ಬಾಲ ಲೀಲೆ: ದುಷ್ಟಶಕ್ತಿ ದಮನವೇ ಮಕ್ಕಳಾಟ
ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ-ಭಾಗ 2
ಮಾಯೆಯ ಮಾತು ಕೇಳಿ ಕ್ರುದ್ಧನಾದ ಕಂಸ, ಎಲ್ಲೇ ಇದ್ದರೂ ಸರಿ ಆ ಮಗುವನ್ನು ಕೊಂದೇ ತೀರಬೇಕು ಎಂದು ಸಂಕಲ್ಪ ತೊಟ್ಟು, ತನ್ನ ದುಷ್ಟ ಶಕ್ತಿಗಳಾದ ಬಕ, ಶಕಟ, ಧೇನುಕ, ತೃಣಾವರ್ತ ಹಾಗೂ ಪೂತನಿ ಮುಂತಾದವರನ್ನು ಶ್ರೀಕೃಷ್ಣ ಸಂಹಾರ ಕಾರ್ಯಕ್ಕೆ ತೊಡಗಿಸಿದನು. ನಂದಗೋಕುಲದಲ್ಲಿ ಯಶೋದೆಯ ಮಡಿಲಲ್ಲಿ ಮುದ್ದಾದ ಗಂಡುಮಗುವನ್ನು ಕಂಡ ನಂದಗೋಪನ ಸಂತಸಕ್ಕೆ ಪಾರವೇ ಇಲ್ಲವಾಯಿತು. ಪುತ್ರೋತ್ಸವದ ಕಾರಣ ಗೋವುಗಳ ಅಲಂಕಾರ, ಪೂಜೆ, ಪುನಸ್ಕಾರ ವಿಜೃಂಭಣೆಯಿಂದ ನಡೆದವು. ನಂದ ಗೋಪನ ದಾನ ಧರ್ಮಕ್ಕೆ ಕೊನೆಯೇ ಇರಲಿಲ್ಲ. ಇಡೀ ನಂದಗೋಕುಲದ ಕಣ್ಮಣಿಯಾಗಿ ಬೆಳೆಯಲಾರಂಭಿಸಿದ ಬಾಲಗೋಪ.ಹೀಗೆ ಇಡೀ ನಂದಗೋಕುಲ ಆನಂದ ಸಾಗರದಲ್ಲಿ ತೇಲುತ್ತಿರುವಾಗ, ಕಂಸನ ದುಷ್ಟಶಕ್ತಿಗಳಲ್ಲಿ ಒಬ್ಬಳಾದ ಪೂತನಿ ಯಾರೂ ಇಲ್ಲದ ಸಮಯ ನೋಡಿ ಯಶೋದೆಯ ಮನೆಗೆ ಕಾಲಿರಿಸಿ ತೊಟ್ಟಿಲಲ್ಲಿ ಆಡುತ್ತಿದ್ದ ಮಗುವನ್ನು ಎತ್ತಿಕೊಂಡು ವಿಷಪೂರಿತ ಹಾಲನ್ನು ಉಣಿಸತೊಡಗಿದಳು. ಶಿಶುವಿನ ರೂಪದಲ್ಲಿದ್ದ ಅವತಾರಪುರುಷ ಪೂತನಿಯ ರಕ್ತವನ್ನೇ ಹೀರಲಾರಂಭಿಸಿದನು. ರಕ್ತದ ಮಡುವಿನಲ್ಲಿಯೇ ಪ್ರಾಣಬಿಟ್ಟಳು ಪೂತನಿ. ವಿಷಯ ತಿಳಿದ ಇಡೀ ನಂದಗೋಕುಲವೇ ಗಾಬರಿಯಿಂದ ಅಲ್ಲಿ ನೆರೆದಿತ್ತು. ಶ್ರೀಕೃಷ್ಣನ ಬಾಲಲೀಲೆಗೆ ಈ ಘಟನೆ ನಾಂದಿ ಹಾಡಿತು.ಪೂತನಿಯ ಸಾವಿನ ವರದಿ ಕಂಸನಿಗೆ ತಲುಪಿತಾದರೂ, ತನ್ನ ದುಷ್ಟಕೃತ್ಯವನ್ನು ನಿಲ್ಲಿಸದ ಕಂಸ ಹೊಸ ಹೊಸ ಪ್ರಯೋಗಗಳನ್ನು ಮಾಡತೊಡಗಿದ. ಮತ್ತೊಂದು ದಿನ, ಯಶೋದೆಯು ಮಗುವಿಗೆ ಸ್ನಾನ ಮಾಡಿಸಿ ತೊಟ್ಟಿಲಲ್ಲಿ ಮಲಗಿಸಿದ್ದಳು. ಶಕಟಾಸುರ ಸರಿಯಾದ ಸಮಯ ನೋಡಿ ಬಂಡಿಯ ರೂಪದಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ಹರಿಯಲು ಮುಂದಾದ. ಆದರೆ, ಅಸಮಾನ ಶೂರ, ಅಕ್ಷೀಣ ಬಲನ ಮುಂದೆ ಎಲ್ಲಿ ನಡೆದೀತು ಆತನ ಕುಕೃತ್ಯ. ಆತನೂ ಮೃತ್ಯುವಶವಾಗಬೇಕಾಯಿತು.ಮತ್ತೊಮ್ಮೆ, ತೃಣಾವರ್ತನೆಂಬ ರಾಕ್ಷಸನು ಸುಳಿಗಾಳಿಯಾಗಿ ಬಂದು ಬಾಲಗೋಪನನ್ನು ಎತ್ತೊಯ್ಯುವ ಪ್ರಯತ್ನ ಮಾಡಿದನಾದರೂ, ಆತನೂ ಕೂಡ ದುರ್ಗತಿಯನ್ನು ಕಾಣಬೇಕಾಯಿತು.
ಇವೆಲ್ಲದರ ನಡುವೆ. ಅವರಿವರ ಮನೆಯಲ್ಲಿ ಬೆಣ್ಣೆ ಕದಿಯುತ್ತ, ಬೆಣ್ಣೆ ತುಪ್ಪದ ಗಡಿಗೆಗಳನ್ನು ಕದ್ದೊಯ್ಯುವುದು, ಒಡೆದು ಹಾಕುವುದು ಮಾಡುತ್ತ ನಂದಗೋಕುಲದ ಮಹಿಳೆಯರಿಗೆ ತಲೆನೋವಾಗಿ ಹೋಗಿದ್ದ ಈ ಗೋಪಾಲ. ಒಮ್ಮೆ ಮಣ್ಣು ತಿಂದಿದ್ದಾನೆಂದು ಹೇಳಿ ಬಾಯಿ ತೆರೆಯುವಂತೆ ಯಶೋದೆ ಹೇಳಿದಾಗ ಒಲ್ಲೆ ಎಂದು ಹೇಳಿದನಾದರೂ, ಕಡೆಗೆ ಬಾಯಿ ತೆರೆದಾಗ ಇಡೀ ಬ್ರಹ್ಮಾಂಡವನ್ನೇ ತನ್ನ ಬಾಯಲ್ಲಿ ತೋರಿಸಿ ತನ್ನ ತಾಯಿ ಯಶೋದೆಯೇ ಮೂಕವಿಸ್ಮಿತಳಾಗುವಂತೆ ಮಾಡಿದನು.
ಹೀಗಿರುವಾಗ, ಒಂದು ದಿನ ಯಶೋದೆಯು ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದಾಗ ತನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾನೆಂದು ಹೇಳಿ ಕೃಷ್ಣನನ್ನು ಒರಳುಕಲ್ಲಿಗೆ ಕಟ್ಟಿ ಕೆಲಸಕ್ಕೆ ತೊಡಗಿದಳು. ಆದರೆ, ಶ್ರೀಕೃಷ್ಣನು ಆ ಒರಳನ್ನು ಎಳೆದೊಯ್ಯುತ್ತ ಶಾಪಗ್ರಸ್ತರಾಗಿ ಮರದ ರೂಪದಲ್ಲಿದ್ದ ನಳಕೂಬರ ಹಾಗೂ ಮಣಿಗ್ರೀವರಿಗೆ ಶಾಪಮುಕ್ತರನ್ನಾಗಿಸಿದನು. ಬೃಹತ್ ವೃಕ್ಷಗಳಾಗಿದ್ದ ಅವರಿಬ್ಪರೂ ನೆಲಕ್ಕೊರಗಿದರು. ಆ ಸದ್ದಿಗೆ ಅಲ್ಲಿಗೆ ನೆರೆದ ಗೋಕುಲದ ಜನರು ಮರದ ಮೇಲೆ ಕುಳಿತು ಆಡುತ್ತಿದ್ದ ಶ್ರೀಕೃಷ್ಣನನ್ನು ಕಂಡು ಸ್ತಬ್ದರಾಗಿದ್ದರು.
ಹೀಗೆಯೇ ಬಾಲಕರಾಗಿದ್ದಲೇ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಬೆಳೆಯುತ್ತಿದ್ದ ಶ್ರೀಕೃಷ್ಣ, ಕಾಳಿಂದೀ ನದಿಯಲ್ಲಿ ನೆಲೆಸಿದ್ದ ಕಾಳಿಂಗ ಸರ್ಪದ ತಲೆಯ ಮೇಲೆ ನೃತ್ಯಮಾಡುತ್ತ "ಕಾಳಿಂಗ ಮರ್ದನ"ನೆಂಬ ಹೆಸರಿಗೆ ಪಾತ್ರನಾದನು.
ಒಮ್ಮೆ ಧಾರಾಕಾರವಾಗಿ ಸುರಿದ ಮಳೆಗೆ ನಂದಗೋಕುಲ ಸಂಕಷ್ಟಕ್ಕೆ ಸಿಲುಕಿದಾಗ, ತನ್ನ ಕಿರುಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಅದರ ಸೂರಿನಡಿಯಲ್ಲಿ ಎಲ್ಲರಿಗೂ ಆಶ್ರಯ ನೀಡಿದನು. ಆ ಮೂಲಕ "ಗೋವರ್ಧನ ಗಿರಿಧಾರಿ"ಯೆಂಬ ಹೆಸರನ್ನೂ ಪಡೆದನು.
ಹೀಗೆಯೇ, ತನ್ನ ಆಮೋದ ಪ್ರಮೋದಗಳಿಂದ ಎಲ್ಲರ ಮನರಂಜಿಸುತ್ತ ಬೆಳೆದ ಶ್ರೀಕೃಷ್ಣನ ಮೋಹನ ಮುರಳಿಯ ನಾದಲೀಲೆಗೆ ಮನಸೋಲದ ಗೋಪಿಕೆಯರಿರಲಿಲ್ಲ. ಬೆಣ್ಣೆ ತುಪ್ಪ ಕದಿಯುವುದರಿಂದ ಹಿಡಿದು, ಗೋಪಿಕೆಯರ ಬಟ್ಟೆಗಳನ್ನು ಮಾತ್ರವಲ್ಲದೆ, ತನ್ನ ರೂಪ, ವ್ಯಕ್ತಿತ್ವ, ಲೀಲೆಗಳಿಂದಾಗಿ ಇಡೀ ನಂದಗೋಕುಲವೇ ಅವನ ಗುಣಗಾನ ಮಾಡುವಂತೆ ಎತ್ತರೆತ್ತರಕ್ಕೆ ಬೆಳೆಯುತ್ತ "ವಿಶ್ವರೂಪ"ವನ್ನು ತಳೆದನು.
ಅಂತಹ ಲೀಲಾ ವಿನೋದಿಯ ಸ್ಮರಣೆಯಿಂದ, ಅನವರತ ಭಜನೆಯಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಭಗವದ್ಗೀತೆಯ ಮೂಲಕ ಶ್ರೀಕೃಷ್ಣನು ಜೀವನವೆಂಬ ಮಹಾಸಾಗರವನ್ನು ಈಜಲು ದಾರಿ ತೋರಿಸಿದ್ದಾನೆ.