ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಲ್ಲಿಯೇ ಅತ್ಯಂತ ಖ್ಯಾತನಾಮರಾದ ಭಗತ್ ಸಿಂಗ್‌ರನ್ನು 'ಶಹೀದ್ ಭಗತ್ ಸಿಂಗ್' ಎಂದೇ ಕರೆಯಲಾಗುತ್ತದೆ. ಶಹೀದ್ ಎಂದರೆ, ಹುತಾತ್ಮ ಎಂದರ್ಥ. ಭಗತ್ ಸಿಂಗ್ ಈಗಲೂ ಕೂಡ ಪ್ರಸ್ತುತ, ಜನಪ್ರಿಯ ಎನ್ನುವುದಕ್ಕೆ ಭಗತ್ ಸಿಂಗ್ ಜೀವನ ಚರಿತ್ರೆಯನ್ನು ಆಧರಿಸಿ ಕಳೆದ ಕೆಲ ವರ್ಷಗಳ ಹಿಂದೆ ತೆರೆ ಕಂಡ ಮೂರು ಹಿಂದಿ ಚಿತ್ರಗಳು ಸಾಕ್ಷಿಯಾಗಿವೆ.
ಹಾಗೆಯೇ, ದೇಶ ಕಂಡ ಮಾರ್ಕ್ಸ್‌ವಾದಿಗಳಲ್ಲಿ ಅಗ್ರಗಣ್ಯರು ಎಂದೇ ಗುರುತಿಸಲಾಗುವ ಭಗತ್ ಸಿಂಗ್ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ (ಎಚ್ಎಸ್ಆರ್ಎ)ಯ ನಾಯಕರು ಹಾಗೂ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.
1907 ರ ಸೆಪ್ಟಂಬರ್ 17ರಂದು ಸಂಧು ಕುಟುಂಬದ ಸರ್ದಾರ್ ಕಿಶನ್ ಸಿಂಗ್ ಸಂಧು ಹಾಗೂ ವಿದ್ಯಾವತಿ ದಂಪತಿಗಳು ಪಂಜಾಬ್‌ನ ಲಯಲಪುರ್ ಜಿಲ್ಲೆಯ ಬಂಗ ಬಳಿಯ ಖಾಟ್ಕರ್ ಕಲನ್ ಗ್ರಾಮದಲ್ಲಿ ಭಗತ್ ಸಿಂಗ್‌ಗೆ ಜನ್ಮವಿತ್ತರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದ್ದ ಕುಟುಂಬದ ಹಿನ್ನೆಲೆ ಹೊಂದಿದ ಭಗತ್ ಸಿಂಗ್ ತಂದೆ ಹಿಂದು ಸುಧಾರಣಾವಾದಿ ಆರ್ಯ ಸಮಾಜದಿಂದ ಗಾಢವಾಗಿ ಪ್ರಭಾವಿತರಾಗಿದ್ದರೆ, ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್ ಸಿಂಗ್ ಹಾಗೆಯೇ ಆತನ ತಂದೆ ಕೂಡ ಕರ್ತಾರ್ ಸಿಂಗ್ ಸರಬ್ಜಾ ನೇತೃತ್ವದ ಗದರ್ ಪಾರ್ಟಿಯ ಭಾಗವಾಗಿದ್ದರು.
ಬಾಲ್ಯದಲ್ಲಿ ಮಹಾತ್ಮ ಗಾಂಧಿ ಹಾಗೂ ಅವರ ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿದ್ದ ಭಗತ್ ಸಿಂಗ್, 1922ರ ಚೌರಿ ಚೌರ ಘಟನೆಯ ನಂತರ ಗಾಂಧಿ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಿದ್ದರಿಂದ ನಿರಾಶರಾದರು.
ತಾರುಣ್ಯದ ದಿನಗಳಲ್ಲಿ, ಲಾಹೋರ್‌ನ ನ್ಯಾಶನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಗತ್ ಸಿಂಗ್, ಬಾಲ್ಯ ವಿವಾಹವನ್ನು ಧಿಕ್ಕರಿಸಿ ಮನೆಯಿಂದ ಓಡಿ ಹೋಗಿ 'ನೌಜವಾನ್ ಭಾರತ್ ಸಭಾ' (ಭಾರತ ಯುವ ಸಮಾಜ)ದ ಸದಸ್ಯರಾದರು.
ಆದರೆ, ಭಗತ್ ಸಿಂಗ್‌ರ ಕ್ರಾಂತಿಕಾರಿ ಚಟುವಟಿಕೆಗಳಿಗೆ ಒಂದು ವೇದಿಕೆ ದೊರೆತದ್ದು 1928ರಲ್ಲಿ. ಆ ವರ್ಷ ಸೆಪ್ಟಂಬರ್‌ನಲ್ಲಿ ಕೀರ್ತಿ ಕಿಸಾನ್ ಪಾರ್ಟಿಯಡಿಯಲ್ಲಿ ಭಾರತದೆಲ್ಲೆಡೆಯಿಂದ ಕ್ರಾಂತಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಭಗತ್ ಸಿಂಗ್ ಆ ಸಭೆಯ ಕಾರ್ಯದರ್ಶಿಯಾಗಿದ್ದರು. ಅವರ ಆನಂತರದ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದು ಈ ಸಂಘದ ನಾಯಕನಾಗಿಯೇ.
ಭಗತ್ ಸಿಂಗ್ ಜೀವನದ ಮೇಲೆ ಗಾಢ ಪರಿಣಾಮ ಬೀರಿದ ಪ್ರಮುಖ ಘಟ್ಟವೆಂದರೆ ಪಂಜಾಬ್ ಹುಲಿಯೆಂದೇ ಖ್ಯಾತರಾಗಿದ್ದ ಮಹಾನ್ ದೇಶಭಕ್ತ ಲಾಲಾ ಲಜಪತ್‌ರಾಯ್‌ರ ಮರಣ.
ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ವರದಿ ತಯಾರಿಸುವಂತೆ ಹೇಳಿ ಬ್ರಿಟಿಶ್ ಸರಕಾರ ನಿಯೋಜಿಸಿದ್ದ ಸೈಮನ್ ಆಯೋಗದಲ್ಲಿ ಒಬ್ಬ ಭಾರತೀಯ ಸದಸ್ಯನೂ ಇಲ್ಲವೆಂದು ಹೇಳಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯಲಾರಂಭಿಸಿದವು. ಆಗ 1928ರ ಅಕ್ಟೋಬರ್ 30ರಂದು ಸೈಮನ್ ಆಯೋಗ ಲಾಹೋರ್‌ಗೆ ಭೇಟಿ ನೀಡಿದಾಗ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದವರು ಲಾಲಾ ಲಜಪಾತ್ ರಾಯ್.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಎರಡು ಪ್ರಮುಖ ಬಣಗಳಾದ ಸೌಮ್ಯವಾದಿಗಳು ಹಾಗೂ ತೀವ್ರಗಾಮಿಗಳಲ್ಲಿ, ಎರಡನೆ ಬಣದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಲಜಪತ್ ರಾಯ್, ಮೌನ ಅಹಿಂಸಾ ಪ್ರತಿಭಟನೆ ಕೈಗೊಂಡಿದ್ದರು. ಆದರೆ. ಪೊಲೀಸ್ ಅಧಿಕಾರಿಯೊಬ್ಬಾತ ಲಾಲಾ ಲಜಪತ್ ರಾಯ್‌ರಿಗೆ ಮಾರಕ ಹೊಡೆತವನ್ನು ಹೊಡೆದಿದ್ದರಿಂದಾಗಿ ಈ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಭಗತ್, ಪ್ರತೀಕಾರವನ್ನು ತೀರಿಸುವುದಾಗಿ ಪ್ರತಿಜ್ಞೆ ಮಾಡಿದರು.
ಅದರಂತೆಯೇ, ಇತರ ಕ್ರಾಂತಿಕಾರಿಗಳಾದ ಶಿವರಾಮ್ ರಾಜ್‌ಗುರು, ಜೈ ಗೋಪಾಲ್, ಮತ್ತು ಸುಖ್‌ದೇವ್ ಥಾಪರ್ ಒಡಗೂಡಿ ಪೊಲೀಸ್ ಅಧಿಕಾರಿಯನ್ನು ಕೊಲ್ಲುವ ಸಂಚು ಹೂಡಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಇದರಿಂದ ತಪ್ಪಿಸಿಕೊಳ್ಳುವ ಹಂತದಲ್ಲಿ ಸಿಖ್ ಧರ್ಮಕ್ಕೆ ವಿರುದ್ಧವಾದ ಗಡ್ಡವನ್ನು ತೆಗೆಯುವುದು ಹಾಗೂ ಕೂದಲನ್ನು ಕತ್ತರಿಸುವುದನ್ನು ಮಾಡುವುದಕ್ಕೂ ಅವರು ಹಿಂಜರಿಯುವುದಿಲ್ಲ ಎನ್ನುವುದು ಅವರ 'ಲಿಬರಲ್' ಮನೋಧೋರಣೆಗೆ ಸಾಕ್ಷಿಯಾಗಿದೆ.
ಭಾರತೆದೆಲ್ಲೆಡೆ ಚಳುವಳಿಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಬ್ರಿಟೀಶ್ ಸರಕಾರ ಇದನ್ನು ಹತ್ತಿಕ್ಕಲು ಹೊಸ ಕಾಯ್ದೆಯೊಂದನ್ನು ರೂಪಿಸುತ್ತದೆ. ಈ ಕಾಯ್ದೆಗೆ ಪ್ರತಿಯಾಗಿ ಭಗತ್ ಸಿಂಗ್ ಅಸೆಂಬ್ಲಿಯಲ್ಲಿ ಬಾಂಬ್ ಹಾಕಲು ಮುಂದಾಗುತ್ತಾರೆ.
ಅದರಂತೆ ಏಪ್ರಿಲ್ 8, 1929ರಂದು ಭಗತ್ ಸಿಂಗ್ ಮತ್ತು ಅವರ ಒಡನಾಡಿ ಬಟುಕೇಶ್ವರ್ ದತ್ ಅಸೆಂಬ್ಲಿಗೆ ಬಾಂಬ್ ಹಾಕಿ "ಇಂಕ್ವಿಲಾಬ್ ಜಿಂದಾಬಾದ್!" (ಕ್ರಾಂತಿ ಚಿರಾಯುವಾಗಲಿ) ಎಂದು ಕೂಗಿದರು. ಇದಕ್ಕಾಗಿ ಅವರಿಗೆ ಜೂನ್12,1929ರಂದು 'ಜೀವಾವಧಿ ಗಡೀಪಾರು ಶಿಕ್ಷೆ ' ವಿಧಿಸಲಾಯಿತು.
ND
ಅಸೆಂಬ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಭಗತ್, ಬ್ರಿಟಿಶ್ ಅಧಿಕಾರಿ ಜೆ.ಪಿ.ಸಾಂಡರ್ಸ್ ಕೊಲೆಯಲ್ಲಿ ಭಾಗಿಯಾಗಿದ್ದ ವಿಷಯ ಬ್ರಿಟೀಶರಿಗೆ ತಿಳಿದುಬಂದಿತು. ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್‌ರಿಗೆ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯವನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಚಾರ ಸಾಧನವಾಗಿ ಬಳಸಿಕೊಂಡ ಭಗತ್ ಸಿಂಗ್, ಕೊಲೆ ಆಪಾದನೆಯನ್ನು ಒಪ್ಪಿಕೊಂಡರಲ್ಲದೆ, ವಿಚಾರಣೆಯ ಸಂದರ್ಭದಲ್ಲಿ ಬ್ರಿಟೀಶ್ ಆಡಳಿತದ ಬಗ್ಗೆ ಟೀಕೆಗಳ ಸುರಿಮಳೆಗೈದರು. ಈ ಪ್ರಕರಣವನ್ನು ಎಚ್ಎಸ್ಆರ್ಎ ಸದಸ್ಯರ ಗೈರು ಹಾಜರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದು ಭಗತ್ ಸಿಂಗ್‌ರ ಬೆಂಬಲಿಗರಲ್ಲಿ ಆಕ್ರೋಶವನ್ನುಂಟುಮಾಡಿತು.
ಕಾರಾಗೃಹ ಶಿಕ್ಷೆಗೊಳಗಾದ ಮೇಲೂ ಕೈದಿಗಳು ಮತ್ತು ವಿಚಾರಣೆಯಡಿಯಲ್ಲಿರುವವರ ಹಕ್ಕುಗಳ ಪರವಾಗಿ ಭಗತ್ ಹೋರಾಟ ನಡೆಸಿದರು. ಭಾರತೀಯ ರಾಜಕೀಯ ಕೈದಿಗಳಿಗಿಂತ ಬ್ರಿಟೀಶ್ ಕೊಲೆಗಡುಕರು ಹಾಗೂ ಕಳ್ಳರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು.
63 ದಿನಗಳ ಕಾಲ ನಡೆದ ಈ ಉಪವಾಸ ಸತ್ಯಾಗ್ರಹ ಕಡೆಗೆ ಬ್ರಿಟೀಶರು ಭಗತ್ ಸಿಂಗ್ ಬೇಡಿಕೆಗಳಿಗೆ ಮಣಿಯುವುದರೊಂದಿಗೆ ಅಂತ್ಯಗೊಂಡಿತು. ಇದು ಸಾಮಾನ್ಯ ಭಾರತೀಯರಲ್ಲಿ ಭಾರೀ ಜನಪ್ರಿಯತೆ ಕಂಡಿತು. ಈ ಉಪವಾಸ ಸತ್ಯಾಗ್ರಹಕ್ಕೂ ಮುನ್ನ ಭಗತ್ ಸಿಂಗ್ ಜನಪ್ರಿಯತೆ ಕೇವಲ ಪಂಜಾಬ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು.
1931 ರ ಮಾರ್ಚ್ 23ರಂದು ಲಾಹೋರ್‌ನಲ್ಲಿ ಭಗತ್ ಸಿಂಗ್‌ರನ್ನು ಅವರ ಒಡನಾಡಿಗಳಾದ ರಾಜ್‌ಗುರು ಹಾಗೂ ಸುಖ್‌ದೇವ್‌ರೊಂದಿಗೆ ಗಲ್ಲಿಗೇರಿಸಲಾಯಿತು. ಭಾರತ ಮಾತೆಯ ಈ ಮೂವರು ವೀರ ಕುವರರನ್ನು ಗಲ್ಲಿಗೇರಿಸುವುದನ್ನು ಪ್ರತಿಭಟಿಸುತ್ತಿದ್ದ ಬೆಂಬಲಿಗರು ಭಗತ್ ಸಿಂಗ್‌ರನ್ನು ಶಹೀದ್ ಎಂದು ಘೋಷಿಸಿದರು.
ಅಂದಿನ ಪೊಲೀಸ್ ಸೂಪರಿಂಟೆಂಡೆಂಟ್ ಪ್ರಕಾರ, ಭಗತ್ ಸಿಂಗ್ ಮತ್ತವರ ಒಡನಾಡಿಗಳನ್ನು ಗಲ್ಲಿಗೇರಿಸಲು ನಿಗದಿಯಾಗಿದ್ದು ಮಾರ್ಚ್ 23, 1931ರ ಬೆಳಗ್ಗೆ 8 ಗಂಟೆ. ಆದರೆ, ಸಾರ್ವಜನಿಕರಿಗೆ ಏನು ನಡೆಯುತ್ತಿದೆ ಎಂಬುವುದು ತಿಳಿದಲ್ಲಿ ಪರಿಸ್ಥಿತಿ ಹದಗೆಡಬಹುದೆಂದು ಭಾವಿಸಿದ ಬ್ರಿಟೀಶ್ ಅಧಿಕಾರಿಗಳು ನಿಗದಿತ ಸಮಯಕ್ಕೂ ಮುಂಚೆಯೇ ಅವರನ್ನು ಗಲ್ಲಿಗೇರಿಸಲು ಆಜ್ಞೆಯಿತ್ತರು.
ಭಗತ್ ಸಿಂಗ್‌ರನ್ನು ಸಟ್ಲೆಜ್ ನದಿಯ ಹುಸೇನ್‌ವಾಲ ತೀರದಲ್ಲಿ ಸಮಾಧಿ ಮಾಡಲಾಯಿತು. ಇಂದು, ಭಗತ್ ಸಿಂಗ್ ಮೆಮೋರಿಯಲ್‌ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುತ್ತದೆ.
ಆರಂಭದಲ್ಲಿ ಗಾಂಧಿ ರಾಷ್ಟ್ರೀಯತೆಯತ್ತ ಒಲವು ಹೊಂದಿದ್ದ ಭಗತ್, ಕ್ರಮೇಣ ಕ್ರಾಂತಿಕಾರಿ ಮಾರ್ಕ್ಸ್‌ವಾದದೆಡೆ ಹೊರಳಲಾರಂಭಿಸಿ ಕಾರ್ಲ್ ಮಾರ್ಕ್ಸ್, ಫ್ರೆಡ್ರಿಕ್ ಎಂಗಲ್ಸ್, ವ್ಲಾದಿಮಿರ್ ಲೆನಿನ್ ಬೋಧನೆಗಳನ್ನು ಓದಲಾರಂಭಿಸಿದರು. ಇದರಿಂದ ಪ್ರೇರಿತರಾಗಿ ಭಾರತ ಕೇವಲ ಸಮಾಜವಾದಿ ನೆಲೆಗಟ್ಟಿನ ಮೇಲೆ ಮಾತ್ರ ಸ್ಥಿರವಾಗಿ ನಿಲ್ಲಲು ಸಾಧ್ಯ ಎಂಬ ನಿಲುವು ತಳೆಯಲಾರಂಭಿಸಿದ ಭಗತ್, ಸಮಾಜವಾದದ ಕಟ್ಟಾ ಪ್ರತಿಪಾದಕರಾದರು. ಇದರಿಂದಾಗಿಯೇ, ಈಗಲೂ ಇಂದಿನ ಸಮಾಜವಾದಿ ನಾಯಕರು ಅವರನ್ನು ಭಾರತೀಯ ಸಮಾಜವಾದದ ಸ್ಥಾಪಕ ಭಗತ್ ಸಿಂಗ್ ಎಂದು ಗೌರವದಿಂದ ಸ್ಮರಿಸುತ್ತಾರೆ.
ಕಡೆಯವರೆಗೂ 'ವ್ಯಕ್ತಿಯನ್ನು ಕೊಲ್ಲಬಹುದು, ಆದರೆ ಆತನ ಚಿಂತನೆಗಳನ್ನು ಕೊಲ್ಲಲಾಗದು' ಎನ್ನುವ ತತ್ವಕ್ಕೆ ಬದ್ಧರಾಗಿದ್ದ ಭಗತ್ ಸಿಂಗ್, ಕಡೆಗೂ ತಮ್ಮ ತತ್ವಾದರ್ಶಗಳಿಗಾಗಿ ಪ್ರಾಣವನ್ನೇ ಪಣವಾಗಿಟ್ಟರು. ಮಹಾನ್ ಸಾಮ್ರಾಜ್ಯಗಳು ನಾಶವಾದವು, ಆದರೆ ಮಾನವನ ಚಿಂತನೆಗಳು ಮಾತ್ರ ಶಾಶ್ವತ ಎನ್ನುವಂತೆ ರಷ್ಯಾ ಕ್ರಾಂತಿಯಿಂದ ಅವರು ಮನಗಂಡಿದ್ದರು.
ಭಗತ್ ಸಿಂಗ್‌ರನ್ನು ಗಲ್ಲಿಗೇರಿಸುವ ಕೆಲ ದಿನಗಳ ಮುನ್ನ ಅಂದರೆ ಮಾರ್ಚ್ 20ರಂದು, ಅವರ ಗೆಳೆಯ ಪ್ರನ್ನತ್ ಸಿಂಗ್ ಸೆರೆಮನೆಯಲ್ಲಿ ಅವರನ್ನು ಭೇಟಿಯಾಗಿ ಕ್ಷಮಾದಾನ ಪತ್ರಕ್ಕೆ ಸಹಿ ಮಾಡುವಂತೆ ಕೇಳಿದರು. ಆದರೆ, ಭಗತ್ ಸಿಂಗ್ ತಮ್ಮ ನಿರ್ಧಾರಗಳಿಗೆ ಎಷ್ಟು ಬದ್ಧರಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರೆಂದರೆ, ಜಗತ್ತಿನ ಯಾವುದೇ ಶಕ್ತಿಯು ಅವರನ್ನು ಅಸಮರ್ಥರನ್ನಾಗಿಸಲು ಸಾಧ್ಯವಿರಲಿಲ್ಲ.