Webdunia - Bharat's app for daily news and videos

Install App

ತಮಸೋಮಾ ಜ್ಯೋತಿರ್ಗಮಯ

Webdunia
ಅಜ್ಞಾನದ ಕಾರಿರುಳು ಹೋಗಲಾಡಿಸಿ ಸುಜ್ಞಾನದ ಜ್ಯೋತಿಯನ್ನು ಮೂಡಿಸುವ ಬೆಳಕಿನ ಹಬ್ಬ, ದೀಪಗಳ ಆವಳಿಯ ಹಬ್ಬವೇ ದೀಪಾವಳಿ. ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ದ್ಯೋತಕವು. ಅಂದು ಎಲ್ಲರ ಮನೆಯೂ ತೈಲದೀಪಗಳಿಂದ ಬೆಳಗುತ್ತಿದ್ದರೆ, ಮನಸ್ಸುಗಳು ಕೂಡ ಉತ್ಸಾಹದಿಂದ ಬೆಳಗುತ್ತಿರುತ್ತವೆ.

ಈ ಹಬ್ಬವನ್ನು ಉತ್ತರ ಭಾರತೀಯರು ಐದು ದಿನಗಳಲ್ಲಿಯೂ, ದಕ್ಷಿಣ ಭಾರತೀಯರು ಮೂರು ದಿನಗಳಲ್ಲಿಯೂ ವಿಶೇಷ ಪೂಜೆಗಳಿಂದ ಆಚರಿಸುತ್ತಾರೆ. ಒಟ್ಟಿನಲ್ಲಿ ಪ್ರಥಮ ದಿನವಾದ ಆಶ್ವಯುಜ ಬಹುಳ ತ್ರಯೋದಶಿಯಿಂದ ತೊಡಗಿ ಐದನೇ ದಿನವಾದ ಯಮದ್ವಿತೀಯವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ಹದಿನೈದು ದಿನಗಳ ನಂತರ ಬರುವ ತುಳಸೀ ಪೂಜೆಯೊಂದಿಗೆ ಈ ಆಚರಣೆಯು ಮುಗಿಯುತ್ತದೆ.

ದಕ್ಷಿಣ ಭಾರತೀಯರು ನರಕ ಚತುರ್ದಶಿ, ಅಮಾವಾಸ್ಯೆ (ದೀಪಾವಳಿ, ಲಕ್ಷ್ಮೀಪೂಜೆ) ಮತ್ತು ಬಲಿ ಪಾಡ್ಯಮಿ ಎಂದು ಮೂರು ದಿನ ಆಚರಿಸಿದರೆ, ಉತ್ತರ ಭಾರತೀಯರು ಈ ಮೂರುದಿನಗಳ ಮೊದಲು ಧನ್ ತೇರಾಸ್ ಎಂದೂ, ಈ ಮೂರು ದಿನಗಳ ಮರುದಿನ ಯಮದ್ವಿತೀಯ (ಭಾಯಿ ದೂಜ್) ಎಂದೂ ಆಚರಿಸುತ್ತಾರೆ.

ತ್ರಯೋದಶಿ ದಿನವು ಧನ್ ತೇರಾಸ್ ಎಂಬ ನಾಮದಿಂದ ಕರೆಯಲ್ಪಡುತ್ತಿದ್ದು, ಯಮರಾಜ ಮತ್ತು ಧನ್ವಂತರಿಯ ಐತಿಹ್ಯದೊಂದಿಗೆ ಕೊಂಡಿಯನ್ನಿರಿಸಿಕೊಂಡಿದೆ. ಆದುದರಿಂದಲೇ ಪ್ರಭಾತ ವೇಳೆಯಲ್ಲಿ ಹೆಂಗಳೆಯರು ಮನೆ ಪರಿಸರವನ್ನು ಶುಚಿಗೊಳಿಸಿ, ಮುಂಬಾಗಿಲನ್ನು ತಳಿರು ತೋರಣಗಳಿಂದ ಶೃಂಗರಿಸಿ ಆರೋಗ್ಯದ ಅಧಿಪತಿಯಾದ ಧನ್ವಂತರಿಯ ಸ್ವಾಗತಕ್ಕಾಗಿ ಸಜ್ಜಾಗುತ್ತಾರೆ. ಅಂತೆಯೇ ಮುಸ್ಸಂಜೆಯ ವೇಳೆ ಅಕಾಲ ಮೃತ್ಯುವನ್ನು ಹೋಗಲಾಡಿಸಲು ಮನೆಯ ಮುಂದೆ ದೀಪವನ್ನು ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಸಂಜೆ ಅಲಂಕರಿಸಿದ ತಾಮ್ರದ ದೊಡ್ಡ ಹಂಡೆಯಲ್ಲಿ ರಾತ್ರಿಯೇ ನೀರು ತುಂಬಿಸಲಾಗುತ್ತದೆ. ಬಾವಿಯ ಸುತ್ತಲೂ ದೀಪಾಲಂಕಾರ ಮಾಡಿ ಮನೆಮಂದಿಯೆಲ್ಲಾ ನೀರನ್ನು ತುಂಬಿಸುತ್ತಾರೆ. ನೀರನ್ನು ಕಾಯಿಸಿಡಲಾಗುತ್ತದೆ.

ಮರುದಿನ ಮುಂಜಾನೆ ಅಂದರೆ ನರಕ ಚತುರ್ದಶಿಯಂದು, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮೈ ತಲೆಗೆ ಎಣ್ಣೆ ಹಚ್ಚಿ ಎಣ್ಣೆ ಸ್ನಾನ ಮಾಡುತ್ತಾರೆ. ಅನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ ಬೆಳಗ್ಗಿನ ಉಪಹಾರ ವಿಶೇಷವಾಗಿ 'ಮೂಡೆ', ಅವಲಕ್ಕಿ ಮೊದಲಾದವುಗಳನ್ನು ಸೇವಿಸುತ್ತಾರೆ. ಮನೆಯ ಹಿರಿಯಾಳು ಉಡುಗೊರೆಗಳನ್ನಿತ್ತು ಆಶೀರ್ವದಿಸುತ್ತಾರೆ. ಮಧ್ಯಾಹ್ನದ ಭೋಜನವು ಪಾಯಸ ಮತ್ತು ಹಲವು ವಿಧದ ಸಿಹಿತಿಂಡಿಗಳನ್ನೊಳಗೊಂಡಿರುತ್ತದೆ. ಭಗವಾನ್ ಶ್ರೀಕೃಷ್ಣನು ದುಷ್ಟ ರಾಕ್ಷಸನಾದ ನರಕಾಸುರನನ್ನು ವಧಿಸಿದ ಸ್ಮರಣಾರ್ಥವಾಗಿ ನರಕಾಸುರನ ಪ್ರತಿರೂಪವನ್ನು ಸುಟ್ಟು ಪಟಾಕಿಗಳನ್ನು ಸಿಡಿಸಿ ಸಂತೋಷದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇದೇ ದಿನ ಶ್ರೀರಾಮನು ರಾವಣನನ್ನು ವಧಿಸಿ ಅಯೋಧ್ಯೆಗೆ ಮರಳಿದ ದಿನವಾಗಿಯೂ ಆಚರಿಸಲಾಗುತ್ತದೆ.

ಅಮಾವಾಸ್ಯೆ ದಿನವೇ ದೀಪಾವಳಿ. ಅಂದು ವರ್ಷದ ಅತ್ಯಂತ ಕಾರಿರುಳು ಇರುವ ದಿನ ಎಂದು ನಂಬಲಾಗಿದೆ. ಆ ದಿನ ಲಕ್ಷ್ಮೀಪೂಜೆಗೆ, ಅದರಲ್ಲೂ ಧನಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವ. ಆ ದಿನ ವ್ಯಾಪಾರಿಗಳು ಅಂಗಡಿಪೂಜೆ ಮಾಡಿ ಧನಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ಕೆಲವೆಡೆ ಭಕ್ತರು ಧನಾಧಿಪತಿಯಾದ ಕುಬೇರನನ್ನು ಪೂಜಿಸಿ ಪೂಜಾಗೃಹದಲ್ಲಿ ಕುಬೇರಯಂತ್ರವನ್ನು ಸ್ಥಾಪಿಸುತ್ತಾರೆ. ಆದಿವಂದಿತ ಗಣಪನಿಗೆ ಪೂಜೆ ಸಲ್ಲಿಸಿದ ಮೇಲೆ ಕುಬೇರನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಕುಬೇರಯಂತ್ರ ಸ್ಥಾಪಿಸುವಾಗ ಜೇನು, ಬೆಲ್ಲ ಮತ್ತು ಒಣ ಖರ್ಜೂರವನ್ನು ಯಂತ್ರದ ಮುಂದಿರಿಸಿ ತುಪ್ಪದಿಂದ ದೀಪ ಹಚ್ಚುವುದು ಸಂಪ್ರದಾಯ. ಅಂಗಡಿಪೂಜೆಯಂದು ಪ್ಯಾಪಾರಿಗಳು ತಮ್ಮ ಅಂಗಡಿಯನ್ನು ಚೊಕ್ಕಗೊಳಿಸಿ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಮರುದಿನ ಬಲಿಪಾಡ್ಯಮಿ. ಅಂದು ಬಲೀಂದ್ರ ಪೂಜೆ, ಗೋಪೂಜೆಗಳನ್ನು ಮಾಡಲಾಗುತ್ತದೆ. ಬಲೀಂದ್ರನ ರೂಪವನ್ನು ಮನೆ ಪರಿಸರದಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತದೆ ಅಂತೆಯೇ ಗೋಪೂಜೆಯಂದು ದನಕರುಗಳನ್ನು ಸ್ನಾನ ಮಾಡಿಸಿ, ಶೃಂಗರಿಸಿ ಅವುಗಳಿಗೆ ಪುಷ್ಪ ಹಾರವನ್ನು ಹಾಕಿ ಪೂಜಿಸಿ ಸಿಹಿತಿಂಡಿ, ದೋಸೆ ಮತ್ತು ಅವಲಕ್ಕಿ ಬೆಲ್ಲವನ್ನು ತಿನಿಸಲಾಗುತ್ತದೆ. ಸಂಜೆಯ ವೇಳೆ ವರಲಕ್ಷ್ಮಿ, ಮಂಗಳಗೌರಿ ಮತ್ತು ಸ್ವರ್ಣಗೌರಿಯರಿಗೆ ಆರತಿ ಬೆಳಗಿ ಅಂದಿನ ರಾತ್ರಿ ದೀಪಾಲಂಕಾರ ಮಾಡಿ ಹೊಸ ಬಟ್ಟೆಗಳನ್ನುಟ್ಟು ಸಿಹಿತಿಂಡಿಗಳನ್ನು ಭಕ್ಷಿಸಿ, ಅಬ್ಬರದ ಪಟಾಕಿಗಳನ್ನು ಸಿಡಿಸಿ ಖುಷಿಯಿಂದ ಆಚರಿಸಲಾಗುತ್ತದೆ.

ಕೃಷಿಕರು ವಿಷ್ಣುವಿನ ಅವತಾರವಾದ ಬಲೀಂದ್ರನನ್ನು ಪೂಜಿಸಿ ತಮ್ಮ ಕಾಮನೆಗಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಲೀಂದ್ರ ಬಲೀಂದ್ರ ಕೂ...ಎಂದು ಬಲೀಂದ್ರನನ್ನು ಆಹ್ವಾನಿಸಲಾಗುತ್ತದೆ. ತಮ್ಮವರಿಗೆ ಸಿಹಿತಿಂಡಿಗಳನ್ನು ಹಂಚಿ, ಪಟಾಕಿಗಳನ್ನು ಸುಟ್ಟು ಉತ್ತಮವಾದ ಸಂಪತ್ತು ಸಮೃದ್ಧಿಗಳಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಐದನೇ ದಿನವಾದ ಭ್ರಾತೃ ದ್ವಿತೀಯ ಅಥವಾ ಯಮದ್ವಿತೀಯವು ಸಹೋದರ ಸಹೋದರಿಯರ ಆತ್ಮೀಯ ಬಾಂಧವ್ಯದ ದಿನವಾಗಿದ್ದು ಅಂದು ಸಹೋದರರು ತಮ್ಮ ಸಹೋದರಿಯರ ಮನೆಗೆ ಭೇಟಿ ನೀಡುತ್ತಾರೆ. ಆದರದಿಂದ ಬರಮಾಡಿಕೊಳ್ಳುತ್ತಾ ಸಹೋದರಿಯರು ತಮ್ಮ ಸಹೋದರರಿಗಾಗಿ ಪ್ರಾರ್ಥಿಸಿ ಹಣೆಗೆ ತಿಲಕವನ್ನಿಟ್ಟು ಭಾರೀ ಭೋಜನವನ್ನು ಉಣಬಡಿಸುತ್ತಾರೆ. ಒಂದು ರೀತಿಯಲ್ಲಿ ರಕ್ಷಾ ಬಂಧನದಂತೆಯೇ. ಈ ದಿನದ ಮಹತ್ವವೆಂದರೆ ಪುರಾಣಗಳಲ್ಲಿ ಯಮ ಮತ್ತು ತನ್ನ ಸಹೋದರಿ ಯಮುನೆಯು ದೀರ್ಘಕಾಲದ ನಂತರ ಗೋಕುಲದಲ್ಲಿ ಸಂಧಿಸಿದ ಪುಣ್ಯದಿನ ಇದಾಗಿದ್ದು ಅವರ ಒಲವಿನ ಪ್ರತೀತಿಗಾಗಿ ಇದು ಭ್ರಾತೃ ದ್ವಿತೀಯವೆಂದು ಕರೆಯಲ್ಪಡುತ್ತದೆ. ಉತ್ತರ ಭಾರತದಲ್ಲಿ ಭಾಯಿ ದೂಜ್ ಎಂದು ಪ್ರಸಿದ್ಧಿಯಾಗಿರುವ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ದೀಪಾವಳಿಯ ಅಬ್ಬರ ಮುಗಿದ ನಂತರದ ಹದಿನೈದನೇ ದಿನ ಅಂದರೆ ಹುಣ್ಣಿಮೆಯ ದಿನದಂದು ಆಚರಿಸುವ ಹಬ್ಬವೇ ತುಳಸೀ ವಿವಾಹ ಅಥವಾ ತುಳಸೀ ಪೂಜೆ. ದೇವಿ ಮಹಾಲಕ್ಷ್ಮಿಯು 'ವೃಂದಾ 'ಎಂದು ತುಳಸಿಯ ರೂಪದಲ್ಲಿ ಜನಿಸಿ ಭಕ್ತರನ್ನು ರಕ್ಷಿಸುತ್ತಾಳೆ ಎಂಬ ವಿಶ್ವಾಸದಿಂದ ತುಳಸೀ ಪೂಜೆಯನ್ನು ಮಾಡಲಾಗುತ್ತದೆ. ಅಂದು ಮನೆಯ ಮುಂದಿರುವ ತುಳಸೀಗಿಡವನ್ನು ಕಬ್ಬಿನ ಬೇಲಿ ಕಟ್ಟಿ ಹುಣಸೆ ಮತ್ತು ನೆಲ್ಲಿಕಾಯಿ ಮರದ ರೆಂಬೆಗಳಂದ ಶೃಂಗರಿಸಿ ಸಂಜೆಯ ವೇಳೆ ಪೂಜೆ ಮಾಡಲಾಗುತ್ತದೆ. ಕಬ್ಬು ಮಿಶ್ರಿತ ಅವಲಕ್ಕಿ ಬೆಲ್ಲದ ಪ್ರಸಾದವನ್ನು ವಿತರಿಸಿ ತುಳಸೀ ಪೂಜೆಯನ್ನು ಮುಕ್ತಾಯಗೊಳಿಸುತ್ತಾರೆ. ಇದರೊಂದಿಗೆ ದೀಪಾವಳಿಯ ಆಚರಣೆಯು ಕೊನೆಗೊಳ್ಳುತ್ತದೆ.

ಕೇರಳದಲ್ಲಿ: ಭಾರತದ ಇತರ ರಾಜ್ಯಗಳೊಂದಿಗೆ ಹೋಲಿಸಿದರೆ ದೀಪಾವಳಿಯ ಆಚರಣೆಯು ಕೇರಳದಲ್ಲಿ ಬಹು ವಿರಳ.ಆದರೆ ಗಡಿನಾಡಾದ ಕಾಸರಗೋಡಿನಲ್ಲಿ ದೀಪಾವಳಿಯು ವಿಜ್ರಂಭಣೆಯಿಂದ ಆಚರಿಸಲ್ಪಡುತ್ತದೆ. ಇಲ್ಲಿ ಕೇರಳದ ಎಲ್ಲಾ ಹಬ್ಬಗಳನ್ನು ಕೊಂಡಾಡುವುದರೊಂದಿಗೆ, ನೆರೆ ರಾಜ್ಯವಾದ ಕರ್ನಾಟಕದ ಹಬ್ಬವೂ ಇಲ್ಲಿ ಆಚರಿಸಲ್ಪಡುತ್ತಿದ್ದು, ಗಡಿನಾಡಾದ ಕಾಸರಗೋಡು ವಿವಿಧ ಹಬ್ಬಗಳನ್ನು ಆಚರಿಸುವ ಪ್ರತ್ಯೇಕ ಜಿಲ್ಲೆಯೆಂದೇ ಹೇಳಬಹುದು. ಕೇರಳದ ಹಬ್ಬವಾದ ಓಣಂ ವರುಷಕ್ಕೊಂದು ಬಾರಿ ಮಹಾಬಲಿಯ ಸಂದರ್ಶನದ ಪ್ರತೀತಿಯನ್ನು ಸಾರಿದರೆ ಅದೇ ತುಳುನಾಡೆಂದು ಕರೆಯಲ್ಪಡುವ ಕಾಸರಗೋಡಿಗೆ ಮಹಾಬಲಿಯು ದೀಪಾವಳಿಯಂದು 'ಬಲೀಂದ್ರ'ನಾಗಿ ಬಂದು ಹರಸುತ್ತಾನೆ.ಅಂತೂ ಕಾಸರಗೋಡಿನ ಜನತೆಗೆ ಬಲಿಯ ದರ್ಶನ ವರುಷಕ್ಕೆರಡು ಬಾರಿ ದೊರೆಯುವುದು ಭಾಗ್ಯ ಮತ್ತು ಸಂತೋಷದ ಸಂಗತಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments