- ನಾಗರಾಜ್ ಬೇಳ
2010ನೇ ವರ್ಷ ಕ್ರಿಕೆಟ್‌ನ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಸೇರಿದ ವರ್ಷ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಪಾಕಿಸ್ತಾನ ಕ್ರಿಕೆಟಿಗರು ವಿಶ್ವ ಕ್ರಿಕೆಟಿನಲ್ಲಿ ಅಕ್ರಮವಾಗಿ ಹುಟ್ಟಿಸಿದ್ದ ಸ್ಪಾಟ್ ಫಿಕ್ಸಿಂಗ್ ಕಳಂಕವನ್ನೂ ಮರೆಸುವಂತೆ ಮಾಡಿದ ಸಚಿನ್ ಸಾಧನೆ ಭಾರತೀಯರಿಗೆ ಹೆಮ್ಮೆ ತರುವಂತಾಗಿದೆ.
ದ್ವಿಶತಕ, 50 ಟೆಸ್ಟ್ ಶತಕದ ಸಾಧನೆ...
21
ವರ್ಷಗಳಿಂದ ಕ್ರಿಕೆಟ್ ಜಗತ್ತನ್ನು ಆಳುತ್ತಿರುವ 37ರ ಹರೆಯದ ಮುಂಬೈಕರ್ ತಮ್ಮ ಅಮೋಘ ಫಾರ್ಮ್ 2010ರ ಸಾಲಿನಲ್ಲೂ ಮುಂದುವರಿಸಿದರು. ಇದುವೇ ಅವರ ಶ್ರೇಷ್ಠ ಕ್ರಿಕೆಟ್ ಋತು ಕೂಡಾ ಆಗಿರಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನದಲ್ಲಿ ಚೊಚ್ಚಲ ದ್ವಿಶತಕ ಬಾರಿಸುವ ಮೂಲಕ ಸಚಿನ್, ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.ಟೆಸ್ಟ್‌ನಲ್ಲಿ 14,500ಕ್ಕೂ ಹೆಚ್ಚು ರನ್ ಗಳಿಸಿರುವ ಸಚಿನ್ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಸೆಂಚುರಿಯನ್ ಮೈದಾನದಲ್ಲಿ ಶತಕ ಬಾರಿಸುವ ಮೂಲಕ ಐತಿಹಾಸಿಕ 50 ಟೆಸ್ಟ್ ಶತಕಗಳ ಸಾಧನೆ ಮಾಡಿದರು.ಆಸ್ಟ್ರೇಲಿಯಾ, ಶ್ರೀಲಂಕಾ ವಿರುದ್ಧ ದ್ವಿಶತಕ ಸಹಿತ ಒಟ್ಟು ಏಳು ಶತಕ ದಾಖಲಿಸಿರುವ ಸಚಿನ್, ಈ ವರ್ಷ 1400ಕ್ಕೂ ಹೆಚ್ಚು ರನ್ ಗಳಿಸಿದರು. ಎಂದೂ ದಾಖಲೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅವರು ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದು, ದೇಶಕ್ಕಾಗಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ.ಕೆಲವೊಂದು ಏಕದಿನ ಪಂದ್ಯಗಳಿಂದ ದೂರವುಳಿಯುವ ಮೂಲಕ ಟೆಸ್ಟ್‌ನತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದರು ಲಿಟ್ಲ್ ಮಾಸ್ಟರ್. ವಯಸ್ಸು ಎಂದೂ ತಮ್ಮ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನೂ ವಿಶ್ವ ಕ್ರಿಕೆಟ್‌ಗೆ ತೋರಿಸಿಕೊಟ್ಟವರು.ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ಐಸಿಸಿ) 'ವರ್ಷದ ಕ್ರಿಕೆಟಿಗ' ಮತ್ತು 'ಜನರ ಆಯ್ಕೆ ಪ್ರಶಸ್ತಿ'ಗೆ ಭಾಜನರಾಗಿದ್ದ ಸಚಿನ್ ಇದೇ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಅದೇ ರೀತಿ ಕ್ರಿಕೆಟ್‌ನಲ್ಲಿ ದೇಶಕ್ಕೆ ನೀಡಿರುವ ಸಾಧನೆಗಳನ್ನು ಪರಿಗಣಿಸಿ ಭಾರತೀಯ ವಾಯು ಪಡೆಯು ಸಚಿನ್ ಅವರಿಗೆ 'ಗೌರವ ಗ್ರೂಪ್ ಕ್ಯಾಪ್ಟನ್ ಹುದ್ದೆ'ಯನ್ನು ನೀಡಿಯೂ ಗೌರವಿಸಿತ್ತು. ಸ್ಪಾಟ್ ಫಿಕ್ಸಿಂಗ್ ಎಂಬ ಹೊಸ ಅವತಾರ... ಇದೇ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಎಂಬ ಮೋಸದಾಟದ ಹೊಸ ಅವತಾರವು ಜನ್ಮ ತಳೆಯಿತು.
ಏನಿದು ಸ್ಪಾಟ್ ಫಿಕ್ಸಿಂಗ್- 'ಮ್ಯಾಚ್ ಫಿಕ್ಸಿಂಗ್' ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿದರೆ, 'ಸ್ಪಾಟ್ ಫಿಕ್ಸಿಂಗ್'ನಲ್ಲಿ ಪಂದ್ಯದ ಕೆಲ ಆಗು-ಹೋಗುಗಳ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಆಟಗಾರನೊಬ್ಬ ಈ ಹಿಂದೆ ಆತನಿಗೆ ಸೂಚಿಸಿದಂತೆಯೇ ನಿರ್ವಹಣೆ ತೋರುತ್ತಾನೆ. ಉದಾಹರಣೆಗೆ ಬೌಲರ್‌ವೊಬ್ಬ ಆತನ ಎರಡನೇ ಓವರಿನಲ್ಲಿ ಸತತ ಎರಡು ವೈಡ್ ಎಸೆಯಬಹುದು ಅಥವಾ ಬ್ಯಾಟ್ಸ್‌ಮನ್‌ವೊಬ್ಬ ಎರಡಂಕಿ ತಲುಪದೆ ಔಟಾಗಬಹುದು. ಇದಕ್ಕೆ ಆತನಿಗೆ ಮೊದಲೇ ಸೂಚನೆ ನೀಡಲಾಗಿರುತ್ತದೆ.ಇದೇ ಮೋಸದಾಟದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಪಾಕಿಸ್ತಾನದ ಮಾಜಿ ಟೆಸ್ಟ್ ನಾಯಕ ಸಲ್ಮಾನ್ ಭಟ್ ಮತ್ತು ವೇಗಿಗಳಾದ ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ವಿಚಾರಣೆ ಎದುರಿಸುತ್ತಿದ್ದು, ಎಲ್ಲ ಪ್ರಕಾರದ ಆಟದಿಂದಲೂ ನಿಷೇಧಕ್ಕೆ ಗುರಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉದ್ದೇಶಪೂರ್ವಕವಾಗಿಯೇ ಅಮೀರ್ ಮತ್ತು ಆಸಿಫ್ ನೋ ಬಾಲ್ ಎಸೆದಿದ್ದರು. ಇದನ್ನು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ಬಲೆಗೆ ಸಿಲುಕಿದ್ದ ಬುಕ್ಕಿ ಮಜರ್ ಮಜೀದ್ ಬಹಿರಂಗಪಡಿಸಿದ್ದ. ಧನೀಶ್ ಕನೇರಿಯಾ, ಕಮ್ರಾಲ್ ಅಕ್ಮಲ್, ಉಮರ್ ಅಕ್ಮಲ್ ಸೇರಿದಂತೆ ತಂಡದ ಪ್ರಮುಖ ಆಟಗಾರರ ಮೇಲೂ ಫಿಕ್ಸಿಂಗ್ ಹಗರಣ ಆವರಿಸಿತ್ತು. ಈ ಎಲ್ಲಾ ಹಗರಣಗಳಿಂದ ಪಾಕಿಸ್ತಾನ ಕ್ರಿಕೆಟ್ ಪೂರ್ಣವಾಗಿ ಮೂಲೆಗುಂಪಾಗಿತ್ತು. ಭದ್ರತಾ ಆತಂಕದಿಂದಾಗಿ ತನ್ನ ಪಂದ್ಯಗಳನ್ನು ವಿದೇಶದಲ್ಲಿ ಆಡಬೇಕಾಯಿತು. ಮಾಜಿ ನಾಯಕರುಗಳಾದ ಮೊಹಮ್ಮದ್ ಯೂಸುಫ್ ಮತ್ತು ಯೂನಿಸ್ ಖಾನ್ ಮೇಲಿನ ಅನಿರ್ಧಿಷ್ಟಾವಧಿ ನಿಷೇಧವನ್ನು ಹಲವು ಗೊಂದಲದ ನಂತರ ಪಿಸಿಬಿ ತೆರುವುಗೊಳಿಸಿತ್ತು. ಹೈದರ್ ನಾಪತ್ತೆ ಪ್ರಕರಣ...
ಮ್ಯಾಚ್ ಫಿಕ್ಸಿಂಗ್ ಒತ್ತಡ, ಪ್ರಾಣ ಬೆದರಿಕೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಪಾಕಿಸ್ತಾನ ವಿಕೆಟ್ ಕೀಪರ್ ಜುಲ್ಕರ್ನೈನ್ ಹೈದರ್ ಲಂಡನ್‌ನಲ್ಲಿ ಆಶ್ರಯ ಪಡೆದಿದ್ದರು.ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯಕ್ಕಾಗಿ ತಂಡದ ಜತೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜುಲ್ಕರ್ನೈನ್ ಆಗಮಿಸಬೇಕಾಗಿತ್ತು. ಆದರೆ ತಂಡದ ಹೋಟೆಲ್‌ನಿಂದ ಪರಾರಿಯಾಗಿದ್ದ ಹೈದರ್ ನಂತರ ಲಂಡನ್‌ನಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಒತ್ತಡ ಮತ್ತು ಪ್ರಾಣ ಬೆದರಿಕೆಯ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸುತ್ತಿರುವುದಾಗಿ ತಿಳಿಸಿದ್ದರು.ಮುರಳಿ ವಿಶ್ವದಾಖಲೆ...
ಜುಲೈನಲ್ಲಿ ಭಾರತದ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಕಿತ್ತ ಸ್ಪಿನ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್‌ನಲ್ಲಿ 800 ವಿಕೆಟುಗಳ ಸಾಧನೆ ಮಾಡಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿಯಾಗಿ ಇತಿಶ್ರೀ ಹಾಡಿದರು. ಕೇವಲ 133 ಟೆಸ್ಟ್‌ಗಳಿಂದ ಅವರು ಈ ಅಮೋಘ ಸಾಧನೆಯನ್ನು ಮಾಡಿದ್ದರು. ಆದರೆ ಮುಂಬರುವ ಏಕದಿನ ವಿಶ್ವಕಪ್‌ಗೆ ಲಭ್ಯರಿರುವುದಾಗಿ ಹೇಳಿದ್ದಾರೆ.ರಣಧೀವ್ ರಣತಂತ್ರ... ಉದ್ದೇಶಪೂರ್ವಕವಾಗಿಯೇ ನೋ ಬಾಲ್ ಎಸೆಯುವ ಮೂಲಕ ವೀರೇಂದ್ರ ಸೆಹ್ವಾಗ್ ಸೆಂಚುರಿ ತಪ್ಪಿಸಿದ್ದ ಸುರಾಜ್ ರಣಧೀವ್ ಪ್ರಕರಣವು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ದಾಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ಒಂದು ರನ್ ಅಗತ್ಯವಿದ್ದ ಸಂದರ್ಭದಲ್ಲಿ ರಣಧೀವ್ ಬೇಕೆಂತಲೇ ನೋ ಬಾಲ್ ಎಸೆದಿದ್ದರು. ಸೆಹ್ವಾಗ್ ಈ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಆದರೆ ನೋಬಾಲ್ ಆಗಿದ್ದ ಕಾರಣದಿಂದಾಗಿ ಸೆಹ್ವಾಗ್ ಖಾತೆಗೆ ಸಿಕ್ಸರ್ ಸೇರದೆ, ತಂಡದ ಖಾತೆಗೆ 1 ರನ್ ಜಮೆಯಾಯಿತು. ಭಾರತ ಪಂದ್ಯವನ್ನು ಗೆದ್ದುಕೊಂಡಿದ್ದರೂ, 99 ರನ್ ಗಳಿಸಿದ್ದ ಸೆಹವಾಗ್ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು.ನಿಯಮದ ಪ್ರಕಾರ ತಂಡಗಳ ಮೊತ್ತ ಸಮಗೊಂಡಾಗ ನೋ ಬಾಲ್ ಅಥವಾ ವೈಡ್ ಎಸೆದರೆ ಬ್ಯಾಟ್ಸ್‌ಮನ್ ಬಾರಿಸಿದ ರನ್ ಲೆಕ್ಕಕ್ಕೆ ಬರುವುದಿಲ್ಲ. ಇದರಿಂದ ಸೆಹ್ವಾಗ್ ಬಾರಿಸಿದ ಸಿಕ್ಸರ್ ಪರಿಗಣನೆಗೆ ಬಾರದ ಕಾರಣ ಅವರು ಶತಕದಿಂದ ವಂಚಿತರಾಗಿದ್ದರು. ನಂತರ ಲಂಕಾ ಕ್ರಿಕೆಟ್ ಮಂಡಳಿಯಿಂದ ರಣಧೀವ್ ಸಹಿತ ಘಟನೆಯಲ್ಲಿ ಪಾಲ್ಗೊಂಡಿದ್ದ ತಿಲಕರತ್ನೆ ದಿಲ್‌ಶಾನ್ ಅವರೂ ಶಿಕ್ಷೆಗೆ ಗುರಿಯಾಗಿದ್ದರು.ಸಾಕ್ಷಿ ವರಿಸಿದ ಧೋನಿ...
ಭಾರತದ 'ಅದೃಷ್ಟದ ನಾಯಕ' ಮಹೇಂದ್ರ ಸಿಂಗ್ ಧೋನಿ ತಮ್ಮ ದ್ವಿತೀಯ ಇನ್ನಿಂಗ್ಸನ್ನು ಇದೇ ವರ್ಷ ಆರಂಭಿಸಿದರು. 'ಕೂಲ್' ನಾಯಕನೆಂದೇ ಖ್ಯಾತಿ ಪಡೆದಿರುವ ಧೋನಿ ತಮ್ಮ ಮದುವೆ ವಿಚಾರವನ್ನು ಗೋಪ್ಯವಾಗಿಡುವಲ್ಲಿ ಯಶಸ್ವಿಯಾಗಿದ್ದರು. ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್‌ರನ್ನು ವರಿಸಿದ ಧೋನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಧೋನಿ ನಾಯಕತ್ವದಲ್ಲಿ ಭಾರತ ಟೆಸ್ಟ್‌ನಲ್ಲಿ ಅಗ್ರಪಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ತಂಡವನ್ನು ಯಶಸ್ಸಿನತ್ತ ಮುನ್ನಡೆಸಿರುವ ಧೋನಿ ತವರಿನಲ್ಲಿ ನಡೆಯಲಿರುವ ಮುಂಬರುವ ವಿಶ್ವಕಪ್‌ನಲ್ಲಿ ಫೆವರೀಟ್ ಎನಿಸಿಕೊಂಡಿದೆ. ದ್ರಾವಿಡ್ ಸಾಧನೆ...
ಟೆಸ್ಟ್‌ನಲ್ಲಿ 12,000 ಹಾಗೂ ಕ್ಯಾಚುಗಳ ದ್ವಿಶತಕ ಸಾಧನೆಯನ್ನು ಕರ್ನಾಟಕದ ಹೆಮ್ಮೆಯ ರಾಹುಲ್ ದ್ರಾವಿಡ್ ಮಾಡಿಕೊಂಡರು. ಹಾಗೆಯೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕದ ಸಾಧನೆಯನ್ನು ಹರಭಜನ್ ಸಿಂಗ್ ಮಾಡಿಕೊಂಡರು. ಚೇತೇಶ್ವರ ಪೂಜಾರ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಪಾರ್ಥಿವ್ ಪಟೇಲ್, ಮುರಳಿ ವಿಜಯ್ ಅವರಂತಹ ಯುವ ಆಟಗಾರರು ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡರು. ಮೋದಿ-ಐಪಿಎಲ್ ಪುರಾಣ... ಐಪಿಎಲ್ ಹಣಕಾಸು ಅವ್ಯವಹಾರ ಆರೋಪಕ್ಕೊಳಗಾಗಿರುವ ಲಲಿತ್ ಮೋದಿ ಮುಖ್ಯಸ್ಥ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂತು. ಐಪಿಎಲ್ ಮೂಲಕ ವಿಶ್ವ ಕ್ರಿಕೆಟಿನಲ್ಲಿ ರಾಜನಾಗಿ ಮಿಂಚಿದ್ದ ಮೋದಿಯೀಗ ಬಂಧನ ಭೀತಿಯಿಂದ ಲಂಡನ್‌ನಲ್ಲಿ ಅವಿತಿದ್ದಾರೆ.ಅವರ ವಿರುದ್ಧ ಹಲವು ಪ್ರಕರಣಗಳೂ ದಾಖಲಾಗಿವೆ. ನ್ಯಾಯಾಲಯಗಳಲ್ಲಿ ಅವುಗಳ ವಿಚಾರಣೆ ನಡೆಯುತ್ತಿವೆ. ಬಿಸಿಸಿಐಯ ಮೂವರು ಸದಸ್ಯರ ಶಿಸ್ತು ಸಮಿತಿಯಿಂದ ಮೋದಿ ಪ್ರತಾಪಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಅತ್ತ ಮತ್ತೊಂದು ಅಚ್ಚರಿ ಬೆಳವಣಿಗೆಯಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಐಪಿಎಲ್‌ನಿಂದ ಅಮಾನತು ಮಾಡಲಾಯಿತು. ಪ್ರಸಕ್ತ ಈ ಎರಡೂ ಫ್ರಾಂಚೈಸಿಗಳು ತಾತ್ಕಾಲಿಕ ತಡೆಯಾಜ್ಞೆ ತಂದು ನಿಟ್ಟುಸಿರು ಬಿಟ್ಟಿವೆ.ಹಾಗೆಯೇ ನೂತನ ಪುಣೆ ಫ್ರಾಂಚೈಸಿಯನ್ನು ಸಹಾರಾ ಇಂಡಿಯಾ ಪರಿವಾರ್ ಮತ್ತು ಕೊಚ್ಚಿ ತಂಡವನ್ನು ರೆಂಡೆವೋಸ್ ಸ್ಫೋರ್ಟ್ಸ್ ವರ್ಲ್ಡ್ ಖರೀದಿಸಿತ್ತು. ಇವೆರಡು ಮುಂಬರುವ ಋತುವಿನಲ್ಲಿ ಪದಾರ್ಪಣೆ ಮಾಡಲಿದೆ.ಮಾಲಿಕತ್ವ ಗೊಂದಲಕ್ಕೆ ಸಂಬಂಧಿಸಿದಂತೆ ಕೊಚ್ಚಿ ತಂಡ ವಜಾ ನೋಟಿಸ್ ಪಡೆದಿದ್ದರೂ ಅಂತಿಮ ಕ್ಷಣದ ಹೊಂದಾಣಿಕೆಯಿಂದ ಕೊಚ್ಚಿ ತಂಡ ರದ್ದು ಭೀತಿಯಿಂದ ಪಾರಾಗಿತ್ತು. ಕೊಚ್ಚಿ ತಂಡದಲ್ಲಿ ಸ್ವೀಟ್ ಈಕ್ವಿಟಿಗೆ ಸಂಬಂಧಪಟ್ಟಂತೆ ಕೇಂದ್ರದಲ್ಲಿ ಸಚಿವರಾಗಿದ್ದ ಶಶಿ ತರೂರ್ ಸ್ಥಾನ ಕಳೆದುಕೊಂಡದ್ದು ಕೂಡ ಇದೇ ವರ್ಷ.ಕರ್ನಾಟಕ ಸೂಪರ್... ಯುನೈಟೆಡ್ ಚಾಂಪಿಯನ್ ರಣಜಿ ಋತುವಿನಲ್ಲಿ ಸೆಮಿಪೈನಲ್‌ಗೇರಿರುವ ಕಳೆದ ಬಾರಿಯ ರನ್ನರ್-ಅಪ್ ಕರ್ನಾಟಕ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ನಾಯಕ ವಿನಯ್ ಕುಮಾರ್, ಅಮಿತ್ ವರ್ಮಾ, ಸಿ.ಎಮ್. ಗೌತಮ್, ಮನೀಷ್ ಪಾಂಡೆ, ಕೆ.ಬಿ. ಪವನ್, ಸ್ಟುವರ್ಟ್ ಬಿನ್ನಿ, ಸುನಿಲ್ ಜೋಶಿ, ಅಭಿಮನ್ಯು ಮಿಥುನ್ ಮತ್ತು ಎಸ್. ಅರವಿಂದ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಹಾಗೆಯೇ ಮಂಗಳೂರು ಯುನೈಟೆಡ್ ತಂಡ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಇದರೊಂದಿಗೆ ಪ್ರಾವಿಡೆಂಟ್ ಬೆಂಗಳೂರು ತಂಡದ ಸತತ ಎರಡನೇ ಬಾರಿಯ ಪ್ರಶಸ್ತಿ ಕನಸು ನುಚ್ಚುನೂರಾಯಿತು.