Webdunia - Bharat's app for daily news and videos

Install App

ಗಾಂಧೀಜಿಗೆ "ಮಹಾತ್ಮ" ಅಭಿದಾನ ದೊರೆತದ್ದು ಹೇಗೆ...

ವೆಬ್‌ದುನಿಯಾ ವಿಶೇಷ ಸಂದರ್ಶನ: 120ರ ಹರೆಯದ ಸ್ವಾತಂತ್ರ್ಯ ಹೋರಾಟಗಾರ ಚತುರ್ವೇದಿ ಹೀಗನ್ನುತ್ತಾರೆ...

Webdunia
( ನ್ಯೂಸ್ ರೂಂ ಬೆಂಗಳೂರು)
NRB
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅವರಿಗೆ 60 ವರ್ಷ. ಸ್ವಾತಂತ್ರ್ಯ ಸಿಕ್ಕಮೇಲೂ 60 ವರ್ಷದ ಬಳಿಕ ಹಳೆಯ ದಿನಗಳ ಮೆಲುಕು ಹಿಂದಿನ ದಿನಗಳನ್ನು ಕೆದಕಿದರೆ ಅವರ ಮುಖದಲ್ಲಿ ಸಂತಸದ ಕೋಲ್ಮಿಂಚು ಹರಿಯುತ್ತದೆ. ಬಹುಶಃ ಅನೇಕರಿಗೆ ಗೊತ್ತಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಒಡನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ವೀರ ಮರಣವನ್ನಪ್ಪಿದ ಭಗತ್ ಸಿಂಗ್, ರಾಜಗುರು ಮೊದಲಾದವರ ಗುರುಗಳಾಗಿದ್ದವರು ಪಂಡಿತ ಸುಧಾಕರ ಚತುರ್ವೇದಿ. ನಾಲ್ಕೂ ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳನ್ನು ಸಲೀಸಾಗಿ ಓದಿಕೊಂಡವರು. ಜಲಿಯನ್ ವಾಲಾ ಬಾಗ್ ನರಮೇಧದ ಪ್ರತ್ಯಕ್ಷದರ್ಶಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ. ಅವರಿಗೀಗ ವಯಸ್ಸು 120. ಹುಟ್ಟಿದ್ದು 1887ರಲ್ಲಿ. ಕನ್ನಡದಲ್ಲಿ ವೇದಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲೂ ಸುಮಾರು 20ಕ್ಕೂ ಹೆಚ್ಚು ಕೃತಿಗಳು ರಚನೆಗೊಂಡಿವೆ. ಅವರು ಅಪ್ಪಟ ಕನ್ನಡಿಗ. ಪ್ರಸ್ತುತ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿರುವ ಅವರು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ವೆಬ್‌ದುನಿಯಾ ಕನ್ನಡಕ್ಕಾಗಿ ವಿಶೇಷ ಸಂದರ್ಶನ ನೀಡಿದ್ದಾರೆ.

ಗಾಂಧೀಜಿಯವರೊಂದಿಗಿನ ನಿಮ್ಮ ಸಂಬಂಧ ನೆನಪಿಸಿಕೊಳ್ಳಿ ?

ಗಾಂಧೀಜಿಯವರಿಗೂ ನನಗೂ ಆತ್ಮೀಯ ಸ್ನೇಹ. ಅವರನ್ನು ನಾನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದೆ. ನನಗೆ ಎಲ್ಲಾ ಭಾಷೆಗಳ ಮೇಲೆ ಪ್ರಭುತ್ವವಿತ್ತು. ದೇಶದ ಉದ್ದಗಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೆ. ನಾನು ಜೈಲಿನಲ್ಲಿದ್ದ ಸಮಯದಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಅವರು ಜೈಲಿನಲ್ಲಿದ್ದ ಸಮಯದಲ್ಲಿ ನಾನು ಬಹುತೇಕ ಹೊರಗಡೆ ಇದ್ದೇ ಕಾರ್ಯಾಚರಿಸುತ್ತಿದ್ದೆ.

ಮಹಾತ್ಮಾ ಮುನ್ಷಿರಾಮ್ ನನ್ನ ಗುರುಗಳು. ಆ ದಿನಗಳಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಆಗತಾನೇ ದೇಶಕ್ಕೆ ಆಗಮಿಸಿದ್ದರು. ಅದು 1915 ಏಪ್ರಿಲ್ 3. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಗಾಂಧೀಜಿಯವರ ಕಳಕಳಿಯನ್ನು ಗಮನಿಸಿದ ಮುನ್ಷಿ ಅವರಿಗೆ ಬಿರುದುಕೊಡಬೇಕು. ಏನನ್ನು ಕೊಡೋಣ ಎಂದು ಕೇಳಿದರು. ನಾನೇ ಮುನ್ಷಿಯವರಿಗೆ ನಿಮ್ಮ ಹೆಸರಿನ ಹಿಂದೆ "ಮಹಾತ್ಮಾ" ಇದೆಯಲ್ಲಾ, ಅದನ್ನೇ ಅವರಿಗೆ ಕೊಟ್ಟು ಬಿಡಿ ಎಂದಿದ್ದೆ. ಹಾಗೆ ಅಲ್ಲಿಯವರೆಗೆ ಎಂ.ಕೆ. ಗಾಂಧಿ ಎಂದು ಸಹಿ ಮಾಡುತ್ತಿದ್ದ ಗಾಂಧೀಜಿ, "ಮಹಾತ್ಮಾ ಗಾಂಧಿ"ಯಾದರು. ಗಾಂಧೀಜಿ ಮಹಾತ್ಮಾ ಆಗೋದರಲ್ಲಿ ನನ್ನ ಪಾತ್ರವೂ ಇದೆ ಎಂಬುದು ನನಗೆ ತುಂಬಾನೇ ಖುಷಿ ಕೊಟ್ಟ ವಿಷಯ.

ಸ್ವಾತಂತ್ರ್ಯ ಹೋರಾಟದ ಆ ದಿನಗಳ ಬಗ್ಗೆ ಒಂದಿಷ್ಟು ಹೇಳಿ...

NRB
ಸ್ವಾತಂತ್ರ್ಯ ಹೋರಾಟಕ್ಕೆ ನಮಗೆ ಇಂಥದ್ದೇ ಪ್ರದೇಶ ಎಂಬುದಿರಲಿಲ್ಲ. ಕರಾಚಿಯಿಂದ ಕೊಯಮತ್ತೂರುವರೆಗೆ ನಮ್ಮ ಕಾರ್ಯಕ್ಷೇತ್ರ. ಗಾಂಧಿಯವರೊಂದಿಗೆ ಸಾವಿರಾರು ಮೈಲಿ ಸುತ್ತಿದ್ದೇನೆ. ಕರಾಚಿ, ವೆಲ್ಲೂರು, ಕೊಯಮತ್ತೂರು ಜೈಲುಗಳಲ್ಲಿಯೂ ಕಾಲ ಕಳೆದಿದ್ದೇನೆ. ಬದುಕಿನ ಹದಿನೈದು-ಇಪ್ಪತ್ತು ವರ್ಷಗಳ ಕಾಲ ಜೈಲಿನಲ್ಲೇ ಕಳೆದಿದ್ದೆ. ಆದರೆ ಅಲ್ಲಿರುವಾಗಲೇ ನನಗೆ ಅನೇಕ ಕೃತಿಗಳ ರಚನೆ ಮಾಡಲು ಸಾಧ್ಯವಾಯಿತು. "ವೇದ ಪ್ರಕಾಶ ಪ್ರದೀಪ"ವನ್ನು ಆ ದಿನಗಳಲ್ಲೇ ಬರೆದೆ.

ಗಾಂಧೀಜಿ ಜತೆಗಿನ ಒಡನಾಟ ಹೇಗೆ?

ನನಗೆ ಇಂಗ್ಲಿಷ್, ಹಿಂದಿ, ಕನ್ನಡ, ಗುಜರಾತಿ, ಸಂಸ್ಕೃತ ಸೇರಿದಂತೆ ಹದಿನೈದಕ್ಕೂ ಹೆಚ್ಚು ಭಾಷೆಗಳ ಮೇಲೆ ಪ್ರಭುತ್ವ ಇತ್ತು. ಇದರಿಂದಾಗಿ ಗಾಂಧಿಯವರು ನನಗೆ ತನ್ನೊಂದಿಗೆ ಕಾರ್ಯನಿರ್ವಹಿಸಲು ಆಹ್ವಾನಿಸಿದರು. ಆಗ ನಾನು ಅವರಿಗೆ ಹೇಳಿದ್ದು ಒಂದೇ- ನಾನು ವೇದ ಪ್ರಮಾಣವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂಬುದು ನನ್ನ ಷರತ್ತಾಗಿತ್ತು. ಗಾಂಧೀಜಿಯವರು ತಮ್ಮ ಸಂಪಾದಕತ್ವದ ಯಂಗ್ ಇಂಡಿಯಾವನ್ನು ಆ ದಿನಗಳಲ್ಲಿ ಪ್ರಕಟಿಸುತ್ತಿದ್ದರು. ದೇಶದ ವಿವಿಧೆಡೆಯಿಂದ ಪತ್ರಿಕೆಗೆ ಪತ್ರಗಳು ಹರಿದು ಬರುತ್ತಿದ್ದವು. ಓದುಗರ ಪತ್ರವನ್ನು ಇಂಗ್ಲಿಷ್ ಹಾಗೂ ಹಿಂದಿಗೆ ಭಾಷಾಂತರದ ಕೆಲಸವನ್ನು ಗಾಂಧೀಜಿ ನನಗೇ ವಹಿಸಿದ್ದರು.

ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಅವರ ಸಂದೇಶ ಜನರಿಗೆ ಹೇಗೆ ತಲುಪುತ್ತಿತ್ತು?

ಗಾಂಧೀಜಿ ಅವರು ನಾಲ್ಕು ಬಾರಿ ಕರ್ನಾಟಕಕ್ಕೆ ಬಂದಿದ್ದರು. ಮೊದಲ ಬಾರಿ ಬಂದಿದ್ದು 1924, ಎರಡನೇ ಬಾರಿ 1936. 3ನೇ ಬಾರಿ 1939, ನಾಲ್ಕನೇ ಬಾರಿ ಬಂದ ಇಸವಿ ಅಷ್ಟಾಗಿ ನೆನಪಿಲ್ಲ. ಕರ್ನಾಟಕಕ್ಕೆ ಬರುವುದಾದರೆ ನಾನು ಅವರೊಂದಿಗೇ ಇರುತ್ತಿದ್ದೆ.

NRB
ಅವರ ಹಿಂದಿ ಅಥವಾ ಇಂಗ್ಲಿಷ್ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದವರು ನಾನು ಮತ್ತು ಸಿದ್ಧವನ ಹಳ್ಳಿಕೃಷ್ಣ ಶರ್ಮಾ.

ಕೇಂದ್ರದಲ್ಲಿ ನೀವೂ ಮಂತ್ರಿಗಳಾಗಬಹುದಿತ್ತಲ್ಲ ?

ಖಂಡಿತಾ ಆಗಬಹುದಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇಂದ್ರದಲ್ಲಿ ಮೊದಲ ಮಂತ್ರಿ ಮಂಡಲ ರಚನೆಯಾಗುವಾಗ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ನನಗೆ ಟೆಲಿಗ್ರಾಮ್ ಕಳುಹಿಸಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ನಮ್ಮಂಥವರು ನಾಯಕರು ಎನ್ನಿಸಿಕೊಂಡಿದ್ದು, ನಿಮ್ಮಂಥಹ ಸ್ವಾತಂತ್ರ್ಯ ಹೋರಾಟಗಾರರಿಂದ. ಆದ್ದರಿಂದ ತಮ್ಮನ್ನು ಕೇಂದ್ರ ಅಥವಾ ರಾಜ್ಯದ ಸಚಿವರನ್ನಾಗಿ ನೇಮಿಸಲು ನಾವು ಇಚ್ಛಿಸಿದ್ದೇವೆ. ದಯವಿಟ್ಟು ದೆಹಲಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆ ಹೀಗಿತ್ತು-ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವೇದ ಪ್ರಚಾರದಲ್ಲೇ ಜೀವನ ತೆತ್ತಿದ್ದೇನೆ. ಮುಂದೆಯೂ ನನಗೆ ಅದೇ ಉಸಿರು. ನನಗೆ ಮಂತ್ರಿಗಿರಿ ಬೇಡ ಎಂದು ತಿರಸ್ಕರಿಸಿದ್ದೆ.

60 ರ ಸ್ವಾತಂತ್ರ್ಯ ಸಂಭ್ರಮವನ್ನು ಯಾವ ರೀತಿ ಅರ್ಥಪೂರ್ಣವಾಗಿ ಆಚರಿಸುತ್ತೀರಿ ?

ಮನೆಯಲ್ಲೇ ಧ್ವಜಾರೋಹಣ ಮಾಡುತ್ತೇನೆ. ಒಂದಷ್ಟು ಸ್ನೇಹಿತ ವರ್ಗ ಮನೆಗೆ ಅಂದು ಆಗಮಿಸುತ್ತಾರೆ. ಅಖಂಡ ರಾಷ್ಟ್ರದ ಪರಿಕಲ್ಪನೆ, ಒಂದೇ ಬಾವುಟ ಕುರಿತಂತೆ ಭಾಷಣ ಮಾಡಲಿದ್ದೇನೆ. ನಾನು ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ನಡೆಸಿದ 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ.

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾಡ ಜನತೆಗೆ ನಿಮ್ಮ ಸಂದೇಶವೇನು ?

ಯಾರಾದರೂ ನಿನ್ನನ್ನು ನೀನು ಯಾರು ಎಂದು ಕೇಳಿದಲ್ಲಿ, ನಾನು ಮಾನವ ಎಂದು ಹೇಳಬೇಕು. ಹಿಂದು, ಮುಸ್ಲಿಂ, ಕ್ರೈಸ್ತ ಆ ಜಾತಿ- ಈ ಜಾತಿ ಎಂದು ಜಾತಿಗಾಗಿ ಹೋರಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮನುಷ್ಯ ಎಂದರೆ ಸಾಕು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments