Webdunia - Bharat's app for daily news and videos

Install App

ಅರಸ್ತಾನ ಅರಸುತ್ತಾ...ಹುಟ್ಟಿದ 'ಪ್ರೀತಿ'

Webdunia
ಹಂಝ ಮಲಾರ್

ಹಶೀರ್ ಆ ವಾರ ಪತ್ರಿಕೆಯ ಪುಟಗಳನ್ನು ತಿರುವುತ್ತಾ ಹೋದ. ಆಗಾಗ ಬಾಯಿಗೆ ಬೆರಳು ಹಾಕಿ, ಉಗುರು ಕಚ್ಚಿ, ಕಿಟಿಕಿಯಿಂದ ತೂರಿ ಬರುವ ಗಾಳಗೆ ಮುಖ ಒಡ್ಡುತ್ತಾ "ಸಂಪರ್ಕ ಸೇತುವೆ " ಎಂಬ ವಿಭಾಗವನ್ನು ಗಮನಿಸಿದ. ಪ್ರತೀ ವಾರ ಅವನು ಆ ವಿಭಾಗಕ್ಕೆ ಒಮ್ಮೆ ಕಣ್ಣು ಹಾಯಿಸುತ್ತಾನಾದರೂ ಅದರ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡವನಲ್ಲ. ವಯಸ್ಸು, ಹುದ್ದೆ, ಅಭಿರುಚಿ, ಹವ್ಯಾಸ ಇತ್ಯಾದಿ ಎಲ್ಲಾ ಮಾಮೂಲಿ , ಅದನ್ನು ಕಟ್ಟಿಕೊಂಡು ನನಗೆ ಏನಾಗಬೇಕಿದೆ ಎಂದು ಭಾವಿಸಿ ಸುಮ್ಮನಾಗುತ್ತಿದ್ದ. ಆದರೆ ಇಂದು ಆ ವಿಭಾಗವನ್ನು ನೋಡಿದ ಅವನಿಗೆ ಅದ್ಯಾಕೋ, ಆ ಒಂದು ಹೆಸರು ರಾರಾಜಿಸತೊಡಗಿತು. ಅವನು ಆ ವಿಭಾಗವನ್ನಿಡೀ ಕುತೂಹಲದಿಂದ ಓದಿದ. ಎಲ್ಲೂ ಕೂಡ ಅಂಥ ಒಂದು ಹೆಸರು, ವಿದ್ಯೆ, ವಯಸ್ಸು, ಊರು, ಅಭಿರುಚಿಯ ವಿವರವಿರುವುದು ಕಾಣಲಿಲ್ಲ. ಈ ವಿಳಾಸಕ್ಕೊಂದು ಪತ್ರ ಬರೆಯಲಾ?"-ಹಶೀರ್ ತನ್ನಲ್ಲೇ ಕೇಳಿಕೊಂಡರೂ "ಬೇಡ, ಆಕೆ ಅಪಾರ್ಥ ಕಲ್ಪಿಸಿದರೆ? " ಎನ್ನುತ್ತಾ ಹಿಂಜರಿದ. "ಸಂಶಯಿಸುವುದು ಯಾಕೆ, ಆಕೆ ಈ ವಿಭಾಗಕ್ಕೆ ತನ್ನ ಹೆಸರು ಮತ್ತಿತ್ಯಾದಿ ವಿವರವನ್ನು ಬರೆದಿರುವುದು ಸಂಪರ್ಕ ಸಾಧಿಸಲು ಅಲ್ಲವೇ?" ಎಂದೂ ಕೇಳಿಕೊಂಡ. ಅವನ ಮನಸ್ಸು ಕಸಿವಿಸಿಯಾಯಿತು.

ಮತ್ತೊಮ್ಮೆ ಅದನ್ನು ಓದಿದ ಹೆಸರು: ಮುಬೀನ್ ವಯಸ್ಸು:19 ವರ್ಷ. ಅಭಿರುಚಿ: ಕಥೆ, ಕಾದಂಬರಿ ಓದುವುದು, ಸಂಗೀತ ಕೇಳುವುದು, ವಾಕಿಂಗ್, ಪ್ರವಾಸ. ಹಾಗೇ ಆಕೆಯ ಊರ ಹೆಸರನ್ನು ಗಮನಿಸಿದ. ಅದು ತನ್ನೂರಿಗಿಂತ ಕೇವಲ ಏಳು ಕಿ.ಮೀ. ದೂರದಲ್ಲಿದೆ ಎಂದು ಖಚಿತಪಡಿಸಿದ. ಅವಳ ಹೆಸರಷ್ಟೇ ಅಲ್ಲ, ಊರಿನ ಹೆಸರು ಕೂಡಾ ಮುದ್ದಾಗಿದೆ. ಅರಸ್ತಾನ!. ಇಂಥ ಊರ ಹೆಸರನ್ನು ಅವ ಎಲ್ಲೂ ಕೇಳಲಿಲ್ಲ. ಯಾಕೆ ಅಂಥ ಹೆಸರು ಬಂತು? ಎಂದು ಒಮ್ಮೆ ಅವ ತಲೆ ಕೆಡಿಸಿಕೊಳ್ಳುತ್ತಾ , ಯಾವುದಕ್ಕೂ ಮುಬೀನ್‌‌‌‌ಳಿಗೊಂದು ಪತ್ರ ಬರೆಯುವ. ಆಕೆ ಪ್ರತಿಯಾಗಿ ಪತ್ರ ಬರೆದರೆ , ಸ್ನೇಹ ಮುಂದುವರಿಸುತ್ತಾ ನಿನ್ನೂರಿಗೆ ಅರಸ್ತಾನ ಎಂಬ ಹೆಸರು ಯಾಕೆ ಬಂತು ಎಂದು ಕೇಳೋಣ ಎಂದು ಭಾವಿಸಿದ.

ಅಂದು ರಾತ್ರಿ ಇಡೀ ಕೂತು ಅವಳಿಗೊಂದು ಪತ್ರ ಬರೆದ. ಅವನ ಜೀವಮಾನದಲ್ಲಿ ಒಂದೇ ಒಂದು ಪ್ರೇಮ ಪತ್ರವನ್ನು ಬರೆದವನಲ್ಲ. ಹಾಗಾಗಿ ಏಳೆಂಟು ಪತ್ರಗಳನ್ನು ಬರೆಯುತ್ತಲೇ ಅದರಲ್ಲಿ ಯಾವುದೋ ಒಂದು ತಪ್ಪು ಅಥವಾ ಕೊರತೆ ಇರುವುದನ್ನು ಗಮನಿಸಿ ಮುದ್ದೆ ಮಾಡಿ ಅಲ್ಲೇ ರಾಶಿ ಹಾಕಿದ. ತಾನು ಬರೆದ ಈ ಪತ್ರ ಯಾವ ಕಾರಣಕ್ಕೂ ಮನೆಯವರ ಕಣ್ಣಿಗೆ ಬೀಳಬಾರದು. ಇದನ್ನೆಲ್ಲಾ ಒಲೆಗೆ ಹಾಕಿ ಸುಡಬೇಕೆಂದು ನಿರ್ಧರಿಸಿದ್ದ. ಅಂತೂ ರಾತ್ರಿ ಹನ್ನೆರಡು ಗಂಟೆ ಬಡಿಯುವಷ್ಟರಲ್ಲಿ ಅವನೊಂದು ಪತ್ರ ಬರೆದು ಮುಗಿಸಿದ್ದ. ತನ್ನ ಕೋಣೆಯ ಬಾಗಿಲು ಮುಚ್ಚಿ ಒಂದು ಡಿಮ್ ಬಲ್ಬ್ ಉರಿಸಿದ್ದರಿಂದ ಮನೆಯವರಿಗೆ ತಾನಿನ್ನೂ ಎಚ್ಚರದಲ್ಲಿರುವುದು ಗೊತ್ತಾಗದಂತೆ ನೋಡಿಕೊಂಡಿದ್ದ.

ಪತ್ರ ಬರೆದ ಮೇಲೆ ಅವನಿಗೆ ಖುಷಿಯಾಯಿತಾದರೂ ಅದನ್ನು ಆಕೆಗೆ ಅಂಚೆ ಮೂಲಕ ಕಳುಹಿಸಿಕೊಡಬೇಕೇ? ಬೇಡವೇ? ಎಂಬ ಸಂಧಿಗ್ದತೆಗೆ ಸಿಲುಕಿದ. ತಾನು ಬರೆದ ಆ ಪತ್ರವನ್ನು ಮತ್ತೊಮ್ಮೆ ಓದತೊಡಗಿದ. ಮುಬೀನ್, ನಾನು ಮೊದಲ ಬಾರಿಗೆ ಒಬ್ಬಳು ಹುಡುಗಿಗೆ ಬರೆಯುವ ಪತ್ರ ಇದಾಗಿದೆ. ನಿನ್ನನ್ನು ಪ್ರಿಯೆ ಎನ್ನಲೇ? ಗೆಳತಿ ಎನ್ನಲೇ? ಎಂದು ಗೊತ್ತಾಗುತ್ತಿಲ್ಲ. ನನ್ನ ನೆಚ್ಚಿನ ವಾರ ಪತ್ರಿಕೆಯಲ್ಲಿ ಪ್ರಕಟವಾದ ಸಂಪರ್ಕ ಸೇತುವೆ ವಿಭಾಗವನ್ನು ಗಮನಿಸಿದೆ. ಯಾವತ್ತೂ ನಾನು ಅದರ ಬಗ್ಗೆ ಹೆಚ್ಚಾಗಿ ಗಮನಹರಿಸಿದವನಲ್ಲ. ಈ ವಾರ ಯಾಕೋ ಗಮನ ಹರಿಸಿದೆ. ಅದರಲ್ಲಿ ಮುಬೀನ್ ಅಂತ ಮೂರೂವರೆ ಅಕ್ಷರದ ನಿನ್ನ ಹೆಸರಿದ್ದ ಕಾರಣವೋ ಗೊತ್ತಿಲ್ಲ, ಇಡೀ ಪುಟವನ್ನೇ ಗಮನಿಸಿದೆ. ಯಾಕೋ ನಿನ್ನ ಹೆಸರು, ಊರ ಹೆಸರು, ಅಭಿರುಚಿ ಇತ್ಯಾದಿ ನನಗೆ ತುಂಬಾ ಇಷ್ಟವಾದವು. ನಾನು ಒಂದಲ್ಲ ಮೂರು ಬಾರಿ ಅದನ್ನು ಓದಿದೆ. ನಿನ್ನದೇ ಅಭಿರುಚಿ ನನ್ನದು ಎಂದೂ ಮನಸ್ಸು ಹೇಳಿಕೊಳ್ಳತೊಡಗಿತು. ಹಾಗಾಗಿ ನಾನು ಈ ಪತ್ರ ಬರೆಯುತ್ತಿರುವೆ. ಮೊದಲೇ ಹೇಳಿದಂತೆ ನನಗೆ ಹುಡುಗಿಯರಿಗೆ ಪತ್ರ ಬರೆದು ಗೊತ್ತಿಲ್ಲ. ಅದರಲ್ಲಿ ನಾನು ಅನನುಭವಿ. ನಿನಗೆ ಇಷ್ಟವಾದರೆ ಅಥವಾ ಸಾಧ್ಯವಾದರೆ ನನಗೊಂದು ಪತ್ರ ಬರೆ. ಅಕ್ಷರ ಚೆನ್ನಾಗಿಲ್ಲದಿದ್ದರೂ ಚಿಂತಿಲ್ಲ, ಓದಿ ಅರ್ಥೈಸಿಕೊಳ್ಳುವೆ.

ಇತೀ ನಿನ್ನ ಹಶೀರ್

ಅಕ್ಷರ ಚಿತ್ತಾಗಿಲ್ಲ ಎಂಬ ಸಮಾಧಾನ ಅವನಿಗಾಯಿತು. ಹಾಗೇ ಒಂದು ಕವರ್ ನ ಒಳಗೆ ಅದನ್ನು ಹಾಕಿ ಮುಚ್ಚಿದ. ನಾಳೆ ನಾನೇ ಕಛೇರಿಗೆ ಹೋಗಿ ಪೋಸ್ಟ್ ಮಾಡಬೇಕು ಎಂದು ನಿರ್ಧರಿಸಿದ. ಆ ರಾತ್ರಿ ಅವನಿಗೆ ಸವಿ ನಿದ್ದೆ. ಮುಂಜಾನೆ ಎದ್ದೊಡನೆ ಯಾವಾಗ ಅಂಚೆ ಕಛೇರಿಯ ಬಾಗಿಲು ತೆರೆಯುತ್ತದೋ ಎಂದು ಕಾದು ಕುಳಿತ. ಅತ್ತಿತ್ತ ನಡೆದೋಡುತ್ತಲೇ ಸಮಯ ಸವೆಸಿದ. ಎಂಟು ಗಂಟೆಗೆ ಐದು ನಿಮಿಷ ಇರುವಾಗಲೇ ಅಂಗಳದಿಂದ ಕಾಲು ಹೊರಗಿಟ್ಟ. ತನ್ನ ಐದು ಬೆರಳನ್ನು ತೋರಿಸಿ , ಕಣ್ಣು ಬಾಯಿಯನ್ನೆಲ್ಲಾ ಹೊರಳಾಡಿಸಿ ಐದು ರೂಪಾಯಿಯ ಸ್ಟ್ಯಾಂಪ್ ಕೇಳಿದ. ಆ ಪೋಸ್ಟ್ ಮಾಸ್ಟರ್‌ಗೆ ಹಶೀರ್‌ನ ಪರಿಚಯ ಇದ್ದ ಕಾರಣ ಆಕೆ ಅವನನ್ನು ವಿಚಿತ್ರವಾಗಿ ನೋಡುವ ಪ್ರಯತ್ನ ಮಾಡಲಿಲ್ಲ್ಲ.ಅಂಚೆ ಡಬ್ಬಿಗೆ ಆ ಪತ್ರ ಹಾಕಿ ಮನೆಗೆ ಹೆಜ್ಜೆ ಹಾಕುತ್ತಲೇ ಹಶೀರ್‌ಗೆ ದುಗುಡ ಶುರುವಾಯಿತು. ಅವನು ತನ್ನ ಜೀವಮಾನದಲ್ಲಿ ಆ ಪರಿ ಭಯಗೊಂಡಿರಲ್ಲಿಲ್ಲ. ನನ್ನ ಪತ್ರಕ್ಕೆ ಮುಬೀನ್ ಪ್ರತಿಕ್ರಯಿಸಿಯಾಳೇ? ಅವಳ ತಂದೆ ತಾಯಿ ಅಥವಾ ಅಣ್ಣಂದಿರಿಗೆ ಅದು ಸಿಕ್ಕಿದರೆ? ಅವರು ನಾಳೆ ನನ್ನ ವಿಳಾಸ ಹುಡುಕಿಕೊಂಡು ಬಂದು ಹೊಡೆದರೆ ? ಎಂದು. ಯೋಚಿಸುತ್ತಾ, ಅವಳಿಗೆ ಅಣ್ಣಂದಿರು ಇರಲಿಕ್ಕಿಲ್ಲ ಎಂದು ಮತ್ತೊಮ್ಮೆ ತನ್ನನ್ನೇ ಸಮಾಧಾನ ಪಡಿಸುತ್ತಾ ಮನೆಯೊಳಗೆ ಹೊಕ್ಕ. ತನ್ನ ರೂಮಿನೊಳಗೆ ಕಾಲಿಟ್ಟು ತಲೆ ದಿಂಬಿಗೆ ಮುಖವಿಟ್ಟು ಮಲಗಿದ.

ಅವನ ಮೂಗಿಗೆ ತನ್ನದೇ ಬೆವರಿನ ವಾಸನೆ ಬಡಿಯಿತು. ನಾನು ಬರೆದ ಪತ್ರ ನಾಳೆ ಅವಳ ಕೈ ಸೇರಲಿದೆ. ಅವಳು ನಾಳೆಯೇ ಅದಕ್ಕೆ ಪ್ರತಿಕ್ರಿಯೆ ಬರೆದು ಅಂಚೆ ಡಬ್ಬಿಗೆ ಹಾಕಿದರೆ, ನಾಡದು ಆ ಪತ್ರ ನನ್ನ ಕೈ ಸೇರಲಿದೆ. ಒಂದು ವೇಳೆ ಆಕೆ ಅದಕ್ಕೆ ಸ್ಪಂದಿಸದಿದ್ದರೆ ಮತ್ತೆಂದೂ ಅವಳಿಂದ ಪತ್ರ ಬರಲಿಕ್ಕಿಲ್ಲ ಅಥವಾ ನನಗಿಂತ ಮುಂಚೆಯೇ ಅವಳಿಗೆ ಯಾರಾದರೂ ಟೆಲಿಗ್ರಾಂ ಮಾಡಿದರೆ...? ಹೀಗೆ ಅವನ ಆಲೋಚನಾ ಲಹರಿ ಸಾಗುತ್ತಿತ್ತು. ಎಷ್ಟು ಹೊತ್ತಾದರೂ ಅವನಿಗೆ ಅದರಿಂದ ವಿರಮಿಸಲು ಆಗಲಿಲ್ಲ. ಆವತ್ತು ನಾಲ್ಕನೇ ದಿವಸ. ಹಶೀರ್ ಆ ದಿನ ಅಂಚೆಯವನನ್ನೇ ಎದುರು ನೋಡತೊಡಗಿದ. ತನಗೆ ಇವತ್ತೊಂದು ಪತ್ರ ಬರಲಿದೆ ಎಂಬ ನಿರೀಕ್ಷೆಯಲ್ಲಿ ಅವ ತೇಲತೊಡಗಿದ.
ಹಶೀರ್‌ನ ವರ್ತನೆ ಅವನ ತಾಯಿಗೆ ಅರ್ಥವಾಗಲಿಲ್ಲವಾದರೂ ಕೈ ಭಾಷೆಯಲ್ಲೇ ಏನೂಂತ ಕೇಳಿದರು. ಆದರೆ ಹಶೀರ್ ಅದಕ್ಕೆ ತನ್ನ ಕೈ ಭಾಷೆ ಪ್ರಯೋಗಿಸಲಿಲ್ಲ. ಸ್ವಲ್ಪ ಹೊತ್ತಿನ ಅಂಚೆಯವ ಆ ಮನೆಯ ಅಂಗಳ ತುಳಿದ. ಅದು ರಿಜಿಸ್ಟರ್ ಅಂಚೆಯಾಗಿತ್ತು. ಹಶೀರ್ ಎಂದು ಕೂಗಿದೊಡನೆ ಅವ ಹೊರ ಬಂದ. ಹಾಗೇ ಅವ ತೋರಿಸಿದ ಕಡೆಗೆ ತನ್ನ ಸಹಿ ಹಾಕಿ ಆ ಪತ್ರವನ್ನೊಮ್ಮೆ ಇಡಿಯಾಗಿ ನೋಡಿದ. ಅಲ್ಲೇ ನಿಂತಿದ್ದ ಅವನ ತಾಯಿಗೆ ಆ ಪತ್ರ ಕಂಡು ಆಶ್ಚರ್ಯವಾಯಿತು. ಅದು ಯಾರ ಕಾಗದ ? ಎಂದು ಅವರು ಕೈ ಭಾಷೆಯಲ್ಲೇ ಕೇಳಿದರು. ಆದರೆ ಹಶೀರ್ ಸುಮ್ಮನೆ ನಕ್ಕು ತನ್ನ ಕೋಣೆಯ ಕದ ಮುಚ್ಚಿ ಆ ಪತ್ರವನ್ನು ಮೆಲ್ಲನೆ ಒಡೆದ. ನನ್ನ ಪ್ರೀತಿಯ ಹಶೀರ್‌ನಿಗೆ, ನೀನು ಬರೆದ ಪತ್ರ ಓದಿದೆ. ನಿನ್ನ ಧೈರ್ಯ ಮೆಚ್ಚುವಂತದ್ದು. ಖಂಡಿತಾ ಒಂದು ಪತ್ರ ಬಂದೀತು ಎಂದು ನಾನು ನಿರೀಕ್ಷಿಸಿದ್ದೆ. ಮೊದಲ ಪತ್ರ ನಿನ್ನದಾದ ಕಾರಣ ಮತ್ತು ನೀನು ಮನಬಿಚ್ಚಿ ಬರೆದಿದ್ದರಿಂದ ನಾನು ನಿನ್ನನ್ನು ನಿರಾಶೆಗೊಳಿಸಲಾರೆ. ನಿನ್ನ ಅಭಿರುಚಿ ಕೂಡಾ ನನ್ನಂಥಯೇ ಇದೆ ಎಂದು ತಿಳಿದು ತುಂಬಾ ಸಂತೋಷವಾಯಿತು. ಹಾಗಾಗಿ ನಿನ್ನ ಜತೆ ತುಂಬಾ ವಿಷಯ ಮಾತಾಡಲಿಕ್ಕಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಿನ್ನದೊಂದು ಫೋಟೋ ಇದ್ದರೆ ಕಳುಹಿಸು. ಆ ಮೇಲೆ ನನ್ನ ಫೋಟೋ ನಿನಗಎ ತಲುಪಿಸುವೆ.

ಇತೀ ನಿನ್ನ
ಮುಬೀನ್

ಆ ಅಕ್ಷರ ಮುದ್ದಾಗಿದ್ದವು.ಅದು ಅವನಿಗಿಂತಲೂ ಚೆನ್ನಾಗಿದ್ದವು. ಊರು, ತಾರೀಖು, ಸಹಿ ಇತ್ಯಾದಿಯನ್ನು ಗಮನಿಸಿದಾಗ ಅವಳು ಪತ್ರ ಬರೆಯುವುದರಲ್ಲಿ ಪಳಗಿದ್ದಾಳೆ ಎಂದು ಭಾವಿಸಿಕೊಂಡ. ನನ್ನ ಪ್ರೀತಿಯ ಎಂದು ಸಂಭೋಧಿಸಿ ಬರೆದಿದ್ದಾಳೆ. ಅಷ್ಟೇ ಅಲ್ಲ ನನ್ನದೊಂದು ಕೇಳಿದ್ದಾಳೆ. ಅದರರ್ಥ ನಾನು ಅವಳಿಗೆ ತುಂಬಾ ಇಷ್ಟವಾಗಿರಬೇಕು ಎಂದು ಭಾವಿಸಿಕೊಂಡ ಹಶೀರ್ ತನ್ನ ಫೋಟೋ ಎಲ್ಲಾದರೂ ಇದೆಯಾ ಎಂದು ಮನೆಯ ಕಪಾಟು, ಬ್ಯಾಗ್ ಮತ್ತಿತ್ಯಾದಿ ಕಡೆ ಹುಡುಕಾಡಿದ. ಆದರೆ ಎಲ್ಲೂ ಕೂಡಾ ಅವನ ಪಾಸ್‌ಪೋರ್ಟ್ ಅಥವಾ ಫುಲ್‌ಸೈಜ್ ಫೋಟೋ ಸಿಗಲಿಲ್ಲವಾದರೂ ಮತದಾನದ ಗುರುತು ಕಾರ್ಡ್ ಅವನ ಕೈಗೆ ಸಿಕ್ಕಿತು. ಆರು ವರ್ಷದ ಹಿಂದೆ ತೆಗೆದ ಫೋಟೋ ನೋಡಿ ಅವನಿಗೇ ವಾಕರಿಕೆ ಬಂತು. ಈ ಫೋಟೋವನ್ನು ಮುಬೀನ್‌ಗೆ ಕಳುಹಿಸಿದರೆ ಅವಳು ಇನ್ನೆಂದೂ ಕೂಡಾ ನನಗೆ ಮರು ಪತ್ರ ಬರೆಯಲಾರಳು ಎಂಬ ನಿರ್ಧಾರಕ್ಕೆ ಬಂದ.

ಆದರೆ ಮುಬೀನ್‌ಗೆ ಕಳುಹಿಸಲು ಚೆಂದದ ಫೋಟೋ ಇರಲಿಲ್ಲ. ಸ್ಟುಡಿಯೋಕ್ಕೆ ತೆರಳಿ ಹೊಸ ಫೋಟೋ ತೆಗೆಯಲಾ? ಆದರೆ ಅದಕ್ಕೆ ಹಣ ಎಲ್ಲಿ ಉಂಟು? ಉಮ್ಮನ ಸೂಪಿನೊಳಗಿನ ಕಾಗದದ ಅಡಿಯಲ್ಲಿ ಹಣ ಇರಬಹುದಾ? ಛೇ, ಕೈಯಲ್ಲಿ ನಯಾ ಪೈಸೆ ಇಲ್ಲದ ಮೇಲೆ ಹುಡುಗಿಯನ್ನು ಪ್ರೀತಿಸುವುದಕ್ಕೆ ಅರ್ಥ ಉಂಟಾ? ಎಂದೆಲ್ಲಾ ಅವನ ಮನಸ್ಸು ಕೇಳುತ್ತಿತ್ತು.ಆದರೆ ಆ ಸೂಪಿನೊಳಗೆ ಕೈ ಹಾಕಲು ಅವನಿಗೆ ಧೈರ್ಯವಿಲ್ಲ.ಹಾಗಾಗಿ ಮತ್ತೊಮ್ಮೆ ಇಡೀ ಮನೆಯನ್ನು ಜಾಲಾಡಿದ. ಎರಡು ವರ್ಷದ ಹಿಂದೆ ಅಕ್ಕನ ಮದುವೆ ಸಂದರ್ಭದಲ್ಲಿ ತೆಗೆದ ಫೋಟೋ ನೆನಪಾಯಿತು. ಯಾವುದೋ ಗುಂಪಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ತೆಗೆದ ಫೋಟೋ ಅದಾಗಿತ್ತು. ಅದಕ್ಕಾಗಿ ಮತ್ತಷ್ಟು ತಡಕಾಡಿದ. ಹಳೆಯ ಕಬ್ಬಿಣದ ಪೆಟ್ಟಿಗೆಯಲ್ಲಿ ಆ ಆಲ್ಬಮ್ ಕಾಣಿಸಿತು. ಗಬಕ್ಕನೆ ಅದನ್ನು ತೆಗೆದುಕೊಂಡು ಬಿಡಿಸತೊಡಗಿದ. ಅದರಲ್ಲೊಂದು ತನ್ನ ಫೋಟೋ ಇರುವುದು ಕಾಣಿಸಿತು. ಮುಖ ಅದ್ಭುತವಾಗಿ ಮೂಡಿ ಬಂದಿದೆ. ಆದರೆ ಮೊಣಕಾಲಿನ ಭಾಗ ಗೆದ್ದಲು ತಿಂದಿದೆ. ಈ ಫೋಟೋವನ್ನು ಕಳುಹಿಸಲಾ? ಗತಿ ಇಲ್ಲದವ ಎಂದು ಅವಳು ಹೇಳಿಕೊಳ್ಳಲಾರಳೇ? ಎಂದು ಹಶೀರ್ ಯೋಚಿಸಿದ. ಆದರೂ ಅವಳಿಗೊಂದು ತನ್ನ ಚೆಂದದ ಫೋಟೋ ಕಳುಹಿಸಲೇಬೇಕು ಎಂಬ ಹಠಕ್ಕೆ ಬಿದ್ದ. ಮಧ್ಯಾಹ್ನ ಊಟಮಾಡದೆಯೂ ಅದಕ್ಕಾಗಿ ತಲೆ ಕೆಡಿಸಿಕೊಂಡ. ಮಗನ ತೊಳಲಾಟ ತಾಯಿಗೆ ಆಶ್ಚರ್ಯವನ್ನುಂಟುಮಾಡಿತ್ತು.

ಮೂರ್ನಾಲ್ಕು ಬಾರಿ ಆಕೆ, ಮೋನೇ ಯಾಕೆ ಒಂಥರಾ ವರ್ತಿಸುತ್ತೀ?ಎಂದು ಕೇಳಿದರೂ ಹಶೀರ್ ಉತ್ತರಿಸಲಿಲ್ಲ. ಸಂಜೆಯಾಗುತ್ತಲೇ ಅವನಿಗೊಂದು ಉಪಾಯ ಹೊಳೆಯಿತು. ಅದರಂತೆ ತನ್ನ ಫೋಟೋದ ಕೆಳಭಾಗವನ್ನು ಕತ್ತರಿಸಿ ಅಣ್ಣನ ಸೊಂಟದ ಕೆಳಭಾಗವನ್ನು ಅದಕ್ಕೆ ಅಂಟಿಸಿದ. ಅರ್ಧಗಂಟೆಯೊಳಗೆ ಅವ ಎದ್ದು ನಿಂತಿದ್ದ. ಅವನ ಜಾಣ್ಮೆಗೆ ಅವನೇ ಆಶ್ಚರ್ಯಗೊಂಡ. ಆ ರಾತ್ರಿ ಮತ್ತೊಂದು ಪತ್ರ ಬರೆದ. ಅದರಲ್ಲಿ ಕೆಲವೊಂದು ಪ್ರೇಮಭರಿತ ವಾಕ್ಯಗಳೂ ಸೇರಿಕೊಂಡಿತು. ಎರಡೆರಡು ಬಾರಿ ಆ ಪತ್ರ ಓದಿದ ಮೇಲೆ ಅವನಿಗೆ ಸಮಾಧಾನವಾಯಿತು. ಮರುದಿನ ಅದನ್ನು ಅಂಚೆ ಡಬ್ಬಿಗೆ ತುರುಕಿದ. ಅಂಚೆ ಮಾಸ್ಟರ್‌ಗೆ ಸಂಶಯ ಬಂದಿದೆಯಾ? ಬಂದರೆ, ಬರಲಿ. ಈ ವಯಸ್ಸಲ್ಲಿ ಪ್ರೀತಿ, ಪ್ರೇಮ ಎಲ್ಲಾ ಸಾಮಾನ್ಯ? ಅವರು ಕೂಡಾ ಈ ವಯಸ್ಸಲ್ಲಿ ಹೀಗೆಲ್ಲಾ ಮಾಡಿರಲೂಬಹುದು ಎಂದು ಹಶೀರ್ ಹೇಳಿಕೊಂಡ. ಮುಬೀನ್ ತನ್ನ ಫೋಟೋವನ್ನು ಸಾಕ್ಷ್ಮವಾಗಿ ಗಮನಿಸುತ್ತಲೇ ಅಂಟಿಸಿರುವುದನ್ನು ಪತ್ತೆ ಹಚ್ಚಿಯಾಳೇ? ಹಾಗೇ ಪತ್ತೆ ಹಚ್ಚಿದ ಮೇಲೆ ತನ್ನನ್ನು ಕಂಜೂಸ್ ಎಂದು ಬಗೆದಾಳೇ? ಎಂದು ಕೇಳಿಕೊಳ್ಳತೊಡಗಿದ.

ಮುಂದಿನ ಮೂರು ದಿನದ ನಂತರ ಅವಳಿಂದ ಮತ್ತೊಂದು ಕಾಗದ ಬಂತು. ಅದನ್ನು ಒಡೆದ. ಆದರೆ ಓದಲು ಧಾವಂತಿಸದೆ ಮುದ್ದಾದ ಆ ಫೋಟೋವನ್ನು ಇಡಿಯಾಗಿ ನೋಡಿದ. ಎಷ್ಟು ನೋಡಿದರೂ ಅವನಿಗೆ ನೆಮ್ಮದಿಯಾಗಲಿಲ್ಲ. ಕಣ್ತುಂಬಾ ನೋಡುತ್ತಾ, ಅದನ್ನು ಚುಂಬಿಸಿದ. ಅವನ ಹುಚ್ಚಾಟಕ್ಕೆ ಅವನು ಮತ್ತೊಮ್ಮೆ ನಕ್ಕ.ಎಷ್ಟು ಚೆಂದ ಇದ್ದಾಳೆ. ಈ ಮೂಗು,ಕಣ್ಣು ಅಷ್ಟೇಕೆ ಈ ಮುಖ ಎಷ್ಟೊಂದು ಅದ್ಭುತ, ಎಷ್ಟೊಂದು ಮುಗ್ಧ ಎಂದು ಹೇಳಿಕೊಂಡು ನನ್ನ ಫೋಟೋ ನೋಡಿ ಅವಳು ಅದ್ಹೇಗೆ ವರ್ತಿಸಿರಬಹುದೆಂದು ಯೋಚಿಸಿದ. ಹೀಗೆ ಒಂದು ವರ್ಷದವರೆಗೂ ಸಾಲು ಸಾಲಾಗಿ ಅವರು ಪತ್ರ ರವಾನಿಸಿದರು. ಆ ಪತ್ರಗಳೇ ಅವರ ಸ್ನೇಹವನ್ನು ಗಟ್ಟಿಗೊಳಿಸಿತು. ಪತ್ರ ಮೂಲಕವೇ ಅವರು ಪರಿಚಿತರಾದರು. ಅಕ್ಷರದಲ್ಲೇ ಮಿಲನವಾದರು. ತಮ್ಮನ್ನು ಪರಿಚಯಿಸಿದ ವಾರಪತ್ರಿಕೆಯ ಆ ವಿಭಾಗಕ್ಕೂ , ಆ ಪತ್ರಿಕೆಯ ಎಲ್ಲಾ ಬಳಗದವರಿಗೂ ಇಬ್ಬರೂ ತಮ್ಮಲ್ಲೇ ಕೃತಜ್ಞತೆ ಸಲ್ಲಿಸಿದರು.ಈಗ ಅವರಿಬ್ಬರೂ ಪ್ರೇಮಪತ್ರ ಬರೆಯುವುದರಲ್ಲಿ ಪಳಗಿದ್ದರು. ವಾರಕ್ಕೊಂದು ಪತ್ರ ರವಾನೆಯಾಗುತ್ತಲೇ ಇತ್ತು.

ವಾರದ ಮೊದಲ ದಿನ ಪತ್ರ ಕಾಣಿಸದೆ ಇದ್ದರೆ ಅವರಿಬ್ಬರಿಗೂ ಏನೇನೋ ಆಗುತ್ತಿತ್ತು. ಅಂಚೆ ಕಛೇರಿಗೆ ಸರ್ಕಾರಿ ರಜೆ ಎಂಬ ಪರಿಕಲ್ಪನೆಯೂ ಇಲ್ಲದೆ ಅವರಿಬ್ಬರೂ ಅಂಚೆಯವನಿಗೆ ಬೈಯುತ್ತಿದ್ದರು. ಅದನ್ನು ಪತ್ರದಲ್ಲೂ ವಿವರವಾಗಿ ತಿಳಿಸುತ್ತಿದ್ದರು."ನಿನ್ನ ದೂರವಾಣಿ ನಂಬರ್ ಕೊಡು. ಕೇವಲ ಪತ್ರ ಬರೆದು ಬೋರಾಗಿದೆ. ದೂರವಾಣಿಯಲ್ಲಾದರು ಮಾತಾಡೋಣ"-ಹಾಗಂತ ಇತ್ತೀಚೆಗೆ ಬರೆದ ಪತ್ರದಲ್ಲಿ ಮುಬೀನ್ ತಿಳಿಸಿದ್ದಳು. "ಮಾತು....ಹೌದು. ನಾನ್ಹೇಗೆ ಮಾತಾಡಲಿ? ನನ್ನ ಸ್ಥಿತಿ ಕಂಡು ಅವಳು ಮೂರ್ಛೆ ಹೋದರೆ"?- ಹಶೀರ್ ಆತಂಕಿತನಾದ.ಅಲ್ಲದೆ ತನ್ನ ಮನೆಯಲ್ಲಿ ಟೆಲಿಫೋನ್ ಇಲ್ಲ ಎಂಬ ಸುದ್ದಿ ತಿಳಿದ ಮೇಲೆ "ಈ ಕಾಲದಲ್ಲೂ ಟೆಲಿಫೋನ್ ಇಲ್ವಾ ? ಎಂದು ಅವಳು ಆಶ್ಚರ್ಯ ವ್ಯಕ್ತಪಡಿಸಿದರೆ?" ಎನ್ನುತ್ತಾ ಅವನು ತಬ್ಬಿಬ್ಬಾದ. ಮುಂದೇನೂ ಮಾಡಬೇಕು ಎಂದು ಅವನಿಗೆ ತೋಚಲಿಲ್ಲ. ಪತ್ರ ಬರೆದೂ ಬರೆದೂ ಬೋರಾಗಿದೆ ಎನ್ನುತ್ತಾಳೆ. ದೂರವಾಣಿ ನಂಬರ್ ಕೇಳುತ್ತಾಳೆ. ಅದು ಸಹಜ. ಆದರೆ ನನ್ನ ಮನೆಯಲ್ಲಂತೂ ದೂರವಾಣಿಯಿಲ್ಲ. ಒಂದ್ಹೊತ್ತಿನ ತುತ್ತು ಬಾಯಿಗಿಡುವುದೇ ಭಾರೀ ಕಷ್ಟದಲ್ಲಿ. ಇನ್ನು ದೂರವಾಣಿಗೆ ಎಲ್ಲಿಗೆ ಹೋಗುವುದು? ಪಕ್ಕದ ಮನೆಯ ದೂರವಾಣಿ ನಂಬ್ರ ಕೊಡಲಾ ?ಕೊಟ್ಟರೂ ನಾನು ಹೇಗೆ ಮಾತಾಡುವುದು? ಸತ್ಯ ಹೇಳಲಾ ?ಅಥವಾ ಅವಳ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳಲಾ ? ಎಂದು ಮತ್ತೊಮ್ಮೆ ಹಶೀರ್ ಯೋಚನೆಗೆ ಬಿದ್ದ.

ಒಂದು ವಾರವಾದರೂ ಅವನಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ."ಯಾಕೆ ನನ್ನ ಮೇಲೆ ಕೋಪವಾ? ನಾನು ಬೇಡವಾದೆನೇ ನನ್ನನ್ನು ಮರೆಯುವ ಪ್ರಯತ್ನವಾ?" ಎಂದು ಆಕೆ ಪತ್ರ ಬರೆದ ಮೇಲಂತೂ ಹಶೀರ್ ಭೂಮಿಗಿಳಿದು ಹೋಗಿದ್ದ. ಆದರೆ ಸತ್ಯ ಹೇಳಲಾಗದೆ ಚಡಪಡಿಸಿದ್ದ. ಹಶೀರ್ ತಂದೆ ತಾಯಿಯ ಒಂಬತ್ತು ಮಂದಿ ಮಕ್ಕಳಲ್ಲಿ ಕೊನೆಯವ. ನೋಡಲು ತುಂಬಾ ಸುಂದರನಾಗಿದ್ದಾನೆ. ಎತ್ತರಕ್ಕೆ ತಕ್ಕ ದೇಹವನ್ನೂ ಬೆಳೆಸಿದ್ದಾನೆ. ಎಸ್‌ಎಸ್‌ಎಲ್‌ಸಿಯವರೆಗೂ ಓದಿದ್ದಾನೆ. ಆದರೆ ಅವನಲ್ಲೊಂದು ಕೊರತೆ ಇದೆ ಎಂದು ಯಾರೂ ಕೂಡ ಭಾವಿಸಲು ಸಾಧ್ಯವಿಲ್ಲ.ಅಂಥ ಮೈಕಟ್ಟು, ಅಂಥ ನೋಟ! ಮನೆಯ ಕೊನೆಯ ಕುಡಿ ಆದ ಕಾರಣ ಎಲ್ಲರಿಗೂ ಪ್ರೀತಿ. ಒಂದುವರೆ ವರ್ಷದ ಹಿಂದೆ ತೀರಿ ಹೋದ ಅವನ ತಂದೆಗಂತೂ ಅವನೆಂದರೆ ಎಲ್ಲಿಲ್ಲದ ಪ್ರೀತಿ. ಅಣ್ಣಂದಿರು ಬೇರೆ ಬೇರೆ ಮನೆ ಮಾಡಿದ್ದಾರೆ. ತಮ್ಮ ಕಷ್ಟದ ಬದುಕಿನ ನಡುವೆಯೂ ಅವನಿಗೆ ಸ್ವಲ್ಪ ಸಹಾಯ ಮಾಡುತ್ತಿದ್ದರು. ಹೊರಗೆ ಹೋಗಿ ಮಾನಸಿಕ ಕಿರುಕುಳ ಅನುಭವಿಸುವುದಕ್ಕಿಂತ ಇಲ್ಲೇ ಇರು. ಮನೆಯಲ್ಲೊಬ್ಬ ಗಂಡಸು ಇದ್ದ ಹಾಗಾಯಿತು ಎಂದು ತಾಯಿ ಹೇಳಿದ ಮೇಲಂತೂ ಹಶೀರ್ ತನ್ನ ಭವಿಷ್ಯದ ಬಗ್ಗೆ ಗಹನವಾಗಿ ಚಿಂತಿಸಲಿಲ್ಲ. ಮನೆಯಲ್ಲೇ ದಿನ ದೂಡುತ್ತಿದ್ದ.

ಇತ್ತೀಚೆಗೆ ಮುಬೀನ್‌ಳ ಸ್ನೇಹಕ್ಕೆ ಬಿದ್ದು ತುಂಬಾ ಸಂತಸದಿಂದಿದ್ದ. ಇದೀಗ ತನ್ನ ಕೊರತೆಯಿಂದ ಅವನಿಗೆ ಸ್ನೇಹ ಬೇಡವಾಗಿತ್ತು. ಆಕೆ ಖಂಡಿತಾ ತನ್ನನ್ನು ತಿರಸ್ಕರಿಸುತ್ತಾಳೆ ಎಂದೇ ಅವ ಭಾವಿಸಿದ್ದ. ನಾನಿನ್ನು ಸುಮ್ಮನೆ ತಲೆ ಹಾಳು ಮಾಡಬೇಕು. ಅವಳು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಅವಳ ಜತೆ ತನ್ನ ಸ್ನೇಹ ಎಂದೂ ಕೂಡ ನೆಲೆ ನಿಲ್ಲದು. ತಂದೆ ಇರುವಾಗ ನಮಗೆ ಆರ್ಥಿಕ ತೊಂದರೆ ಇರಲಿಲ್ಲ. ಅಣ್ಣಂದಿರು ಮದುವೆಯಾಗಿ ಅವರ ದಾರಿ ನೋಡಿದ ಮೇಲೆ ಮನೆಯಲ್ಲಿ ಬಡತನ ಕಾಣಿಸಿದೆ. ಅವರಿಗೂ ಅಷ್ಟೊಂದು ಆದಾಯವಿಲ್ಲ. ಹಾಗಂತ ತಾಯಿ ಮತ್ತು ನನ್ನನ್ನು ಅವತ್ತು ಕೈ ಬಿಡಲಿಲ್ಲ. ಅವರು ಕೊಟ್ಟದ್ದು ಸಾಕಾಗುತ್ತಿರಲಿಲ್ಲವಾದರೂ ಹೊಂದಾಣಿಸಿಕೊಳ್ಳುತ್ತಿದ್ದೆವು ಎಂದು ಹಶೀರ್ ತನ್ನಲ್ಲೇ ಹೇಳಿಕೊಂಡ. ಈಗ ಹಶೀರ್‌ಗೆ ತನ್ನ ತಪ್ಪಿನ ಅರಿವು ಆಗುತ್ತಿತ್ತು. ತಾನು ದುಡುಕಬಾರದಿತ್ತು. ತನ್ನಲ್ಲೊಂದು ಕೊರತೆ ಇದೆ ಎಂದು ಗೊತ್ತಿದ್ದೂ ಏನೂ ಅರಿಯದ ಆ ಮುಗ್ದೆಗೆ ನಾನು ಕನಸು ಕೊಡಬಾರದಿತ್ತು. ಈಗ ಅವಳು ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ. ನನಗಾಗಿ ಪ್ರಾಣಕೊಡಲೂ ಸಿದ್ಧ ಎನ್ನುತ್ತಿದ್ದಾಳೆ. ಅಂಥವಳಲ್ಲಿ ನೇರವಾಗಿ ನನ್ನನ್ನು ಮರೆತು ಬಿಡು ಎಂದು ನಾನು ಹೇಗೆ ಹೇಳಲಿ?ಹಾಗೇ, ಹೇಳಿದರೂ ಅವಳಿಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇದ್ದೀತೇ ? - ಹಶೀರ್ ಯೋಚಿಸುತ್ತಲಿದ್ದ.

" ನಿನ್ನದೊಂದು ದೂರವಾಣಿ ಸಂಖ್ಯೆ ಕೊಡಬಾರದೇ?"-ಅವಳ ಇತ್ತೀಚಿನ ಪತ್ರದಲ್ಲಿ ಮತ್ತೊಮ್ಮೆ ದೂರವಾಣಿ ಸಂಖ್ಯೆಯನ್ನು ಕೇಳಲಾಗಿತ್ತು. ಇಲ್ಲ, ಎನ್ನಲೇ... ತನ್ನ ಕೊರತೆ ಹೇಳಿಕೊಳ್ಳಲೇ?-ಹಶೀರ್‌ಗೆ ಧರ್ಮಸಂಕಟ ಉಂಟಾಯಿತು. "ತಾನೇ ಒಂದು ದಿನ ಅವನ ಮನೆ ಹುಡುಕಿಕೊಂಡು ಹೋಗಲಾ? ಅವನನ್ನು ಕಣ್ತುಂಬಾ ನೋಡಿ ಆನಂದಿಸಲಾ? ಪತ್ರದಲ್ಲಿ ಇಷ್ಟೊಂದು ಆತ್ಮೀಯರಾದವರಿಗೆ ಇನ್ನು ಮುಖಾಮುಖಿಯಲ್ಲೂ ಆತ್ಮೀಯರಾಗಲು ಕಷ್ಟವೇನೂ ಆಗದು. ಮನದಾಳದಲ್ಲಿ ಸ್ಪುಟಿಯುತ್ತಿದ್ದ ಮಾತುಗಳನ್ನು ಹೇಳಿ ಹಗುರಗೊಳಿಸಲಾ?" ಎಂದು ಮುಬೀನ್ ಯೋಚಿಸಿದಳು. ಮುಬೀನ್‌ಳ ಇತ್ತೀಚಿನ ವರ್ತನೆ ಅವಳ ಕ್ಲಾಸ್‌ಮೇಟ್‌ಗಳಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಕೆಲವು ಮಂದಿ ಅದನ್ನು ಕೇಳಿಯೂ ಇದ್ದರು.--,ತನ್ನ ವರ್ತನೆಯಲ್ಲಿ ಬದಲಾವಣೆ ಆಗಿದೆಯಾ? ಎಂದು ಮುಬೀನ್ ಅಮಾಯಕತೆಯಿಂದ ಕೇಳುತ್ತಿದ್ದಳು. ಹಶೀರ್‌ನ ವರ್ತನೆಯಲ್ಲೂ ವಿಪರೀತ ಬದಲಾವಣೆಯಾಗಿತ್ತು. ನಾನು ತಪ್ಪು ಮಾಡಿ ಬಿಟ್ಟೆ ಎಂದು ಆಗಾಗ ಹೇಳಿಕೊಳ್ಳುತ್ತಲೇ ಇದ್ದ. ಸಿಲುಕಿದ ಚಕ್ರವ್ಯೂಹದಿಂದ ಹೊರಗೆ ಬರುವುದು ಹೇಗೆ ಎಂದು ಯೋಚಿಸುತ್ತಿದ್ದ. ಆವತ್ತು ಮುಬೀನ್ ಬಸ್‌ನಲ್ಲಿ ಕುಳಿತ್ತಿದ್ದಳು. ಅವಳ ಮನಸ್ಸಿನಲ್ಲಿ ಹಶೀರ್ ತುಂಬಿ ಹೋಗಿದ್ದ. ಕೆಲವು ಯುವಕರನ್ನು ಕಂಡಾಗಲಂತೂ ಹಶೀರ್‌ನ ಮುಖವೇ ಅವಳಿಗೆ ನೆನಪಾಗುತ್ತಿತ್ತು.

ನಾನೊಬ್ಬಳು ಹುಚ್ಚಿ . ನನ್ನ ಪ್ರಿಯಕರನನ್ನು ನಾನು ಮುಖತಃ ಭೇಟಿಯಾಗದೇ ಇರುವುದು ಯಾವ ನ್ಯಾಯ? ಪತ್ರ ಬರೆದು ಇಂತಿಂಥ ಕಡೆ ಸಿಗು ಎಂದು ಆರಂಭದಲ್ಲೇ ನಾನು ಹೇಳಬೇಕಾಗಿತ್ತು. ಅಷ್ಟಕ್ಕೂ ಹಶೀರ್ ಈಗ ಏನು ಮಾಡುತ್ತಿದ್ದಾನೆ? ಎಷ್ಟು ಓದಿದ್ದಾನೆ? ಏನು ಕೆಲಸ ಮಾಡುತ್ತಿದ್ದಾನೆ? ಒಂದೂ ತನಗೆ ಗೊತ್ತಿಲ್ಲ. ನಾನು ತಪ್ಪು ಮಾಡಿದೆನೇ? ಮುಬೀನ್ ಕೇಳಿದಳು. ಜಗತ್ತಿನ ಬಹುತೇಕ ಹುಡುಗಿಯರಂತೆ ಅವಳೂ ಕೂಡಾ ಒಬ್ಬ ನಿರುದ್ಯೋಗಿಯನ್ನೇ ಪ್ರೀತಿಸಿದ್ದಳು. ಆದರೆ ಅದು ಅವಳ ಗಮನಕ್ಕೆ ಬಾರದಿರುವುದು ವ್ಯವಸ್ಥೆಯ ದುರಂತ. ತನ್ನ ಮನೆಯ ಕಿಟಿಕಿಯ ಪರದೆ ಸರಿಸಿ ಎದುರು ಮನೆಯ ಮಹಡಿಯಲ್ಲಿ ಹಶೀರ್ ನಿಂತಿದ್ದಾನೆ ಎಂದು ಕಲ್ಪಿಸಿ ಹಾವಭಾವಗಳಲ್ಲೇ ಪ್ರೀತಿಯ ಮಾತಾಡಿದ್ದನ್ನು ಮುಬೀನ್ ಜ್ಞಾಪಿಸುತ್ತಾಳೆ. ತಾನು ಬಸ್‌ನಲ್ಲಿದ್ದೇನೆ ಎಂಬ ಪ್ರಜ್ಞೆ ಇಲ್ಲದೆ ಆ ಹಾವಭಾವಗಳನ್ನು ಜ್ಞಾಪಿಸಿ ತುಟಿ ಅಂಚಿನಲ್ಲೇ ನಗುತ್ತಾಳೆ.

ಅಷ್ಟರಲ್ಲಿ ಒಬ್ಬ ತಟ್ಟೆಯನ್ನು ಮುಂದೆ ಚಾಚುತ್ತಾ ಒಂದು ರೂಪಾಯಿ ಕೊಡಿ ಅಮ್ಮಾ... ಮನೆಯಲ್ಲಿ ಹೆಂಡತಿ ಮಕ್ಕಳಿದ್ದಾರೆ. ನೀವು ಕೊಡದಿದ್ದರೆ ಅವರು ಉಪವಾಸ ಬೀಳುತ್ತಾರೆ ಎಂದು ಹೇಳುತ್ತಾ ಬಂದ. ಆ ಮಾತು ಕೇಳಿ ಮುಬೀನ್‍‌ಳ ಮನ ಕರಗಿತು. ಈವರೆಗೂ ಭಕ್ಷಕರ ಬಗ್ಗೆ ನಿರ್ಲಕ್ಷ ತಾಳಿದ್ದ ಆಕೆ ಅಂದು ಅದ್ಯಾಕೋ ಭಿಕ್ಷುಕನ ಮುಖ ನೋಡಿದಳು. ಅದರಲ್ಲಿ ವಂಚನೆ ಇರಲಿಲ್ಲ. ಹಾಗಾಗಿ ಚಿಲ್ಲರೆ ಇಲ್ಲ ಎಂದು ಸುಳ್ಳು ಹೇಳಲಾಗದೇ ಎರಡು ರೂಪಾಯಿಯ ಒಂದು ಪಾವಲಿಯನ್ನು ತೆಗೆದು ಆ ತಟ್ಟೆಗೆ ಹಾಕಿದಳು."ನೀವು ಪುಣ್ಯ ಮಾಡಿದಿರಮ್ಮ, ನಿಮಗೆ ಒಳ್ಳೆಯದಾಗಲಿದೆ." ಎಂದು ಹೇಳಿದ ಆ ಭಿಕ್ಷುಕ ಅವಳಿಗೆ ಒಂದು ರೂಪಾಯಿ ಮರಳಿಸಲು ಮುಂದಾದ. ಮುಬೀನ್ ಸಹಿತ ಎಲ್ಲರಿಗೂ ಅವನ ವರ್ತನೆ ಆಶ್ಚರ್ಯವನ್ನುಂಟುಮಾಡಿತ್ತು. ಈ ಕಾಲದಲ್ಲೂ ಇಂಥ ಭಿಕ್ಷುಕರು ಇದ್ದಾರೆಯೇ? ಎಂದು ಮುಬೀನ್ ಕೇಳಿಕೊಂಡಳು."ನನಗೆ ಹೆಚ್ಚೇನು ಬೇಡ ಅಮ್ಮಾ... ಎಲ್ಲರೂ ಒಂದೊಂದು ರೂಪಾಯಿ ಕೊಟ್ಟರೆ ನನ್ನ ಹೆಂಡತಿ ಮಕ್ಕಳಿಗೆ ಅದು ಸಾಕು. ಈ ಒಂದು ರೂಪಾಯಿ ವಾಪಾಸು ತೆಗೆದುಕೊಳ್ಳಿ." ಎಂದು ಹೇಳಿ ಅದನ್ನು ತೋರಿಸಿದ. ಅವನಲ್ಲಿ ವಂಚನೆ ಇರಲಿಲ್ಲ. ಮುಬೀನ್ ಆ ಹಣವನ್ನು ಮತ್ತೆ ತೆಗೆಯಲು ನಿರಾಕರಿಸಿದಳು. ತನ್ನ ಬಳಿ ಈಗ ಹಶೀರ್ ಇದ್ದಿದ್ದರೆ ಅವನು ಈ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸುತ್ತುದ್ದನೋ ಎಂಬ ಯೋಚನೆ ಸ್ಪುಟಿಯಿತು. ಹಶೀರ್ ಮೂರು ರಾತ್ರಿ ಮತ್ತು ಮೂರು ಹಗಲು ಚಿಂತೆಯಲ್ಲೇ ಮಗ್ನನಾದ. ಅಂತೂ ಒಂದು ತೀರ್ಮಾನಕ್ಕೆ ಬಂದು ಪತ್ರವೊಂದನ್ನು ಬರೆದ.

ಪ್ರೀತಿಯ ಮುಬೀನ್‌ಗೆ, ವರ್ಷದ ಹಿಂದೆ ಅದ್ಯಾವುದೋ ಹುಚ್ಚು ಕಲ್ಪನೆಗೆ ಬಿದ್ದು ನಿನಗೆ ಬರೆದ ಪತ್ರ ಇಷ್ಟೊಂದು ಗಾಢವಾದೀತು ಎಂದು ನಾನು ಭಾವಿಸಿರಲಿಲ್ಲ. ಆದರೆ ಇದೀಗ ಅದೇ ನನಗೆ ಮುಳುವಾಗಿದೆ. ನಿನ್ನ ಪ್ರೀತಿಗೆ ನಾನು ಅಭಾರಿ. ನಿನ್ನನ್ನು ನನಗೆ ಎಂದೂ ಮರೆಯಲು ಸಾಧ್ಯವಿಲ್ಲ. ಆದರೆ ನಾನೊಬ್ಬ ನಿರುದ್ಯೋಗಿ, ಬಡವ. ನಿನ್ನ ಬೇಕು ಬೇಡಗಳನ್ನು ಪೂರೈಸಲು ಅಸಮರ್ಥನಾದ ಸೋಮಾರಿ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೇನೆ. ನನ್ನ ಆಯುಷ್ಯ ಸ್ವಲ್ಪ ಎಂದು ಗೊತ್ತಿದ್ದೂ ಇಂಥ ಹುಚ್ಚಾಟಕ್ಕೆ ಮುಂದಾದೆ. ನನ್ನನ್ನು ಕ್ಷಮಿಸು, ನನ್ನನ್ನು ಮರೆತು ಬಿಡು. ಹೆಚ್ಚೇನೂ ಬರೆಯಲಾರೆ. ನಾನು ಮಾಡಿದ ತಪ್ಪಿಗೆ ಮತ್ತೊಮ್ಮೆ ಕ್ಷಮೆಯಾಚಿಸುವೆ.

ಇತೀ ನಿನ್ನ
ಹಶೀರ್

ಹಾಗೇ ಅದನ್ನು ಅಂಚೆ ಮೂಲಕ ಹಾಕಿ ಒಂದು ನಿಟ್ಟುಸಿರಿಟ್ಟ."ಕಿಡ್ನಿ ವೈಫಲ್ಯ... ಯಾ ಅಲ್ಲಾಹ್. ನನಗೆ ಅಂಥ ಒಂದು ರೋಗವಿದೆಯೇ? ಸುಮ್ಮನೆ ಇಲ್ಲದ ರೋಗವನ್ನು ಹೆಸರಿಸಿ ಸುಳ್ಳು ಹೇಳಿದ್ದನ್ನು ನೀ ಕ್ಷಮಿಸುವಿ ತಾನೇ" ಎಂದು ಹಶೀರ್ ಹೇಳಿ ವಿಷಾದಿಸಿದ. ಹಾಗೇ ಸುಳ್ಳು ಹೇಳುವ ಬದಲು ಸತ್ಯ ವಿಷಯ ಹೇಳಬಹುದಿತ್ತಲ್ಲವಾ? ಇರಲಿ, ಇನ್ನು ಮುಬೀನ್‌ಳ ಪತ್ರ ಬಾರದು. ಒಬ್ಬ ನಿರುದ್ಯೋಗಿ , ಕಿಡ್ನಿ ವೈಫಲ್ಯದ ರೋಗಿಯನ್ನು ಯಾವ ಹೆಣ್ಣೂ ಹಚ್ಚಿಕೊಳ್ಳಲಾರರು ಎಂದು ಭಾವಿಸಿದ. ಆ ಪತ್ರ ಕೈ ಸೇರಿದ ನಂತರ ಮುಬೀನ್ ಭೂಮಿಗಿಳಿದಿದ್ದಳು. ತನ್ನ ಪ್ರಿಯಕರ ಒಬ್ಬ ನಿರುದ್ಯೋಗಿ. ಚಿಂತಿಲ್ಲ, ನಾನೇ ದುಡಿಯುವೆ. ಅವನು ಕೇವಲ ನನ್ನ ಸಂಗಾತಿಯಾದರೆ ಸಾಕು. ಅಲ್ಲದೆ ಹಾಳಾದ ಕಿಡ್ನಿಯ ಬದಲು ನನ್ನದೇ ಕಿಡ್ನಿಯನ್ನು ಜೋಡಿಸಲು ಸಾಧ್ಯವಾ ಎಂದು ವೈದ್ಯರಲ್ಲಿ ಕೇಳಿಬಿಡುವೆ. ಅವರು ಸಾಧ್ಯ ಎಂದು ಹೇಳಿದರೆ ನಾನೇ ಅದನ್ನು ದಾನ ಮಾಡುವೆ. ಅಷ್ಟೊಂದು ತ್ಯಾಗ ಮಾಡದಿದ್ದರೆ ನಾನು ಪ್ರೀತಿಸಿ ಏನು ಪ್ರಯೋಜನ? ಎಂದು ಮುಬೀನ್ ಪ್ರಶ್ನಿಸಿಕೊಂಡಳು. ಆವತ್ತೇ ತಮ್ಮ ಕುಟುಂಬ ವೈದ್ಯರ ಬಳಿಗೆ ಹೋಗಿ ಹೆಣ್ಣಿನ ಕಿಡ್ನಿಯನ್ನು ಗಂಡಸಿಗೆ ಜೋಡಿಸಬಹುದೇ? ಕೇಳಿದಳು. ನನ್ನ ಗೆಳತಿಯೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದಾಳೆ. ಅವಳಿಗೆ ಆ ಬಗ್ಗೆ ಮಾಹಿತಿ ಬೇಕಾಗಿತ್ತು. ಒಂದಷ್ಟು ತೂಗಿ ಅಳೆದು ನೋಡಿ ತೊಂದರೆಯಿಲ್ಲ, ಧಾರಾಳವಾಗಿ ಕೊಡಬಹುದು ಎಂದರು. ಆ ಮಾತು ಕೇಳಿದ ತಕ್ಷಣ ಮುಬೀನ್ ನಿರ್ಧಾರಕ್ಕೆ ಬಂದಳು. ಅಂದರೆ, ಮನೆಯವರ ಗಮನಕ್ಕೆ ಬಾರದಂತೆ ತನ್ನ ಕಿಡ್ನಿಯನ್ನು ಹಶೀರ್‌ಗೆ ಕೊಡುವ ತೀರ್ಮಾನ ಕೈಗೊಂಡಳು. ಹಾಗೇ ಮರುದಿನವೇ ನೇರ ಕಾಲೇಜ್‌ನಿಂದ ಹಶೀರ್‌ನ ಮನೆಯ ದಾರಿ ಹಿಡಿದಳು. ಅವನ ಮನೆ ಸೇರಲು ಎರಡು ಬಸ್ ಹಿಡಿದ ಮೇಲೂ ಪುಟ್ಟದಾದ ನದಿ ದಾಟಬೇಕಾಗಿತ್ತು.

ಹಶೀರ್ ಮನೆಯ ಅಂಗಳದಲ್ಲಿ ಕುಳಿತು ಅದ್ಯಾವುದೋ ಯೋಚನೆಯಲ್ಲಿ ಮುಳುಗಿದ್ದ.ಅಷ್ಟರಲ್ಲಿ ಪಕ್ಕದ ಮನೆಯ ಮುಂದೆ ನಿಂತಿದ್ದ ಒಬ್ಬಳು ಏನೋ ಕೇಳುತ್ತಿರುವುದು, ಅವರು ತಮ್ಮ ಮನೆಯತ್ತ ಕೈ ತೋರಿಸುತ್ತಿರುವುದು ಅವನ ಕಣ್ಣಿಗೆ ಬಿತ್ತು. ಅವಳು ಹತ್ತಿರವಾದಂತೆಯೇ ಅದು ಮುಬೀನ್ ಎಂದು ಅವನಿಗೆ ಮನದಟ್ಟಾಯಿತು. ಆದರೆ ಆಕೆಯನ್ನು ಹೇಗೆ ಎದುರಿಸುವುದು?ತಪ್ಪಿಸಿಕೊಳ್ಳಲಾ?ಏನೆಂದು ಹೇಳಿ ಅವಳನ್ನು ಸಮಾಧಾನಪಡಿಸಲಿ? ಎಂಬ ಸಂಧಿಗ್ಧತೆಗೆ ಹಶೀರ್ ಬಿದ್ದ. ತಾನುಟ್ಟ ಬಟ್ಟೆ ಬರೆಯನ್ನು ಒಮ್ಮೆ ಇಡಿಯಾಗಿ ಗಮನಿಸಿದ. ಅವನಿಗೆ ಹೇಸಿಗೆಯೆನಿಸಿತು. ಹಶೀರ್‌ನ ಚಡಪಡಿಕೆಯನ್ನು ಅಲ್ಲೆ ಇದ್ದ ಅವನ ತಾಯಿ ಗಮನಿಸಿದರು. ಆ ಹೆಣ್ಣನ್ನು ನೋಡಿದ ಮೇಲಂತೂ ಅವರಿಗೆ ಮತ್ತಷ್ಟು ಸಂಶಯ ಹೆಚ್ಚಾಯಿತು. ಮುಬೀನ್ ಹಶೀರ್‌ನನ್ನು ಗುರುತು ಹಿಡಿಯುತ್ತಲೇ,"ಯಾಕೆ ತುಂಬಾ ಸೊರಗಿದ್ದೀಯಲ್ಲಾ...ನೋಡು, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಬೇಡ. ನನ್ನ ಕಿಡ್ನಿಯನ್ನು ನಿನಗೆ ಜೋಡಿಸುವ ನಿರ್ಧಾರಕ್ಕೆ ನಾನು ಬಂದಿದ್ದೇನೆ. ಆಯ್ತಾ?"ಎಂದು ಹೇಳಿದರು ಕೂಡಾ ಹಶೀರ್ ಮಾತಾಡಲಿಲ್ಲ. ಅವನ ಕಣ್ಣಲ್ಲಿ ಕಣ್ಣೀರು ಇಳಿಯಿತು."ಮಾತಾಡು ಹಶೀರ್, ಮಾತಾಡು. ಯಾಕೆ ಕೂಗುತ್ತಿದ್ದೀಯಾ?" ಎಂದು ಸಂತೈಸುವ ಪ್ರಯತ್ನ ಮಾಡಿದಾಗ "ಹೇಗಮ್ಮ, ಅವ ಮಾತಾಡುವುದು. ಅವನಿಗೆ ಮಾತು ಬರುವುದಿಲ್ಲ" ಎಂದು ಹೇಳಿ ಅವನ ತಾಯಿ ಕೂಡಾ ಕಣ್ಣೀರಿಳಿಸಿದರು. ಹಶೀರ್ ಮಾತನಾಡಲೇ ಇಲ್ಲ. ಅವನು ಅಧೀರನಾಗಿದ್ದ. "ಮುಬೀನಾ ಕಿಡ್ನಿ ವೈಫಲ್ಯ ಅಂತ ನಾನು ನಿನ್ನಲ್ಲಿ ಸುಳ್ಳು ಹೇಳಿದೆ. ಆದರೆ ನಾನು ಮೂಕ ಎಂಬುದನ್ನು ತಿಳಿಸದೆ ವಂಚಿಸಿದೆ ಎಂದು ಹೇಳಲಾ?" ಎಂದು ಮನಸ್ಸಲ್ಲೇ ಕೇಳಿದ. ನನ್ನ ಪರಿಸ್ಥಿತಿಯನ್ನು ಕಂಡು ಹತಾಶೆಯಿಂದ ಛೀ ಎನ್ನುತ್ತಾ ತಲೆ ಕೊಡವಿ ಮುಬೀನ್ ಹೊರಟೇ ಹೋಗುತ್ತಾಳೆ ಎಂದು ಭಾವಿಸಿದ ಹಶೀರ್‌ಗೆ ಆಶ್ಚರ್ಯ ಕಾದಿತ್ತು. ಒಂದಷ್ಟು ಅಳುಕದ ಮುಬೀನ್ ಒಂದು ದಿವ್ಯ ಪ್ರೇಮದ ಸಂಕೇತ ಎಂಬಂತೆ, ಹಶೀರ್‌ನ ಎದೆಗೊತ್ತಿ ನಿಂತಳು. ಅದನ್ನು ಕಂಡ ಹಶೀರ್‌ನ ತಾಯಿ ಸಂತಸ ತಡೆಯಲಾಗದೆ ಕೈ ಹಿಸುಕಿಕೊಂಡರು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments