ದುಬೈ: ಬಂಟ್ಸ್ ಸಂಘದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ದುಬೈ , ಭಾನುವಾರ, 28 ಅಕ್ಟೋಬರ್ 2012 (11:20 IST)
ದುಬೈಯಲ್ಲಿ ಇತ್ತೀಚಿಗೆ ಯು.ಎ.ಇ. ಬಂಟ್ಸ್ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಯು.ಎ.ಇ. ಯ ವಿವಿಧ ಭಾಗಗಳಿಂದ ಬಂಟ್ಸ್ ಸಮಾಜ ಬಾಂಧವರು ತಮ್ಮ ಬಂಧು ಮಿತ್ರರೊಂದಿಗೆ ಪಾಲ್ಗೊಂಡಿದ್ದರು. ಯು.ಎ.ಇ.ಯಲ್ಲಿರುವ ಎಲ್ಲಾ ಜಾತಿ ಸಮುದಾಯಗಳ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರುಗಳು ಸೇರಿ ಸಾವಿರದ ಮುನ್ನೂರಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ದುಬೈಯ ಅಲ್ ಬರ್ಶಾದಲ್ಲಿರುವ ಜೆ. ಎಸ್. ಎಸ್. ಇಂಟರ್ ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ಇತ್ತೀಚೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಯು.ಎ.ಇ. ಬಂಟ್ಸ್ ಮುಖ್ಯ ಸಂಘಟಕರಾದ ಶ್ರೀ ಸರ್ವೊತ್ತಮ ಶೆಟ್ಟಿಯವರು ಆಹ್ವಾನಿತ ಅತಿಥಿಗಳನ್ನು ಸ್ವಾಗತಿಸಿ ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿಧಿವಿಧಾನಗಳು ಪ್ರಾರಂಭವಾಯಿತು. ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿ, ಸರ್ವ ಆಹ್ವಾನಿತ ಭಕ್ತಾಧಿ ಬಂಧುಗಳಿಗೆ ನವರಾತ್ರಿಯ ಶುಭಾಶಯವನ್ನು ಹಾರೈಸಿದರು.
ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವಿವಿಧ ಸಮುದಾಯ ಸಂಘಟನೆಗಳು ಈ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ್ದವು. ಬಿಲ್ಲಾವಾಸ್ ದುಬೈ, ಬಿಲ್ಲವರ ಬಳಗ ದುಬೈ, ಬಿಲ್ಲವರ ಬಳಗ ಅಬುಧಾಬಿ, ವಿಶ್ವಕರ್ಮ ಸೇವಾ ಸಮಿತಿ. ಯು.ಎ.ಇ., ಮೋಗವೀರ್ಸ್ ಯು.ಎ.ಇ., ಅಮ್ಚಿಗೆಲೆ ಸಮಾಜ ಯು.ಎ.ಇ., ದೇವಾಡಿಗ ಸಂಘ ಯು.ಎ.ಇ., ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಕೊಡವ ಸಮಾಜ, ವಕ್ಕಲಿಗರ ಸಂಘ ಯು.ಎ.ಇ., ಪದ್ಮಶಾಲಿ ಸಮುದಾಯ ಯು.ಎ.ಇ., ರಾಮರಾಜ ಕ್ಷತ್ರೀಯ ಸಂಘ ಯು.ಎ.ಇ., ಬ್ರಾಹ್ಮಣ ಸಮಾಜ ಯು.ಎ.ಇ., ತೀಯಾ ಸಮಾಜ, ಕುಂದಾಪುರ ದೇವಾಡಿಗ ಮಿತ್ರರು, ಅಬುಧಾಬಿ ಕರ್ನಾಟಕ ಸಂಘ, ದುಬಾಯಿ ಕರ್ನಾಟಕ ಸಂಘ, ಶಾರ್ಜಾ ಕರ್ನಾಟಕ ಸಂಘ, ಧ್ವನಿಪ್ರತಿಷ್ಠಾನ, ಕನ್ನಡ ಕೂಟ, ಬಸವ ಸಮಿತಿಗಳು ಸೇರಿದಂತೆ ಯು.ಎ.ಇ. ವಿವಿಧ ಎಲ್ಲಾ ಸಮುಧಾಯ ಮತ್ತು ಸಂಘಟನೆಯ ಅಧ್ಯಕ್ಷರು, ಪಧಾಧಿಕಾರಿಗಳು, ಸದಸ್ಯರುಗಳು ಮತ್ತು ಹಲವಾರು ಹಿರಿಯರು, ಹಿತೈಷಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾದರು.ಯು.ಎ.ಇ. ಬಂಟ್ಸ್ ನ ಹಿರಿಯ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟಿ ಮತ್ತು ಶ್ರೀಮತಿ ಪ್ರತಿಮಾ ಜಗದೀಶ್ ಶೆಟ್ಟಿಯವರನ್ನು ಡಾ. ಬಿ. ಆರ್. ಶೆಟ್ಟಿಯವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಶ್ರೀ ಸುಧಾಕರ ಆಳ್ವ ರವರು ಫಲಪುಷ್ಪ ಸಮರ್ಪಿಸಿದರು. ಕೊಲ್ಲಿನಾಡಿನಲ್ಲಿ ಮೂರುದಶಕಗಳ ಸೇವೆಗೆ ನಿವೃತ್ತಿ ಬಯಸಿ ಮುಂದಿನ ಜೀವನವನ್ನು ಜನ್ಮಭೂಮಿಯಲ್ಲಿ ಕಳೆಯಲು ತೆರಳಲಿರುವ ದಂಪತಿಗಳಿಗೆ ಶ್ರೀ ಸರ್ವೋತ್ತಮಾ ಶೆಟ್ಟಿಯವರು ಶುಭವನ್ನು ಹಾರೈಸಿದರು. ಪೂಜಾ ಸೇವಾ ಕರ್ತರ ಪರವಾಗಿ ಪೂಜೆಗೆ ಕುಳಿತುಕೊಳ್ಳುವ ದಂಪತಿಗಳು ಶ್ರೀ ಗುಣಶೀಲ್ ಶೆಟ್ಟಿ ಮತ್ತು ಶ್ರೀಮತಿ ಸಹನಾ ಗುಣಶೀಲ್ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಮತ್ತು ಶ್ರೀಮತಿ ವೀಣಾ ಅಶೋಕ್ ಶೆಟ್ಟಿ, ಶ್ರೀ ಪ್ರಸನ್ನ ಶೆಟ್ಟಿ ಮತ್ತು ಶ್ರೀಮತಿ ಸುಶ್ಮಾ ಪ್ರಸನ್ನ ಶೆಟ್ಟಿ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.ಕುಸುರಿ ಕೆಲಸದಿಂದ ರಚಿಸಿಲಾದ ಭವ್ಯ ಪೂಜಾ ಮಂಟಪದ ಕೊಡುಗೆ :ಶಶಿಕಲಾ ಶರತ್ ಶೆಟ್ಟಿಯವರದಾಗಿತ್ತು, ಪುಷ್ಪಾಲಂಕಾರ ಶ್ರೀ ರಾಜೇಶ್ ಕುತ್ತಾರ್ ತಂಡವರದ್ದು. ಪೌರೋಹಿತ್ಯ ಶ್ರೀ ರಘುಭಟ್ ಮತ್ತು ಸಹಾಯಕರಾಗಿ ಶಿವರಾಜ್ ರಾವ್, ಕೃಷ್ಣಪ್ರಸಾದ್, ಭಜನಾ ಸೇವೆಯ ಜವಾಬ್ಧಾರಿ ವಹಿಸಿದ ಸತೀಶ್ ಶೆಟ್ಟಿ ಮತ್ತು ಶ್ರೀಮತಿ ಸಂಗೀತಾ ಶೆಟ್ಟಿ ಹಾಗು ಪಾಲ್ಗೊಂಡ ವಿವಿಧ ಮಾಧ್ಯಮ ಪ್ರತಿನಿಧಿಗಳಿಗೂ ಅಲ್ಲದೆ ಸಹಕಾರ ನೀಡಿದ ಹಿತೈಷಿಗಳಿಗೆಲ್ಲಾ ಶ್ರೀ ಗಣೇಶ್ ರೈ ಅಭಿನಂದನೆ ಸಲ್ಲಿಸಿದರು.