Select Your Language

Notifications

webdunia
webdunia
webdunia
webdunia

ಕನ್ನಡ... ಪರರು ಕನಿಕರಿಸುವಂತಾಯ್ತೇ...?

ಕನ್ನಡ... ಪರರು ಕನಿಕರಿಸುವಂತಾಯ್ತೇ...?
ಮಲ್ಲಿಕಾರ್ಜುನ್ ತಿಪ್ಪಾರ್
WD
ಮೊದಲು ಈ ಘಟನೆಯನ್ನು ಓದಿ.

ನಾಲ್ಕು ದಿನಗಳ ಹಿಂದೆ ಕಚೇರಿ ಕೆಲಸ ಮುಗಿಸಿಕೊಂಡು ಚೆನ್ನೈನ ಅಂಬತ್ತೂರ್‌ನತ್ತ ಗಿಜಿಗಿಡುವ ಬಸ್ಸಿನಲ್ಲಿ ಹೊರಟಿದ್ದೆ. ಹೊರಗಡೆ ಮಳೆ ರುದ್ರ ನರ್ತನ ನಡೆದಿತ್ತು. ಬಸ್ಸು ಗಿಜಿಗುಡುತ್ತಿರುವುದರಿಂದ ಸ್ವಲ್ಪ ಬೆಚ್ಚಗಿನ ವಾತಾವರಣ ಇತ್ತು. ಹೀಗೆ ಸಾಗುತ್ತಿದ್ದ ಬಸ್ ಕೊನೆಯ ಸ್ಟಾಪ್ ಹತ್ತಿರವಾಗುತ್ತಿದ್ದಂತೆ ಬಸ್ಸನಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕರಗುತ್ತಾ ಬಂತು. ಆದರೆ, ಹೊರಗಡೆ ಮಳೆ ಮಾತ್ರ ಧೋ ಎನ್ನುತ್ತಿತ್ತು.

ನಾನು ಕುಳಿತ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿಯೊಬ್ಬ ಡ್ರೈವರ್ ಮತ್ತು ಕಂಡಕ್ಟರ್‌ಗೆ ಪರಿಚಯವಿದ್ದಂತೆ ತೋರುತ್ತದೆ. ಬಸ್ಸಿನಲ್ಲಿದ್ದ ಜನರು ಕಡಿಮೆಯಾದ್ದರಿಂದ ಕಂಡಕ್ಟರ್ ಕೂಡಾ ಡ್ರೈವರ್ ಸಮೀಪದಲ್ಲಿಯೇ ಬಂದು ಕುಳಿತುಕೊಂಡ. ಆಗ ಡ್ರೈವರ್, ಕಂಡಕ್ಟರ್ ಮತ್ತು ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯ ನಡುವಿನ ಸಂಭಾಷಣೆ ಕೇಳಿ ಆಶ್ಚರ್ಯವೆನಿಸಿತು. ಮಳೆಯಾಗುತ್ತಿದ್ದ ಕಾರಣ ಅಲ್ಲಲ್ಲಿ ಟ್ರಾಫಿಕ್ ಜಾಮ್. ಟ್ರಾಫಿಕ್ ಜಾಮ್ ಕುರಿತಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಕಂಡಕ್ಟರ್‌ನೊಂದಿಗೆ ಮಾತಿಗಿಳಿದ.

"ಬೆಂಗಳೂರಿನಲ್ಲಿ 200 ಮೀಟರ್‌(ನಿಜವಾಗ್ಲೂ ಇದೆಯಾ) ಅಂತರದಲ್ಲಿ ಫ್ಲೈ ಓವರ್‌ಗಳಿವೆ. ಆದರೂ ಅಲ್ಲಿ ಇಲ್ಲಿಗಿಂತ ಹೆಚ್ಚು ಟ್ರಾಫಿಕ್" ಎಂದ.

"ಹೌದು, ನೀನು ಹೇಳುವುದು ನಿಜ. ಅಲ್ಲಿ ತುಂಬಾ ಟ್ರಾಫಿಕ್ ಅಂತ ಕೇಳಲ್ಪಟ್ಟಿದ್ದೇನೆ" ಎಂದು ಕಂಡಕ್ಟರ್ ಮಾರ್ನುಡಿದ.

"ಬೆಂಗಳೂರಿನಲ್ಲಿ ತಮಿಳು ಮಾತಾಡೊ ಜನ ಜಾಸ್ತಿ ಸಿಗುತ್ತಾರಲ್ಲ...?" ಎಂದು ಅನುಮಾನ ಮಿಶ್ರಿತ ದನಿಯಲ್ಲಿ ಕಂಡಕ್ಟರ್ ಪ್ರಶ್ನಿಸಿದ ಆತನನ್ನು.

ತಕ್ಷಣವೇ ಉತ್ತರಿಸಿದ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ, "ಹೌದು, ಆದರೆ ತಮಿಳು ಮತ್ತು ಕನ್ನಡ ಮಾತಾಡೋರಿಗಿಂತಲೂ ತೆಲುಗು ಮಾತಾಡೋ ಜನ ಬಹಳ ಇದ್ದಾರೆ ಬೆಂಗಳೂರಿನಲ್ಲಿ" ಅಂದ.

ಇವರ ಸಂಭಾಷಣೆಯನ್ನೇ ಆಲಿಸುತ್ತಿದ್ದ ನನಗೆ ಈ ಮಾತನ್ನು ಕೇಳೆ ಒಮ್ಮೆಲೇ ದಿಗ್ಭ್ರಮೆಯಾಯಿತು. (ಮೇಲಿನ ಸಂಭಾಷಣೆ ನಡೆದಿದ್ದು ತಮಿಳು ಭಾಷೆಯಲ್ಲಿ. ನನಗೆ ಪೂರ್ತಿಯಾಗಿ ತಮಿಳು ಬರದಿದ್ದರೂ ಕೂಡಾ ಅವರ ಮಾತಿನ ಭಾವಾರ್ಥ ನೀಡಿದ್ದೇನೆ).
*****

ಮೇಲಿನ ಸಂಭಾಷಣೆ ಓದಿದರಲ್ಲ. ನವೆಂಬರ್ 1ಕ್ಕೆ ನಾಲ್ಕು ದಿನ ಮುಂಚಿತವಾಗಿರುವಂತೆಯೇ ಇದು ಚೆನ್ನೈನಲ್ಲಿ ನನ್ನ ಅನುಭವಕ್ಕೆ ಬಂದದ್ದು.

ನೋಡಿ ಕನ್ನಡ ಪರಿಸ್ಥಿತಿ ಏನಾಗಿದೆ ಅಂತ. ಕನ್ನಡ ದುಸ್ಥಿತಿಯಲ್ಲಿದೆ ಎಂದು ಕನ್ನಡಿಗರೇ ಕಳವಳ ಪಡುವುದು ಸೋಜಿಗವಲ್ಲ. ಆದರೆ, ಬೇರೆ ಭಾಷೆಯವರು ಕೂಡಾ ಬೆಂಗಳೂರು ಕನ್ನಡದ ಬಗ್ಗೆ ಕನಿಕರ (!?) ವ್ಯಕ್ತಪಡಿಸುತ್ತಿರುವುದು ಕೊಂಚ ಆಶ್ಚರ್ಯವುಂಟು ಮಾಡಿತು.

ಅವರು ನಿಜವಾಗಿಯೂ ಕನ್ನಡ ದುಸ್ಥಿತಿಗೆ ವ್ಯಥೆ ಪಡುತ್ತಿದ್ದಾರೋ ಅಥವಾ ಬೆಂಗಳೂರಿನಲ್ಲಿ "ತಮಿಳು" ಬದಲಾಗಿ "ತೆಲುಗು" ಪ್ರಾಬಲ್ಯಪಡೆಯುತ್ತಿದೆ ಎಂದು ಆತಂಕಪಡುತ್ತಿದ್ದಾರೋ ಎಂಬುದು ನನಗೆ ಅರ್ಥವಾಗಲಿಲ್ಲ. ಕನ್ನಡ ದುಸ್ಥಿತಿಗೆ ಇಳಿದಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

ಮತ್ತೆ ನವೆಂಬರ್ 1 ಬಂದಿದೆ. ಸಿಹಿ ಹಂಚಿ, ನಾಮಕಾವಸ್ಥೆಗೆ ರಾಜ್ಯೋತ್ಸವದ ಆಚರಣೆ ನಡೆಯತ್ತದೆ. ಮಂತ್ರಿ ಮಹೋದಯರು (ಸಂತೋಷದ ವಿಷಯವೆಂದರೆ, ಈ ಬಾರಿಯ ರಾಜ್ಯೋತ್ಸವದಲ್ಲಿ ಮಂತ್ರಿ ಮಹೋದಯರ ಆಟೋಟ ಅಷ್ಟಾಗಿಲ್ಲ, ಎಲ್ಲ ರಾಜ್ಯಪಾಲರ ದರ್ಬಾರು) ಭಾಷೆಯ ಹೆಸರಿನಲ್ಲಿ ತಮ್ಮ ವೋಟುಗಳನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಕೆಲವು ಸಾಹಿತಿಗಳು, ಬರಹಗಾರರು, ಕನ್ನಡ ಪರ ಹೋರಾಟಗಾರರು ಈ ಒಂದು ದಿನ ಕನ್ನಡವನ್ನೇ ಮೈ ಮೇಲೆ ಆಹ್ವಾನಿಸಿಕೊಂಡವರಂತೆ ಮಾತಾಡುತ್ತಾರೆ. ಸಂಜೆ ಮರೆಯುತ್ತಾರೆ ಎಂಬುದು ನನ್ನದಷ್ಟೇ ವಾದವಲ್ಲ. ಇದು ಸಮಗ್ರ ಪ್ರಜ್ಞಾವಂತ ಕನ್ನಡಿಗರಿಗೆ ತಿಳಿದ ವಿಷಯ ಅಂತ ನಾನು ಭಾವಿಸಿಕೊಳ್ಳುತ್ತೇನೆ.

ನಿಜವಾಗಿಯೂ ನಾವು ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. "ಕನ್ನಡಕ್ಕೆ ಕೈ ಎತ್ತು.. ನಿನ್ನ ಕೈ ಕಲ್ಪವೃಕ್ಷವಾಗುವುದು" ಎಂಬ ಕವಿವಾಣಿ ಕಾರ್ಯರೂಪಕ್ಕೆ ಇಳಿಯುವುದು ಯಾವಾಗ...? ಜಾಗತೀಕರಣ ಅಲೆಗೆ ಸಿಲುಕಿ ಸ್ಥಳೀಯ ಸಂಸ್ಕೃತಿ, ವೇಷ, ಭೂಷಣ, ನಡೆ, ನುಡಿ, ಆಚಾರ-ವಿಚಾರ, ಸಂಪ್ರದಾಯಗಳು ತತ್ತರಿಸಿ ಹೋಗುತ್ತಿರುವಾಗ ಕನ್ನಡ ಎಂಬ ಸ್ನೇಹಮಯಿ, ಮೃದು ಭಾಷೆ ಈ ಹೊಡೆತವನ್ನು ತಾಳಿಕೊಂಡು ಬೆಳೆಯಬಲ್ಲುದೆ..?

ಖಂಡಿತ ಬೆಳೆಯುತ್ತದೆ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೆ. ಪಕ್ಕದ ತಮಿಳರನ್ನು ನೋಡಿ ನಾವು ಕಲಿಯಬೇಕಾಗಿದೆ. ನಾಡು-ನುಡಿ ವಿಷಯ ಬಂದಾಗ ಪಕ್ಷ ಭೇದ ಮರೆತು ಜನರು ಒಂದಾಗುತ್ತಾರೆ. ಆ ನಾಡಿನ ಮುಖ್ಯಮಂತ್ರಿ ರಾಷ್ಟ್ರೀಯ ಮಟ್ಟದ ವಾಹಿನಿಯೊಂದು ಸಂದರ್ಶಿದಾಗಲೂ ತಮಿಳಿನಲ್ಲಿಯೇ ಮಾತಾಡುತ್ತಾರೆ. ಆದರೆ, ನಮ್ಮಲ್ಲಿ ಹಲವರು ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ. ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಮಾತಾಡುತ್ತಾರೆ. ಇಲ್ಲಿ ಯಾರನ್ನೂ ತೆಗಳುವ ಉದ್ದೇಶ ನನಗಿಲ್ಲ. ಕೇವಲ ಹೋಲಿಕೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕುರಿತು ಹೇಳುವುದು ಅಷ್ಟೆ ನನ್ನ ಉದ್ದೇಶ. ನಮ್ಮಲ್ಲಿ ಅದಾಗುತ್ತಿಲ್ಲ. ಎಲ್ಲವೂ ಹೈಕಮಾಂಡ್‌ಗಳ ಕಟ್ಟಪ್ಪಣೆಯಲ್ಲಿ ನಡೆಯುತ್ತಿರುವಾಗ ಇದು ಸಾಧ್ಯವೂ ಇಲ್ಲ. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದಾದರೂ ಹೇಗೆ, ಅಲ್ಲವೇ ?

ಇಲ್ಲಿ ಕೇವಲ ರಾಜಕೀಯ ಇಚ್ಛಾಶಕ್ತಿ ಮತ್ತು ರಾಜಕಾರಣಿಗಳನ್ನು ದೂರಿದರೂ ಸಾಲದು. ರಾಜಕಾರಣಿಗಳಷ್ಟೇ ಕನ್ನಡಿಗರು ಕೂಡಾ ಜವಾಬ್ದಾರರು ಎಂಬುದು ನನ್ನ ಅನಿಸಿಕೆ. ವಿದ್ಯಾವಂತರು ಎನಿಸಿಕೊಂಡಿರುವ ಬುದ್ಧಿವಂತ ಜನ ತಮ್ಮ ಮಕ್ಕಳಲ್ಲಿ ಮೊದಲು ಕನ್ನಡ ಪ್ರೀತಿ ಬೆಳೆಸಬೇಕು. ಆಳುವವರು ಕನ್ನಡದ ಕುರಿತು ಅಸಡ್ಡೆ ತೋರಿದಾಗ ಕಿವಿ ಹಿಂಡುವ ಕೆಲಸ ಮಾಡಬೇಕು. "ಕನ್ನಡ" ಎಂಬ ವಿಷಯ ಬಂದಾಗ ಕನ್ನಡಿಗರಿಗೆ ಬಂದಿರುವ ಬಳುವಳಿಗಳಾದ, "ಶಾಂತ ಪ್ರಿಯ"ರು, "ಸಹನಶೀಲ"ರು ಎಂಬ ಬಿರುದುಗಳನ್ನು ಕಿತ್ತೆಸೆಯಬೇಕು. ಆಗ ನಿಜವಾದ ಕನ್ನಡ ತಳವೂರಿ, ಬೆಳೆಯಲು ಸಾಧ್ಯ.

ಪ್ರತಿಯೊಬ್ಬ ಕನ್ನಡಿಗನು ನಮ್ಮ ನುಡಿಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡುವಲ್ಲಿ ವೈಯಕ್ತಿವಾಗಿ ಮತ್ತು ಸಾಮೂಹಿಕವಾಗಿ ಚಳುವಳಿಯ ರೂಪದಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡಕ್ಕೆ ಯಾವಾಗಲೂ ಕೊಂಚ ತಾರತಮ್ಯ ನೀತಿಯನ್ನೇ ಅನುಸರಿಸುವ ಕೇಂದ್ರಕ್ಕೆ ಬಿಸಿ ಮುಟ್ಟಿಸಿದಂತಾಗುತ್ತದೆ.

Share this Story:

Follow Webdunia kannada