Webdunia - Bharat's app for daily news and videos

Install App

ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು

Webdunia
ರಮ್ಯ ಶೆಟ್ಟಿ
ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ಬಾಲಿವುಡ್ ಸಾಮಾನ್ಯ ಯಶಸ್ಸು ಕಂಡಿದೆ. ಯಶಸ್ವೀ ಚಿತ್ರಗಳ ಪಟ್ಟಿ ಹೀಗಿದೆ.

ಜೋಧಾ ಅಕ್ಬರ್:
IFM
ಜೋಧಾ ಅಕ್ಬರ್ ಚಿತ್ರ ಪೆಬ್ರವರಿ 5, 2008ರಂದು ತೆರಕಕಂಡಿತು. ಈ ಚಿತ್ರವನ್ನು ಅಶಿತೋಷ್ ಗೋವರಿಕರ್ ನಿರ್ದೇಶಿಸಿದ್ದು ಇದು ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ರಜಪೂತ ರಾಜಕುಮಾರಿ ಜೋಧಾಭಾಯಿ ಅವರ ವಿವಾಹ ಮತ್ತು ಪ್ರೇಮ ಪ್ರಸಂಗವನ್ನು ಮುಖ್ಯ ಕಥಾವಸ್ತುವಾಗಿ ಹೊಂದಿತ್ತು. ಈ ಚಿತ್ರ ಐತಿಹಾಸಿಕ ಕಥೆಯನ್ನೊಳಗೊಂಡಿದ್ದು, ಇಲ್ಲಿ ಜೋಧಾ, ಅಕ್ಬರನ ಹೆಂಡತಿ ಅಲ್ಲ ಎಂಬುದಾಗಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ವಿವಾದದ ಕಿಡಿ ಹೊತ್ತಿಕೊಂಡಿತು. ಬಳಿಕ ಹಲವಾರು ಇತಿಹಾಸಕಾರರು ಜೋಧಾ, ಅಕ್ಬರನ ಹೆಂಡತಿ ಎಂಬ ಬಗ್ಗೆ ಸಾಕ್ಷ್ಯಧಾರಗಳ ಸಹಿತ ವಿವರಣೆ ನೀಡಿದ್ದರು. ಈ ವಿವಾದಿಂದಾಗಿ ಚಿತ್ರ ಉತ್ತರಪ್ರದೇಶ, ರಾಜಾಸ್ತಾನ, ಹರಿಯಾಣ ಮತ್ತು ಉತ್ತರಖಂಡಗಳಲ್ಲಿ ನಿಷೇಧಕ್ಕೆ ಒಳಾಗಿತ್ತು. ವಿವಾದದ ಕುರಿತು ಅಶುತೋಷ್ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಗೆಲುವು ಸಾಧಿಸಿದ್ದರು. ಬ್ರಿಟನ್ ಮತ್ತು ಅಮೆರಿಕಗಳಲ್ಲೂ ಪ್ರಶಂಸಿಲ್ಪಟ್ಟ ಈ ಚಿತ್ರ ದೇಶ, ವಿದೇಶಗಳಲ್ಲೂ ಯಶಸ್ವಿಯೆನಿಸಿತು. ಚಿತ್ರದಲ್ಲಿ ಹಾಟ್ ಜೋಡಿ ಎನಿಸಿಕೊಂಡ ಹೃತಿಕ್ ರೋಶನ್ ಮತ್ತು ಐಶ್ವರ್ಯ ರೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಪ್ರಶಸ್ತಿಗಳು:
32 ನೇ ಸಾವೊ ಪೌಲೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ- 'ಆಡಿಯನ್ ಅವಾರ್ಡ್' .
ರಷ್ಯಾದಲ್ಲಿ ನಡೆದ ಮುಸ್ಲಿಂ ಸಿನಿಮಾಗಳ ಚಿತ್ರೋತ್ಸವದಲ್ಲಿ- 'ಬೆಸ್ಟ್ ಫಿಲ್ಮ್ ಗ್ರಾಂಡ್ ಫಿಕ್ಸ್'.
ಹೃತಿಕ್ ರೋಶನ್- ಅತ್ಯುತ್ತಮ ನಟ.

ರೇಸ್ (ಮಾರ್ಚ್ 21):
IFM

ರೇಸ್ ಚಿತ್ರದ ನಿರ್ದೇಶಕರು ಅಬ್ಬಾಸ್ ಮಸ್ತಾನ್. ಚಿತ್ರದಲ್ಲಿ ಅನಿಲ್ ಕಪೂರ್, ಅಕ್ಷಯ್ ಖನ್ನಾ, ಬಿಪಾಶ ಬಸು, ಕತ್ರಿನಾ ಕೈಫ್ ಮತ್ತು ಸಮೀರಾ ರೆಡ್ಡಿ ಮುಖ್ಯ ಪಾತ್ರ ವಹಿಸಿದ್ದರು. ರೇಸ್ ಚಿತ್ರಕ್ಕೆ ದ್ವಂಧ್ವ ವಿಮರ್ಶೆಗಳು ದೊರಕಿದ್ದರೂ, ವರ್ಷದ ಎರಡನೇ ಬಹುದೊಡ್ಡ ಹಿಟ್ ಎನಿಸಿಕೊಂಡಿತು. ಮೊದಲ ಸ್ಥಾನವನ್ನು ನಂತರ ಬಿಡುಗಡೆಯಾದ ಸಿಂಗ್ ಈಸ್ ಕಿಂಗ್ ಪಡೆದುಕೊಂಡಿದೆ.

ಜನ್ನತ್:
IFM
ಜನ್ನತ್ ಚಿತ್ರ ಮೇ 16ರಂದು ಬಿಡುಗಡೆಯಾಗಿದ್ದು, ಇಮ್ರಾನ್ ಹಶ್ಮಿ ಮತ್ತು ಸೋನಲ್ ಚೌಹಾಣ್ ಮುಖ್ಯಪಾತ್ರದಲ್ಲಿದ್ದಾರೆ. ಈ ಚಿತ್ರ ಹಣ ಮಾಡುವ ಹುಮ್ಮಸ್ಸಿನಲ್ಲಿ ಕ್ರಿಕೆಟ್ ಬುಕ್ಕಿಯಾಗುವ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವ ನಾಯಕನ ಕಥೆಯನ್ನು ಹೊಂದಿದೆ. ಸಣ್ಣ ಬಜೆಟ್‌ನ ಈ ಚಿತ್ರ ಬಾಕ್ಸ್ ಅಪೀಸಿನಲ್ಲಿ ಉತ್ತಮ ಕಲೆಕ್ಷನ್ ಗಳಿಸುವುದರೊಂದಿಗೆ ಹಿಟ್ ಎನಿಸಿಕೊಂಡಿತು.

ಸರ್ಕಾರ್ ರಾಜ್ (ಜೂನ್ 6):
IFM

ಸರಕಾರ್ ರಾಜ್ ಚಿತ್ರ 2005ರ ಹಿಟ್ ಚಿತ್ರ ಸರಕಾರ್‌ನ ಮುಂದುವರಿದ ಭಾಗ. ಈ ಚಿತ್ರ ಜೂನ್ 6ರಂದು ಬಿಡುಗಡೆಯಾಯಿತು. ಬಚ್ಚನ್ ಕುಟುಂಬದ ಮೂವರು ನಟರು(ಅಮಿತಾಬ್ ಬಚ್ಚನ್, ಅಭೀಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್) ಮುಖ್ಯಪಾತ್ರದಲ್ಲಿದ್ದ ಈ ಚಿತ್ರ ರಾಜಕೀಯ ಏಳು-ಬೀಳುಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾಹಂದರವನ್ನು ಹೊಂದಿದೆ. ಸರಕಾರ್ ರಾಜ್‌ನಲ್ಲಿ ಬಾಲಿವುಡ್ ಡೆಬ್ಯೂಟ್ ಮಾಡಿದ ರಾಜೇಶ್ ಶ್ರಿಂಗಾರ್‌ಪೋರ್ ಅವರ ಪಾತ್ರ ಶಿವಸೇನಾ ನಾಯಕ ರಾಜ್ ಠಾಕ್ರೆ ಅವರ ಮೇಲೆ ಅಧರಿತ ಎಂದು ವರದಿಯಾಗಿತ್ತು. ಈ ಚಿತ್ರ 2008ರ ಮೊದಲರ್ಧ ವರ್ಷದಲ್ಲಿ ಹಿಟ್ ಎನಿಸಿಕೊಂಡು ಕೇವಲ ನಾಲ್ಕು ಚಿತ್ರಗಳಲ್ಲಿ ಒಂದೆನಿಸಿದೆ. (ಜೋಧಾ ಅಕ್ಬರ್, ರೇಸ್, ಜನ್ನತ್, ಸರಕಾರ್ ರಾಜ್).

ಜಾನೆ ತೂ ಯಾ ಜಾನೆ ನಾ (ಜುಲೈ 4):
IFM
ಈ ಚಿತ್ರದ ಮೂಲಕ ಅಮೀರ್ ಖಾನ್ ತಮ್ಮದೇ ನಿರ್ಮಾಣದಲ್ಲಿ ತಮ್ಮ ಸೋದರಳಿಯ ಇಮ್ರಾನ್ ಖಾನ್‌ರನ್ನು ಬಾಲಿವುಡ್‌ಗೆ ಪರಿಚಯಿಸಿದರು. ದಕ್ಷಿಣದ ಭಾಷೆಗಳಲ್ಲಿ ನಟಿಸಿದ್ದ ಜೆನಿಲಿಯಾ ಡಿಸೋಜಾ, ಇಮ್ರಾನ್ ಜೊತೆ ಕಾಣಿಸಿಕೊಂಡು ಬಾಲಿವುಡ್‌ನಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರ ಬಿಡುಗಡೆಯಾದ ನಂತರ ತುಂಬಿದ ಮಂದಿರಗಳಲ್ಲಿ ಪ್ರದರ್ಶನ ಕಾಣುವುದರ ಮೂಲಕ ಹಿಟ್ ಎನಿಸಿಕೊಂಡಿತು. ಇಮ್ರಾನ್ ಮತ್ತು ಜೆನಿಲಿಯಾ ತಮ್ಮ ಪ್ರೇಕ್ಷಕರ ಮನದಲ್ಲಿ ಉತ್ತಮ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು.

ಬಚನಾ ಎ ಹಸೀನೊ (ಅಗಸ್ಟ್ 15) :
IFM

ಕಳೆದ ವರ್ಷ ಸಾವರಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಣ್‌ಬೀರ್ ಕಪೂರ್‌ರ ಎರಡನೇ ಚಿತ್ರ 'ಬಚನಾ..' ಅಗಸ್ಟ್ 15ರಂದು ತೆರೆಕಂಡಿತು. ರಣ್‌ಬೀರ್ ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ಮೂರು ಹುಡುಗಿಯರೊಂದಿಗೆ ಪ್ರೇಮಕ್ಕೆ ಸಿಲುಕುವ ಕಥೆಯ್ನನ್ನು ಚಿತ್ರ ಹೊಂದಿದೆ. ಮಿನಿಶಾ ಲಾಂಬ, ಬಿಪಾಶ ಬಸು ಮತ್ತು ದೀಪಿಕಾ ಪಡುಕೋಣೆ ರಣ್‌ಬೀರ್‌ಗೆ ನಾಯಕಿಯರು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಚಿತ್ರ ಸೆಮಿ-ಹಿಟ್ ಎಂದು ಘೋಷಿತವಾಗಿದೆ.

ಸಿಂಗ್ ಈಸ್ ಕಿಂಗ್(ಅಗಸ್ಟ್ 8) :
IFM
ಪ್ರಸ್ತುತ ಬಾಲಿವುಡ್‌ನ ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಆನೇಕ ದಾಖಲೆಗಳನ್ನು ಪುಡುಗಟ್ಟಿರುವ ಸಿಂಗ್ ಈಸ್ ಕಿಂಗ್ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಮತ್ತು ಭಾರತದಲ್ಲಿ ಸೂಪರ್ ಹಿಟ್(ಚಿತ್ರ ವಿತರಕರಿಗೆ ಮಾರಾಟವಾದ ದೊಡ್ಡ ಮೊತ್ತದಿಂದಾಗಿ ಬ್ಲಾಕ್ ಬಸ್ಟರ್ ಎಂದು ಘೋಷಿಸಲಾಗಿಲ್ಲ) ಎನಿಸಿಕೊಂಡಿದೆ. ಈ ಹಿಂದೆ 2007ರಲ್ಲಿ ಓಂ ಶಾಂತಿ ಓಂ ಚಿತ್ರ ನಿರ್ಮಿಸಿದ್ದ ದಾಖಲೆಗಳನ್ನು ಮುರಿದ ಈ ಚಿತ್ರ ಭಾರತದ ಅತ್ಯಂತ ಹಿಟ್ ಚಿತ್ರ ಎನಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಮೊದಲ ವಾರದಲ್ಲಿ 2 ಕೋಟಿ ಗಳಿಸಿಕೊಂಡ ಸಿಂಗ್ ಈಸ್ ಕಿಂಗ್, ಪಾಕಿಸ್ತಾನದಲ್ಲಿ ಭಾರತೀಯ ಚಿತ್ರವೊಂದು ಹಿಂದೆಂದೂ ನಿರ್ಮಿಸದ ದಾಖಲೆ ನಿರ್ಮಿಸಿತು. ಸಿಂಗ್ ಈಸ್ ಕಿಂಗ್ ಚಿತ್ರ, ಸಿಖ್ ಸಮುದಾಯದ ವಿರೋಧಕ್ಕೆ ಗುರಿಯಾಗುವ ಮೂಲಕ ವಿವಾದಿತವಾಯಿತು. ದೆಹಲಿ ಹೈಕೋರ್ಟ್ ಚಿತ್ರಕ್ಕೆ ಕ್ಲೀನ್ ಚಿಟ್ ಕೊಟ್ಟರೂ, ಬಿಡುಗಡೆಯ ದಿನ ಸಿಖ್ ಪ್ರತಿಭಟನಾಕಾರರು ಚಿತ್ರಮಂದಿರಗಳಿಗೆ ನುಗ್ಗಿ ಗಲಾಟೆ ಮಾಡುವ ಮೂಲಕ ಪ್ರದರ್ಶನಕ್ಕೆ ತೊಂದರೆ ಉಂಟುಮಾಡಿದ್ದರು.

ರಾಕ್ ಆನ್ (ಅಗಸ್ಟ್ 29):
IFM

ಈ ಚಿತ್ರದ ಮೂಲಕ ನಿರ್ಮಾಪಕ-ನಿರ್ದೇಶಕ ಫರಾನ್ ಅಖ್ತರ್ ನಾಯಕ ಮತ್ತು ಗಾಯಕರಾಗಿ ಡೆಬ್ಯೂಟ್ ಮಾಡಿದರು. ಚಿತ್ರ ರಾಕ್ ಮ್ಯೂಸಿಕ್ ಮೇಲೆ ಅಧರಿತವಾಗಿದೆ. ಚಿತ್ರದ ಕಥಾಹಂದರ ಮತ್ತು ತಾರಾವರ್ಗದ ಅಭಿನಯಗಳ ಬಗ್ಗೆ ವಿಮರ್ಶಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆಗಳು ಹೊರಬಂದವು. ಚಿತ್ರದ ಮುಖ್ಯಪಾತ್ರಗಳಲ್ಲಿ ಫರಾನ್ ಅಖ್ತರ್ ಅವರೊಂದಿಗೆ ನಾಯಕಿಯಾಗಿ ಪ್ರಾಚಿ ದೇಸಾಯಿ, ಅರ್ಜುನ್ ರಾಂಪಾಲ್ ಮತ್ತು ಪ್ರಣಬ್ ಕೊಹ್ಲಿ, ಲ್ಯೂಕ್ ಕೆನ್ನಿ, ಸಹನಾ ಗೋಸ್ವಾಮಿ, ಕೋಯಲ್ ಪುರಿ, ನಿಕೊಲೆಟ್ಟೆ ಬರ್ಡ್ ಅವರು ನಟಸಿದ್ದರು. ಡೆಬ್ಯೂಟೆಂಟ್ ಪ್ರಾಚಿ ಮತ್ತು ಸಹನಾ ಅಭಿನಯವನ್ನು ಪ್ರಶಂಸಿಲಾಗಿದೆ.

ಎ ವೆಡ್‌ನೆಸ್‌ಡೇ (ಸಪ್ಟೆಂಬರ್ 5) :
IFM
ಈ ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ನಾಸಿರುದ್ದೀನ್ ಶಾ 12 ವರ್ಷಗಳ ಸುದೀರ್ಘ ಅಂತರದ ನಂತರ ಜೊತೆಯಾಗಿ ನಟಿಸಿದರು. ಒಂದು ಬುಧವಾರದ 2 ರಿಂದ 6 ಗಂಟೆಗಳವರೆಗೆ ನಡೆವ ಘಟನೆಗಳು ಈ ಚಿತ್ರದ ಕಥಾಹಂದರ. ಚಿತ್ರಕ್ಕೆ ವಿಮರ್ಶಕರಿಂದ ಅತ್ಯುತ್ತಮ ಪ್ರಶಂಸೆ ಹರಿದು ಬಂದಿತ್ತು. ನಾಸಿರುದ್ದೀನ್ ಮತ್ತು ಅನುಪಮ್ ಖೇರ್ ತಮ್ಮ ಅದ್ಭುತ ಅಭಿನಯ ಕಲೆಯನ್ನು ಹೊರತಂದಿದ್ದರು. ಚಿತ್ರವೂ ಜನರಿಂದಲೂ ಉತ್ತಮ ರೀತಿಯಿಂದ ಸ್ವೀಕೃತವಾಗಿವುದರ ಮೂಲಕ ಬಾಕ್ಸ್ ಅಫೀಸ್ ಕಲೆಕ್ಷನ್‌ನಲ್ಲೂ ಸೈ ಎನಿಸಿಕೊಂಡಿತು.

ಫ್ಯಾಶನ್ (ಅಕ್ಟೋಬರ್ 29): ಪ್ರಿಯಾಂಕಾ ಚೋಪ್ರಾ, ಕಂಗನಾ ರಾಣಾವತ್ ಮತ್ತು ಮುಗ್ಧ ಗೋಡ್ಸೆ ಮತ್ತು ಅರ್ಜುನ್ ಭಾಜ್ವ ಅವರುಗಳನ್ನು ಮುಖ್ಯಪಾತ್ರಗಳಲ್ಲಿ ಹೊಂದಿದೆ. ಈ ಚಿತ್ರದಲ್ಲಿ ನಮ್ಮ ಕಣ್ಣಿಗೆ ಕಟ್ಟುವ ಅದ್ಭುತ ಫ್ಯಾಶನ್ ಲೋಕದ ಕರಾಳ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಧುರ್ ಭಂಡಾರ್ಕರ್. ಚಿತ್ರದಲ್ಲಿನ ಪ್ರಿಯಾಂಕ ಪಾತ್ರ ನಿಜಜೀವನದ ಸೂಪರ್ ಮಾಡೆಲ್ ಶಿವಾನಿ ಕಪೂರ್‌ ಮತ್ತು ಒಂದು ಕಾಲದ ಸೂಪರ್ ಮಾಡೆಲ್, ಜೀವನದಲ್ಲಿ ಕುಸಿತ ಕಂಡು ಬೀದಿಗೆ ಬೀಳುವ ಕಂಗಾನ ರಾಣಾವತ್ ಪಾತ್ರ ಗೀತಾಂಜಲಿ ನಾಗ್‌ಪಾಲ್ ಎಂಬ ಸೂಪರ್ ಮಾಡೆಲ್ ಜೀವನದ ಕಥೆಗಳನ್ನು ಅಧರಿಸಿದೆ.

ಗೋಲ್‌ಮಾಲ್ ರಿಟರ್ನ್ಸ್ (ಅಕ್ಟೋಬರ್ 29) :
IFM
ಹಿಟ್ ಚಿತ್ರ ಗೋಲ್‌ಮಾಲ್(2006)ನ ಉತ್ತರಾರ್ಧ ಗೋಲ್‌ಮಾಲ್ ರಿಟರ್ನ್ಸ್. ಅಜಯ್ ದೇವಗನ್, ಕರೀನಾ ಕಪೂರ್, ಅರ್ಶದ್ ವರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲಪಾಡೆ, ಸಲೀನಾ ಜೇಟ್ಲಿ, ಅಮೃತಾ ಅರೋರಾ ನಟಿಸಿರುವ ಗೋಲ್‌ಮಾಲ್ ರಿಟರ್ನ್ಸ್ ಬಹುತಾರಗಣ ಚಿತ್ರ. ಇದು ಹಾಸ್ಯ ಚಿತ್ರವಾಗಿದ್ದು, ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಈ ಚಿತ್ರ ಹಳೆಯ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಚಿತ್ರದ ಕಥೆಯನ್ನು ಹೊಂದಿದೆ ಎಂದು ಸ್ವಲ್ಪ ಮಟ್ಟಿನ ವಿವಾದವೆದ್ದಿತ್ತು. ಈ ಚಿತ್ರ ವಿಮರ್ಶಕರ ಋಣಾತ್ಮಕ ಪ್ರತಿಕ್ರಿಯೆಯ ಹೊರತೂ ಮೊದಲ ದಿನವೇ 22.03 ಲಕ್ಷ ಗಳಿಕೆಯನ್ನು ಮುಟ್ಟುವ ಮೂಲಕ ಓಂ ಶಾಂತಿ ಓಂ ಚಿತ್ರದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮುರಿದಿದೆ. ವಿದೇಶಗಳಲ್ಲೂ ಚಿತ್ರ ಉತ್ತಮ ವ್ಯವಹಾರ ನಡೆಸಿತು. ಉತ್ತಮ ಹಾಸ್ಯ ಚಿತ್ರ ಅತ್ಯುತ್ತಮ ಗಳಿಕೆ ಮಟ್ಟ ತಲುಪಿ, ವರ್ಷದ ಅತಿದೊಡ್ಡ ಹಿಟ್‌ ಚಿತ್ರಗಳಲ್ಲಿ ಒಂದೆನಿಸಿಕೊಂಡಿದೆ.

ದೋಸ್ತಾನ (ನವೆಂಬರ್ 14) :
IFM

ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿರುವ ದೋಸ್ತಾನ ಸ್ನೇಹಿತರ ನಡುವಿನ ಕಥೆ. ಜಾನ್ ಮತ್ತು ಅಭಿಷೇಕ್ ಸಲಿಂಗಕಾಮಿಗಳೆಂದು ಹೇಳಿಕೊಳ್ಳುವುದು ಈ ಚಿತ್ರದಲ್ಲಿರುವ ನೂತನ ಅಂಶ. ಜಾನ್ ಮತ್ತು ಪ್ರಿಯಾಂಕರಿಂದ ಸಾಕಷ್ಟು ದೇಹ ಪ್ರದರ್ಶನ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಂದರ ಮೈಮಿ ಬೀಚ್‌ನ ಸುಂದರ ಲೋಕೇಶನ್‌ಗಳಲ್ಲಿ ದೋಸ್ತಾನಕ್ಕೆ ಚಿತ್ರೀಕರಣ ನಡೆಸಲಾಗಿದೆ. ವಿದೇಶಿ ಪ್ರೇಕ್ಷಕರನ್ನು ಹೆಚ್ಚಿನ ಮಟ್ಟದಲ್ಲಿ ಮೆಚ್ಚಿಸಿರುವ ಈ ಚಿತ್ರ ವಿದೇಶಗಳಲ್ಲಿ ಸೂಪರ್ ಹಿಟ್ ಎಂದು ಘೋಷಿತವಾಗಿದೆ. ಭಾರತದಲ್ಲಿ ಮುಂಬಯಿ ದಾಳಿಯ ನಂತರ ಚಿತ್ರಗಳ ಪ್ರದರ್ಶಕ್ಕೆ ಹೊಡೆತ ಬಿದ್ದಿದ್ದರೂ, ದೋಸ್ತಾನ ತನ್ನ ಉತ್ತಮ ನಡೆಯನ್ನು ಮುಂದುವರೆಸಿದೆ.

ರಬ್ನೆ ಬನಾ ದಿ ಜೋಡಿ (ಡಿಸೆಂಬರ್ 12):
IFM
ಶಾರುಖ್ ಖಾನ್‌ರ ರಬ್ನೆ ಬನಾದಿ ಜೋಡಿ ಡಿಸೆಂಬರ್ 12ರಂದು ತೆರೆ ಕಂಡಿದೆ. ತಮ್ಮ ಫ್ಯಾಸನೇಬಲ್ ಲುಕ್‌ನಿಂದ ಹೊರಬಂದಿರುವ ಶಾರುಖ್ ಈ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಮಾತ್ರವಲ್ಲದೆ ಯುರೋಪ್‌ನ ರಾಷ್ಟ್ರಗಳಲ್ಲೂ ಒಂದೇ ದಿನ ತೆರೆಕಣಲಿರುವ ರಬ್ನೆ ಬನಾ ದಿ ಜೋಡಿ ಬಗೆಗೆ ಬಹಳ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಚಿತ್ರದಲ್ಲಿ ಅನೌಷ್ಕಾ ಶರ್ಮ, ಶಾರುಖ್ ಎದುರು ನಾಯಕಿಯಾಗಿ ಬಾಲಿವುಡ್‌ಗೆ ಪಾದಾಪರ್ಣೆ ಮಾಡುತ್ತಿದ್ದಾರೆ. ಮುಂಬಯಿ ದಾಳಿಯ ನಂತರ ಬಿಡುಗಡೆಯಾದ ಎಲ್ಲಾ ಚಿತ್ರಗಳೂ ಸಿನಿಮಾ ಮಂದಿರಗಳಲ್ಲಿ ತೋಪಾಗಿದ್ದರೂ ಬಿಡುಗಡೆ ಕಂಡ ನಂತರ ರಬ್ನೆ ಉತ್ತಮ ಓಟ ಕಂಡಿದ್ದು ಹಿಟ್ ಎನಿಸುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಶಾರುಖ್ ಖಾನ್ ಮತ್ತು ಆದಿತ್ಯ ಚೋಪ್ರಾ 2000ದ ಮೊಹಬ್ಬತೇ ಚಿತ್ರದ ನಂತರ ಇದೇ ಮೊದಲ ಬಾರಿಗೆ ಒಂದಾಗಿ ಯಶ್ ರಾಜ್ ಫಿಲಂಸ್‌ನ ಪ್ರತಿಷ್ಠೆಯನ್ನು ಮರಳಿಸಿದ್ದಾರೆ.

ಗಜನಿ:
IFM
2008 ರ ಕೊನೆಯ ದಿನಗಳಲ್ಲಿ, ಕ್ರಿಸ್‌ಮಸ್ ವಾರದಲ್ಲಿ ಅಮೀರ್ ಖಾನ್‌ರ ಗಜನಿ ಬಿಡುಡೆಯಾಗಲಿದ್ದು, ಈ ಚಿತ್ರದಲ್ಲಿ ಬಾಲಿವುಡ್‌ ಕ್ರೆಜ್‌ನ ಸಿಕ್ಸ್ ಪ್ಯಾಕ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೀರ್ ಖಾನ್ ಎಂಟು ಪ್ಯಾಕ್‌ಗಳಲ್ಲಿ ತಮ್ಮ ದೇಹದಾರ್ಢ್ಯ ಬೆಳೆಸಿಕೊಂಡಿದ್ದಾರೆ. ದಕ್ಷಿಣದ ನಟಿ ಆಸಿನ್ ಅಮೀರ್ ಎದುರು ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಆರಂಭಿಕ ಪ್ರತಿಕ್ರಿಯೆ ಚಿತ್ರ ಯಶಸ್ಸಿನತ್ತ ಸಾಗುತ್ತಿದೆ ಎಂಬ ಸೂಚನೆ ನೀಡಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

Show comments