ಅವಿನಾಶ್ ಬಿ. ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ! ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ! ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ- ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ? ಅಂತ ಸಾಲಿ ರಾಮಚಂದ್ರರಾಯರು ಕನ್ನಡ ನುಡಿಯ ಬಗ್ಗೆ ಕನ್ನಡಿಗನಿಗಿರುವ ಪೆರ್ಮೆಯನ್ನು, ಗರ್ವವನ್ನು ಅತ್ಯದ್ಭುತವಾಗಿ ವಿವರಿಸಿದ್ದಾರೆ.
WD
ಈಗಷ್ಟೇ (ಅಕ್ಟೋಬರ್ 31, 2008ರ ಸಂಜೆ) ಶಾಸ್ತ್ರೀಯ ಭಾಷೆ ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟ ಕನ್ನಡವೊಂದು ಭಾಷೆ ಮಾತ್ರವೇ ಅಲ್ಲ, ಅದೊಂದು ಸಂಸ್ಕೃತಿ, ಅದೊಂದು ದೇಶ, ಅದೊಂದು ಸಂಸ್ಕಾರ, ವ್ಯವಸ್ಥೆ, ಜೀವನಶೈಲಿ, ಅದೊಂದು ಸಂಪ್ರದಾಯ, ಪರಂಪರೆಯೂ ಹೌದು. ಈ ಹೆಮ್ಮೆಯ, ನಲುಮೆಯ, ಒಲುಮೆಯ ಚಿಲುಮೆಯೇ ಆಗಿರುವ ಚೆನ್ನುಡಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅದೆಂಥದೋ ಹೇಳಿಕೊಳ್ಳಲಾರದ ಆತಂಕವೊಂದು ಕನ್ನಡ ಮನಸ್ಸುಗಳಲ್ಲಿ ವ್ಯಾಪಿಸಿಕೊಳ್ಳತೊಡಗಿದೆ. ಉದಾರೀಕರಣ, ಜಾಗತೀಕರಣದ ಭರಾಟೆಯಲ್ಲಿ ಕನ್ನಡ ನೆಲದ ರಾಜಧಾನಿ ಬೆಂಗಳೂರು ಸಹಿತವಾಗಿ ಪ್ರಮುಖ ಪಟ್ಟಣಗಳು ಬಹುಸಂಸ್ಕೃತಿ ನಗರವಾಗಿ ರೂಪುಗೊಳ್ಳುತ್ತಿರುವುದು ಇದಕ್ಕೆ ಮೂಲ ಕಾರಣವಿರಲೂಬಹುದು.
ಸಾಹಿತ್ಯವಲಯದಲ್ಲಿ, ಭಾಷಾ ಪಂಡಿತರ ವಲಯದಲ್ಲಿ ಈ ಚಿಂತೆಯ ಗೆರೆಗಳು ಮೂಡುವಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿರುವ ಪ್ರಧಾನ ಸಂಗತಿಗಳೆಂದರೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಬೇಕೆಂಬ ವಾದದೊಂದಿಗೇ ಮಿಳಿತವಾಗಿರುವ, ಸಂಸ್ಕೃತ, ಆಂಗ್ಲ ಮತ್ತಿತರ ಅನ್ಯ ಭಾಷೆಯ ಪದಗಳನ್ನು ಕನ್ನಡಕ್ಕೆ ಎರವಲು ಪಡೆದು ಬಳಸಬೇಕೇ ಎಂಬ ಕುರಿತಾದ ಅಸ್ಪೃಶ್ಯತಾ ಮನೋಭಾವ.
ಇವೆರಡಕ್ಕೂ ಅವಿನಾಭಾವ ಸಂಬಂಧವಿದೆ. ತಮಿಳಿಗೆ 'ಶಾಸ್ತ್ರೀಯ ಭಾಷೆ' ಎಂಬ ಪಟ್ಟ ಕಟ್ಟಿಸಲು ಕಾರಣರಾದ, ತಮಿಳು ಭಾಷಾ ಬೋಧಕರೂ ಆಗಿರುವ ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಾರ್ಜ್ ಎಲ್.ಹಾರ್ಟ್ ಮುಂದಿಟ್ಟಿರುವ ಮಾನದಂಡದ ಪ್ರಕಾರ, ಯಾವುದೇ ಭಾಷೆಯು ಶಾಸ್ತ್ರೀಯ ಭಾಷೆಯೆಂದು ಅನ್ನಿಸಿಕೊಳ್ಳಬೇಕಿದ್ದರೆ, "ಅದೊಂದು ಸ್ವತಂತ್ರ ಸಂಪ್ರದಾಯವಾಗಿರಬೇಕು, ಬಹುತೇಕವಾಗಿ ತನ್ನದೇ ಸ್ವಂತ ಬಲದಿಂದ ಬೆಳೆದದ್ದಾಗಿರಬೇಕು, ಯಾವುದೇ ಬೇರೆ ಭಾಷಾಪದ್ಧತಿಯ ಕವಲು ಆಗಿ ಬೆಳೆದದ್ದಾಗಿರಬಾರದು ಮತ್ತು ಅದು ವಿಪುಲವಾದ ಪ್ರಾಚೀನ ಸಾಹಿತ್ಯಭಂಡಾರವನ್ನೇ ಹೊಂದಿರಬೇಕು".
ಇಲ್ಲಿರುವ 'ಶಾಸ್ತ್ರೀಯ ಸ್ಥಾನಮಾನ' ವಿಷಯ ಮತ್ತು ಈ ಮೇಲಿನ ಕಟ್ಟುಪಾಡುಗಳು ಒಂದಕ್ಕೊಂದು ಪೂರಕವಾಗಿದ್ದು, ಇದುವೇ ಈ ಚರ್ಚೆಗೆ ಎಡೆಮಾಡಿಕೊಟ್ಟ ಅಂಶ. ಈ ಅರ್ಹತೆಗಳನ್ನು ಸ್ಥೂಲವಾಗಿ ವಿಶ್ಲೇಷಿಸಿದಾಗ, ಕ್ಲಾಸಿಕಲ್ ಎಂದು ಕರೆಸಿಕೊಳ್ಳಬೇಕಿರುವ ಭಾಷೆಯು ಯಾವುದೇ ಬದಲಾವಣೆಗೀಡಾಗಿರಬಾರದು (ಮೂಲಭಾಷೆಯಾಗಿರಬೇಕು) ಎಂದು ಅರ್ಥೈಸಿಕೊಳ್ಳಬಹುದು. ಅಂದರೆ ಯಾವುದೇ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳದ ಭಾಷೆ. ಇದಕ್ಕಾಗಿಯೇ, ಅನ್ಯ ಭಾಷೆಯ ಪದಗಳು ನಮಗೆ ಬೇಕಿಲ್ಲ, ನಮ್ಮ ನಲ್ನುಡಿಯನ್ನೇ ಬಳಸಿ ಬಳಸಿ ಸಮೃದ್ಧವಾಗಿಸೋಣ ಎಂಬ ಕೂಗೆದ್ದಿರುವುದು.
ಮಹಲಿಂಗರಂಗ ಕವಿಯು ಹೇಳಿದಂತೆ "ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಸುಲಭವಹ ಕನ್ನಡದ ನುಡಿಯದು ಸಾಲದೇ, ಸಂಸ್ಕೃತದಲಿನ್ನೇನು ?". ಅಂತೆಯೇ, ಮಹಾಪ್ರಾಣಾಕ್ಷರಗಳು ಕನ್ನಡದ್ದಲ್ಲ, ಸಂಸ್ಕೃತದಿಂದ ಬಂದವು ಎಂಬ ವಾದ ಒಂದೆಡೆಯಿಂದ ಕೇಳಿಬರುತ್ತಿದೆ. ಅದೇ ರೀತಿ ಆಂಗ್ಲ ಭಾಷೆಗಳಿಂದ ಎರವಲು ತಂದಿರುವ ಪದ ಪ್ರಯೋಗಗಳೂ ಸರಿಯಲ್ಲ ಎಂದೂ ಒತ್ತಾಯಿಸಲಾಗುತ್ತಿದೆ.
ಇದೀಗ ತಮಿಳರೇ ಕರೆದುಕೊಂಡಿರುವ "ಚೆನ್ಮೊಳಿ" ಅಥವಾ "ಶಾಸ್ತ್ರೀಯ ಭಾಷೆ" ತಮಿಳನ್ನೇ ಉಲ್ಲೇಖಿಸಿ ನೋಡಿದರೆ ಆ ಭಾಷೆಯ ಮೇಲೆ ಸಂಸ್ಕೃತ-ಹಿಂದಿ ಪ್ರಭಾವ ದೂರ. ಹೀಗಾಗಿ ಅದು 'ಬದಲಾವಣೆಯ ಗಾಳಿಗೆ ಪ್ರಭಾವಿತವಾಗದ' ಭಾಷೆ. ಅದೇ ರೀತಿ ಕನ್ನಡದಲ್ಲೂ ಮಹಾಪ್ರಾಣ ಅಕ್ಷರಗಳು ಬೇಡ, ಉಚ್ಚರಿಸಲು ಕ್ಲಿಷ್ಟವಾಗುವಂತಹ ಸಂಸ್ಕೃತದ ಶಬ್ದಗಳು ನಮಗೆ ಬೇಡ, ಕನ್ನಡದ ಒರೆಗಳನ್ನೇ ಬಳಸಬೇಕು ಎಂಬ ವಾದವಿದೆಯಲ್ಲ... ಈ ವಾದ-ವಿವಾದವು ತನ್ನ ಹಾದಿಯನ್ನು ಬದಲಿಸಿ, ಜಾತಿವಾದ, ಜನಾಂಗೀಯವಾದದತ್ತಲೂ ಹೊರಳಿಕೊಳ್ಳುತ್ತಿರುವುದು ಕನ್ನಡಿಗರ, ಕನ್ನಡ ಮನಸ್ಸುಗಳಲ್ಲಿನ ಒಗ್ಗಟ್ಟಿನ ಕೊರತೆಯನ್ನು, ಇಚ್ಛಾಶಕ್ತಿಯ ಕೊರತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿರುವ ಅಂಶಗಳಲ್ಲೊಂದು. ಅಂದರೆ, ವರ್ಗಭೇದದ ಆರೋಪ ಇಲ್ಲಿ ಕೇಳಿಬಂದಿದೆ. ಮೇಲ್ವರ್ಗದವರಿಗೆ ಮಾತ್ರವೇ ಸಂಸ್ಕೃತ ಉಚ್ಚರಿಸಲು, ಮಹಾಪ್ರಾಣಾಕ್ಷರಗಳನ್ನು ಸರಿಯಾಗಿ ಉಚ್ಚರಿಸಲು ಬರುತ್ತದೆ, ಕೆಳವರ್ಗದವರು, ಹಿಂದುಳಿದವರಿಗೆ ಇದನ್ನು ಓದುವುದು, ಬರೆಯುವುದು ಕಷ್ಟ ಎಂಬ ಕಾರಣ ನೀಡಿ, ಮಹಾಪ್ರಾಣಾಕ್ಷರಗಳನ್ನು ಕಿತ್ತು ಹಾಕಬೇಕೆಂಬ ವಾದ. ಇಂಥದ್ದೊಂದು ವಾದ ಹುಟ್ಟಿಕೊಂಡದ್ದು ವರ್ಗಭೇದ ಮತ್ತಷ್ಟು ಹೆಚ್ಚಲು ಕೇವಲವಾದ ಕಾರಣವಾಗುತ್ತದೆಯೇ ಹೊರತು, ಕನ್ನಡವನ್ನು ಮೇಲೆತ್ತುವ ಕೈಂಕರ್ಯಕ್ಕೆ ಪೂರಕವಾಗಿರುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದರಲ್ಲಿ ಮೇಲ್ವರ್ಗ-ಕೆಳವರ್ಗ ಎಂಬ ಭೇದವೇ ಬರಬಾರದಾಗಿತ್ತು.
ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಇಂಗ್ಲಿಷ್ ಎಂಬ ಆಂಗ್ಲರ ನಾಡಿನ ಭಾಷೆಯು ಇಷ್ಟೊಂದು ಅಗಾಧವಾಗಿ ಬೆಳೆಯಲು ಕಾರಣ ಏನು? ಬೇರೆ ದೇಶದ ಭಾಷೆಗಳನ್ನು ಅದು ತನ್ನದ ಮಡಿಲಿಗೆ ಸೇರಿಸಿಕೊಂಡಿದೆ, ತನ್ನದಾಗಿಸಿಕೊಂಡು ಅಗಾಧವಾಗಿ ಬೆಳೆದಿದೆ. ಲ್ಯಾಟಿನ್ ಶಬ್ದಗಳೇ ಅದಕ್ಕೆ ಮೂಲಾಧಾರ ಎಂಬಂತಾಗಿದೆ. ಹಿಂದಿ, ಕನ್ನಡ ಮುಂತಾದ ಅದೆಷ್ಟೋ ಶಬ್ದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ಶಬ್ದಕೋಶದೊಳಗೆ ತೂರಿಕೊಂಡಿವೆ. ಇದರಿಂದಾಗಿ ಅದರ ವ್ಯಾಪ್ತಿ ವಿಶಾಲವಾಗಿದೆ.
" ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ" ಅಂತ ಸರ್ವಜ್ಞ ಕವಿಯು ಒಂದೆಡೆ ಹೇಳಿಕೊಂಡಿದ್ದಾನೆ.
ಈಗ, ಭಾಷೆಯು 'ಕ್ಲಾಸಿಕಲ್' ಪ್ರತಿಷ್ಠೆಗೆ ಕಾರಣವಾಗುವ ನಿಯಮಗಳಲ್ಲೊಂದಾದ, ಬದಲಾವಣೆಯ ಚೌಕಟ್ಟಿನಿಂದ ಹೊರಬರಬೇಕೇ, ಬೇಡವೇ ಎಂಬುದು ಚರ್ಚೆಗೆ ಆಸ್ಪದವಾದ ವಿಷಯ. ಕನ್ನಡದಲ್ಲಿ ಸಂಸ್ಕೃತದಿಂದ ಬಂದುದೆಂದು ಹೇಳಲಾಗುತ್ತಿರುವ ಅಲ್ಪಪ್ರಾಣ ಮತ್ತು ಮಹಾಪ್ರಾಣ ಭೇದಗಳು ಹಾಸುಹೊಕ್ಕಾಗಿಬಿಟ್ಟಿವೆ, ಈ ಭಾಷೆಗಳೆರಡೂ ಅನ್ಯೋನ್ಯವಾಗಿವೆ. ಮಹಾಪ್ರಾಣಾಕ್ಷರಗಳು ಸಂಸ್ಕೃತ-ಹಿಂದಿ ಕೊಡುಗೆ ಎಂಬಂತಾಗಿ ನಾವದನ್ನು ದೂರೀಕರಿಸಿದರೆ, ಪ್ರಾಣಭೇದ ಕಾಣಿಸಿಕೊಳ್ಳಲಾರದು. ಮಹಾ ಪ್ರಾಣವಿಲ್ಲದಿದ್ದರೆ ಸಂವಹನ ಸಂದರ್ಭದಲ್ಲಿ ಅದೆಷ್ಟೋ ಅವಾಂತರಗಳೇ ಘಟಿಸಬಹುದು. ಉದಾಹರಣೆಗೆ ಮಧ್ಯ ಮತ್ತು ಮದ್ಯ, ಮಣೆ ಮತ್ತು ಮನೆ ... ಇಂತಹ ಪದಗಳಿಗೆ ಅಕ್ಷರಭೇದ ಅಥವಾ ಪ್ರಾಣಭೇದವಿಲ್ಲದೆ, ಅವುಗಳನ್ನು ಬಳಸಿ ಬರೆದ ವಾಕ್ಯವು ಓದುಗರಿಗೆ ಸರಿಯಾದ ಸಂದೇಶವನ್ನು ತಲುಪಿಸಲಾರದು. ತತ್ಪರಿಣಾಮವಾಗಿ ಕಾಣಿಸಿಕೊಳ್ಳುವ ಅಚ್ಚಗನ್ನಡ ಭಾಷೆಯು ಆಧುನಿಕ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಸ್ವೀಕಾರ ಪಡೆಯುತ್ತದೆ ಎಂಬುದು ಕೂಡ ಗಮನಿಸಬೇಕಾದ ವಿಚಾರ.
ಎಲ್ಲರ ನುಡಿಗಳನ್ನು ಕಲಿತು, ಅಳವಡಿಸಿಕೊಳ್ಳುತ್ತಾ ಮುಂದುವರಿದರೆ, ನಮ್ಮ ಭಾಷೆ ಅಭಿವೃದ್ಧಿ ಕಾಣುತ್ತದೆ ಅಂತ ಒಂದು ವರ್ಗ, ಬೇರೆ ಭಾಷೆಗಳನ್ನು ನಮ್ಮದಕ್ಕೆ ಅಳವಡಿಸಿಕೊಂಡರೆ, ನಮ್ಮ ಭಾಷೆಯ ಮೂಲ ಸೊಗಡು ಕೆಡುತ್ತದೆ ಎಂಬ ಮತ್ತೊಂದು ವರ್ಗ ನಮ್ಮ ಮುಂದಿದೆ. ಇದು ಆರೋಗ್ಯಕರವಾಗಿ ಚರ್ಚೆ ನಡೆದು ಒಮ್ಮತ ಮೂಡುವವರೆಗೂ ವಾದ-ವಿವಾದ ಇದ್ದದ್ದೇ. ಆದರೆ ಎಲ್ಲಿಯವರೆಗೆ ಭಾಷೆಯ ಸೊಗಡು ಮರೆಯಾಗುವುದಿಲ್ಲವೋ, ಅಲ್ಲಿಯವರೆಗೆ ನಾವು ಅನ್ಯಭಾಷಾ ಪದ ಪ್ರಯೋಗವನ್ನು ಒಪ್ಪಿಕೊಳ್ಳಬಹುದಲ್ಲವೇ? ಮುಂಬಯಿ ಕನ್ನಡಿಗರ ಮಾತಿನಲ್ಲಿ ಅದೆಷ್ಟೋ ಹಿಂದಿ ಶಬ್ದಗಳು, ತಮಿಳುನಾಡು ಕನ್ನಡಿಗರ ಶಬ್ದ ಪ್ರಯೋಗದಲ್ಲಿ ತಮಿಳು ಶಬ್ದಗಳು ಅವರಿಗರಿವಿಲ್ಲದಂತೆಯೇ ಬೆರೆತುಕೊಂಡಿರುತ್ತವೆ. ಈ ಮಟ್ಟಕ್ಕೆ ಇಳಿಯದೆ, ಸಹ್ಯ ಭಾಷಾ ಸಾಮರಸ್ಯ ಸ್ವೀಕಾರಾರ್ಹ ಎಂಬ ಉದಾರ ಮನೋಭಾವದಿಂದಾಗಿಯೇ ಕನ್ನಡ ಇಂದು ಈ ಮಟ್ಟಕ್ಕೇರಿದೆ. ಆಂಗ್ಲ ಭಾಷೆಯಿಂದ ಬಂದ ಬಸ್ಸು, ಕಾರು ಮುಂತಾದ ಎರವಲು ಪದಗಳನ್ನು ಒಪ್ಪಿಕೊಳ್ಳುವ ನಾವು ನಮ್ಮದೇ ದೇಶೀ ಭಾಷೆಗಳ ಪದಗಳನ್ನು ಕನ್ನಡಕ್ಕೆ ತಂದುಕೊಂಡರೆ ಭಾಷೆ ಸಮೃದ್ಧಿಯಾಗುವುದಿಲ್ಲವೇ? ಎಂಬುದು ಎಲ್ಲರೂ ಯೋಚಿಸಬೇಕಾದ ಪ್ರಶ್ನೆ.
ಈ ನಿಟ್ಟಿನಲ್ಲಿ ಭಾಷಾ ಸಾಫ್ಟ್‌ವೇರ್‌ನ ಕ್ರಾಂತಿ ಎಂದೇ ಪರಿಗಣಿಸಲಾಗಿರುವ ಯುನಿಕೋಡ್ ಎಂಬುದು ಹುಟ್ಟುಹಾಕಿರುವ ಅಕ್ಷರ ಕ್ರಾಂತಿ ಇಲ್ಲಿ ಉಲ್ಲೇಖಾರ್ಹ. (ಯುನಿವರ್ಸಲ್ ಕೋಡ್-ಯುನಿಕೋಡ್ ಅಂದರೆ ಇಲ್ಲಿ ಯಾವುದೇ ಭಾಷೆಯನ್ನು, ಯಾವುದೇ ವಿಶೇಷ ಅಕ್ಷರ ಸಂಬಂಧಿತ (ಉದಾಹರಣೆಗೆ ನುಡಿ, ಬರಹ, ಶ್ರೀಲಿಪಿ ಇತ್ಯಾದಿ) ಸಾಫ್ಟ್‌ವೇರ್ ಅಳವಡಿಸಿಕೊಳ್ಳದೆಯೇ, ಈ ಫಾಂಟ್ ಕೋಡ್ ಮೂಲಕ ನೋಡಬಹುದು, ಓದಬಹುದು, ಅದೇ ರೀತಿಯಾಗಿ ಯುನಿವರ್ಸಲ್ (ವಿಶ್ವವ್ಯಾಪಿ) ಭಾಷೆಯೂ ಮುಂದೆ ಮೂಡಿಬರಬಹುದೇ? ಕಾದು ನೋಡಬೇಕಾದ ಅಂಶ.
ರಾಜಕೀಯ ಇಚ್ಛಾಶಕ್ತಿ ಕೊರತೆ ಇನ್ನು, ಕನ್ನಡಕ್ಕೂ 'ಕ್ಲಾಸಿಕಲ್' ಸ್ಥಾನಮಾನ ಬೇಕೆಂಬ ತುಡಿತ ಆರಂಭವಾಗಿರುವುದು ಕೂಡ 2004ರಲ್ಲಿ ತಮಿಳಿಗೆ ಈ ಪದವಿ ದೊರೆತ ಮೇಲೆಯೇ. ಪಂಚದ್ರಾವಿಡ ಭಾಷೆಗಳಲ್ಲೊಂದಾದ, ನಮ್ಮದೇ ಸೋದರ ಭಾಷೆ ತಮಿಳಿಗೇ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ಲಭಿಸಿರುವಾಗ, ತಮಿಳನ್ನೇ ಆದರ್ಶವಾಗಿಟ್ಟುಕೊಂಡಿರುವ ಒಂದು ವರ್ಗವು, ನಮಗೂ ತಮಿಳಲ್ಲಿ ಇರುವಂತೆ ಮಹಾಪ್ರಾಣಾಕ್ಷರಗಳು ಬೇಡ, ಸಂಸ್ಕೃತ ಪದಗಳನ್ನು ಬಳಸಕೂಡದು ಎಂಬಿತ್ಯಾದಿ ವಾದ-ವಿವಾದಗಳು ಅಂತರ್ಜಾಲ ಪುಟಗಳನ್ನು ಸಾಕಷ್ಟು ಮಟ್ಟಿಗೆ ತುಂಬಿರುವುದನ್ನು ನಾವು ಗಮನಿಸಬಹುದು.
ತಮಿಳರು ಸಂಸ್ಕೃತವನ್ನು ದ್ವೇಷಿಸಿದರು ಯಾಕೆ? ಅವರಲ್ಲಿ ಅಕ್ಷರಗಳ ಕೊರತೆಯಿರುವುದು ಕೂಡ ಇದಕ್ಕೆ ಪ್ರಧಾನ ಕಾರಣ. ಅದೇ ಕಾರಣಕ್ಕೆ ಅವರು ಹಿಂದಿಯನ್ನೂ, ಅದರ ದೇವನಾಗರಿ ಲಿಪಿಯನ್ನೂ ದ್ವೇಷಿಸುತ್ತಾರೆ. ವ್ಯಂಜನಾಕ್ಷರಗಳು ಕಡಿಮೆ ಇವೆಯಾದರೂ, ಅದನ್ನವರು ಹಲಂತ ಅಕ್ಷರಗಳಲ್ಲಿ ಸರಿದೂಗಿಸಿಕೊಂಡಿದ್ದಾರೆ. ಇಕ್, ಇಙ್, ಇಚ್, ಇಮ್ ಎಂಬಿತ್ಯಾದಿಯಾಗಿ ಅವರು ಉಚ್ಚರಿಸುತ್ತಾರೆ ಮತ್ತು ಈ ಅಕ್ಷರಗಳೂ ಅಲ್ಲಲ್ಲಿ ಕೂಡಿಕೆಯಾಗುತ್ತವೆ. ಅಕ್ಷರಗಳ ಸಂಖ್ಯೆ ಕಡಿಮೆ ಇದೆ ಎಂಬ ಮಾತ್ರಕ್ಕೆ ನೀವದನ್ನು ಶಾಸ್ತ್ರೀಯವಾಗಿ ಕಲಿಯಲು ಮುಂದಾದೀರೋ... ಗೊಂದಲದ ಸುಳಿಯಲ್ಲಿ ಸಿಲುಕುತ್ತೀರಿ. ಅಲ್ಲಿ ಬರೆವಣಿಗೆಯ ಭಾಷೆಗಿಂತಲೂ ಉಚ್ಚಾರದ ಭಾಷೆಗಿರುವ ಮಹತ್ವದಿಂದಾಗಿಯೇ ಅವರು ಜೀವನ ಮಾಡುತ್ತಾರೆ. ಪಾಪಿ ಎಂದರೆ ಭಾಭಿ ಅಂತ ಸಾಮಾನ್ಯವಾಗಿ ತಮಿಳು ಕಲಿತ ಅನ್ಯಭಾಷಿಗರು ಓದಿಕೊಳ್ಳಬಹುದು. ನಮ್ಮಂಥ ಹೊರಗಿನಿಂದ ಬಂದವರು ಈ ನಿಟ್ಟಿನಲ್ಲಿ ತಿಣುಕಾಡುವಷ್ಟು ಬೇರಾರೂ ತೊಂದರೆ ಪಟ್ಟುಕೊಳ್ಳಲಾರರು. ಹೀಗಾಗಿ ತಮಿಳನ್ನು ಅರಿತವರಿಗೆ, ಅದರ ಓದುವ ಸಂಸ್ಕೃತಿಯನ್ನು ರೂಢಿಸಿಕೊಂಡವರು ಮಾತ್ರವೇ ಯಾವುದೇ ಪದವಿನ್ಯಾಸವನ್ನು ಸರಿಯಾಗಿ ಓದಬಲ್ಲರು ಯಾ ಉಚ್ಚರಿಸಬಲ್ಲರು. ತಮಿಳಿನಲ್ಲಿ ಧ್ವನ್ಯಾತ್ಮಕ ಅಕ್ಷರಗಳ ಕೊರತೆಯಿಂದ ತಮಿಳರಲ್ಲದವರಿಗೆ ಉಂಟಾಗಬಹುದಾದ ಸಮಸ್ಯೆಯನ್ನು ಹೇಳುವುದಕ್ಕಷ್ಟೇ ಈ ವಿಷಯ ಇಲ್ಲಿ ಉಲ್ಲೇಖಿಸಿದ್ದೇ ಹೊರತು, ಆ ಭಾಷೆಯನ್ನು ದೂಷಿಸುವುದು ಉದ್ದೇಶವಲ್ಲ.
ಭಾಷೆ ಎಂಬುದು ತಮಿಳು ರಕ್ತದ ಕಣಕಣದಲ್ಲಿಯೂ ಸ್ವಲ್ಪ ಹೆಚ್ಚೇ ಎಂಬಷ್ಟರ ಮಟ್ಟಿಗೆ ಹರಿದಾಡುತ್ತಿದೆ. ನಮ್ಮದೇ ಮೇಲ್ಮಟ್ಟದ ಭಾಷೆ, ನಮ್ಮ ಭಾಷೆಗೆ ಬೇರೆ ಯಾರದೇ ಹಂಗಿಲ್ಲ, ಬೇರೆ ಭಾಷೆಗಳ ಶಬ್ದ ನಮಗೆ ಬೇಡ, ಉಚ್ಚಾರ ಬೇಡ ಎಂಬುದನ್ನು ಅವರು ಹೆಗ್ಗಳಿಕೆಯಿಂದಲೇ ಹೇಳಿಕೊಳ್ಳುತ್ತಾರೆ.
ಈಗಷ್ಟೇ ಕನ್ನಡಕ್ಕೆ ಕ್ಲಾಸಿಕಲ್ ಪಟ್ಟ ಸಿಕ್ಕಿದೆ. ಈ ಕ್ಲಾಸಿಕಲ್ ಎಂಬುದಕ್ಕೆ ಸಂವಾದಿ ಪದವಾಗಿ 'ಶಾಸ್ತ್ರೀಯ' ಎಂಬುದು (ಶಾಸ್ತ್ರಬದ್ಧವಾದ ಎಂಬರ್ಥ) ಸರಿಯೇ ಅಥವಾ ಅದನ್ನು 'ಅಭಿಜಾತ' ಭಾಷೆ ಎಂದು ಭಾಷಾಂತರಿಸಬೇಕೇ ಎಂಬ ಬಗೆಗೂ ವಾಗ್ವಿವಾದಗಳಿವೆ. ಇವನ್ನೆಲ್ಲಾ ಒತ್ತಟ್ಟಿಗಿಟ್ಟರೆ, ಒಕ್ಕೂಟ ವ್ಯವಸ್ಥೆಯಲ್ಲಿ ಸಮಾನತೆ ಬೇಕು, ಈ ಕಾರಣಕ್ಕೆ ತಮಿಳಿಗೆ ನಾಲ್ಕು ವರ್ಷಗಳ ಹಿಂದೆಯೇ ಅದರ ಕಣ್ಣಿಗೆ ಬೆಣ್ಣೆ, ಕನ್ನಡದ ಕಣ್ಣಿಗೆ ಸುಣ್ಣ ಎಂಬಂಥ ತಾರತಮ್ಯ ಮಾಡಿದ್ದೇಕ ೆ? ಎಂಬುದರ ಹಿಂದೆ ಹೋದರೆ ರಾಜಕೀಯ ಕಾರಣಗಳೇ ಢಾಳಾಗಿ ಕಾಣಿಸುತ್ತವೆ.
ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು ಹೇಗೆ? ಈ ಕುರಿತು ನಾವೂ ಒಂದಷ್ಟು ವಿಚಾರಗಳನ್ನು ಅರಿತುಕೊಳ್ಳಬೇಕು. ಇದಕ್ಕೆ ರಾಜಕೀಯ ಕಾರಣವೂ ಇದೆ. ಕೇಂದ್ರದಲ್ಲಿ ಯಾರೇ ಅಧಿಕಾರಕ್ಕೆ ಬರಲಿ, ರಾಜ್ಯದಲ್ಲಿರುವ ಸರಕಾರವು ಅವರ ಜೊತೆ ಕೈಜೋಡಿಸಿ, ಕೇಂದ್ರದ ಸರಕಾರ ಸೇರಿಕೊಂಡು ತಮಿಳನ್ನು, ತಮಿಳುನಾಡನ್ನು ವಿಶ್ವಭೂಪಟದಲ್ಲಿ ಮೇಲೆತ್ತುವಲ್ಲಿ ಸಮರ್ಥರಾಗಿರುತ್ತಾರೆ. ಇದೊಂಥರಾ ಬೇಳೆ ಬೇಯಿಸಿಕೊಳ್ಳುವ ವಿಧಾನ ಅಂತ ನಾವು ಹೀಯಾಳಿಸಿದರೂ, ತಮಿಳುನಾಡು ಮತ್ತು ಅವರ ಭಾಷೆ ಸಾಕಷ್ಟು ಮಟ್ಟಿಗೆ ಅಭಿವೃದ್ಧಿಯಾಗಿರುವುದು ಇದೇ ಕಾರಣಕ್ಕೆ ಎಂಬುದರಲ್ಲಿ ಎರಡು ಮಾತಿಲ್ಲ.
ಹಾಗಿದ್ದರೆ ಕರ್ನಾಟಕದಲ್ಲಿ? ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವು ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುತ್ತದೆ, ರಾಜಕೀಯ ಕಟ್ಟುಪಾಡುಗಳಿಂದಾಗಿ (ಕ್ರೆಡಿಟ್ ಹೋಗುತ್ತದೆ ಎಂಬ ಕಾರಣಕ್ಕೆ) ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಕನ್ನಡಕ್ಕಾಗಿ ಒಟ್ಟಾಗಿ ಕೈಯೆತ್ತುವಲ್ಲಿ, ಕೈಜೋಡಿಸುವಲ್ಲಿ ವಿಫಲರಾಗುತ್ತಾರೆ. ತೀರಾ ಇತ್ತೀಚಿನ ವಿದ್ಯಮಾನಗಳನ್ನೇ ಗಮನಿಸಿ. ಶಾಸ್ತ್ರೀಯ ಭಾಷೆ ಸ್ಥಾನ ಮಾನ ಕೊಡಿಸಿ ಎಂದು ಕೇಂದ್ರವನ್ನು ಕೋರಲು ತೆರಳುವ ನಿಯೋಗದಲ್ಲಿ "ನಾ ಬರುವುದಿಲ್ಲ, ತಾ ಬರುವುದಿಲ್ಲ" ಎಂದು ಹೇಳುವ ಪಕ್ಷಗಳು, ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲವಾಗಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಇದರ ಮಧ್ಯೆಯೇ, ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಒತ್ತಾಯದ ಹೋರಾಟ ತೀವ್ರವಾಗುತ್ತಿದೆ, ಇದು ರಾಜ್ಯದಲ್ಲಿ ಅಧಿಕಾರಕ್ಕಿರುವ ಪಕ್ಷಕ್ಕೆ ದೊಡ್ಡ ಆಯುಧವಾಗುತ್ತದೆ ಎಂದು ಮನಗಂಡ ಕೇಂದ್ರದ ಸರಕಾರವು, ದಿಢೀರ್ ಆಗಿ ಶಾಸ್ತ್ರೀಯ ಸ್ಥಾನಮಾನ ಘೋಷಿಸಿಬಿಟ್ಟಿದೆ. ಇದು ರಾಜಕೀಯದ ಅತ್ಯಂತ ದೊಡ್ಡ ಉದಾಹರಣೆಯಾದರೂ ಇಲ್ಲಿ ಕನ್ನಡಕ್ಕೆ ಲಾಭವಾಯಿತು ಎಂದು ಹೇಳಿಕೊಳ್ಳಲಡ್ಡಿಯಿಲ್ಲ. ಅಲ್ಲವೇ?
ಕೊನೆಗೊಂದು ಮಾತು. ಭಾರತೀಯ ಭಾಷೆಗಳಲ್ಲಿರುವ ಧ್ವನಿ ವೈವಿಧ್ಯವನ್ನು ಅತ್ಯಂತ ಸಮರ್ಪಕವಾಗಿ ಬಿಂಬಿಸಬಲ್ಲ ತಾಕತ್ತು ಕನ್ನಡದ ಅಕ್ಷರಗಳಿಗಿದೆ ಎಂಬುದಂತೂ ಎಲ್ಲರೂ ಒಪ್ಪತಕ್ಕ ವಿಚಾರ. ಬೇರೆಯದಕ್ಕೆ ನಮ್ಮ ಭಾಷೆಯ ಹೋಲಿಕೆ ಬೇಡ, ನಮ್ಮ ಭಾಷೆಯನ್ನು ನಾವೇ ಉತ್ತುಂಗಕ್ಕೇರಿಸೋಣ. "ಕುರಿತೋದುದೆಯುಂ ಕಾವ್ಯಪ್ರಯೋಗಪರಿಣತ ಮತಿ"ಗಳಾಗಿರುವ ಕನ್ನಡಿಗರ ಸಿರಿ ಕನ್ನಡವನ್ನು ಮತ್ತಷ್ಟು ಸುಪುಷ್ಟವಾಗಿಸಲು ಪೂರ್ವಗ್ರಹರಹಿತ, ಸಂಘಟಿತ ಪ್ರಯತ್ನ ಮಾಡೋಣ. ಕನ್ನಡ ಉಲಿಯುವ ಬಗ್ಗೆ ಹೆಮ್ಮೆ ಪಡೋಣ, ಕನ್ನಡವನ್ನು ಮತ್ತಷ್ಟು ಸಮೃದ್ಧವಾಗಿಸೋಣ, ಕನ್ನಡದ ರಾಜ್ಯೋತ್ಸವವನ್ನು ನಿತ್ಯೋತ್ಸವವಾಗಿಸೋಣ.