Select Your Language

Notifications

webdunia
webdunia
webdunia
webdunia

ಕೆಂಗುಲಾಬಿ ಚೆಂಗುಲಾಬಿಯಾಗುವ ಬಗೆ...

ಕೆಂಗುಲಾಬಿ ಚೆಂಗುಲಾಬಿಯಾಗುವ ಬಗೆ...
ಅವಿನಾಶ್ ಬಿ.
WD

ವೆ ಲೆಂಟೈನ್ಸ್ ಡೇ ಬಂದಿತೆಂದರೆ ಕೆಂಪು ಗುಲಾಬಿ ಹೂವುಗಳು ಅರಳುತ್ತವೆ. ಪ್ರೇಮಿಗಳ ಹೃದಯ ಅರಳಿಸುವ ಕಾಯಕ ಮಾಡುವ ಈ ಗುಲಾಬಿ ಹೂವುಗಳು ಪ್ರೇಮಿಗಳ ಕೈಯಿಂದ ಹಸ್ತಾಂತರವಾಗುವಾಗ ಆಗುವ ಸಂಚಲನವಿದೆಯಲ್ಲ... ಅನುಭವಿಸಿಯೇ ತೀರಬೇಕು!

ಕೆಂಗುಲಾಬಿಯು ನೋಡುಗರ ಕಣ್ಣಿಗೆ ಚೆಂಗುಲಾಬಿಯೂ ಹೌದು. ಅದು ಪೂರ್ತಿಯಾಗಿ ಬಿರಿದು ಅರಳುವ ಮೊದಲಿನ, ಅತ್ತ ಮೊಗ್ಗೂ ಅಲ್ಲದ, ಇತ್ತ ಪೂರ್ಣ ಅರಳಿದ ಹೂವೂ ಅಲ್ಲದ ಹೂವನ್ನು ನೋಡೋದೇ ಹಬ್ಬ. ಪ್ರೇಮಿಗಳ ಮನದಲ್ಲಿ, ಹೃದಯದಲ್ಲಿ ಹರಿದಾಡುತ್ತಲೇ ಇರುವ ಗುಲಾಬಿ ಹೂವಿನ ಪಕಳೆಗಳು ಹೂಮನಸಿನ ಪ್ರೇಮಿಗಳ ಬಯಕೆ ತೋಟದಲ್ಲಿ ಅದ್ಭುತವಾಗಿ ಅರಳುತ್ತವೆ ಮತ್ತು ಪನ್ನೀರ ಕಂಪು ಸೂಸುತ್ತಿರುತ್ತವೆ.

ಐ ಲವ್ ಯು ಎನ್ನುವಾಗ ಗುಲಾಬಿ ಹೂವು ಬೇಕೇ ಬೇಕು. ಇಲ್ಲವಾದಲ್ಲಿ ಧೈರ್ಯ ಸಾಲದು. ಐ ಲವ್ ಯು ಅನ್ನುವುದಕ್ಕೂ ಅದೇ ಕೆಂಗುಲಾಬಿಯನ್ನು ಹಿಡಿದು "ಬಂಧನ" ಚಿತ್ರದಲ್ಲಿ ಸುಹಾಸಿನಿಗೆ ಗುಲಾಬಿ ಹೂವು ನೀಡಲು ಅಭ್ಯಾಸ ಮಾಡುವ ವಿಷ್ಣುವರ್ಧನ್‌ರಂತೆ ಹರ ಸಾಹಸ ಬೇಕು. ಧೈರ್ಯ ಬೇಕು.

ದೂರದಲ್ಲೆಲ್ಲೋ ಕೆಂಗುಲಾಬಿಯನು ಕಂಡಾಗ ಹೃದಯ, ಮನಸ್ಸುಗಳು ಅರಳುತ್ತವೆ. ಚೆಂಗುಲಾಬಿ ಹೋಲುವ ತುಟಿಗಳು ಅರಳುತ್ತವೆ. ಯಾರೋ ಚೆಲುವನೊಬ್ಬ ಕೈಯಲ್ಲಿ ಚೆಂಗುಲಾಬಿಯ ಹಿಡಿದು ಶತಪಥ ಹಾಕುತ್ತಿದ್ದಾನೆಂದರೆ ಆತನಲ್ಲಿ ಪ್ರೇಮಾಂಕುರವಾಗಿದೆ ಎಂದುಕೊಳ್ಳಬಹುದು. ಆತನಿಗೋ... ಇದನ್ನು ಯಾರದಾದರೂ ಮುಡಿ ಸೇರಿಸಬೇಕೆಂಬ ಕಾತುರ, ಗುಲಾಬಿಗೆ?... ಆದಷ್ಟು ಬೇಗನೇ ನಾಗವೇಣಿಯೊಬ್ಬಳನು ಅಪ್ಪಿಕೊಂಡು, ಜೀವನ ಸಾರ್ಥಕ ಮಾಡಿಕೊಳ್ಳೋ ಆತುರ! ಚೆಲುವನ ಕೈಯಲ್ಲಿರುವ ಗುಲಾಬಿ ಹೂವು ಕಂಡು ಅದು ನನ್ನ ಮುಡಿಗೇರಬಾರದೇ ಎಂದು ಕನಸುಕಾಣುವ ಕನ್ಯೆಯರಿಗೂ ಬರವಿಲ್ಲ.

ಹಾಗಂತ... ಅಂತೂ ಇಂತೂ ಈ ಗುಲಾಬಿಯು ಯಾರ ಮುಡಿಗೆ ಸೇರಬೇಕೋ... ಅಲ್ಲಿ ಸೇರಿಕೊಂಡು ಬೆಚ್ಚನೆ ಕುಳಿತುಕೊಂಡಿತೆಂದರೆ, ಅದಕ್ಕೆ ತಕ್ಕ ಪೋಷಣೆಯೂ ದೊರೆಯಬೇಕಲ್ಲವೇ? ಆತ ಮತ್ತು ಆಕೆ ನಡುವಣ ಪ್ರೀತಿಯ ಧಾರೆಯೇ ಈ ಗುಲಾಬಿ ಮತ್ತಷ್ಟು ಅರಳಲು ಇನ್ನಷ್ಟು ನಗಲು ಕಾರಣವಾಗುತ್ತದೆ.

ಈ ಗುಲಾಬಿಯು ನಿನಗಾಗಿ, ಅದು ಬೀರುವ ಪರಿಮಳ ನನಗಾಗಿ ಅಂತ ಹುಡುಗ ತನ್ನ ಜನ್ಮ ಪಾವನವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಚಂದಾ ಚಂದಾ... ಗುಲಾಬಿ ಹೂವೇ ಚಂದ ಅಂತ ಹುಡುಗಿ ಭಾವನೆಗಳ ಲೋಕದಲ್ಲಿ ತೇಲಿಕೊಂಡುಬಿಡುತ್ತಾಳೆ.

ಗುಲಾಬಿ ಹೂವು ಪ್ರೇಮಕ್ಕೊಂದು ಸಂಕೇತ. ಗುಲಾಬಿ ಬಣ್ಣವೂ ಅಷ್ಟೆ. ಪ್ರೀತಿಯ ಬಣ್ಣವೂ ಹೌದು. ಸ್ವಚ್ಛ, ಶುಭ್ರ, ಪ್ರಕಾಶಮಾನವಾಗಿರುವ ಗುಲಾಬಿಯನ್ನು ನೋಡಿದ ತಕ್ಷಣ ಅದು ನಮಗೆ ಬೇಕು ಅಂತ ಯಾವ ರೀತಿ ಅನಿಸುತ್ತದೆಯೋ, ಅದೇ ರೀತಿ ನಮ್ಮೊಳಗಿನ ಪ್ರೇಮ-ಪ್ರೀತಿಯ ಭಾವನೆಗಳೂ ಸ್ವಚ್ಛ, ಶುಭ್ರವಾಗಿದ್ದರೆ ತಾನಾಗಿಯೇ ಪ್ರಕಾಶಮಾನವಾಗಿರುತ್ತದೆ.

ಕೊನೆಗೊಂದು ಹಾರೈಕೆ: ಆಧುನಿಕತೆಯ ಆಡಂಬರದಲ್ಲಿ ಪ್ರೀತಿ ಪ್ರೇಮ ಕೂಡ ಯಾಂತ್ರೀಕೃತವಾಗದೆ, ಭಾವನಾತ್ಮಕವಾಗಿರಲಿ; ಸ್ವಚ್ಛ ಪ್ರೀತಿಯ ಯುವ ಮನಸುಗಳ ಆಕಾಂಕ್ಷೆ ಈಡೇರಲಿ.

Share this Story:

Follow Webdunia kannada