Select Your Language

Notifications

webdunia
webdunia
webdunia
webdunia

ಭಕ್ತರ ಪ್ರೀತಿಯ ದೇವ - ಶ್ರೀ ಕೃಷ್ಣ

ಶ್ರೀ ಕೃಷ್ಣನ ಜನ್ಮಾಷ್ಟಮಿ ವಿಶೇಷ- ಭಾಗ 1

ಭಕ್ತರ ಪ್ರೀತಿಯ ದೇವ - ಶ್ರೀ ಕೃಷ್ಣ
ಶಶಿ ಕುಮಾರ
WD
"ಜಗತ್ತಿಗೆಲ್ಲಾ ದೇವರೊಬ್ಬನೇ" ಎಂಬುದು ಸತ್ಯವಾದರೂ, "ಸತ್ಯವೇ ದೇವರು, ದೇವರೇ ಸತ್ಯ" ಎಂಬುದು ನಿಜವಾದರೂ, ಹಿಂದೂ ಪುರಾಣಗಳಲ್ಲಿ ಕಂಡು ಬರುವ ನಾನಾ ದೇವಾನುದೇವತೆಗಳೆಲ್ಲರನ್ನೂ ಹಿಂದೂ ಧರ್ಮದ ಒಂದಲ್ಲ ಒಂದು ದೇವರನ್ನು ಆರಾಧಿಸಿದರೂ, ದೇವರುಗಳಲ್ಲಿ ಅತ್ಯಂತ ಜನಪ್ರಿಯನಾರು ಎಂಬ ಪ್ರಶ್ನೆ ಎದುರಾದಾಗ ಎಲ್ಲರಿಗೂ ಸಿಗುವುದು ಒಂದೇ ಉತ್ತರ -ಶ್ರೀಕೃಷ್ಣ. ಶ್ರೀಕೃಷ್ಣನ ಬಾಲಲೀಲೆಗಳು, ರಾಸಲೀಲೆಗಳು, ವಿಶ್ವರೂಪ ದರ್ಶನ, ಗೀತೋಪದೇಶ ಹೀಗೆ ಆತನ ಅವತಾರದ ಪ್ರತಿಯೊಂದು ಕಣಾನುಕಣವು ಕೇವಲ ಭಕ್ತರಿಗೆ, ರಸಿಕರ ಮನಸ್ಸಿಗೆ ಮಾತ್ರ ಮುದನೀಡದೆ, ಆಧ್ಯಾತ್ಮವಾದಿಗಳು ಹಾಗೂ ತತ್ವಜ್ಞಾನಿಗಳನ್ನು ಕೂಡ ಆಕರ್ಷಿಸಿರುವುದನ್ನು ನೋಡಿದರೆ ಆತನ ಅವತಾರದ "ವಿಶ್ವರೂಪ"ದ ವಿರಾಟ್ ದರ್ಶನವಾಗುತ್ತದೆ.

ವಿಜಯ ಸಂವತ್ಸರದ ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ದಿವಸ ತನ್ನ ಸೋದರಮಾವ ಕಂಸನ ಕಾರಾಗೃಹದಲ್ಲಿ ಜನ್ಮ ತಾಳಿದ ಶ್ರೀಕೃಷ್ಣನ ಇಡೀ ಜೀವನವಿವರವನ್ನು ಕವಿ ಜಯದೇವ ತನ್ನ "ಕೃಷ್ಣಾವತಾರ" ಕೃತಿಯಲ್ಲಿ ಅದ್ಭುತವಾಗಿ ಪದಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಅದೌ ದೇವಕಿ ಗರ್ಭಂ ಜನನಂ

ಗೋಪಿಗೃಹೇ ವರ್ಧನಂ

ಮಾಯಾಪೂತನಿ ಜೀವಿತಾಪಹರಣಂ

ಗೋವರ್ಧನೋದ್ಧಾರಣಂ I

ಕಂಸಶ್ಚೇದನ ಕೌರವಾದಿ ಮಥನಂ

ಕುಂತೀ ಸುತಃ ಪಾಲನಂ

ಶ್ರೀಮದ್ಭಾಗವತಂ ಪುರಾಣ ಪುಣ್ಯ ಕಥಿತಂ

ಶ್ರೀಕೃಷ್ಣ ಲೀಲಾಮೃತಂ II


ಶ್ರೀಕೃಷ್ಣನ ಜನ್ಮದಿನವಾದ ಇಂದು ಆತನ ಬಾಲಲೀಲೆಗಳನ್ನು ಸ್ಮರಿಸುತ್ತ ಪರಮಪಾವನರಾಗೋಣ ಬನ್ನಿ!

ಯಮುನಾ ನದಿ ತೀರದಲ್ಲಿದ್ದ ಮಥುರೆಯನ್ನು ಆಳುತ್ತಿದ್ದವನು ಕಂಸ ಮಹಾರಾಜ. ತನ್ನ ತಂದೆ ಉಗ್ರಸೇನನನ್ನು ಬಂಧಿಸಿ ಕಾರಾಗೃಹದಲ್ಲಿರಿಸಿ ತಾನೇ ರಾಜ್ಯಭಾರ ಮಾಡುತ್ತಿದ್ದನು. ಸ್ವಭಾವತಃ ಕ್ರೂರಿಯಾದ ಕಂಸ, ತನ್ನ ತಂಗಿಯಾದ ದೇವಕಿಯನ್ನು ಮಾತ್ರ ಬಹುವಾಗಿ ಪ್ರೀತಿಸುತ್ತಿದ್ದನು. ಆ ಕಾರಣದಿಂದಲೇ ತನ್ನ ಆತ್ಮೀಯ ಗೆಳೆಯನಾದ ವಸುದೇವನಿಗೆ ದೇವಕಿಯನ್ನು ಧಾರೆಯೆರೆದು ಕೊಟ್ಟಿದ್ದನು.

webdunia
WD
ಆದರೆ, ಕಂಸನ ತಂಗಿಯ ಮೇಲಿನ ಪ್ರೀತಿ ತನ್ನ ಮೇಲಿನ ಮಮಕಾರಕ್ಕಿಂತ ದೊಡ್ಡದಾಗಿಯೇನೂ ಇರಲಿಲ್ಲ. ತನ್ನ ತಂಗಿ ದೇವಕಿ ಮತ್ತು ಗೆಳೆಯ ವಸುದೇವರ ಮದುವೆ ಮುಗಿಸಿ ಅವರನ್ನು ತನ್ನ ರಥದಲ್ಲಿಯೇ ಕುಳ್ಳಿರಿಸಿಕೊಂಡು ತಾನೇ ಅವರಿಬ್ಬರಿಗೆ ಸಾರಥಿಯಾಗಿ ತಂಗಿಯನ್ನು ಗಂಡನ ಮನೆಗೆ ಕಳುಹಿಸಿಕೊಡಲು ಹೊರಟನು. ದುರದೃಷ್ಟವಶಾತ್, ಅಶರೀರವಾಣಿಯೊಂದು ಅವನನ್ನು ತಡೆದು ನಿಲ್ಲಿಸಿತು. ಎಲೋ ಕಂಸ! ನಿನ್ನ ತಂಗಿ ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶು ನಿನಗೆ ಮೃತ್ಯುರೂಪವಾಗುತ್ತದೆ ಎಂಬ ನುಡಿಯು ಕೇಳಿಬಂತು. ತಂಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಕಂಸ, ಅಶರೀರವಾಣಿಯ ಮಾತು ಕೇಳಿ ತಂಗಿಯನ್ನೇ ಕೊಲ್ಲಲು ಮುಂದಾಗುತ್ತಾನೆ. ಆದರೆ, ವಸುದೇವ ಕಂಸನನ್ನು ತಡೆದು ನಿಲ್ಲಿಸಿ, ದೇವಕಿ ಪ್ರತಿಬಾರಿ ಮಗುವಿಗೆ ಜನ್ಮ ನೀಡಿದಾಗಲೂ ತಾನೇ ಆ ಶಿಶುವನ್ನು ತಂದೊಪ್ಪಿಸುವುದಾಗಿ ಮಾತು ನೀಡುತ್ತಾನೆ. ಮಹಾಕ್ರೂರಿಯಾದ ಕಂಸ ವಸುದೇವನ ಮಾತಿಗೆ ಸಮ್ಮತಿಸಿದ್ದೇ ಆತನ ಪಾಲಿಗೆ ಮುಳುವಾಯಿತು. ವಿಧಿ ಬರೆದ ಲಿಪಿಯುಂ ಜಲಲಿಪಿಯೇ!

ತನ್ನ ತಂಗಿ ದೇವಕಿ ಮತ್ತು ಗೆಳೆಯ ವಸುದೇವರಿಬ್ಬರನ್ನು ತನ್ನ ಕಾರಾಗೃಹದಲ್ಲಿಯೇ ಬಂಧಿಯಾಗಿರಿಸಿದ ಕಂಸನಿಗೆ ಕೊಟ್ಟ ಮಾತಿನಂತೆಯೇ, ಪ್ರತಿಬಾರಿ ದೇವಕಿಯು ಮಗುವಿಗೆ ಜನ್ಮ ನೀಡಿದಾಗಲೂ ವಸುದೇವ ಆ ಮಗುವನ್ನು ಕಂಸನಿಗೆ ತಂದೊಪ್ಪಿಸುತ್ತಿದ್ದ. ಕಂಸ ಆ ಮಗುವನ್ನು ಯಾವ ದಯೆ, ದಾಕ್ಷಿಣ್ಯವಿಲ್ಲದೆ ಕೊಲ್ಲುತ್ತಿದ್ದ. ಹೀಗೆ, ಮುಂದುವರಿಯಿತು ಶಿಶು ಸಂಹಾರ.

ಎಂಟನೇ ಮಗುವಿನ ಸರದಿ ಕಂಸನ ಮೃತ್ಯುರೂಪನಾದ ಶ್ರೀಕೃಷ್ಣ. ವಿಜಯ ಸಂವತ್ಸರದ ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ದಿವಸ ದೇವಕಿದೇವಿ ಮುದ್ದಾದ ಕೃಷ್ಣವರ್ಣದ ಗಂಡುಮಗುವಿಗೆ ಜನ್ಮ ನೀಡಿದಳು. ದೇವಕಿ ತನ್ನ ಎಂಟನೇ ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಶಂಖ ಚಕ್ರ ಗದಾಧರನಾದ ಶ್ರೀಹರಿ ಪ್ರತ್ಯಕ್ಷನಾಗಿ, ಈ ಮಗುವನ್ನು ನಂದಗೋಪನ ಮನೆಗೆ ಕೊಂಡೊಯ್ದು, ಆತನ ಪತ್ನಿ ಯಶೋದಾ ದೇವಿಯ ಮಗ್ಗುಲಲ್ಲಿ ಮಲಗಿಸಿ, ಆಕೆಯ ಹೆಣ್ಣು ಮಗುವನ್ನು ತೆಗೆದುಕೊಂಡು ಹಿಂದಿರುಗುವಂತೆ ಸೂಚನೆ ನೀಡುತ್ತಾನೆ. ದೈವಕೃಪೆಯಿಂದ ವಸುದೇವನಿಗೆ ಕಟ್ಟಿದ್ದ ಕಬ್ಬಿಣದ ಸರಪಳಿಗಳು ಹಾಗೆಯೇ ಬಿಚ್ಚಿಕೊಂಡವು. ಕಾವಲುಗಾರರೆಲ್ಲರೂ ನಿದ್ರಾವಶರಾಗಿದ್ದರು. ಸೆರೆಮನೆಯ ಬಾಗಿಲು ತೆರೆದುಕೊಂಡಿತು. ಮಗುವನ್ನು ಬುಟ್ಟಿಯಲ್ಲಿ ಹೊತ್ತ ವಸುದೇವ ನಂದಗೋಪನ ಮನೆಯೆಡೆ ಹೊರಟನು. ಮಧ್ಯರಾತ್ರಿಯ ಸಮಯ, ಭೀಕರ ಮಳೆ ಗಾಳಿ, ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಯಮುನೆ, ಜಗದೋದ್ಧಾರನನ್ನು ಹೊತ್ತೊಯ್ಯಲು ವಸುದೇವನಿಗೆ ದಾರಿ ಮಾಡಿಕೊಟ್ಟಳು. ಆದಿಶೇಷ ಮಳೆಗಾಳಿಯಿಂದ ಮಗುವಿಗೆ ರಕ್ಷಣೆ ನೀಡಿದನು.

ನಟ್ಟ ನಡುರಾತ್ರಿಯ ವೇಳೆ. ಗಾಳಿ ಮಳೆ ಒಂದೆಡೆ. ಇಲ್ಲಿಯೂ ಎಲ್ಲರೂ ನಿದ್ರಾವಶರಾಗಿದ್ದರು. ಸುಗಮವಾಗಿ ಗೋಕುಲವನ್ನು ತಲುಪಿದ ವಸುದೇವ, ಶ್ರೀಹರಿಯ ಸೂಚನೆಯಂತೆ ಯಶೋದೆಯ ಮಗ್ಗುಲಲ್ಲಿ ಮಲಗಿದ್ದ ಹೆಣ್ಣುಮಗುವನ್ನು ತಾನೆತ್ತಿಕೊಂಡು, ತನ್ನ ಮಗುವನ್ನು ಆಕೆಯ ಮಗ್ಗುಲಲ್ಲಿರಿಸಿ ಮರಳಿ ಮಥುರೆಯೆಡೆಗೆ ಧಾವಿಸಿದನು. ಏನೂ ಬದಲಾವಣೆಯೇ ಆಗಿಲ್ಲವೆನ್ನುವಂತೆ ಎಲ್ಲವೂ ಯಥಾಪ್ರಕಾರವಿತ್ತು. ಮುಂಜಾವಿನಲ್ಲಿ ಮಗುವಿನ ಅಳುವಿನ ದನಿ ಕೇಳಿಸುತ್ತಿದ್ದಂತೆ, ಕಾವಲುಗಾರರು ಬಂದು, ಅಲ್ಲಿದ್ದ ಹೆಣ್ಣುಮಗುವನ್ನು ತೆಗೆದುಕೊಂಡು ಹೋಗಿ ಕಂಸನಿಗೆ ಒಪ್ಪಿಸಿದರು. ಕಂಸ ಮಗುವನ್ನು ಕೊಲ್ಲಲು ಮುಂದಾಗುತ್ತಿದ್ದಂತೆ, ಅಂತರಿಕ್ಷಕ್ಕೆ ಜಿಗಿದ ಮಗುವಿನ ರೂಪದಲ್ಲಿದ್ದ ಮಾಯೆಯು, ಎಲೇ ಕಂಸ, ನಿನ್ನ ಮೃತ್ಯುರೂಪಿಯು ಬೇರೆಲ್ಲೋ ಬೆಳೆಯುತ್ತಿರುವುದಾಗಿ ಎಚ್ಚರಿಸಿ ಮರೆಯಾಯಿತು.

ಇದು ದೈವಲೀಲೆ. ಕಂಸನ ಸಂಹಾರವು ವಿಧಿ ಲಿಖಿತ. ಅದನ್ನು ತಪ್ಪಿಸುವುದು ಯಾರಿಗೂ ಸಾಧ್ಯವಾಗಲಿಲ್ಲ.

Share this Story:

Follow Webdunia kannada