Webdunia - Bharat's app for daily news and videos

Install App

2007: ಅಳಿಸಿ ನಗಿಸಿದ ಟೀಂ ಇಂಡಿಯಾ

Webdunia
PTI
ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಕೂಟದಲ್ಲಿ ಹೀನಾಯ ಪ್ರದರ್ಶನದ ಬಳಿಕ ಕ್ರಿಕೆಟ್ ಪ್ರೇಮಿಗಳಿಂದ ಛೀ ಥೂ ಎಂದೆಲ್ಲಾ ಹೀಗಳೆಸಿಕೊಂಡಿದ್ದ ಟೀಮ್ ಇಂಡಿಯಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಟ್ವೆಂಟಿ-20 ವಿಶ್ವಕಪ್ ಎತ್ತುವ ತನಕ 2007ರಲ್ಲಿ ಸವೆಸಿದ ಹಾದಿ ಹಲವು ಏಳು ಬೀಳುಗಳನ್ನು ಹೊಂದಿತ್ತು.

ಸಂದು ಹೋದ ವರ್ಷ ಭಾರತೀಯ ಕ್ರಿಕೆಟಿನಲ್ಲಿ ಯಾವ ಪರಿಯ ಬದಲಾವಣೆಗಳು ಕಂಡು ಬಂದವೆಂದರೆ, ಭವಿಷ್ಯದಲ್ಲೂ ಅವುಗಳು ತಮ್ಮ ಪ್ರಭಾವ ಬೀರುತ್ತವೆ. ಈ ಎಲ್ಲಾ ಘಟನಾವಳಿಗಳನ್ನು ಬದಿಗಿಟ್ಟು ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವನ್ನು ಮಾತ್ರವೇ ನೋಡಿದರೆ, ಕ್ರಿಕೆಟ್ ಪ್ರೇಮಿಗಳನ್ನು ಈ ತಂಡವು ಎಷ್ಟು ಅಳಿಸಿತೋ, ವರ್ಷಾಂತ್ಯ ಸಮೀಪಿಸುತ್ತಿರುವಾಗ ಅದೇ ಮಾದರಿಯಲ್ಲಿ ಸಂತಸದ ಹೊನಲನ್ನೂ ಹರಿಸಿತು.

PTI
ಭಾರತೀಯ ಕ್ರಿಕೆಟ್ ಮಂಡಳಿಯಂತೂ ತನ್ನ ಚಿತ್ರ ವಿಚಿತ್ರ ನಿಲುವುಗಳಿಂದ ವರ್ಷವಿಡೀ ಸುದ್ದಿಯಲ್ಲಿತ್ತು. ಅವುಗಳಲ್ಲಿ ಭವಿಷ್ಯದಲ್ಲೂ ಪರಿಣಾಮ ಬೀರಬಲ್ಲ ಅದರ ತುಘಲಕ್ ಆದೇಶಗಳೂ ಸೇರಿಕೊಂಡಿವೆ. ಬಂಡಾಯ ರೂಪದಲ್ಲಿ ರಚನೆಗೊಂಡಿರುವ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸೇರುವ ಕ್ರಿಕೆಟಿಗರ ಮೇಲೆ ನಿರ್ಬಂಧಗಳು, ಆಟಗಾರರು ಬಾಯಿ ಮುಚ್ಚಿಕೊಂಡಿರಬೇಕು ಮತ್ತು ಆಯ್ಕೆದಾರರು ಪತ್ರಿಕೆಗಳಲ್ಲಿ ಅಂಕಣ ಬರೆಯಬಾರದು ಎಂಬುದು ಬಹು ಚರ್ಚಿತ ಸಂಗತಿಗಳು.

ಮಂಡಳಿಗೆ ಕೆಲವು ಸಂದರ್ಭಗಳಲ್ಲಿ ಬ್ಯಾಕ್‌ಫುಟ್‌ನಲ್ಲಿ ಆಡಬೇಕಾಗಿಬಂತು. ಅದರಲ್ಲಿ ಪ್ರಮುಖವಾದದ್ದೆಂದರೆ ತಂಡಕ್ಕೆ ಒಬ್ಬ ಸೂಕ್ತ ಕೋಚ್ ಆಯ್ಕೆ. ಯಾಕೆಂದರೆ ಗ್ರೆಗ್ ಚಾಪೆಲ್ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆಗೆ ಆಯ್ಕೆಯಾದ ದಕ್ಷಿಣ ಆಫ್ರಿಕಾದ ಗ್ರಹಾಂ ಫೋರ್ಡ್ ಕೊನೆ ಕ್ಷಣದಲ್ಲಿ ಬಿಸಿಸಿಐನ ರಾಜಕೀಯಕ್ಕೆ ಹೆದರಿಯೋ ಅಥವಾ ಬೇರಾವುದೇ ಕಾರಣಕ್ಕೋ... ಹುದ್ದೆ ತಿರಸ್ಕರಿಸಿದರು. ಇದೀಗ ಮತ್ತೊಬ್ಬ ದಕ್ಷಿಣ ಆಫ್ರಿಕನ್ ಗ್ಯಾರಿ ಕರ್ಸ್ಟನ್ ಈ ಕೋಚ್ ಹುದ್ದೆಗೆ ನೇಮಕಗೊಂಡಿದ್ದಾರೆ.

ಇದಕ್ಕೆ ಮೊದಲು, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಲೆಂಡ್ಸ್‌ನಲ್ಲಿ ನಡೆದ ಮೂರನೇ ತಥಾ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು. ಆದರೆ ಆ ಬಳಿಕ ಬಾಂಗ್ಲಾ ದೇಶ ಮತ್ತು ಇಂಗ್ಲೆಂಡ್‌ಗಳನ್ನು ಅವರದೇ ನೆಲದಲ್ಲಿ 1-0 ಅಂತರದಿಂದ ಟೆಸ್ಟ್ ಸರಣಿಗಳನ್ನು ಜಯಿಸಿತು, ವರ್ಷಾಂತ್ಯದಲ್ಲಿ ಭಾರತಕ್ಕೆ ಬಂದ ಪಾಕಿಸ್ತಾನವನ್ನು 27 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ಸೋಲಿಸಿತು.

ಏಕದಿನ ಕೂಟಕ್ಕೆ ಸಂಬಂಧಿಸಿ ವಿಶ್ವಕಪ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೋಲುಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಭಾರತದ ಪ್ರದರ್ಶನ ಉತ್ತಮವಾಗಿಯೇ ಇತ್ತು. ಬಾಂಗ್ಲಾ ದೇಶ, ಐರ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನಗಳ ವಿರುದ್ಧ ಸರಣಿ ಗೆದ್ದುಕೊಂಡಿತು. ಇಂಗ್ಲೆಂಡ್ ವಿರುದ್ಧ ಅದು 3-4 ಅಂತರದಿಂದಲಷ್ಟೇ ಸೋಲನ್ನಪ್ಪಿತಾದರೂ, ಆಸ್ಟ್ರೇಲಿಯಾ ವಿರುದ್ಧ 4-2ರಿಂದ ಸೋತು, ಆಸ್ಟ್ರೇಲಿಯಾದ ಪಾರಮ್ಯವನ್ನು ಒಪ್ಪಿಕೊಂಡಿತು.

PTI
ವೆಸ್ಟ್ ಇಂಡೀಸಿನಲ್ಲಿ ಭಾರತೀಯ ಕ್ರಿಕೆಟ್ ಕಂಡ ಅಧಃಪತನವನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟ್ವೆಂಟಿ-20 ತಂಡವು ಮರೆ ಮಾಚಿತು. ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರು ಈ ಟೂರ್ನಿಯಲ್ಲಿ ಆಡದಿದ್ದರೂ, ಟೀಂ ಇಂಡಿಯಾವು ವಿಶ್ವ ಚಾಂಪಿಯನ್ ಆಯಿತು. ಈ ಮೂಲಕ ಭಾರತೀಯ ಕ್ರಿಕೆಟ್ ಭವಿಷ್ಯವು ಯುವ ಆಟಗಾರರ ಕೈಯಲ್ಲಿ ಭಧ್ರವಾಗಿದೆ ಮತ್ತು ತಂಡಕ್ಕೆ ಯಾರೂ ಅನಿವಾರ್ಯರಲ್ಲ ಎಂಬ ಸಂದೇಶವನ್ನೂ ನೀಡಿತು.

ಧೋನಿ ತಂಡವು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಫೈನಲಿನಲ್ಲಿ ಬದ್ಧ ಪ್ರತಿಸ್ಪರ್ಧಿ ಪಾಕಿಸ್ತಾನದಂತಹ ಮಹಾನ್ ತಂಡಗಳನ್ನು ಸೋಲಿಸಿ ವಿಶ್ವ ಕಪ್ ಜಯಿಸುವ ಮೂಲಕ 1983ರ ಬಳಿಕದ ಅತ್ಯಂತ ಶ್ರೇಷ್ಠ ಪ್ರಶಸ್ತಿಯನ್ನು ಭಾರತದ ಮಡಿಲಲ್ಲಿರಿಸಿತು. ಭಾರತೀಯ ತಂಡವು ಸ್ವದೇಶಕ್ಕೆ ಆಗಮಿಸಿದಾಗ ಅದಕ್ಕೆ ಮುಂಬಯಿಯಲ್ಲಿ ನೀಡಿದ ಭವ್ಯ ಸ್ವಾಗತವು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು.

ಈ ಒಂದು ವರ್ಷದಲ್ಲಿ ಭಾರತೀಯ ತಂಡವು ಮೂವರು ನಾಯಕರನ್ನು ನೋಡಿತು. ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ ಸರಣಿಯ ಬಳಿಕ ಅಚಾನಕ್ ಆಗಿ ಕಪ್ತಾನಗಿರಿ ತ್ಯಾಗ ಮಾಡಿದರು. ಅವರ ಈ ನಿರ್ಧಾರವು ಬಿಸಿಸಿಐನ ಹಲವು ಹುಳುಕುಗಳನ್ನು ಬಯಲಿಗೆಳೆಯುವಲ್ಲಿ ಮಾಧ್ಯಮಗಳಿಗೆ ಆಹಾರವಾಯಿತಾದರೂ, ಹಲವಾರು ರಹಸ್ಯಗಳು ಇನ್ನೂ ಹೊರಗೆ ಬಂದಿಲ್ಲ.

PTI
ಧೋನಿ ಅವರು ಅದಾಗಲೇ ಟ್ವೆಂಟಿ-20 ತಂಡದ ನಾಯಕತ್ವ ವಹಿಸಿದ್ದರು. ಬಳಿಕ ಏಕದಿನ ತಂಡಕ್ಕೂ ನಾಯಕರಾದರು. ಇದು ಯುವ ಜನಾಂಗಕ್ಕೆ ದೊರೆತ ಮನ್ನಣೆಯಾಗಿತ್ತು. ಆದರೆ ಟೆಸ್ಟ್ ತಂಡಕ್ಕೆ ಅನುಭವಕ್ಕೇ ಪ್ರಾಶಸ್ತ್ಯ ನೀಡಿ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಯವರನ್ನು ನಿಯುಕ್ತಿಗೊಳಿಸಲಾಯಿತು.

ಈ ವರ್ಷ ಇದುವರೆಗೆ ಆಡಿದ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಮೂರು ಜಯ ದಾಖಲಿಸಿದ ಭಾರತವು ಕೇವಲ ಒಂದರಲ್ಲಿ ಸೋಲಪ್ಪಿತ್ತು. ಉಳಿದವು ಡ್ರಾದಲ್ಲಿ ಕೊನೆಗೊಂಡಿದ್ದವು. ಒಟ್ಟು 37 ಏಕದಿನ ಪಂದ್ಯಗಳಲ್ಲಿ 20ರಲ್ಲಿ ಗೆದ್ದ ಭಾರತ, 15ರಲ್ಲಿ ಸೋಲನ್ನಪ್ಪಬೇಕಾಯಿತು.

ಆರಂಭದಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳನ್ನು ತವರು ನೆಲದಲ್ಲಿ ಮಣಿಸಿ ಸರಣಿ ಗೆದ್ದಿದ್ದ ಭಾರತವು ವಿಶ್ವಕಪ್‌ಗೆ ಉತ್ತಮ ರೀತಿಯಲ್ಲೇ ತಯಾರಾಗಿತ್ತು ಎಂದು ಭಾವಿಸಲಾಗಿತ್ತು. ವಿಶ್ವಕಪ್‌ನ ಪ್ರಬಲ ತಂಡವೆಂದೂ ಪರಿಗಣಿಸಲಾಗಿತ್ತು. ಆದರೆ 2007ರ ಮಾರ್ಚ್ 17ರ ಆ ದಿನ ಭಾರತೀಯ ಕ್ರಿಕೆಟ್‌ನ ಮಾನವು ಮಣ್ಣುಪಾಲಾಗಿತ್ತು.

PTI
ವಿಶ್ವ ಕಪ್ ಕೂಟದ ಮೊದಲ ಪಂದ್ಯದಲ್ಲೇ ಭಾರತವು ಬಾಂಗ್ಲಾದೇಶದ ಎದುರು ಐದು ವಿಕೆಟ್ ಸೋಲನ್ನಪ್ಪಿತು. ಆಗಷ್ಟೇ ಕ್ರಿಕೆಟ್ ಕಲಿಯುತ್ತಿದ್ದ ಬರ್ಮುಡಾ ತಂಡವನ್ನು 257 ರನ್ನುಗಳ ಭರ್ಜರಿ ಅಂತರದಿಂದ ಸೋಲಿಸಿತಾದರೂ, ಮೂರನೇ ಮತ್ತು ಮಹತ್ವದ ಪಂದ್ಯದಲ್ಲಿ ಶ್ರೀಲಂಕಾವು ಅದನ್ನು 69 ರನ್ ಅಂತರದಿಂದ ಸೋಲಿಸಿ, ವಿಶ್ವಕಪ್ ಕೂಟದಿಂದಲೇ ಹೊರದಬ್ಬಿತು. ಅಲ್ಲಿನ ಸೋಲಿನೊಂದಿಗೆ ಕ್ರಿಕೆಟ್ ಪ್ರಿಯರ ಆಸೆಗಳೆಲ್ಲಾ ಕಮರಿದಂತಾಯಿತು.

ಆಮೇಲೆ ಎದುರಾದ ಇಂಗ್ಲೆಂಡ್ ಸರಣಿ ಭಾರತದ ಪಾಲಿಗೆ ಮಹತ್ವದ್ದಾಯಿತು. ಇಂಗ್ಲೆಂಡಿನ ಮಸ್ಕರೇನಸ್ ಯುವರಾಜ್ ಸಿಂಗ್ ಓವರಿಗೆ ಐದು ಸಿಕ್ಸರ್ ಸಿಡಿಸಿ ಸದ್ದು ಮಾಡಿದರು. ಇದನ್ನು ಮನಸ್ಸಿನೊಳಗೆಯೇ ಇಟ್ಟುಕೊಂಡು ಆಕ್ರೋಶವನ್ನು ಒಟ್ಟುಗೂಡಿಸಿಕೊಂಡಿದ್ದ ಯುವರಾಜ್, ಟ್ವೆಂಟಿ-20 ವಿಶ್ವಕಪ್ ಪಂದ್ಯವೊಂದರಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಬೌಲಿಂಗಿನಲ್ಲಿ ಓವರಿನ ಆರೂ ಎಸೆತಗಳನ್ನು ಸಿಕ್ಸರ್ ಗಡಿ ದಾಟಿಸಿ ತಮ್ಮ "ಕರ್ತವ್ಯ" ಪೂರೈಸಿ ಹೊಸ ದಾಖಲೆ ಬರೆದರು. ಅಲ್ಲದೆ, ಅತ್ಯಂತ ವೇಗದ ಅಂದರೆ, ಕೇವಲ 12 ಎಸೆತಗಳಲ್ಲೇ ಅರ್ಧಶತಕ ಬಾರಿಸಿ ಗಮನ ಸೆಳೆದರು. ನಂತರ ಪಾಕಿಸ್ತಾನ ವಿರುದ್ಧ ಬೆಂಗಳೂರು ಟೆಸ್ಟಿನಲ್ಲಿ ಶತಕ ಬಾರಿಸಿ ಯುವ ಪ್ರತಿಭೆಗಳ ತಾಕತ್ತು ಏನೆಂಬುದನ್ನು ತೋರಿಸಿದರು.

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಈ ಮಧ್ಯೆ ತನ್ನ ಮನಿ-ಪವರ್ ಅನ್ನೂ ತೋರಿಸಿಕೊಟ್ಟಿತು. ಬಂಡಾಯ ಕ್ರಿಕೆಟ್ ತಂಡವೊಂದು ಐಸಿಎಲ್ (ಇಂಡಿಯನ್ ಕ್ರಿಕೆಟ್ ಲೀಗ್) ರೂಪದಲ್ಲಿ ಮೇಲೆದ್ದಾಗ, ಇದೇ ಬಿಸಿಸಿಐ ಅದಕ್ಕೆ ಪ್ರತಿಯಾಗಿ, ವಿದೇಶೀ ಆಟಗಾರರ ಮೇಲೆ ಕೋಟ್ಯಂತರ ರೂಪಾಯಿ ಸುರಿದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಟ್ಟಿತು. ಮಾರ್ಚ್-ಏಪ್ರಿಲ್ ವೇಳೆಗೆ ಐಪಿಎಲ್‌ನ ಹಣೆಬರಹ ನಿರ್ಧಾರವಾಗಲಿದೆ ಮತ್ತು ಇಷ್ಟು ಕೋಟಿ ಕೋಟಿ ಸುರಿದದ್ದು ಫಲಪ್ರದವೇ ಎಂಬುದು ತೀರ್ಮಾನವಾಗಲಿದೆ.

PTI
ಮುಂದಿನ ನೋಟ ಹರಿಸಿದರೆ, ಈಗ ಭಾರತಕ್ಕಿರುವುದು ವಿಶ್ವಚಾಂಪಿಯನ್ನರಾದ ಆಸ್ಟ್ರೇಲಿಯಾದ ಸವಾಲು ಎದುರಿಸುವುದು. ನಾಲ್ಕು ಟೆಸ್ಟ್ ಪಂದ್ಯಗಳಲ್ಲದೆ, ತ್ರಿಕೋನ ಏಕದಿನ ಸರಣಿಯೂ ಆಡಬೇಕಿದೆ. ಬಳಿಕ ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸಕ್ಕೆ ಆಗಮಿಸಲಿದೆ.

ಈ ವರ್ಷ ಭಾರತೀಯ ಕ್ರಿಕೆಟ್, 1971ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ತಂಡದ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ ದಿಲೀಪ್ ಸರ್ದೇಸಾಯಿಯಂತಹಾ ದಿಗ್ಗಜನನ್ನು ಕಳೆದುಕೊಂಡಿತು.

ಈ ವರ್ಷ ತಂಡದಲ್ಲಿ ಹಿರಿಯ-ಕಿರಿಯರ ನಡುವಣ ಬಿಕ್ಕಟ್ಟು ಇದೆ ಎಂಬ ಸುಳಿವು ದೊರೆತಿದೆ. ತಂಡಕ್ಕೆ ಹೆಚ್ಚು ಹೆಚ್ಚು ಕಿರಿಯರು, ಉತ್ಸಾಹಿಗಳು ಸೇರುತ್ತಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯುವುದಕ್ಕೆ ಪೈಪೋಟಿ ಏರ್ಪಟ್ಟಿರುವುದು ನೋಡಿದರೆ ಮುಂದಿನ ವರ್ಷ ಭಾರತೀಯ ಕ್ರಿಕೆಟಿನ ಉತ್ತುಂಗದ ವರ್ಷವಾಗಲಿದೆ ಎಂಬುದನ್ನು ಮನಗಾಣಬಹುದು. ಹಾಗಾಗಲಿ ಎಂಬುದು ಹಾರೈಕೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments