Webdunia - Bharat's app for daily news and videos

Install App

'ಭಾವಬಿಂಬ'ದಿ ಪಯಣ, 'ತುಳಸಿವನ'ದೊಳು ಸಂಭ್ರಮ!

Webdunia
ಭಾನುವಾರ ಬೆಳಗಾಮುಂಚೆ ಏಳೋದು ಅಂದ್ರೆ ನಮ್ಮೊಳಗಿನ ಸೋಮಾರಿಗೆ ಸಿಕ್ಕಾಪಟ್ಟೆ ಕಿರಿಕಿರಿಯಾಗೋ ಸಂಗತಿ. ಆದರೂ ಏಳಬೇಕಾದಂತಹ ದಿನ ಇದಾಗಿತ್ತು: 27 ಜುಲೈ 2008. 'ಹತ್ತು ಗಂಟೆ ಮೂವತ್ತು ನಿಮಿಷಕ್ಕೆ ಕಾಫಿ-ತಿಂಡಿ ಸಮೇತ ಕಾಯ್ತಿರ್ತೀವಿ, ಬನ್ನಿ' ಅಂತ ಸುಪ್ತದೀಪ್ತಿ, ತುಳಸಿಯಮ್ಮ -ಇಬ್ರೂ ಪ್ರೀತಿಯಿಂದ ಕರೆದಿದ್ರು. ಹೋಗ್ಲಿಲ್ಲಾಂದ್ರೆ ಬೈಸಿಕೊಳ್ಳಬೇಕಾಗತ್ತೆ ಅಂತ ನಾವೂ ಹೋದ್ವಿ.

ಬಾಂಬಿನಂತಿದ್ದ ಇಡ್ಲಿಗಳು ಸುಚಿತ್ರಾದ ಬಾಗಿಲಲ್ಲೇ ನಮ್ಮನ್ನು ಸ್ವಾಗತಿಸಿದವು. ಬೀಳ್ತಿದ್ದ ಸಣ್ಣ ಮಳೆಯಲ್ಲಿ ನೆನೀತಾ ಬಿಸಿಬಿಸಿ ಕಾಫಿ ಕುಡಿದು ನಾವು ಸುಚಿತ್ರಾದ ಒಳಗೆ ಕಾಲಿಡೋ ಹೊತ್ತಿಗೆ ಪುಟ್ಟ ಹುಡುಗಿ ಊರ್ಜಾ, ತನ್ನ ಸಣ್ಣ ಕಂಠದ ಪ್ರಾರ್ಥನೆಗೆ ಸಿಕ್ಕ ಭಾರೀ ಚಪ್ಪಾಳೆಗೆ ನಮಸ್ಕರಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಳು. ಕಾರ್ಯಕ್ರಮ ನಿರೂಪಿಸ್ತಿದ್ದ ಪ್ರವೀಣ್ ಶಿವಶಂಕರ್, ‘ದಟ್ಸ್ ಕನ್ನಡ’ದ ಶಾಮಸುಂದರರನ್ನು ಸ್ವಾಗತ ಭಾಷಣ ಮಾಡಲಿಕ್ಕೆ ಕರೆದರು. ತಮ್ಮ ಎಂದಿನ ಕಚ್ಚಾ ಶೈಲಿಯಲ್ಲೇ ಎಲ್ಲರನ್ನೂ ಸ್ವಾಗತಿಸಿದ ಶಾಮ್, ಲೇಖಕಿಯರಿಗೆ ಶುಭ ಹಾರೈಸಿದರು.

ನಂತರ ಪುಸ್ತಕ ಬಿಡುಗಡೆ ನಡೆಯಿತು. ಕವಿ ದೊಡ್ಡರಂಗೇಗೌಡರು ಜ್ಯೋತಿ ಮಹದೇವ್ ಅವರ 'ಭಾವಬಿಂಬ' ಕವನ ಸಂಕಲನವನ್ನೂ, ಪತ್ರಕರ್ತ-ಕತೆಗಾರ ಜೋಗಿ ಅವರು ತ್ರಿವೇಣಿ ಶ್ರೀನಿವಾಸ್ ರಾವ್ ಅವರ 'ತುಳಸಿವನ' ಕೃತಿಯನ್ನೂ ಬಿಡುಗಡೆ ಮಾಡಿದರು.

ದೊಡ್ಡರಂಗೇಗೌಡರು 'ಭಾವಬಿಂಬ'ದ ಬಗ್ಗೆ ಮಾತನಾಡುತ್ತಾ, 'ಸುಪ್ತದೀಪ್ತಿ'ಯವರ ಕವನಗಳಲ್ಲಿನ ಸರಳತೆಯ ಬಗ್ಗೆ, ಅಚ್ಚಕನ್ನಡದ ಪ್ರತಿಮೆಗಳ ಬಗ್ಗೆ, ಭಾವಾಭಿವ್ಯಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 'ಹೀಗೆ ಹಾಡಬಹುದಾದಂತಹ ಭಾವಗೀತೆಗಳನ್ನು ರಚಿಸುವವರ ಸಂಖ್ಯೆ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಜ್ಯೋತಿ ಮಹದೇವ್ ಮುಖ್ಯವಾಗುತ್ತಾರೆ' ಎಂದರು. ಅವರ ಕವನಗಳಲ್ಲಿ ಅಡಕವಾಗಿರುವ ಉಪಮೆಗಳು, ರೂಪಕಗಳು, ಹೊಸತನ, ತಲ್ಲಣ -ಎಲ್ಲವನ್ನೂ ಅಲ್ಲಲ್ಲಿ ಹೆಕ್ಕಿ ಉದಾಹರಿಸಿದರು.

ಪುಸ್ತಕ ಬಿಡುಗಡೆಯಾದ ಖುಶಿಯಲ್ಲಿದ್ದ ಜ್ಯೋತಿ ನಂತರ ಮಾತನಾಡಿ, 'ಕವನ ನನ್ನ ಹುಚ್ಚು. ನನ್ನ ಪೌರುಷ ಏನಿದ್ರೂ ಕೀಲಿಮಣೆ ಮುಂದೆ. ಮೈಕ್ ಮುಂದೆ ನಿಂತ್ರೆ ಕೈಕಾಲು ನಡುಗತ್ತೆ' ಎನ್ನುತ್ತಲೇ ತಮ್ಮ ಆಪ್ತರನ್ನೂ, ಸಂಕಲನ ಬಿಡುಗಡೆಯಾಗುವಲ್ಲಿ ನೆರವಾದವರನ್ನೂ ನೆನದರು.

ಆಮೇಲೆ ಮಾತನಾಡಿದ ಜೋಗಿ, ತ್ರಿವೇಣಿಯವರ 'ತುಳಸಿವನ' ಸಂಕಲನದಲ್ಲಿನ ಲೇಖನಗಳುದ್ದಕ್ಕೂ ಕಾವ್ಯದ ಸಾಲುಗಳು ಹಾಸುಹೊಕ್ಕಾಗಿರುವುದನ್ನು ಗಮನಿಸಿದರು. ದೂರದ ಶಿಕಾಗೋದಲ್ಲಿ ನೆಲೆಸಿದ್ದೂ ಭಾರತದಲ್ಲಿ ನಡೆಯುತ್ತಿರುವ ದಿನನಿತ್ಯದ ಸಂಗತಿಗಳನ್ನು ಇಲ್ಲೇ ಇದ್ದು ಕಂಡು ಬರೆದಂತೆ ಬರೆದಿರುವ ತುಳಸಿಯಮ್ಮರ ನೈಪುಣ್ಯವನ್ನು ಶ್ಲಾಘಿಸಿದರು. 'ಈ ಪುಸ್ತಕವನ್ನು ಕೊಂಡು ಇಟ್ಟುಕೊಂಡು ಆಗಾಗ ತೆರೆದು ಓದಿ ಖುಷಿ ಪಡಬಹುದು' ಎಂದು ಹೇಳಿದರು. ಅವರ ಮಾತಿನಲ್ಲಿ ಕನ್ನಡ ಸಾಹಿತ್ಯದ ಹಿಂದಿನ ಕಾಲ, ಬೆಳವಣಿಗೆ, ಈಗಿನ ಸ್ಥಿತಿ, ಬ್ಲಾಗ್ ಲೋಕ -ಎಲ್ಲವೂ ಹರಿದು ಬಂದವು.

' ತುಳಸಿಯಮ್ಮ' ಅಂತಲೇ ಆನ್‌ಲೈನ್ ಜಗತ್ತಿನಲ್ಲಿ ಕರೆಸಿಕೊಳ್ಳುವ ತ್ರಿವೇಣಿ ಮಾತನಾಡಿ 'ಜೋಗಿ ನನ್ನ ಅತ್ಯಂತ ಇಷ್ಟದ ಲೇಖಕರು. ನನ್ನ ಗುರು. ಅವರಿಂದ ನನ್ನ ಪುಸ್ತಕವನ್ನ ಬಿಡುಗಡೆ ಮಾಡಿಸ್ಬೇಕು ಅನ್ನೋದು ನನ್ನ ಕನಸಾಗಿತ್ತು, ಅದು ಇಂದು ನನಸಾಗಿದೆ' ಎಂದರು. ಮೊದಲೆಲ್ಲಾ ಕವನ ಬರೆಯುತ್ತಿದ್ದ ತಾವು ನಾಗತಿಹಳ್ಳಿ, ಬೆಳಗೆರೆ, ಜೋಗಿ -ಇಂಥವರು ಇಷ್ಟು ಸುಲಭವಾಗಿ ಗದ್ಯವನ್ನು ಹೇಗೆ ಬರೀತಾರೆ ಅಂತ ಆಶ್ಚರ್ಯ ಪಡ್ತಿದ್ದೆ, ಹಾಗೇ ಬರೀಲಿಕ್ಕೆ ಶುರು ಮಾಡಿದೆ ಎಂದರು. 'ತಮಗೆ ಅನಿವಾಸಿ ಭಾರತೀಯರು ಎಂಬ ಹಣೆಪಟ್ಟಿ ಕೊಡದೆ ತಮ್ಮೊಂದಿಗೆ ನಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಡಾ| ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, 'ಈ ಲೇಖಕಿಯರು ಕರ್ನಾಟಕವನ್ನೇ ಅಮೆರಿಕೆಗೆ ವಿಮಾನದಲ್ಲಿ ಎತ್ತಿಕೊಂಡು ಹೋಗಿಬಿಟ್ಟಿದ್ದಾರೆ. ಇವರ ಉತ್ಸಾಹ, ಕನ್ನಡ ಪ್ರೀತಿ ನೋಡಿದರೆ ತುಂಬಾ ಸಂತೋಷವಾಗುತ್ತದೆ' ಎಂದರು. ಸುಪ್ತದೀಪ್ತಿಯವರಿಗೆ ಕವನಗಳಾಚೆಯೂ ಬೆಳೆಯುವಂತೆ, ತುಳಸಿಯಮ್ಮನಿಗೆ ಮತ್ತೆ ಕವನದ ಕೈ ಹಿಡಿಯುವಂತೆ ಪ್ರೀತಿಯಿಂದ ತಾಕೀತು ಮಾಡಿದರು.

ಕಾರ್ಯಕ್ರಮದಲ್ಲಿದ್ದ ವಿಶೇಷತೆಗಳಲ್ಲಿ ವಂದನಾರ್ಪಣೆಯೂ ಒಂದು. ಇಬ್ಬರು ಲೇಖಕಿಯರೂ ಸೇರಿ, ಒಬ್ಬೊಬ್ಬರು ಒಂದೊಂದು ಸಾಲಿನಂತೆ, ನೆರೆದಿದ್ದವರೆಲ್ಲರನ್ನೂ ವಂದಿಸಿದರು. ತನ್ಮೂಲಕ ಸಮಾರಂಭಕ್ಕೆ ಒಂದು ಆಪ್ತ ಮುಕ್ತಾಯ ಒದಗಿಸಿದರು.

.. ಹೊರಗಡೆ, ತುಳಸಿಯ ದಳದಲ್ಲಿ ನೆನೆದಿತ್ತೋ ಎಂಬಂತೆ, ಭಾವಬಿಂದುಗಳಂತೆ ಕಾಣುತ್ತಿದ್ದ ವರ್ಷಧಾರೆಯಾಗುತ್ತಿತ್ತು. ಆ ಸಣ್ಣ ಮಳೆಯಲ್ಲಿ ಒದ್ದೆಯಾಗುತ್ತಾ, ನಮ್ಮ ನಮ್ಮ ಆಪ್ತೇಷ್ಟರೊಂದಿಗೆ ಮಾತನಾಡುತ್ತಾ ಎಲ್ಲರೂ ಊಟ ಮಾಡಿದೆವು. ಕಾರ್ಯಕ್ರಮಕ್ಕೆಂದು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್, ಸಾ.ಶಿ. ಮರುಳಯ್ಯರಂತಹ ಹಿರಿಯ ಸಾಹಿತಿಗಳು ಬಂದದ್ದು, ಅಲ್ಲೇ ಓಡಾಡಿಕೊಂಡಿದ್ದದ್ದು ಉಲ್ಲಾಸದಾಯಕವಾಗಿತ್ತು. ಅನೇಕ ಬ್ಲಾಗೀ ಮಿತ್ರರೂ ಇದ್ದದ್ದು ತಿಂದ ಬಾದಾಮ್‌ಪುರಿಯಷ್ಟೇ ಸಿಹಿಯಿತ್ತು. ಹರಟೆ ಮುಗಿದು, ಹೊಟ್ಟೆ ತುಂಬಿ, ಮನೆಗೆ ಹೊರಡುವ ಹೊತ್ತಿಗೆ, ಒಂದು ಭಾನುವಾರದ ಅರ್ಧ ದಿನವನ್ನು ಚಂದದಿಂದ ಕಳೆದ ಖುಶಿಯಲ್ಲಿ ಮನಸು ಅರಳಿತ್ತು.

- ಸುಶ್ರುತ ದೊಡ್ಡೇರಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments