Select Your Language

Notifications

webdunia
webdunia
webdunia
webdunia

ತೇಜಸ್ವಿ ಮರೆಯಾಗಿ ಒಂದು ವರ್ಷ...

ತೇಜಸ್ವಿ ಮರೆಯಾಗಿ ಒಂದು ವರ್ಷ...
ನಾಗೇಂದ್ರ ತ್ರಾಸಿ
NRB
ಕನ್ನಡ ಸಾರಸ್ವತ ಲೋಕದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಮ್ಮನ್ನಗಲಿ ಇಂದಿಗೆ (ಏ.5) ವರುಷ ಸಂದಿದೆ. ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲಿ ಒಬ್ಬರಾಗಿದ್ದ ತೇಜಸ್ವಿಯವರು ಯುವಪೀಳಿಗೆಗೂ ಮೆಚ್ಚಿನ ಸಾಹಿತಿಯಾಗಿದ್ದರು, ಅಲ್ಲದೇ ಅವರೊಬ್ಬ ಪರಿಸರ ಪ್ರೇಮಿ, ಸಾಮಾನ್ಯರೊಂದಿಗೆ ಸಾಮಾನ್ಯರಾಗಿಯೇ ಕೃಷಿ ಮತ್ತು ಸಾಹಿತ್ಯ ಕೃಷಿಯನ್ನು ಏಕಕಾಲಕ್ಕೆ ನಡೆಸಿದವರು ತೇಜಸ್ವಿ.

ಎಂದಿನಂತೆ ಮೂಡಿಗೆರೆಯ ತನ್ನ ಮನೆಯಲ್ಲಿ (2007, ಏಪ್ರಿಲ್ 5) ಮಗಳು ಅಳಿಯರೊಂದಿಗೆ ಹಾಸ್ಯ ಚಟಾಕಿ ಹಾರಿಸಿ, ಮಧ್ನಾಹ್ನ ಬಿರಿಯಾಣಿ ಊಟ ಮಾಡಿ ಕೈ ತೊಳೆಯುತ್ತಿರುವಂತೆಯೇ ಕುಸಿದಿದ್ದ ತೇಜಸ್ವಿಯವರು ಮತ್ತೆ ಮೇಲೇಳಲೇ ಇಲ್ಲ.

ಇಂದು ಮೂಡಿಗೆರೆಯ ತೋಟದ ಮನೆಯ 'ನಿರುತ್ತರ'ದಲ್ಲಿ ತೇಜಸ್ವಿಯವರ ನೆನಪುಗಳು ಮಾತ್ರ ಉಳಿದಿದೆ. ಅವರೇ ಪ್ರೀತಿಯಿಂದ ಮಾಡಿದ ತೋಟ, ಹಸಿರು, ಗಿಡ-ಮರಗಳು ನಳನಳಿಸುತ್ತಿವೆ, ಆದರೆ ಪೂರ್ಣಚಂದ್ರ ಅವರ ಅಸ್ತಂಗತವೂ ಅಷ್ಟೇ ವಿಷಾದವನ್ನು ಹುಟ್ಟಿಸಿದೆ. ಪತ್ನಿ ರಾಜೇಶ್ವರಿ ಅವರು ತಮ್ಮ ತೋಟ, ಮನೆ, ಗಿಡ-ಮರಗಳ ನಡುವೆ ತೇಜಸ್ವಿಯವರ 'ಮಾಯಾಲೋಕ'ದ ನೆನಪಿನೊಂದಿಗೆ ಕಾಲ ಕಳೆಯುತ್ತಿದ್ದಾರೆ.

ತೇಜಸ್ವಿ ತಮ್ಮ ನೇರ, ನಡೆ, ನುಡಿಗಳ ಮೂಲಕ ಅಸಂಖ್ಯಾತ ಸಾಹಿತ್ಯಪ್ರೇಮಿಗಳನ್ನು ಪಡೆದಿದ್ದರು. ಖಂಡತುಂಡವಾಗಿ ಮಾತನಾಡುವ ಛಾತಿ ಹೊಂದಿದ್ದ ಅವರು ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಂಡವರಲ್ಲ. ಕನ್ನಡದ ವಿರುದ್ಧ ನಿರ್ಣಯ ಮಂಡಿಸಿದ್ದ ಬೆಳಗಾವಿಯ ಮೋರೆಯ ಮುಖಕ್ಕೆ ಮಸಿ ಬಳಿದಾಗ, ತೇಜಸ್ವಿಯವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ಆ ರೀತಿ ಮಾತನಾಡಿದವರ ಮುಖಕ್ಕೆ ಮಸಿ ಅಲ್ಲದೇ ಫೇರ್ ಅಂಡ್ ಲವ್ಲೀ ಬಳಿಯಬೇಕಾ ಅಂತಾ ಕೇಳಿದ್ದರು(ನಂತರ ಈ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.)ಅದೇ ರೀತಿ ಶಿಕ್ಷಣ ಕ್ಷೇತ್ರ, ಮಾಧ್ಯಮ, ವಿದ್ಯಾಭ್ಯಾಸ, ಶಿಕ್ಷಕ ವರ್ಗಗಳ ಬಗ್ಗೆಯೂ ಮುಲಾಜಿಲ್ಲದೆ ತಮ್ಮ ನಿಲುವು ವ್ಯಕ್ತಗೊಳಿಸುತ್ತಿದ್ದರು. ಇತ್ತೀಚೆಗೆ ಮುಸ್ಲಿಂ ಮೂಲಭೂತವಾದದಿಂದ ಹೆಚ್ಚುತ್ತಿರುವ ಹಿಂದೂ ಮೂಲಭೂತವಾದ ಹೇಗೆ ಭಾರತದ ಜಾತ್ಯತೀತ ಶಕ್ತಿಗಳನ್ನು ಹಾದಿ ತಪ್ಪಿಸುತ್ತಿವೆ ಎಂಬುದರ ಬಗ್ಗೆಯೂ ತೇಜಸ್ವಿಯವರು ಹಲವಾರು ವಿಚಾರ ಸಂಕಿರಣಗಳಲ್ಲಿ ತಮ್ಮದೇ ವಿಶಿಷ್ಟ ನಿಲುವುಗಳ ಮೂಲಕ ವಿವರಿಸಿದ್ದರು.

ಅವರ ಚಿದಂಬರ ರಹಸ್ಯ ಕಾದಂಬರಿಯಲ್ಲೂ ಕೂಡ ಬಹುಮುಖಿ ಸಂಸ್ಕೃತಿಗೆ ಆಗುತ್ತಿರುವ ಧಕ್ಕೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನ್ನಿಸುತ್ತದೆ. ಕಿರಿಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ, ಕರ್ವಾಲೋ, ಜುಗಾರಿ ಕ್ರಾಸ್ ಕಾದಂಬರಿಗಳಲ್ಲಿ ಜನಸಾಮಾನ್ಯರ ಭಾಷೆಯನ್ನೇ ಬಳಸಿ ಬರೆಯುತ್ತಿದ್ದ ಅವರ ಬರಹ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಭಾಷೆ, ಕಂಪ್ಯೂಟರ್, ಕನ್ನಡ ತಂತ್ರಾಂಶಗಳ ಬಗ್ಗೆ ತಮ್ಮದೇ ವಿಚಾರಧಾರೆಯನ್ನು ಮಂಡಿಸುತ್ತಿದ್ದ ತೇಜಸ್ವಿಯವರು, ಹೊಸ ದೃಷ್ಟಿಕೋನವನ್ನು ನೀಡುತ್ತಿದ್ದರು. ಆ ನೆಲೆಯಲ್ಲಿ ಅವರು ಹೊರತಂದ ಮಿಲೇನಿಯಂ ಸರಣಿಯಂತೂ ಸಾಹಿತ್ಯದಲ್ಲಿ, ವಿಜ್ಞಾನದಲ್ಲಿ ಕುತೂಹಲ ಇರುವವರಿಗೆ ಅದು ವಿಶ್ವಕೋಶದಂತಿದೆ. ಆ ಕಾರಣಕ್ಕಾಗಿಯೇ ಚಿಂತಕ ದಿ.ರಾಮದಾಸ್ ಅವರು, ತೇಜಸ್ವಿಯನ್ನು 'ಕಾಲದ ಕಾಲು ಸದ್ದು ಆಲಿಸಬಲ್ಲ ಲೇಖಕ' ಎಂಬುದಾಗಿ ಹೇಳಿದ್ದರು. ಆ ಮಾತು ಅಕ್ಷರಶಃ ಸತ್ಯ.

Share this Story:

Follow Webdunia kannada