| ಹೀಗಾಗಿ "ಆಲ್ ಇನ್ ಒನ್" ಲೇಖನ ಸಿದ್ಧಪಡಿಸಲು ಸಂತಾಪಕರು ಆದೇಶ ನೀಡಿದ ಮೇರೆಗೆ ಬೊಗಳೆ-ರಗಳೆ ಏಕಸದಸ್ಯ ಬ್ಯುರೋದಲ್ಲಿದ್ದ ಎಲ್ಲರೂ ಕಾರ್ಯಪ್ರವೃತ್ತರಾಗಿ ಒಂದೊಂದು ಗೆರೆಗಳನ್ನು ಗೀಚಿ ಬಿಟ್ಟರು. ಅವುಗಳನ್ನು ಸಂಗ್ರಹಿಸಿ ಇಲ್ಲಿ ಕೆಳಗೆ ಒಂದೊಂದಾಗಿ ಬಾಂಬ್ ಸುರಿಮಳೆಗರೆಯಲಾಗುತ್ತಿದೆ. ಅದನ್ನೇ ಹೆಕ್ಕಿಕೊಂಡು ಬೆಂಕಿ ಹಚ್ಚಿದಲ್ಲಿ ನಮ್ಮ ಓದುಗ ಸಮುದಾಯದ ದೀಪಾವಳಿ ಸಂಭ್ರಮವೋ ಸಂಭ್ರಮ! * ಈ ಬಾರಿ ದೀಪಾವಳಿಯನ್ನು ಅಕ್ಷರಶಃ ಆಂಗ್ಲ ಭಾಷೆಯಲ್ಲೇ ಆಚರಿಸಲಾಗುತ್ತದೆ. ಬೆಲೆಗಳೆಲ್ಲವೂ ಆಕಾಶಕ್ಕೇರಿರುವುದರಿಂದ, ಮತ್ತು ಈಗಾಗಲೇ ಚಂದ್ರಯಾನ-1 ಗಗನ ನೌಕೆಯಲ್ಲಿ ಕೇಂದ್ರದ ಯುಪಿಎ ಎಂಬ ಪರಮಾಣುಭರಿತ ಸರಕಾರವು ದೇಶದ ಜೀವನಾವಶ್ಯಕ ಬೆಲೆಗಳನ್ನೇ ತುಂಬಿಸಿ ಕಳುಹಿಸಿದೆ ಎಂಬ ತೀವ್ರ ಶಂಕೆಯಿಂದಾಗಿ, ಎಲ್ಲರೂ ಹ್ಯಾಪೀ ದಿವಾಳಿಯೇ ಆಗುತ್ತಾರೆ. * ಇಸ್ರೋದವರು ತಿಂಗಳನ ಅಂಗಳಕ್ಕೆ 386 ಕೋಟಿ ರೂ. ವೆಚ್ಚದಲ್ಲಿ ರಾಕೆಟ್ಟನ್ನು ಬಿಟ್ಟುಬಿಟ್ಟಿದ್ದಾರೆ. ಇಷ್ಟು ಕೋಟಿ ರೂ. ವೆಚ್ಚ ಆಗಿದೆ. ಹೀಗಿರುವಾಗ, ಪ್ರತಿಯೊಬ್ಬ ಭಾರತೀಯರೂ ಅದನ್ನೇ ದೀಪಾವಳಿ ರಾಕೆಟ್, ನಾವೇ ಅದಕ್ಕೆ ಖರ್ಚು ಮಾಡಿದ್ದೇವೆ ಅಂತೆಲ್ಲಾ ತಿಳಿದುಕೊಂಡು ತಮ್ಮ ತಮ್ಮ ಜೇಬನ್ನು ಭದ್ರವಾಗಿ ಮುಚ್ಚಿಕೊಳ್ಳಬಹುದು. * ಯುಪಿಎ ಸರಕಾರದ ಅವಧಿಯಲ್ಲಿ ಯಾವತ್ತಿಗೂ ಕೂಡ ಬೆಲೆಗಳು ಆಕಾಶದಲ್ಲಿಯೇ ಇದ್ದವು ಮತ್ತು ಇರುತ್ತವೆ. ಈ ಬಗ್ಗೆ ಸಂಸತ್ತಿನಲ್ಲಿ ಕೂಡ ಒಂದೇ ಒಂದು ನರಪಿಳ್ಳೆ ಕೂಡ ಪಟಾಕಿ ಸಿಡಿಸುವುದಿಲ್ಲ. ಪ್ರತಿಪಕ್ಷದ ಪಟಾಕಿಗಳೆಲ್ಲವೂ ಠುಸ್ಸಾಗಿವೆ. ಸಂಸತ್ತಿನಲ್ಲಿ ಬೆಲೆ ಏರಿಕೆಯೊಂದನ್ನು ಬಿಟ್ಟು ಬೇರೆ ವಿಷಯಗಳಿಗೆ ನಮ್ಮ ನಿಧಾನಿಗಳನ್ನು (ನಿಧಾನವೇ ಪ್ರಧಾನ!) ರಾಕೆಟ್‌ನಂತೆ ಉಡಾಯಿಸುತ್ತಿವೆ ಪ್ರತಿಪಕ್ಷಗಳು ಅಂತ ನೀವು ಕೂಡ ನಿಧಾನಿಗಳಾಗಿ, ವ್ಯವಧಾನಿಗಳಾಗಿ, ಸಮಾಧಾನಿಗಳಾಗಿ, ಆದರೆ ಅಧ್ವಾನಿಗಳಾಗಬೇಡಿ! * ಹೇಗಿದ್ದರೂ ಯುಪಿಎ ಸರಕಾರದ್ದು ಬಡವರ ನಿವಾರಣೆಯ ಸ್ಲೋಗನ್. ಇದಕ್ಕಾಗಿಯೇ ಅದು ಬೆಲೆ ಏರಿಕೆಯ ಸ್ಲೋ... ಗನ್ ಸಿಡಿಸುತ್ತಲೇ ಇದೆ. ಇದೂ ಒಂಥರಾ ದೀಪಾವಳಿಯ ಮದ್ದಿನ ಸದ್ದು ಅಂತಲೂ ಬಡಪ್ರಜೆಯು ತಿಳಿದುಕೊಂಡು, ನಾವೇ ಪಟಾಕಿ ಸಿಡಿಸಿದೆವು ಅಂತ ನೆಮ್ಮದಿಯಲ್ಲಿ ಉಸಿರಾಡಬಹುದು.
|