Select Your Language

Notifications

webdunia
webdunia
webdunia
webdunia

ಇದೇನಿದು ಮಾಯೆ? ಕಿಂಗ್‌ಫಿಷರ್ ನೋಟೀಸ್ ಕಣ್ಮರೆ!

ಇದೇನಿದು ಮಾಯೆ? ಕಿಂಗ್‌ಫಿಷರ್ ನೋಟೀಸ್ ಕಣ್ಮರೆ!
ನವದೆಹಲಿ , ಶನಿವಾರ, 21 ಜುಲೈ 2012 (19:55 IST)
PR
ಆರ್ಥಿಕ ಸಂಕಷ್ಟದಿಂದ ನಲುಗಿರುವ ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್ ವಿಮಾನಯಾನದ ನಿಯಮ ಉಲ್ಲಂಘನೆ ಪಟ್ಟಿ ಹಾಗೂ ನೌಕರರಿಗೆ ವೇತನ ನೀಡಲು ನೀಡಲಾಗಿದ್ದ ಗಡುವು ನೋಟೀಸು, ನಾಗರಿಕ ವಿಮಾನಯಾನದ ಮಹಾನಿರ್ದೇಶನಾಲಯದ (ಡಿಜಿಸಿಎ) ಕಡತದಿಂದ ಕಣ್ಮರೆಯಾಗಿರುವ ವಿವಾದ ನಾಟಕೀಯವಾಗಿ ಮುಂದುವರೆದಿದ್ದು, ಇದೀಗ ಯಾವುದೇ ಕಡತ ಕಣ್ಮರೆಯೇ ಆಗಿಲ್ಲ ಎಂಬ ಉತ್ತರ ಡಿಜಿಸಿಎ ಉನ್ನತಾಧಿಕಾರಿಯಿಂದಲೇ ಬಂದಿರುವ ಬೆಳವಣಿಗೆ, ಜನಸಾಮಾನ್ಯರನ್ನೇ ಅಚ್ಚರಿಗೀಡುಮಾಡಿದೆ.

ಡಿಜಿಸಿಎ ಮಾಜಿ ಪ್ರಧಾನ ನಿರ್ದೇಶಕ ಭಾರತ್ ಭೂಷಣ್ ಅವರ ಅಧಿಕಾರ ಅವಧಿ, ಪ್ರಧಾನ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯಿಂದ ಒಂದು ವರ್ಷಕ್ಕೆ ಮುಂದೂಡಲಾಗಿದ್ದರೂ, ಜುಲೈ 10 ರಂದೇ ಅವರನ್ನು ಜವಾಬ್ದಾರಿಯುತ ಹುದ್ದೆಯಿಂದ ಉಕ್ಕು ಸಚಿವಾಲಯದ ಹಣಕಾಸು ಸಲಹೆಗಾರರಾಗಿ ಎತ್ತಂಗಡಿ ಮಾಡಿರುವ ನಡವಳಿಕೆ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಈ ನಡುವೆ, ಡಿಜಿಸಿಎ ಪ್ರಧಾನ ನಿರ್ದೇಶಕ ಸ್ಥಾನದಿಂದ ವರ್ಗಾಯಿಸಿರುವ ಪ್ರಕ್ರಿಯೆಯಲ್ಲಿ ಕಿಂಗ್‌ಫಿಷರ್ ಕೈವಾಡವಿರುವುದಾಗಿ ಆರೋಪಗಳು ಕೇಳಿಬರುತ್ತಿದೆ. ಹಾಗೂ, ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್‌ಫಿಷರ್-, ಡಿಜಿಸಿಎಯ ನಿಯಮವನ್ನು ಉಲ್ಲಂಘಿಸಿರುವ ಪಟ್ಟಿಯನ್ನು ದಾಖಲಿಸಿ ಸಿದ್ದಪಡಿಸಲಾಗಿರುವ ವರದಿ ಕಡತದಿಂದ ಆಶ್ಚರ್ಯಕರ ರೀತಿಯಲ್ಲಿ ಕಣ್ಮರೆಯಾಗಿದೆ ಎಂದು ಮಾಜಿ ನಿರ್ದೇಶಕ ಭಾರತ್ ಭೂಷಣ್ ಅವರು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಸ್ತುತ ಅಧಿಕಾರದಲ್ಲಿರುವ ಪ್ರಶಾಂತ್ ಸುಕುಲ್, ಅಂತಹಾ ಯಾವುದೇ ಕಡತಗಳು ಕಣ್ಮರೆಯಾಗಿಲ್ಲ. ಈ ಸಂಬಂಧ ತನಿಖೆ ನಡೆಸಿದೆವಾದರೂ ಅಚಾನಕ್ಕಾಗಿಯೂ ಯಾವುದೇ ಕಡತಗಳು ಕಣ್ಮರೆಯಾಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ಎಲ್ಲವೂ ಇದ್ದಂತೆಯೇ ಇದೆ ಎಂದಿರುವ ಪ್ರಶಾಂತ್ ಸುಕುಲ್, ಭಾರತ್ ಭೂಷಣ್ ಅವರ ಆರೋಪದಲ್ಲಿ ಹುರುಳಿಲ್ಲ ಎಂಬ ಸ್ಪಷ್ಟಣೆಯನ್ನೂ ನೀಡಿದ್ದಾರೆ. ಆದರೂ ಈ ವಿವಾದ ಆಡಳಿತ ವಲಯದಲ್ಲಿ ಸಾಕಷ್ಟು ಊಹಾಪೋಹಗಳನ್ನು ಸೃಷ್ಟಿಸಿದ್ದು ಶೀಘ್ರವೇ ಸತ್ಯ ಬಹಿರಂಗವಾಗುವ ಲಕ್ಷಣಗಳು ಕಾಣುತ್ತಿವೆ.

ಪೈಲಟ್‌ಗಳಿಗೆ ಕೊಡಬೇಕಾಗಿರುವ ವೇತನವನ್ನು 15 ದಿನಗಳೊಳಗಾಗಿ ನೀಡದಿದ್ದಲ್ಲಿ ಕಿಂಗ್‌ಫಿಷರ್ ವಿಮಾನಯಾನದ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಭಾರತ್ ಭೂಷಣ್ ಅವರು ಕಿಂಗ್‌ಫಿಷರ್‌ಗೆ ನೀಡಿದ್ದ ನೋಟೀಸಿನ ಪ್ರತಿ ಇತ್ತು ಎನ್ನಲಾಗಿದೆ. ಇದೀಗ ಎಲ್ಲವೂ ಕಣ್ಮರೆಯಾಗಿರುವ ಬೆಳವಣಿಗೆಯಲ್ಲಿ ಕಿಂಗ್‌ಫಿಷರ್ ಕೈಚಲಕ ನಡೆದಿರುವುದಾಗಿ ಗಮಾನಿ ಎದ್ದಿದೆ.

Share this Story:

Follow Webdunia kannada