ವಿಶ್ವ ಕನ್ನಡ ಸಮ್ಮೇಳನ ಯೂರೋಪ್ 2011: ಲಂಡನ್‌ನಲ್ಲಿ ಕನ್ನಡದ ಕಹಳೆ
ಚಿತ್ರ, ವರದಿ: ಕುಮಾರ್, ಕುಂಟಿಕಾನಮಠ
ಯೂರೋಪ್ ಕನ್ನಡಿಗರು ಸೇರಿಕೊಂಡು ಲಂಡನ್‌ನಲ್ಲಿ ಅಕ್ಟೋಬರ್ 22, 23ರಂದು ಎರಡು ದಿನಗಳ "ವಿಶ್ವ ಕನ್ನಡ ಸಮ್ಮೇಳನ ಯುರೋಪ್ 2011" ಆಯೋಜಿಸಿದ್ದು, ಹೊರ ನಾಡಿನ ಕನ್ನಡಿಗರು ಅಲ್ಲಿ ಕನ್ನಡದ ನುಡಿಯೊಂದಿಗೆ ಸಂಭ್ರಮಿಸಿದರು. ಇದರಲ್ಲಿ ಕನ್ನಡ ಚಿತ್ರರಂಗದ ಶ್ರೀನಾಥ್, ಅಂಬರೀಶ್, ಸುಮಲತಾ, ರಮ್ಯಾ, ದೊಡ್ಡರಂಗೇಗೌಡ, ಕರ್ನಾಟಕದ ರಾಜಕಾರಣಿಗಳಾದ ಡಿ.ಎಚ್.ಶಂಕರಮೂರ್ತಿ, ಡಿ.ಕೆ.ಶಿವಕುಮಾರ್, ನರೇಂದ್ರ ಸ್ವಾಮಿ ಮುಂತಾದವರು ಭಾಗವಹಿಸಿ, ಹೊರನಾಡ ಕನ್ನಡಿಗರಿಗೆ ಕನ್ನಡದ ನೆಲದ ಅನುಭವ ದೊರಕಿಸಿಕೊಟ್ಟರು.ಲಂಡನ್ನಿನ ಪ್ರತಿಷ್ಠಿತ ಮರ್ಮೈದ್ ಸಭಾಂಗಣದ ಹಮ್ಮರ್‌ಸ್ಮಿತ್ ಟೌನ್‌ಹಾಲ್‌ನಲ್ಲಿ ನಡೆದ ಸಮ್ಮೇಳನವನ್ನು ಯುರೋಪ್‌ನಲ್ಲಿರುವ ಸಂಗಮ ಸಂಸ್ಥೆಯು ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದು, ಕರ್ನಾಟಕ, ಯುರೋಪ್, ಕೊಲ್ಲಿ ರಾಷ್ಟ್ರ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ವಿಶೇಷ.