Webdunia - Bharat's app for daily news and videos

Install App

ಕಾದಿಹುದು ಕಾಸರಗೋಡು, ಕರ್ನಾಟಕವನು ಸೇರುವುದೆಂದು....

ರಾಜ್ಯೋತ್ಸವ: ಈ ಗಡಿಜಿಲ್ಲೆಯ ಕನ್ನಡಿಗರ ಮವಸು ಮರುಗುತ್ತದೆ

Webdunia
WD
ರಶ್ಮಿ.ಪ ೈ

ಪ್ರತಿವರ್ಷವೂ ಕರ್ನಾಟಕದಾದ್ಯಂತ ರಾಜ್ಯೋತ್ಸವವು ಅದ್ದೂರಿಯಿಂದ ಆಚರಿಸಲ್ಪಡುವಾಗ ಗಡಿನಾಡೆಂದು ಕರೆಯಲ್ಪಡುವ ಕೇರಳದ ಉತ್ತರ ದಿಕ್ಕಿನಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಕೇರಳೋತ್ಸವ ಮತ್ತು ಕನ್ನಡ ರಾಜ್ಯೋತ್ಸವಗಳ ಸಂಗಮ ದಿನ ಅಥವಾ ಸಮರ ದಿನ. ಯಾಕೆಂದರೆ ಬಹುತೇಕ ಕನ್ನಡಿಗರಿರುವ ಕಾಸರಗೋಡು ಜಿಲ್ಲೆಯನ್ನು ಅನ್ಯಾಯವಾಗಿ ಕೇರಳದೊಂದಿಗೆ ಸೇರಿಸಿದಂದಿನಿಂದ ಸಂಕಷ್ಟವನ್ನು ಅನುಭವಿಸುತ್ತಾ ಬಂದಿರುವ ಕಾಸರಗೋಡಿನ ಕನ್ನಡಿಗರಿಗೆ (ಬೇಕಾದರೆ 'ಕಾಕ' ಎಂದು ಮುದ್ದಿನಿಂದ ಕರೆಯಬಹುದು) ರಾಜ್ಯೋತ್ಸವವೆಂದರೆ ಪ್ರತಿಭಟನೆಯ ದಿನ.

ತಮ್ಮ ರಾಜ್ಯದಲ್ಲಿ ಕೇರಳೋತ್ಸವವು ಸಡಗರದಿಂದ ಆಚರಿಸಲ್ಪಡುವಾಗ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಅಂದು ಕೇರಳ ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಧ್ವನಿಯೆತ್ತಿ ಪ್ರತಿಭಟನೆ ನಡೆಸುತ್ತಾರೆ. ಗಡಿನಾಡು-ಕರ್ನಾಟಕ ಸಮಿತಿಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡಿಗರನ್ನು ಒಗ್ಗೂಡಿಸಿ ಕರ್ನಾಟಕಕ್ಕೆ ಕಾಸರಗೋಡನ್ನು ವಿಲೀನಗೊಳಿಸಲು ಕಳೆದ 50 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೇರಳ-ಕರ್ನಾಟಕದ ರಾಜಕೀಯ ಹಗ್ಗ-ಜಗ್ಗಾಟದಲ್ಲಿ ಅದು ಕೈಗೂಡದ ಕನಸಾಗಿಯೇ ಇಂದಿನವರೆಗೂ ಉಳಿದುಕೊಂಡಿರುವುದು ದುರದೃಷ್ಟಕರ.

ಕರ್ನಾಟಕ, ಕೇರಳವು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಗೊಂಡಾಗ ಬಹುತೇಕ ಕನ್ನಡಿಗರು ಅದಲ್ಲದೆ ತುಳು, ಕೊಂಕಣಿ, ಮರಾಠಿ ಭಾಷೆಗಳನ್ನಾಡುವ ಜನರಿರುವ ಕಾಸರಗೋಡನ್ನು ಕೇರಳದೊಂದಿಗೆ ಸೇರಿಸಿಕೊಂಡಿರುವುದು ಕನ್ನಡಿಗರಿಗೆ ಮಾಡಿದ ಅನ್ಯಾಯ. ಅಂದಿನಿಂದ ಇಂದಿನವರೆಗೆ ಕಾಸರಗೋಡು ಕನ್ನಡಿಗರು ಹಲವು ಸಂಕಷ್ಟಗಳನ್ನು ಎದುರಿಸುತ್ತಾ ಬರುತ್ತಿದ್ದಾರೆಂಬುದು ಸತ್ಯ. ಎಡ-ಬಲವೆಂದು ಬದಲಾಗುತ್ತಾ ಆಡಳಿತಕ್ಕೇರುವ ಕೇರಳ ಸರಕಾರವು ಎಂದೂ ಕಾಸರಗೋಡನ್ನು ಕಡೆಗಣಿಸುವುದೇ ಹೆಚ್ಚು.

ವಿದ್ಯಾಭ್ಯಾಸ, ಉದ್ಯೋಗ, ಸರಕು ಸಾಮಾಗ್ರಿ, ಇನ್ನಿತರ ಕಾರ್ಯಗಳಿಗೆ ಕನ್ನಡಿಗರಿಗೆ ನೆರೆಯ ಮಂಗಳೂರನ್ನೇ ಆಶ್ರಯಿಸಬೇಕಾದ ಸ್ಥಿತಿ ಇಲ್ಲಿಯದ್ದು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮಂಗಳೂರನ್ನು ಆಶ್ರಯಿಸಬೇಕು, ಇನ್ನು ಇಲ್ಲಿರುವ ಸರಕಾರಿ ಕಚೇರಿಗಳಲ್ಲಿ, ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ಹುದ್ದೆಗಳು ಬಾಕಿಯಿದ್ದರೂ ಇದು ಕನ್ನಡಿಗ ಅಭ್ಯರ್ಥಿಗಳ ಕೈಗೆಟುಕುವುದಿಲ್ಲ.

ಕನ್ನಡಿಗರಾದ ಕಾರಣ ತಿರಸ್ಕಾರದ ಹುಳಿ ಅರಿತವರೂ ಬಹುತೇಕ ಮಂದಿ ಇಲ್ಲಿದ್ದಾರೆ. ತಮ್ಮ ಜಿಲ್ಲೆಯಲ್ಲಿಯೇ ಬಹುತೇಕ ಹುದ್ದೆಗಳು ಖಾಲಿ ಬಿದ್ದಿದ್ದರೂ ಕನ್ನಡಿಗರೆನ್ನುವ ಕಾರಣಕ್ಕಾಗಿ ತಿರಸ್ಕೃತರಾದವರೂ ಹಲವರು. ಕೇರಳದಲ್ಲಿರುವ ಯಾವುದೇ ಸರಕಾರಿ ಅಧಿಕಾರಿಯು ತಪ್ಪೆಸಗಿದಲ್ಲಿ ಅವರಿಗಿರುವ ಶಿಕ್ಷೆ (ದಂಡ) ಎಂದರೆ ಅವರನ್ನು ಕಾಸರಗೋಡು ಜಿಲ್ಲೆಗೇ ವರ್ಗಾಯಿಸುವುದು. ಆದುದರಿಂದ ಇಲ್ಲಿರುವ ಹಲವು ಸರಕಾರಿ ಅಧಿಕಾರಿಗಳು ದಂಡಾಧಿಕಾರಿಗಳೇ. ಎಂಥ ವಿಪರ್ಯಾಸ!

ಪ್ರತಿಭಾನ್ವಿತ ಯುವಜನಾಂಗವನ್ನು ಪ್ರೋತ್ಸಾಹಿಸುವಲ್ಲಿ ಕೇರಳ ಸರಕಾರವು ಎಡವಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಇಲ್ಲಿ ಶಾಲಾ ಕಾಲೇಜುಗಳಲ್ಲಿ ನಡೆಯುವ ಕಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಕನ್ನಡ ವಿದ್ಯಾರ್ಥಿಗಳಿಗೆ ಅದೆಷ್ಟೋ ಬಾರಿ ಅನ್ಯಾಯಕ್ಕೊಳಪಡಬೇಕಾದ ಸಂದರ್ಭಗಳು ಬಂದೊದಗಿವೆ. ಕನ್ನಡ ಸ್ಪರ್ಧೆಗಳಲ್ಲಿ ಭಾಗವಹಿಸುವ ಜನರ ಸಂಖ್ಯೆ ಕಡಿಮೆಯೆಂದು ಮಲಯಾಳಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಕನ್ನಡವನ್ನು ಕೊಲ್ಲುವ ನಿದರ್ಶನಗಳೂ ನಡೆಯುತ್ತವೆ.

ಅಂತೂ ಕನ್ನಡಿಗರ ಪಾಲಿಗೆ ಮಲತಾಯಿ ಧೋರಣೆಯ ಯಾತನೆ ಸಹಿಸಬೇಕಾದ ಸ್ಥಿತಿ ಇಂದಿಗೂ ನಡೆದು ಬರುತ್ತಿದೆ. ಕನ್ನಡಿಗರ ಮೇಲಿನ ಮಲತಾಯಿ ಧೋರಣೆಯನ್ನು ಕೊನೆಗೊಳಿಸಲು, ಕನ್ನಡಿಗರ ಹಕ್ಕುಗಳಿಗೆ ನ್ಯಾಯವನ್ನೊದಗಿಸಲು ಗಡಿನಾಡ ಕನ್ನಡಿಗರು ಹೋರಾಡುತ್ತಲೇ ಇದ್ದಾರೆ. ಕನ್ನಡಿಗರ ಹಿತರಕ್ಷಣೆಗಾಗಿ ಹಲವು ಸಮಿತಿಗಳು ರೂಪುಗೊಂಡಿದ್ದು, ಅವುಗಳು ಕನ್ನಡಿಗರ ಪರವಾಗಿ ಧ್ವನಿಯೆತ್ತುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ.

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಹುಟ್ಟೂರಾದ ಕಾಸರಗೋಡಿನಲ್ಲಿ ಅದೆಷ್ಟೋ ಮಂದಿ ಪ್ರತಿಭಾನ್ವಿತರಿದ್ದರೂ ಗಡಿನಾಡ ಕನ್ನಡಿಗರೆಂಬ ಭೇದ-ಭಾವದಿಂದಾಗಿ ಹಲವರು ಎಲೆಮರೆಯಕಾಯಿಯಾಗಿಯೇ ಉಳಿದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು ಚುಕ್ಕಾಣಿ ಹಿಡಿದಿರುವಂತಹ ಕಾಸರಗೋಡು-ಕರ್ನಾಟಕ ಏಕೀಕರಣ ಕ್ರಿಯಾ ಸಮಿತಿ, ಅದೇ ರೀತಿ ದಿವಂಗತ ಡಾ.ಕುಣಿಕುಳ್ಳಾಯ, ದಿವಂಗತ ಡಾ. ಲಲಿತಾ.ಎಸ್.ಎನ್.ಭಟ್, ಬಿ.ವಿ.ಕಕ್ಕಿಲ್ಲಾಯ ಮೊದಲಾದವರು ನೇತೃತ್ವ ವಹಿಸಿದಂತಹ ಕರ್ನಾಟಕ ಸಮಿತಿ, ವಿವಿಧ ಗಡಿನಾಡು ಕನ್ನಡ ಘಟಕಗಳು ಕಾಸರಗೋಡು ವಿಲೀನೀಕರಣದ ಬಗ್ಗೆ ಹಲವು ಬಾರಿ ಎರಡು ಸರಕಾರಗಳಿಗೂ ಮನವಿ ಸಲ್ಲಿಸುವುದರೊಂದಿಗೆ, ಕನ್ನಡಿಗರಿಗೆ ಪ್ರೋತ್ಸಾಹವನ್ನಿತ್ತು ಕಾಸರಗೋಡು ಕನ್ನಡಿಗರನ್ನು ಏಕೀಕರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುತ್ತವೆ.

ಇಂತಹ ಸಂಘಗಳಿಗೆ ಕೈ ಜೋಡಿಸುವಲ್ಲಿ ಯುವಕ ಸಂಘಗಳು ಮತ್ತು ವಿದ್ಯಾರ್ಥಿ ಸಂಘಗಳು ಎಂದೂ ಒಂದು ಹೆಜ್ಜೆ ಮುಂದಿವೆ. ಹಲವಾರು ಯುವ ಸಂಘಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದರೂ, ವಿದ್ಯಾರ್ಥಿ ದೆಸೆಯಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿರುವ ಕಾಸರಗೋಡು ಸರಕಾರೀ ಕಾಲೇಜಿನ 'ಸ್ನೇಹರಂಗ' ಅದೇ ರೀತಿ ಮಂಜೇಶ್ವರ ಗೋವಿಂದ ಪೈ ಕಾಲೇಜಿನ 'ಗಿಳಿವಿಂಡು' ಸಾಹಿತ್ಯವೇದಿಕೆಗಳು ನವೆಂಬರ್ 1ರಂದು ವಿದ್ಯಾರ್ಥಿಗಳಿಗಾಗಿ ಹಲವು ಕಾರ್ಯಕ್ರಮಗಳನ್ನು ಸಾದರಪಡಿಸುವುದರೊಂದಿಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳುತ್ತವೆ.

ಕೇರಳದ ಮಾಜಿ ಮುಖ್ಯಮಂತ್ರಿಗಳಾದ ಇ.ಎಂ.ಎಸ್.ನಂಬೂದಿರಿಪ್ಪಾಡ್, ಸಿ.ಅಚ್ಯುತ ಮೆನನ್, ಪಟ್ಟಂತಾನು ಪಿಳ್ಳೈ ಮೊದಲಾದವರು ಕಾಸರಗೋಡನ್ನು ಕರ್ನಾಟಕಕ್ಕೆ ವಿಲೀನಿಕರಣಗೊಳಿಸುವುದಕ್ಕೆ ಹಸಿರುನಿಶಾನೆ ತೋರಿಸಿದ್ದರೂ ಅವರ ಅನುಯಾಯಿಗಳು ಯಾರೂ ಇದರತ್ತ ಕಿವಿಗೊಡಲಿಲ್ಲ. ಅದೇ ರೀತಿ ಮಹಾಜನ್ ವರದಿಯನ್ನು ಕಾರ್ಯಗತ ಮಾಡಬೇಕು ಎಂಬ ನಿರ್ಧಾರಕ್ಕೆ ಕರ್ನಾಟಕ ಸರಕಾರವೂ ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ. ಆದರೆ ಇಲ್ಲಿನ ಕನ್ನಡಿಗರು ಎಂದೂ ಮಲಯಾಳ ವಿರೋಧಿಗಳೂ ಅಲ್ಲ. ತಮ್ಮ ಹಿತ ರಕ್ಷಣೆಗಾಗಿ ಹೋರಾಡುವ ಕಾಸರಗೋಡು ಕನ್ನಡಿಗರಿಗೆ ರಾಜ್ಯೋತ್ಸವದ ಆಚರಣೆಯು ಬೇವು ಬೆಲ್ಲದಂತಿರುವುದು. ಅಂತೂ ತಮ್ಮ ಮನವಿಗಳಿಗೆ ಸರಕಾರಗಳೆರಡೂ ಒಪ್ಪಿಕೊಂಡು ಗಡಿನಾಡಾದ ಕಾಸರಗೋಡು ಕರ್ನಾಟಕಕ್ಕೆ ಸೇರಬಹುದೆಂಬ ಶುಭ ವಿಶ್ವಾಸದೊಂದಿಗೆ ಇಲ್ಲಿ ರಾಜ್ಯೋತ್ಸವವು ರಂಗೇರುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments