Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಅನುರಣಿಸಿದ 'ಕಡಲ ತಡಿಯ ತಲ್ಲಣ'

ರಾಜಧಾನಿಯಲ್ಲಿ ಅನುರಣಿಸಿದ 'ಕಡಲ ತಡಿಯ ತಲ್ಲಣ'
ವರ್ಷಾರಂಭದಲ್ಲಿ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣದಿಂದ ಮಂಗಳೂರಿಗರ ಮನದಲ್ಲಿದ್ದ ತಲ್ಲಣವು ರಾಷ್ಟ್ರ ರಾಜಧಾನಿಯಲ್ಲಿಯೂ ಭಾನುವಾರ ಅನುರಣಿಸಿತು. ಕರಾವಳಿ ಕರ್ನಾಟಕದಲ್ಲಿ ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸಿದರೆ ಅಧಿಕಾರಿಗಳು ಸುಮ್ಮನಿರಲಾರರು ಎಂಬ ಆಶಾವಾದದೊಂದಿಗೆ ಅಂದು ನಡೆದ 'ಕಡಲ ತಡಿಯ ತಲ್ಲಣ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿಶಿಷ್ಟವೆನಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಲೇಖಕರ ಲೇಖನ ಸಂಗ್ರಹಗಳುಳ್ಳ 'ಕಡಲ ತಡಿಯ ತಲ್ಲಣ' ಕೃತಿಯು, ಈ ಪ್ರದೇಶದ ಶತ ಶತಮಾನಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ವಿಶಿಷ್ಟ ಮತ್ತು ಸಂಕೀರ್ಣ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಅದನ್ನು ದಿ ವೀಕ್ ಪತ್ರಿಕೆಯ ಸ್ಥಾನೀಯ ಸಂಪಾದಕ ಸಚ್ಚಿದಾನಂದ ಮೂರ್ತಿ ಬಿಡುಗಡೆಗೊಳಿಸಿದರು.

ಉಷಾ ಕಟ್ಟೆ ಮನೆ ಮತ್ತು ಡಾ.ಪುರುಷೋತ್ತಮ ಬಿಳಿಮಲೆ ಸಂಪಾದಿಸಿರುವ ಈ ಕೃತಿಯಲ್ಲಿ ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿ, ಬಿ.ಎ.ವಿವೇಕ ರೈ, ವಡ್ಡರ್ಸೆ ರಘುರಾಮ ಶೆಟ್ಟಿ, ದಿನೇಶ್ ಅಮೀನ್ ಮಟ್ಟು, ಜಿ.ರಾಮಕೃಷ್ಣ, ಕೆ.ವಿ.ತಿರುಮಲೇಶ್, ಸಾರಾ ಅಬೂಬಕರ್, ಬೊಳುವಾರ್ ಮೊಹಮದ್ ಕುಂಞಿ ಮತ್ತು ಎಸ್.ಆರ್.ವಿಜಯಶಂಕರ್ ಮುಂತಾದವರ ಲೇಖನಗಳಿವೆ.

ಶತಮಾನಗಳಿಂದಲೂ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಅವಿಭಜಿತ ಪ್ರದೇಶವು ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಜೈನರ ಸಂಗಮ ಕ್ಷೇತ್ರವಾಗಿತ್ತು. ಇಲ್ಲಿ ಕನ್ನಡ, ತುಳು ಮತ್ತು ಕೊಂಕಣಿ ಮಾತ್ರವಲ್ಲದೆ, ಮಲಯಾಳಂ ಹಾಗೂ ಮರಾಠಿ ಭಾಷಿಗರಿದ್ದಾರೆ. ತನ್ನ ಧಾರ್ಮಿಕ ಮತ್ತು ಭಾಷಿಕ ವೈವಿಧ್ಯತೆಗೆ ಹೆಸರಾಗಿರುವ ಮಂಗಳೂರು ಪಟ್ಟಣದ ಸಾಂಪ್ರದಾಯಿಕ ಸೈರಣೆಗೆ ಗಂಭೀರ ಬೆದರಿಕೆ ಉಂಟಾಗಿದೆ ಎಂಬುದು ಈ ಲೇಖಕರ ಮನದಾಳದಲ್ಲಿ ವ್ಯಕ್ತವಾದ ಅಭಿಪ್ರಾಯವಾಗಿತ್ತು.

ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನು ಎಲ್ಲ ಧರ್ಮೀಯರು, ಸಮುದಾಯಗಳು, ಜಾತಿ-ವರ್ಗಗಳು ಯಾವುದೇ ಭೇದಭಾವವಿಲ್ಲದೆ ಒಪ್ಪಿಕೊಂಡಿದ್ದು, ಸುದೀರ್ಘ ಮತ್ತು ವರ್ಣಮಯ ಇತಿಹಾಸವನ್ನೂ ಹೊಂದಿದೆ ಎಂಬುದನ್ನು ಲೇಖಕರು ಎತ್ತಿ ತೋರಿಸಿದ್ದಾರೆ.

ಕ್ರಿಸ್ತಶಕ ಎರಡನೇ ಶತಮಾನದ ಅವಧಿಯಲ್ಲೇ ಟಾಲೆಮಿ ಮತ್ತು ಪ್ಲೈನಿ ಮುಂತಾದವರು ತುಳುನಾಡಿನ ಗರಿಮೆಯನ್ನು ಗುರುತಿಸಿದ್ದರು. ತಮಿಳ್ ಸಂಗಮ ಸಾಹಿತ್ಯವು ಕೂಡ ತುಳುನಾಡಿನ ನರ್ತನ ವೈವಿಧ್ಯವನ್ನು ಉಲ್ಲೇಖಿಸುತ್ತದೆ. ಹೆಸರಾಂತ ಸಂಶೋಧಕ ಡಾ.ಗೋವಿಂದ ಪೈಗಳು, ತುಳುನಾಡು ಮತ್ತು ಗ್ರೀಸ್ ಪಟ್ಟಣಗಳು ಕ್ರಿಸ್ತಶಕೆಯ ಆರಂಭಿಕ ಸಮಯದಲ್ಲಿ ಯಾವ ರೀತಿ ಪರಸ್ಪರ ಸಂಪರ್ಕ ಹೊಂದಿದ್ದವು ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಸಂಪಾದಿತ ಕೃತಿಯಲ್ಲಿರುವ ಹಲವಾರು ಲೇಖಕರು, ಈ ಭಾಗದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ.

1970ರ ದಶಕದಲ್ಲಿ ಆರಂಭವಾಗಿದ್ದ ಕರಾವಳಿ ಕರ್ನಾಟಕದ ಕೋಮುವಾದೀಕರಣವು ರಾಜ್ಯದ ಮತ್ತು ದೇಶದ ಇತರ ಭಾಗಗಳ ರಾಜಕೀಯ ಪರಿಸ್ಥಿತಿಯ ಫಲಿತಾಂಶ ಎಂದು ಸಚ್ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು. ಈ ಪ್ರದೇಶದ ಆರೋಗ್ಯಕರ ಸಂಪ್ರದಾಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಧ್ವನಿಯೆತ್ತಿರುವ ಲೇಖಕರ ಪ್ರಯತ್ನವನ್ನು ಮೂರ್ತಿ ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರಕಾರದ ಮಾಜಿ ಮುಖ್ಯ ವಾರ್ತಾ ಅಧಿಕಾರಿ ಹಾಗೂ ಎಎನ್ಐ ಸಂಪಾದಕ ಐ.ರಾಮಮೋಹನ ರಾವ್, ರಾಜಕೀಯದಲ್ಲಿ ದೇವರ ಹೆಸರನ್ನು ಬಳಸುವುದರ ಬಗ್ಗೆ ಎಚ್ಚರಿಸಿದರು. ಸಾಂದರ್ಭಿಕವಾಗಿ ಈ ಕೃತಿಯನ್ನು ಹೊರ ತಂದಿರುವುದಕ್ಕೆ ಸಂಪಾದಕರ ಪ್ರಯತ್ನವನ್ನಶ್ಲಾಘಿಸಿದರು.

ಡಾ. ಪುರುಷೋತ್ತಮ ಬಿಳಿಮಲೆ ಪ್ರಸ್ತಾವನೆ ಮಾಡಿದರು. ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಮತ್ತು ಆರ್. ಭರತಾದ್ರಿ, ಉಷಾ ಭರತಾದ್ರಿ, ಬಾಲಕೃಷ್ಣ ನಾಯ್ಕ್ ಮಾತಾಡಿದರು. ಗುರು ಬಾಳಿಗ ಕಾರ್ಯಕ್ರಮ ನಡೆಸಿಕೊಟ್ಟರು. ಜಲಜಾ ರಾಜು ಅವರು ಕಯ್ಯಾರ ಕಿಂಞಣ್ಣ ರೈ ಅವರ ಶ್ರೀಮುಖ ಎಂಬ ಕವನಕ್ಕೆ ರಾಗ ನೀಡಿ ಹಾಡಿದರು.

Share this Story:

Follow Webdunia kannada