Select Your Language

Notifications

webdunia
webdunia
webdunia
webdunia

ವಿಡಂಬನೆ: ದಿವಾಳಿಯ ನಡುವೆ ದೀಪಾವಳಿ!

ವಿಡಂಬನೆ: ದಿವಾಳಿಯ ನಡುವೆ ದೀಪಾವಳಿ!
'ಅನ್ವೇಷಿ'
ND
ದೀಪಾವಳಿಗೆ ವಿಶೇಷಾಂಕ ತರಬೇಕೆಂದು ತಲೆಯ ಕೂದಲುಗಳನ್ನು ರಪರಪನೆಯೂ, ಬಳಿಕ ಪರಪರನೆಯೂ ಕೆರೆದುಕೊಳ್ಳುತ್ತಾ, ಅತ್ತಿತ್ತ ಯೋಚಿಸುತ್ತಿರುವಾಗಲೇ ಕೇವಲ ಒಂದೇ ಒಂದು ವಿಶೇಷಾಂಕ ಸಿದ್ಧಪಡಿಸಬೇಕಿದ್ದರೆ ಹಲವಾರು ಲೇಖನಗಳು ಬೇಕೆಂಬುದು ಅರಿವಾಗಿಹೋಗಿಬಿಟ್ಟಿತ್ತು!

ಹೀಗಾಗಿ "ಆಲ್ ಇನ್ ಒನ್" ಲೇಖನ ಸಿದ್ಧಪಡಿಸಲು ಸಂತಾಪಕರು ಆದೇಶ ನೀಡಿದ ಮೇರೆಗೆ ಬೊಗಳೆ-ರಗಳೆ ಏಕಸದಸ್ಯ ಬ್ಯುರೋದಲ್ಲಿದ್ದ ಎಲ್ಲರೂ ಕಾರ್ಯಪ್ರವೃತ್ತರಾಗಿ ಒಂದೊಂದು ಗೆರೆಗಳನ್ನು ಗೀಚಿ ಬಿಟ್ಟರು. ಅವುಗಳನ್ನು ಸಂಗ್ರಹಿಸಿ ಇಲ್ಲಿ ಕೆಳಗೆ ಒಂದೊಂದಾಗಿ ಬಾಂಬ್ ಸುರಿಮಳೆಗರೆಯಲಾಗುತ್ತಿದೆ. ಅದನ್ನೇ ಹೆಕ್ಕಿಕೊಂಡು ಬೆಂಕಿ ಹಚ್ಚಿದಲ್ಲಿ ನಮ್ಮ ಓದುಗ ಸಮುದಾಯದ ದೀಪಾವಳಿ ಸಂಭ್ರಮವೋ ಸಂಭ್ರಮ!

* ಈ ಬಾರಿ ದೀಪಾವಳಿಯನ್ನು ಅಕ್ಷರಶಃ ಆಂಗ್ಲ ಭಾಷೆಯಲ್ಲೇ ಆಚರಿಸಲಾಗುತ್ತದೆ. ಬೆಲೆಗಳೆಲ್ಲವೂ ಆಕಾಶಕ್ಕೇರಿರುವುದರಿಂದ, ಮತ್ತು ಈಗಾಗಲೇ ಚಂದ್ರಯಾನ-1 ಗಗನ ನೌಕೆಯಲ್ಲಿ ಕೇಂದ್ರದ ಯುಪಿಎ ಎಂಬ ಪರಮಾಣುಭರಿತ ಸರಕಾರವು ದೇಶದ ಜೀವನಾವಶ್ಯಕ ಬೆಲೆಗಳನ್ನೇ ತುಂಬಿಸಿ ಕಳುಹಿಸಿದೆ ಎಂಬ ತೀವ್ರ ಶಂಕೆಯಿಂದಾಗಿ, ಎಲ್ಲರೂ ಹ್ಯಾಪೀ ದಿವಾಳಿಯೇ ಆಗುತ್ತಾರೆ.

* ಇಸ್ರೋದವರು ತಿಂಗಳನ ಅಂಗಳಕ್ಕೆ 386 ಕೋಟಿ ರೂ. ವೆಚ್ಚದಲ್ಲಿ ರಾಕೆಟ್ಟನ್ನು ಬಿಟ್ಟುಬಿಟ್ಟಿದ್ದಾರೆ. ಇಷ್ಟು ಕೋಟಿ ರೂ. ವೆಚ್ಚ ಆಗಿದೆ. ಹೀಗಿರುವಾಗ, ಪ್ರತಿಯೊಬ್ಬ ಭಾರತೀಯರೂ ಅದನ್ನೇ ದೀಪಾವಳಿ ರಾಕೆಟ್, ನಾವೇ ಅದಕ್ಕೆ ಖರ್ಚು ಮಾಡಿದ್ದೇವೆ ಅಂತೆಲ್ಲಾ ತಿಳಿದುಕೊಂಡು ತಮ್ಮ ತಮ್ಮ ಜೇಬನ್ನು ಭದ್ರವಾಗಿ ಮುಚ್ಚಿಕೊಳ್ಳಬಹುದು.

* ಯುಪಿಎ ಸರಕಾರದ ಅವಧಿಯಲ್ಲಿ ಯಾವತ್ತಿಗೂ ಕೂಡ ಬೆಲೆಗಳು ಆಕಾಶದಲ್ಲಿಯೇ ಇದ್ದವು ಮತ್ತು ಇರುತ್ತವೆ. ಈ ಬಗ್ಗೆ ಸಂಸತ್ತಿನಲ್ಲಿ ಕೂಡ ಒಂದೇ ಒಂದು ನರಪಿಳ್ಳೆ ಕೂಡ ಪಟಾಕಿ ಸಿಡಿಸುವುದಿಲ್ಲ. ಪ್ರತಿಪಕ್ಷದ ಪಟಾಕಿಗಳೆಲ್ಲವೂ ಠುಸ್ಸಾಗಿವೆ. ಸಂಸತ್ತಿನಲ್ಲಿ ಬೆಲೆ ಏರಿಕೆಯೊಂದನ್ನು ಬಿಟ್ಟು ಬೇರೆ ವಿಷಯಗಳಿಗೆ ನಮ್ಮ ನಿಧಾನಿಗಳನ್ನು (ನಿಧಾನವೇ ಪ್ರಧಾನ!) ರಾಕೆಟ್‌ನಂತೆ ಉಡಾಯಿಸುತ್ತಿವೆ ಪ್ರತಿಪಕ್ಷಗಳು ಅಂತ ನೀವು ಕೂಡ ನಿಧಾನಿಗಳಾಗಿ, ವ್ಯವಧಾನಿಗಳಾಗಿ, ಸಮಾಧಾನಿಗಳಾಗಿ, ಆದರೆ ಅಧ್ವಾನಿಗಳಾಗಬೇಡಿ!

* ಹೇಗಿದ್ದರೂ ಯುಪಿಎ ಸರಕಾರದ್ದು ಬಡವರ ನಿವಾರಣೆಯ ಸ್ಲೋಗನ್. ಇದಕ್ಕಾಗಿಯೇ ಅದು ಬೆಲೆ ಏರಿಕೆಯ ಸ್ಲೋ... ಗನ್ ಸಿಡಿಸುತ್ತಲೇ ಇದೆ. ಇದೂ ಒಂಥರಾ ದೀಪಾವಳಿಯ ಮದ್ದಿನ ಸದ್ದು ಅಂತಲೂ ಬಡಪ್ರಜೆಯು ತಿಳಿದುಕೊಂಡು, ನಾವೇ ಪಟಾಕಿ ಸಿಡಿಸಿದೆವು ಅಂತ ನೆಮ್ಮದಿಯಲ್ಲಿ ಉಸಿರಾಡಬಹುದು.

webdunia
ND
* ಬೆಲೆ ಏರಿಕೆಯ ಈ ದಿನಗಳಲ್ಲಿ ಪಟಾಕಿಗಳು ಕೂಡ ಮುಟ್ಟಿದರೆ ಎಲ್ಲಿ ಸಿಡಿದುಹೋಗುತ್ತವೋ ಎಂಬಷ್ಟರ ಮಟ್ಟಿಗೆ ದುಬಾರಿ. ಪಟಾಕಿ ಅಂಗಡಿಗೆ ತೆರಳುವಾಗ ದೂರದಲ್ಲೇ ಅದರ ವಾಸನೆಯನ್ನು ಆಘ್ರಾಣಿಸಿ, ಹಾ.... ಅಂತ ಒಂದು ನಿಟ್ಟುಸಿರು ಬಿಟ್ಟು, ಮನದಲ್ಲೇ ಪಟಾಕಿ ಸಿಡಿಸಿದ್ದನ್ನು ಕಲ್ಪಿಸಿಕೊಂಡು ಕೂಡ ನೆಮ್ಮದಿಯಿಂದ ಇರಬಹುದು.

* ಆದರೂ ಮಕ್ಕಳು ಜೋರಾಗಿ ಹಠ ಹಿಡಿಯುತ್ತಾರೆ, ರಚ್ಚೆ ಕಟ್ಟುತ್ತಾರೆಂಬ ಆತಂಕವೇ? ಒಂದ್ಕೆಲ್ಸ ಮಾಡಿ... ಒಂದೇ ಒಂದು ಸಣ್ಣ ಬೀಡಿ ಪಟಾಕಿ (ಮಾಲೆ ಪಟಾಕಿಯಲ್ಲಿರುತ್ತದಲ್ಲಾ... ಅದರ ಒಂದು ತುಣುಕು) ಖರೀದಿಸಿ ತನ್ನಿ. (ಅದರ ಬೆಲೆ ಹೆಚ್ಚೆಂದರೆ ಒಂದಷ್ಟು ಸಾವಿರ ರೂಪಾಯಿ ಇದ್ದೀತು!). ಅದಕ್ಕೆ ನಿಮ್ಮ ಮನೆಯಲ್ಲಿರುವ ಬೊಗಳೆ ರಗಳೆ ಪತ್ರಿಕೆಯ ಪ್ರತಿಗಳನ್ನೆಲ್ಲಾ ಸುತ್ತಿಬಿಡಿ. ಅದು ದೋ.......ಡ್ಡ ಬಾಂಬ್ ಆಗುವಂತೆ ಕಾಣಿಸಿಬಿಡಿ. ಎಲ್ಲಾ ಚಿಳ್ಳೆ ಪಿಳ್ಳೆ ಮಕ್ಕಳ ಕೈಗೂ ಒಂದೊಂದು ಊ......ದ್ದದ ಕಡ್ಡಿ ಕೊಡಿ. ಮಕ್ಕಳೆಲ್ಲರೂ ದೂ..........ರದಲ್ಲಿ ನಿಂತು ಏಕಕಾಲಕ್ಕೆ ಎಲ್ಲರೂ ಮೇಣದ ಬತ್ತಿಯ ಮೂಲಕ ಹೊತ್ತಿಸಿದ ತಮ್ಮ ತಮ್ಮ ಕಡ್ಡಿಗಳನ್ನು ಈ ಬೀಡಿ ಪಟಾಕಿಯಲ್ಲಿ ಇದೆಯೋ ಇಲ್ಲವೋ ಎಂಬಂತೆ ಕಾಣಿಸುತ್ತಿರುವ ಬತ್ತಿಗೆ ಮುಟ್ಟಿಸಲು ಹೇಳಿ.... ಎಲ್ಲರೂ ಪಟಾಕಿ ಹಚ್ಚಿದ ಅನುಭವವಾಗುತ್ತದೆ.

* ಮೇಲಿನ ವಿಧಾನ ಅನುಸರಿಸಲು ಕಷ್ಟ, ಅದಕ್ಕೆ ರಷ್ ಆಗುತ್ತದೆ, ಸಿಕ್ಕಾಪಟ್ಟೆ ಮಕ್ಕಳ ಜನಜಂಗುಳಿಯಾಗುತ್ತದೆ ಅಂತ ಹೆದರಿಕೆಯೇ? ಅದಕ್ಕೂ ಒಂದು ಉಪಾಯವಿದೆ. ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳ ಸಂದರ್ಭ ಪುರೋಹಿತರು, ಯಜ್ಞಕರ್ತರು ತಮ್ಮನ್ನು ಮುಟ್ಟಲು ದರ್ಭೆಯನ್ನು ಉಪಯೋಗಿಸುತ್ತಾರಲ್ಲ... ಅದೇ ರೀತಿಯಲ್ಲಿ ಯಾರ ಕೈಯಲ್ಲಿರುವ ಕಡ್ಡಿಗೆ ಈ ಬೀಡಿ ಪಟಾಕಿಯ ಮೂತಿ (ಬತ್ತಿ) ಎಟುಕುತ್ತದೋ... ಅವರನ್ನು ಮುಟ್ಟಿಕೊಂಡರಾಯಿತು. ಎಲ್ಲರೂ ಪಟಾಕಿ ಸಿಡಿಸಿದ ಅನುಭವ!

webdunia
ND
* ಇನ್ನೂ ನಿಮಗೆ ಸಮಾಧಾನವಿಲ್ಲವೇ? ಪಟಾಕಿಗಳ ಬೆಲೆ ಕೂಡ ಹೂಕುಂಡ (ಫ್ಲವರ್ ಪಾಟ್)ನಿಂದ ಸಿಡಿದು ರಾಕೆಟ್‌ನಂತೆ ಆಗಸಕ್ಕೇರಿದೆ ಎಂಬ ಚಿಂತೆಯೇ? ಚಿಂತೆ ಬಿಡಿ... ಈಗಿನ ಸರಕಾರದ ನೀತಿ ನಿಯಮಗಳ ಅಡಿಯಲ್ಲಿ ಪಟಾಕಿಗಿಂತಲೂ ಕಡಿಮೆ ಬೆಲೆಯಲ್ಲಿ ನಿಜವಾದ ಬಾಂಬುಗಳೇ ಅಲ್ಲಲ್ಲಿ (ವಿಶೇಷವಾಗಿ ಮಂಗಳೂರು ಸುತ್ತಮುತ್ತ, ಭಟ್ಕಳದಲ್ಲಿ ಮುಂತಾದೆಡೆ) ಸಿಗುತ್ತವೆಯಲ್ಲಾ ಅಂತ ಮರುಗುತ್ತಿದ್ದೀರೇ? ಉಗ್ರರ ಕೈಗೆ ಅಷ್ಟು ಸುಲಭವಾಗಿ ಸಿಗೋ ನಿಜ ಬಾಂಬಿಗಿಂತಲೂ, ನಮ್ಮ ಆಟಿಕೆಯ ಬಾಂಬೇ ದುಬಾರಿಯಾಯಿತಲ್ಲಾ ಅಂತ ಗೋಳಿಡುತ್ತಿದ್ದೀರಾ? ಮರುಗದಿರು ಎಲೆ ಮಾನವ! ಒಂದು ಕ್ಯಾಪ್ ಪಟಾಕಿಯನ್ನು ಎರಡು ಚಪ್ಪಟೆ ಕಲ್ಲುಗಳ ನಡುವೆ ಇರಿಸಿಕೊಂಡು ತಲೆಗೆ ಗುದ್ದಿಕೊಳ್ಳಬೇಕೂಂತ ನಮ್ಮ ಸರಕಾರದ ವಕ್ತಾರರು ಶೀಘ್ರವೇ ಹೇಳಿಕೆ ಹೊರಡಿಸಲಿದ್ದಾರಂತೆ!

* ತೀರಾ ಇತ್ತೀಚಿನ ವರದಿಗಳ ಪ್ರಕಾರ, ಕರ್ನಾಟಕಕ್ಕಾಗಿಯೇ ವಿಶೇಷವಾಗಿ ಕೆಲವೊಂದು ಬಾಂಬ್‌ಗಳನ್ನು ಸಿದ್ಧಪಡಿಸಲು ಸನ್ನದ್ಧತೆ ಮಾಡಿಕೊಳ್ಳಲಾಗಿತ್ತು. ಅವುಗಳೆಂದರೆ ಗಣಿ ಬಾಂಬ್, ರೆಡ್ಡಿ ಬಾಂಬ್, ಆಪರೇಶನ್ ಬಾಂಬ್, ಕಮಲ ಬಾಂಬ್, ಮುದ್ದೆ ಬಾಂಬ್, 'ಕೈ'ವಾಡ ಬಾಂಬ್, ಸಿದ್ದು ಬಾಂಬ್, ಗುದ್ದು ಬಾಂಬ್, ನೆಲ(ಗಳ್ಳ) ಬಾಂಬ್, ಭೂ(ಗಳ್ಳ) ಬಾಂಬ್, ವಿಶ್ವಾಸದ್ರೋಹ ಬಾಂಬ್, ಗೊಬ್ಬರ ಬಾಂಬ್, ಸೈಕಲ್ ಬಾಂಬ್, ಮತಾಂತರ ಬಾಂಬ್, ಕೋಮು ಬಾಂಬ್ ಇತ್ಯಾದಿ ಇತ್ಯಾದಿ ಹೆಸರಿಡಲು ತೀವ್ರ ಪ್ರಯತ್ನಗಳು ನಡೆದಿರುವುದಾಗಿ ಬೇರೆಲ್ಲೂ ವರದಿಯಾಗಿಲ್ಲದಿದ್ದರೂ ಇಲ್ಲಿ ವರದಿಯಾಗುತ್ತಿದೆ.

* ಇಷ್ಟೆಲ್ಲಾ ಆಗಿ, ನೆಲಗುಮ್ಮ (ಬೆಳ್ಳುಳ್ಳಿ ಪಟಾಕಿ) ಇಲ್ಲಾಂತ ನೀವೇ 'ಸಿಡಿ'ಮಿಡಿಗೊಳ್ಳುತ್ತಿದ್ದೀರಾ.... ಇದೋ ಇಲ್ಲಿದೆ.... ಸೆನ್ಸೆಕ್ಸ್! ನೆಲದೊಳಕ್ಕೆ ಇಳಿಯುತ್ತಲೇ ಇದೆ... ಪಾತಾಳಮುಖಿಯಾದ ಸೆನ್ಸೆಕ್ಸನ್ನೇ ನೆಲಗುಮ್ಮ ಅಂತ ತಿಳಿದುಕೊಳ್ಳಿ.

ಪಟಾಕಿ ಹೊಡೆದು ಹೊಡೆದು ಒಡೆದು ಸಿಡಿಸಿ, ಸುಟ್ಟು ಅದರೊಂದಿಗೆ ಒಂದಿಷ್ಟು ಕುಡಿದು ಬಡಿದು ಕಡಿದು 'ದಿವಾಳಿ'ಯಾಗದಿರಿ, ಎಲ್ಲರಿಗೂ ಶುಭ ದೀಪಾವಳಿ!

Share this Story:

Follow Webdunia kannada