದ್ಯಗಳಲ್ಲಿ ಅವರು ವಿಕೆಟ್ ಕೀಪರ್ ಆಗಿದ್ದರು. ನಂತರದಲ್ಲಿ ಮಧ್ಯಮ ಶ್ರೇಯಾಂಕದ ಆಟಗಾರನಾಗಿ ಮೂಡಿಬಂದ ಅವರು ಅತ್ಯಂತ ತಾಳ್ಮೆಯ ಹಾಗೂ ದೃಢ ಆಟವನ್ನು ಪ್ರದರ್ಶಿಸಿ ಕ್ರಿಕೆಟ್ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಕೊಲ್ಕತ್ತಾದಲ್ಲಿ 2001ರಲ್ಲಿ ನಡೆದ ಪಂದ್ಯದ ಬಳಿಕ ಅವರ ಸ್ವರ್ಣದಿನಗಳು ಆರಂಭವಾದವೆಂದು ಹೇಳಬಹುದು. ಆಸ್ಟ್ರೇಲಿಯಾ ತಂಡದ ವಿರುದ್ಧ ವಿವಿಎಸ್ ಲಕ್ಷ್ಮಣ್ ಜತೆಯಾಟದಲ್ಲಿ 180 ರನ್ ತೆಗೆದ ಬಳಿಕ ರಾಹುಲ್, ತಂಡದ ಮೌಲ್ಯಯುತ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಈ ಪಂದ್ಯದಲ್ಲಿ ಲಕ್ಷ್ಮಣ್ 281 ರನ್ ಗಳಿಸಿದ್ದರು. ಸುಮಾರು 35 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಐತಿಹಾಸಿಕ ಸರಣಿ ಗೆಲುವಿನ ಕೀರ್ತಿಯೂ 'ಜಾಮಿ'ಗೆ ಸಲ್ಲುತ್ತದೆ.