ಗಿಡುಗನ ರೂಪ ತಾಳಿರುವ ಗುಬ್ಬಿ ಕ್ಷೇತ್ರ

Webdunia
ಸೋಮವಾರ, 21 ಏಪ್ರಿಲ್ 2008 (18:54 IST)
ಸಮೀಕ್ಷೆ: ಯಗಟಿ ರಘು ನಾಡಿಗ್

ತುಮಕೂರು ಜಿಲ್ಲೆಯ ಗುಬ್ಬಿ ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕೇತ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಎಲ್ಲ ರಾಜಕೀಯ ಪಕ್ಷಗಳಲ್ಲಿರುವಂತೆ ಟಿಕೆಟ್ ವಂಚಿತರು ಇಲ್ಲೂ ಇರುವುದು ಮತ್ತು ಅವರಲ್ಲೊಬ್ಬರ ಕಾರಣವನ್ನು ಮುಂದುಮಾಡಿಕೊಂಡು ಸಂಸದ ಎಸ್.ಮಲ್ಲಿಕಾರ್ಜುನಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಿದ್ದು.

ಕ್ಷೇತ್ರ ಮರುವಿಂಗಡಣೆಯೆಂಬ ಪ್ರಕ್ರಿಯೆ ಬಹಳ ದಿನಗಳ ಹಿಂದೆಯೇ ಮುಗಿದು, ಚುನಾವಣೆ ನವೆಂಬರ್ ಹೊತ್ತಿಗೆ ಇದ್ದಿದ್ದರೆ ಪ್ರಾಯಶಃ ಯಾವುದೇ ರಾಜಕೀಯ ಪಕ್ಷಕ್ಕೆ ಈ ತೆರನಾದ ಭಿನ್ನಮತ ಎದುರಾಗುತ್ತಿರಲಿಲ್ಲ. ಅದರೆ ಎಲ್ಲ ನಿರೀಕ್ಷೆಗಳೂ ತಲೆಕೆಳಗಾಗಿ ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಚುನಾವಣೆ ಘೋಷಣೆಯಾಯಿತು. ನಾವು ಜಾತಿವಾದಿಗಳಲ್ಲ ಎಂದು ರಾಜಕಾರಣಿಗಳು ಎಷ್ಟೇ ಬೊಂಬಡಾ ಹೊಡೆದರೂ ಇಂದಿನ ವ್ಯವಸ್ಥೆ ಅದರಲ್ಲೂ ಚುನಾವಣಾ ವ್ಯವಸ್ಥೆ ಮತ್ತು ರಾಜಕಾರಣ ನಿಂತಿರುವುದು ಜಾತಿಯ ನೆಲೆಗಟ್ಟಿನಲ್ಲೇ ಎಂಬುದು ಹದಿನಾರಾಣೆ ಸತ್ಯ. ಹೀಗಿರುವಾಗ ಕ್ಷೇತ್ರ ಮರುವಿಂಗಡಣೆಯಾದ ನಂತರ ಯಾವ ಯಾವ ಜಾತಿಯ ಮತಗಳು ಯಾವ ಕ್ಷೇತ್ರಕ್ಕೆ ಹೋಗಿ ಸೇರಿಕೊಳ್ಳುತ್ತವೆ ಎಂಬ ಲೆಕ್ಕಾಚಾರವನ್ನು ಮಾಡಿಕೊಂಡು ಕಣಕ್ಕಿಳಿಯಬೇಕಾದ ಅನಿವಾರ್ಯತೆ ಸಂಭಾವ್ಯ ಅಭ್ಯರ್ಥಿಗಳಲ್ಲಿ ಕಂಡು ಬಂತು. ಹೀಗಾಗಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಾರುವ ಅನಿವಾರ್ಯತೆ ಕಂಡು ಬಂತು.

ಈ ಸಮಸ್ಯೆ ಬಹಳಷ್ಟು ಕಡೆ ತಲೆದೋರಿದೆಯಾದರೂ, ಇದರ ಪರಿಣಾಮ ಹೆಚ್ಚಾಗಿ ಕಂಡುಬಂದಿರುವುದು ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ. ಕರ್ನಾಟಕ ಹೊಟೇಲು ಮತ್ತು ಉಪಾಹಾರ ಮಂದಿರಗಳ ಅಧ್ಯಕ್ಷರಾದ ಸಿ.ವಿ.ಮಹದೇವಯ್ಯನವರಿಗೆ ಬಿಜೆಪಿಯ ಟಿಕೆಟ್ ತಪ್ಪಿರುವುದು ಕ್ಷೇತ್ರದಲ್ಲಿ ಆಕ್ರೋಶ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕಳೆದ ಬಾರಿ ಬೆಳ್ಳಾವೆ ಕ್ಷೇತ್ರದಲ್ಲಿ ಕೇವಲ 600 ಮತಗಳ ಅಂತರದಿಂದ ಸೋತಿದ್ದ ಮಹದೇವಯ್ಯ ಸಹಜವಾಗಿಯೇ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮರುವಿಂಗಡಣೆಯ ಕಾರಣದಿಂದಾಗಿ ಬೆಳ್ಳಾವೆ ಕ್ಷೇತ್ರ ಈಗ ಇಲ್ಲವಾಗಿರುವುದರಿಂದ ಅವರಿಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿತ್ತು.

ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಿ.ಎಸ್.ಪುರ ಮತ್ತು ಕಡಬ ಹೋಬಳಿಯ ಹಲವಾರು ಹಳ್ಳಿಗಳು ಈಗ ಗುಬ್ಬಿಯಿಂದ ಬಿಡುಗಡೆ ಹೊಂದಿ ತುರುವೇಕೆರೆ ಕ್ಷೇತ್ರದ ಪಾಲಾಗಿರುವುದರಿಂದ ಈಗ ಗುಬ್ಬಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಳಿದಿರುವುದು ವೀರಶೈವ ಸಮುದಾಯದವರೇ. ಈ ಹಿನ್ನೆಲೆಯಲ್ಲಿ ತಮ್ಮ ಗೆಲುವು ಸುಲಭವಾಗುತ್ತದೆ ಎಂದೇ ಮಹದೇವಯ್ಯ ಭಾವಿಸಿದ್ದರು ಹಾಗೂ ಒಂದು ತಿಂಗಳಿಂದಲೇ ಪ್ರಚಾರವನ್ನೂ ಆರಂಭಿಸಿದ್ದರು.

ಆದರೆ ಮಾಜಿ ಸಚಿವ ಎಸ್.ಶಿವಣ್ಣನವರ ಕುಮ್ಮಕ್ಕಿನಿಂದಾಗಿ ಮಹದೇವಯ್ಯನವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಮತ್ತು ಇದಕ್ಕೆ ಸಂಬಂಧಿಸಿ ತಮಗೆ ಉದ್ರಿಕ್ತ ಕಾರ್ಯಕರ್ತರು ಕೋಣೆಯಲ್ಲಿಯೇ ದಿಗ್ಬಂಧನ ಹಾಕಿದ್ದ ಕಾರಣವನ್ನು ಮುಂದುಮಾಡಿಕೊಂಡು ಎಸ್.ಮಲ್ಲಿಕಾರ್ಜುನಯ್ಯ ತಮ್ಮ ರಾಜೀನಾಮೆ ಪತ್ರವನ್ನು ಸದಾನಂದಗೌಡರಿಗೆ ಸಲ್ಲಿಸಿದ್ದರು. ಆದರೆ ಈಗಾಗಲೇ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಸದ ಅನಂತ್‌ಕುಮಾರ್ ಸ್ಪಷ್ಟೀಕರಿಸಿರುವ ಹಿನ್ನೆಲೆಯಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಾಗಿದೆ.

ಇದರ ಪರಿಣಾಮವಾಗಿ ಜಿಲ್ಲೆಯ ಬಿಜೆಪಿಯ ಇತರ ಟಿಕೆಟ್ ವಂಚಿತರು ಮಧುಗಿರಿ, ಶಿರಾ, ಗುಬ್ಬಿ, ಕುಣಿಗಲ್ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ತಮಗೆ ಟಿಕೆಟ್ ಸಿಗದಿದ್ದರೆ ತುಮಕೂರು ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಹದೇವಯ್ಯ ಈಗಾಗಲೇ ಘೋಷಿಸಿದ್ದಾರೆ. ಹಾಗೇನಾದರೂ ಆದಲ್ಲಿ ಅದು ಮತ್ತಷ್ಟು ಒಡಕು ಉಂಟುಮಾಡಲಿದೆ. ಏಕೆಂದರೆ ಹ್ಯಾಟ್ರಿಕ್ ಶಾಸಕರೆಂದೇ ಹೆಸರಾಗಿರುವ ಎಸ್.ಶಿವಣ್ಣನವರ ಜೈತ್ರಯಾತ್ರಗೆ ಈ ಸ್ಪರ್ಧೆ ಅಡ್ಡಿಯನ್ನುಂಟುಮಾಡುತ್ತದೆ ಎಂಬುದು ಸಮೀಕ್ಷೆಯಲ್ಲಿ ಒಟ್ಟಾರೆಯಾಗಿ ವ್ಯಕ್ತವಾದ ಅಭಿಪ್ರಾಯ. ಮೊದಲೇ ಬಿಸಿಲುನಾಡೆಂದು ಹೆಸರಾದ ಬಳ್ಳಾರಿ, ಚುನಾವಣಾ ಬಿಸಿಯಿಂದಾಗಿ ಈಗಾಗಲೇ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿದೆ. ಪಕ್ಷದ ವರಿಷ್ಠರು ಸೂಕ್ತ ನಿರ್ಧಾರವನ್ನಾಗಲೀ ಪರಿಹಾರ ಸೂತ್ರವನ್ನಾಗಲೀ ಕೈಗೊಳ್ಳದಿದ್ದರೆ ತುಮಕೂರು ಜಿಲ್ಲೆಯಲ್ಲೂ ಒಂದೆರಡು ಬಳ್ಳಾರಿಗಳು ಕಂಡುಬಂದಾವು ಎನ್ನುವುದು ಸಮೀಕ್ಷೆಯಲ್ಲಿ ಕಂಡುಬಂದ ಮತ್ತೊಂದು ಗಮನಾರ್ಹ ಅಂಶ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

Show comments