Select Your Language

Notifications

webdunia
webdunia
webdunia
webdunia

ಬಾರದ ಕರೆಂಟು - ಎತ್ತಿರೋ ಪ್ರಶ್ನೆ ನೂರೆಂಟು !

ಬಾರದ ಕರೆಂಟು - ಎತ್ತಿರೋ ಪ್ರಶ್ನೆ ನೂರೆಂಟು !
WD
ಮಳೆಗಾಲ ಇನ್ನೇನು ಮುಗೀತು ಅನ್ನೋ ಹೊತ್ತಿಗಾಗಲೇ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ದಿನವೊಂದಕ್ಕೆ 160 ಮಿಲಿಯನ್ ಯುನಿಟ್ ವಿದ್ಯುತ್ತಿಗೆ ಬೇಡಿಕೆ ಇದ್ದರೆ ಕೇವಲ 136 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಿದ್ದು, ಸುಮಾರು 24 ಮಿಲಿಯನ್ ಯುನಿಟ್ ವಿದ್ಯುತ್ತಿನ ಕೊರತೆ ಕರ್ನಾಟಕಕ್ಕೆ ಎದುರಾಗಿದೆ. ಕಲ್ಲಿದ್ದಲ್ಲಿನ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಅನ್ನುವುದು ಮಾಧ್ಯಮದಲ್ಲಿ ಕಂಡು ಬರುತ್ತಿರುವ ವರದಿಯಾಗಿದೆ. ಅದೇನೇ ಇದ್ದರೂ ಜನರ ಜೀವನಾಡಿಯಾದ ವಿದ್ಯುತ್ ಪೂರೈಕೆಯ ಈ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿರುವ ರೀತಿ ನೋಡಿದರೆ ಸಮಸ್ಯೆ ಬಗೆಹರಿಸುವುದಕ್ಕಿಂತ ಪರಸ್ಪರ ದೋಷಾರೋಪ, ಕೆಸೆರೆರಚಾಟಕ್ಕೆ ಹೆಚ್ಚು ಗಮನ ಕೊಟ್ಟಂತಿದೆ!

ಯಾವ ಯಾವ ಮೂಲದಿಂದ ಎಷ್ಟೆಷ್ಟು ವಿದ್ಯುತ್ ?
ಕರ್ನಾಟಕದ ವಿದ್ಯುತ್ ಬೇಡಿಕೆ 160 ಮಿಲಿಯನ್ ಯುನಿಟ್‌ಗಳಾಗಿದ್ದರೆ ಲಭ್ಯವಿರುವ ವಿದ್ಯುತ್ ಸುಮಾರು 136 ಮಿಲಿಯನ್ ಯುನಿಟ್ ಅನ್ನುತ್ತೆ ಪತ್ರಿಕಾ ವರದಿ. ಈ 136 ಮಿಲಿಯನ್ ಯುನಿಟ್‌ನಲ್ಲಿ 50 ಮಿಲಿಯನ್ ಯುನಿಟ್ ಜಲ ವಿದ್ಯುತ್ ಮೂಲದಿಂದ ಬಂದರೆ, ಸುಮಾರು 26 ಮಿಲಿಯನ್ ಯುನಿಟ್ ಉಷ್ಣ ವಿದ್ಯುತ್ ಮೂಲದಿಂದಲೂ, ಬಾಕಿ 60 ಮಿಲಿಯನ್ ಯುನಿಟನ್ನು ಹೊರ ರಾಜ್ಯ ಮತ್ತು ಕೇಂದ್ರ ಗ್ರಿಡ್‌ನಿಂದ ರಾಜ್ಯವು ಖರೀದಿಸುತ್ತದೆ. ಆಂಧ್ರಪ್ರದೇಶದಲ್ಲಿ ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಿಂದಾಗಿ ಅಲ್ಲಿನ ತೆಲಂಗಾಣ ಪ್ರಾಂತ್ಯದಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆಯಾಗದ ಹಿನ್ನೆಲೆಯಲ್ಲಿ ನಮ್ಮಲ್ಲೇ ಉತ್ಪಾದನೆಯಾಗುವ ಮತ್ತು ಕೇಂದ್ರ ಗ್ರಿಡ್‌ನಿಂದ ದೊರಕುವ ಉಷ್ಣ ವಿದ್ಯುತ್ತಿನಲ್ಲಾಗಿರುವ ಕೊರತೆಯಿಂದಾಗಿ ಇವತ್ತು ಕತ್ತಲಲ್ಲಿ ಕೈ ತೊಳೆಯುವಂತಾಗಿದೆ ಎಂಬುದು ಮಾಧ್ಯಮಗಳ ವರದಿ.

ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಹೋಗದೇ ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಮ್ಮ ಮಂತ್ರಿಗಳ ಹೇಳಿಕೆ ನೋಡಿದರೆ ಸಮಸ್ಯೆಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ, ಯಾರ ತಪ್ಪಿನಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಆರೋಪಿಸುವುದರಲ್ಲೇ ಇಬ್ಬರಿಗೂ ಹೆಚ್ಚು ಸಮಾಧಾನ ಇರುವಂತಿದೆ. ಈ ಸಮಯದಲ್ಲಿ ಇಬ್ಬರಿಗೂ ಕೆಲವು ಪ್ರಶ್ನೆಗಳು:

ರಾಜ್ಯದ ಅಧಿನಾಯಕರಿಗೆ
* ಕೇಂದ್ರವನ್ನು ದೂರುತ್ತ ಕೂರುವ ಬದಲು ತಮ್ಮ ಆಳ್ವಿಕೆಯ ಕಳೆದ ಮೂರು ವರ್ಷದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವತ್ತ ತಾವೇನು ಮಾಡಿದ್ದೀರಿ? ತಮ್ಮ ಆಳ್ವಿಕೆಯಲ್ಲಿ ವಿದ್ಯುತ್ ಉತ್ಪಾದನೆ ಎಷ್ಟರ ಮಟ್ಟಿಗೆ ಹೆಚ್ಚಿದೆ?

* ಎಸ್ಕಾಮ್ ಕಂಪನಿಗಳಿಗೆ ರಾಜ್ಯ ಸರ್ಕಾರ ಕೊಡಬೇಕಿರುವ ಬಾಕಿ 12,000 ಕೋಟಿ ರೂಪಾಯಿಗಳು ಅನ್ನುತ್ತದೆ ಮಾಧ್ಯಮ ವರದಿ. ವಿದ್ಯುತ್ ವ್ಯವಸ್ಥೆಯೇ ಕುಸಿದು ಬೀಳುವ ಹಂತದಲ್ಲಿರುವಾಗಲೂ ರೈತರಿಗೆ ಉಚಿತ ವಿದ್ಯುತ್ ಅನ್ನುವ ಪಾಪ್ಯುಲಿಸ್ಟ್ ಕ್ರಮಗಳಿಗೆ ಜೋತು ಬಿದ್ದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದು ಯಾಕೆ? ಹೋಗಲಿ, ಆಗಾಗ ವಿದ್ಯುತ್ ದರ ಏರಿಸುವುದನ್ನು ಬಿಟ್ಟು ಈ ಬಾಕಿ ತೀರಿಸಲು ಇನ್ಯಾವ ಕ್ರಮ ಕೈಗೊಂಡಿದ್ದೀರಿ?

* ತೆಲಂಗಾಣ ಹೋರಾಟದ "ಸಕಲ ಜನುಲಾ ಸಮ್ಮೆ" (ಸಾಮೂಹಿಕ ಚಳವಳಿ) ಹೋರಾಟ ಶುರುವಾಗಿ 29 ದಿನಗಳಾದವು. ಈ ಸಮಸ್ಯೆ ಇಂತಹದೊಂದು ವಿಪರೀತಕ್ಕೆ ಹೋಗಬಹುದು ಅನ್ನುವ ಕೊಂಚ ಮುಂದಾಲೋಚನೆಯೂ ತಮಗೆ ಇಲ್ಲದಾಯಿತೇ? ಕಳೆದ 29 ದಿನಗಳಲ್ಲಿ ಸರ್ವ ಪಕ್ಷದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ಕಲ್ಲಿದ್ದಲ್ಲಿನ ವ್ಯವಸ್ಥೆ ಕಲ್ಪಿಸಿಕೊಳ್ಳಲು ಯಾಕೆ ಮುಂದಾಗಲಿಲ್ಲ?

* ಹೋಗಲಿ, ಸರ್ವ ಪಕ್ಷ ಸಭೆಗೆ ಪ್ರತಿಪಕ್ಷಗಳು ತಯಾರಿಲ್ಲ ಅಂದುಕೊಳ್ಳೋಣ, ತಮ್ಮ ಪಕ್ಷದ 19 ಜನ ಸಂಸತ್ ಸದಸ್ಯರಿದ್ದಾಗಲೂ ಅವರನ್ನೆಲ್ಲ ಸೇರಿಸಿ ದೆಹಲಿಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಯಾಕೆ ಮುಂದಾಗಿಲ್ಲ? ಕೇಂದ್ರವನ್ನು ದೂರುವುದು ಹೆಚ್ಚು ಸುಲಭ ಅನ್ನುವ ಕಾರಣಕ್ಕೊ?

ಕೇಂದ್ರದಲ್ಲಿ ಮಂತ್ರಿಗಳಾಗಿರುವ ನಮ್ಮ ನಾಡಿನ ದೊರೆಸಾನಿಗಳಿಗೆ
* ಕೇಂದ್ರ ಮತ್ತು ಆಂಧ್ರ ಪ್ರದೇಶ ಸರ್ಕಾರದ ಜಂಟಿ ಒಡೆತನದಲ್ಲಿರುವ ಸಿಂಗರೇಣಿ ಗಣಿಯಿಂದ ಕಲ್ಲಿದ್ದಲು ತರಿಸಿಕೊಳ್ಳಲು ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆ ಗಣಿಯ ಕಲ್ಲಿದ್ದಲ್ಲಿನ ಮೇಲೆ ನಮಗೆ ಇಂತಹದೊಂದು ಅವಲಂಬನೆ ಇರುವಾಗ, ಒಪ್ಪಂದ ಮಾಡಿಕೊಂಡ ರಾಜ್ಯಗಳಿಗೆ ಒಪ್ಪಂದದನ್ವಯ ಸಮರ್ಪಕ ಕಲ್ಲಿದ್ದಲು ಪೂರೈಸಲು ಯಾವ ಕ್ರಮವನ್ನೂ ಯಾಕೆ ಕೈಗೊಂಡಿಲ್ಲ? ಒಂದು ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡುವಂತಹ ಇಂತಹ ಗಂಭೀರ ಸಮಸ್ಯೆ ಬಂದಾಗಲೂ ಮಧ್ಯ ಪ್ರವೇಶಿಸಿ ಪರಿಹಾರ ನೀಡುವಂತೆ ತಾವುಗಳು ಯಾಕೆ ಮನವಿ ಮಾಡಿಲ್ಲ?

* ಪಡೆದ ಕಲ್ಲಿದ್ದಲಿಗೆ ಹಣ ಪಾವತಿಸುವಾಗ ಕರ್ನಾಟಕವೂ ಹೀಗೆ ಬೇಕಾಬಿಟ್ಟಿ ವರ್ತಿಸಿದರೆ ನಿಮ್ಮ ಕೇಂದ್ರ ಸರ್ಕಾರ ಕೇಳುವುದೇ?

* ಆಂಧ್ರದ ಮುಖ್ಯಮಂತ್ರಿ ಮನವಿ ಮಾಡಿದ ತಕ್ಷಣ ಅಲ್ಲಿಗೆ ಪೂರ್ವ ಗ್ರಿಡ್‌ನಿಂದ 800 ಮೆಗಾ ವ್ಯಾಟ್ ವಿದ್ಯುತ್ ಪೂರೈಸಲು ಮುಂದಾಗುವ ಕೇಂದ್ರ, ಕರ್ನಾಟಕದ ಮನವಿಗೆ ಸ್ಪಂದಿಸದಿರುವುದು ಏನು ತೋರಿಸುತ್ತದೆ? ಒಕ್ಕೂಟದಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾದವರು ತಮ್ಮ ಪಕ್ಷದ ಆಡಳಿತ ಇರುವ ರಾಜ್ಯದ ನೋವಿಗೆ ಮಾತ್ರ ಸ್ಪಂದಿಸುವುದು ಒಕ್ಕೂಟಕ್ಕೆ ಬಗೆಯುತ್ತಿರುವ ಅಪಚಾರವಲ್ಲವೇ? ಇದರ ಬಗ್ಗೆ ತಮ್ಮ ಸರ್ಕಾರದ ಗಮನವನ್ನು ತಾವುಗಳೇಕೆ ಸೆಳೆದಿಲ್ಲ?

* ಒರಿಸ್ಸಾ, ಮಹಾರಾಷ್ಟ್ರಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳೋಣವೆಂದರೆ ಸರಿಯಾದ ರೈಲ್ವೇ ಮಾರ್ಗಗಳು ಇಲ್ಲದಿರುವುದೇ ಸಮಸ್ಯೆಯಾಗಿದೆ ಅನ್ನುವುದು ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರ ಹೇಳಿಕೆ. ಹಾಗಿದ್ದಲ್ಲಿ, ರಾಜ್ಯದ ರೈಲ್ವೇ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ನಿಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇದಕ್ಕಿಂತ ಒಳ್ಳೆಯ ಸಂದರ್ಭವುಂಟೇ?

ಪರಸ್ಪರ ಕೆಸರೆರಚಾಟ, ರಾಜಕೀಯ ಮೇಲಾಟ ಬಿಟ್ಟು ಇನ್ನಾದರೂ ಒಂದು ಧ್ವನಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದರೆ, ಕತ್ತಲಲ್ಲಿ ಕೈತೊಳೆಯುತ್ತಿರುವ ನಮ್ಮ ಜನರು, ಉದ್ದಿಮೆಗಳು, ರೈತರು, ವಿದ್ಯಾರ್ಥಿಗಳು ಎಲ್ಲರೂ ನಿಟ್ಟುಸಿರು ಬಿಟ್ಟಾರು. ಮಾಡ್ತಿರಾ ಅಧಿನಾಯಕರೇ, ದೊರೆಸಾನಿಗಳೇ?
[ಲೇಖನ: ವಸಂತ ಶೆಟ್ಟಿ ]

Share this Story:

Follow Webdunia kannada