Select Your Language

Notifications

webdunia
webdunia
webdunia
webdunia

ಬ್ಲಾಗನ್ನಡವೆಂಬೊಂದು ಸಾಹಿತ್ಯ ಪ್ರಕಾರ...!

ಬ್ಲಾಗನ್ನಡವೆಂಬೊಂದು ಸಾಹಿತ್ಯ ಪ್ರಕಾರ...!
ಚಂದ್ರಾವತಿ ಬಡ್ಡಡ್ಕ
ND
ವಿಶ್ವಾದ್ಯಂತ ಚೆದುರಿ ಚೆಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ತರುವ ಶಕ್ತಿಶಾಲಿ ಮಾಧ್ಯಮ ಅಂತರ್ಜಾಲ. ಅಂತರ್ಜಾಲದ ಖಾಸಗಿ ವೆಬ್‌ಸೈಟ್‌ಗಳು ಮತ್ತು ಬ್ಲಾಗುಗಳು ಇಂದು ಬಹಳಷ್ಟು ಪ್ರಭಾವ ಬೀರುತ್ತಿವೆ.

ನಾಡಿನಿಂದ ಹೊರಗಿರುವವರಿಗೆ ಅಂತರ್ಜಾಲ ಕನ್ನಡವು ನುಡಿ ಹಿತ, ಅಕ್ಷರ ಸುಖ ನೀಡುತ್ತದೆ.

ಇತರ ಭಾಷೆಗೆ ಹೋಲಿಸಿದರೆ ಕನ್ನಡದ ಬ್ಲಾಗುಗಳ ಸಂಖ್ಯೆ ಕಮ್ಮಿ ಎಂಬುದು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಬ್ಲಾಗಿಗರ ಪ್ರಥಮ ಸಮ್ಮೇಳನ ನಡೆದ ಕಾಲಕ್ಕೆ ವ್ಯಕ್ತವಾಗಿದ್ದ ಕೊರಗು. ಆಗ ಸುಮಾರು 500ರಷ್ಟಿದ್ದ ಬ್ಲಾಗುಗಳ ಸಂಖ್ಯೆ ಇಂದು ಬಹುತೇಕ ದ್ವಿಗುಣಗೊಳ್ಳುವತ್ತ ಸಾಗಿದೆ. ಕ್ಷಿಪ್ರಗತಿಯಲ್ಲಿ ಅಚ್ಚರಿ, ಅದ್ಭುತವೆನಿಸುವಂತೆ ಕನ್ನಡ ಬ್ಲಾಗುಲೋಕ ಬೆಳೆದಿದೆ, ಬೆಳೆಯುತ್ತಿದೆ.

ಒಮ್ಮೆ ನೀವು ಅಂತರ್ಜಾಲದಲ್ಲಿರುವ ಬ್ಲಾಗುಗಳ ಪುಟಗಳನ್ನು ಹರಡಿಕೊಂಡು ನೋಡಿ. ಒಬ್ಬೊರಿಗೊಬ್ಬರು ಜಿದ್ದಿಗೆ ಬಿದ್ದಂತೆ ಬ್ಲಾಗಿಸುತ್ತಿದ್ದಾರೆ. ಯಾರದ್ದೇ ಹಂಗಿಲ್ಲದೆ, ತಮ್ಮ ಭಾವನೆ, ಅನಿಸಿಕೆ, ವಿಚಾರ, ವಿಶ್ಲೇಷಣೆಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವು ಬರಹಗಳ ಗುಣಮಟ್ಟ ಆಯಾ ಕ್ಷೇತ್ರದಲ್ಲಿ ಪಂಡಿತೋತ್ತಮರೆಂದು ಹೆಸರು ಮಾಡಿದ್ದವರೇ ಮೂಗಿಗೆ ಬೆರಳೇರಿಸುವಂತಿದೆ.

ಇನ್ನು ಕೆಲವರಿಗೆ ಬ್ಲಾಗು ಸೃಷ್ಟಿಸಿ ತಮ್ಮ ಭಾವಗಳಿಗೆ ಬಣ್ಣ ನೀಡಬೇಕೆಂಬ ತುಡಿತವಿದೆಯಾದರೂ ಅಡ್ಡಿಯಾಗುವುದು ಅದರ ಬೆರಳಚ್ಚಿಸುವಿಕೆ. ಕೆಲವರು ಬರಹ, ನುಡಿ, ಯೂನಿಕೋಡ್ ಮುಂತಾದ ತಂತ್ರಾಂಶಗಳ್ನು ಕರಗತ ಮಾಡಿಕೊಂಡಿದ್ದರೆ ಇನ್ನು ಕೆಲವರಿಗೆ ಇವುಗಳ ಬಳಕೆ ಒಂದಿಷ್ಟು ಕಷ್ಟ. ಇದೊಂದು ಬ್ಲಾಗನ್ನಡಕ್ಕೆ ಹಿನ್ನಡೆ ಎನ್ನಬಹುದು.

ಅದೆಷ್ಟು ಸುಂದರವಾದ ಬ್ಲಾಗುಗಳಿವೆ! ಯಾವುದನ್ನೂ ಹೆಸರಿಸುವ ಅಪಾಯಕ್ಕೆ ನನ್ನನ್ನು ನಾನು ಒಡ್ಡಿಕೊಳ್ಳುವುದಿಲ್ಲ. ಯಾಕೆಂದರೆ, ಹೆಚ್ಚಿನವು ಒಂದಕ್ಕಿಂದ ಒಂದು ಚೆಂದ. ಕತೆ, ಕವನ, ವಿಚಾರ, ಮಾಹಿತಿ, ಲಹರಿ, ಹರಟೆ, ಗಂಭೀರ ಸಾಹಿತ್ಯ, ನೆನಹು, ನೇವರಿಕೆ, ಅಡುಗೆ, ವಿಡಂಬನೆ ಏನುಂಟು? ಏನಿಲ್ಲ? ಬ್ಲಾಗಿಗರು ಅಕ್ಷರಶಃ ಆಕಾಶವನ್ನು ಮಾತ್ರ ಮಿತಿಯಾಗಿಸಿಕೊಂಡಿದ್ದಾರೆ.

ಏಕ ರೀತಿಯ ಕೀಲಿಮಣೆ ಶೈಲಿ ಇಲ್ಲದಿರುವುದು ಬ್ಲಾಗ್ ಬರಹಾಕಾಂಕ್ಷಿಗಳಿಗೆ ಎದುರಾಗಿರುವ ಬಹುದೊಡ್ಡ ತೊಡಕು. ಕೆಪಿ ರಾವ್, ಬರಹ, ನುಡಿ, ಇನ್‌ಸ್ಕ್ರಿಪ್ಟ್ ಇತ್ಯಾದಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಏಕರೀತಿಯ ಕೀಲಿಮಣೆ ಶೈಲಿಯೊಂದರ ಅನ್ವೇಷಣೆಯು ಕನ್ನಡಕ್ಕೆ ಲಭ್ಯವಾದರೆ ದೊಡ್ಡ ಅಡ್ಡಿ ನಿವಾರಣೆಯಾಗುತ್ತದೆ. ಕನ್ನಡಿಗರಿಗೆ ಅನುಕೂಲವಾದ ಸ್ವರೂಪದ ಕೀಲಿ ಮಣೆ ಹಾಗೂ ಸುಲಭ ಬಳಕೆಯ, ಸರ್ವ ಸಮ್ಮತಾರ್ಹ ತಂತ್ರಾಂಶ ಸದ್ಯೋಭವಿಷ್ಯದಲ್ಲಿ ಪರಿಚಯಗೊಳ್ಳಬಹುದು ಎಂಬ ಆಶಾವಾದ ಇರಿಸಿಕೊಳ್ಳೋಣ.

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನಗಳ ಕುರಿತು ಸಾಕಷ್ಟು ಸಾಮಾಗ್ರಿಗಳು ಇಲ್ಲ ಎಂಬ ಅಳಲೂ ಇದೆ. ಬ್ಲಾಗುಗಳು ಈ ದಿಸೆಯಲ್ಲೂ ಕೈಯಾಡಿಸುತ್ತಿವೆಯಾದರೂ, ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಇತ್ತ ಗಮನ ಹರಿಸಿದರೆ ಈ ಕೊರತೆ ನೀಗಿಸಬಹುದು.

ಅಂತರ್ಜಾಲದಲ್ಲಿ ಬ್ಲಾಗ್‌ಗಳ ಮೂಲಕ ಬರಹಗಳು ವೈವಿಧ್ಯಮಯ. ಭಾಷಾ ಪ್ರಯೋಗದ ಬಗ್ಗೆಯೂ ಮಡಿವಂತಿಕೆ, ಶಿಸ್ತುಗಳ ಮಿತಿಯನ್ನು ದಾಟಿ ಬ್ಲಾಗಿಗರು ತಮ್ಮದೇ ಲಹರಿಯನ್ನು ಹರಿಬಿಡುತ್ತಿರುವುದನ್ನು ಕಾಣುತ್ತೇವೆ. ಬೆರಳಚ್ಚಿಸುವಿಕೆ ಸಮಸ್ಯೆಯಿಂದಾಗಿ ಸಾಕಷ್ಟು ಕರಡು ತಪ್ಪುಗಳು ನುಸುಳುತ್ತವೆ. ಬ್ಲಾಗೋದುಗರು ಇವುಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯವೆಂಬಂತಾಗಿದೆ.

ಕನ್ನಡ ಬ್ಲಾಗ್‌ಗಳು ಮತ್ತು ಈ ಮೂಲಕದ ಬರಹಗಳು ಈಚಿನ ವರ್ಷಗಳ ಬೆಳವಣಿಗೆ. ಬ್ಲಾಗ್ ಬರಹಗಳು ಮತ್ತು ಅದರ ಭಾಷೆ ತಮ್ಮದೇ ರೀತಿಯಲ್ಲಿರುವ ಕಾರಣ ಇದನ್ನು ಪ್ರತ್ಯೇಕ ಸಾಹಿತ್ಯವೆಂಬುದು ಪರಿಗಣಿಸಬೇಕೇ ಎಂಬುದು ಚರ್ಚೆಯಾಗಬೇಕಾದ ವಿಚಾರ. ಬ್ಲಾಗ್ ಸಾಹಿತ್ಯವೆಂಬೊಂದು ಸಾಹಿತ್ಯ ಪ್ರಕಾರ, ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಈಗಿರುವಂತೆ, ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ.... ಮುಂತಾದ ಗೋಷ್ಠಿಗಳಂತೆ ಬ್ಲಾಗ್ ಗೋಷ್ಠಿಗಳೂ ಸೇರಿಕೊಳ್ಳಬೇಕೇ? ನಿಮಗೇನನಿಸುತ್ತದೆ?

Share this Story:

Follow Webdunia kannada