ಕನ್ನಡ ಸಾಹಿತ್ಯ ವಲಯದಲ್ಲಿ ಪರಿಚಿತವಾಗಿರುವ ಮತ್ತು ಕನ್ನಡ ಆನ್‌ಲೈನ್ ಲೋಕದಲ್ಲಿ ಪ್ರಸಿದ್ಧಿ ಪಡೆದಿರುವ ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಜ್ಯೋತಿ ಮಹಾದೇವ್ ಅವರ ಎರಡು ಕೃತಿಗಳು ಜುಲೈ ಕೊನೆಯ ವಾರ ಬೆಂಗಳೂರಿನಲ್ಲಿ ಸಾಹಿತ್ಯಲೋಕಕ್ಕೆ ಅರ್ಪಣೆಗೊಳ್ಳಲಿವೆ.
ಭಾನುವಾರ ಜು.27ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿ ಸಭಾಂಗಣದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಒಂದು ವಿಶೇಷತೆಯೂ ಇದೆ. ಅಶಕ್ತ ಓದುಗರಿಗೆ ನೆರವಾಗುವ ನಿಟ್ಟಿನಲ್ಲಿ ಈ ಕೃತಿಗಳನ್ನು ಅವರು ಅರ್ಪಿಸಲಿದ್ದಾರೆ.
ಆನ್‌ಲೈನ್ ಕ್ಷೇತ್ರದಲ್ಲಿ ತುಳಸಿಯಮ್ಮ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ, ತುಳಸಿವನ ಡಾಟ್ ಕಾಂ ಎಂಬ ಬ್ಲಾಗ್ ಮನೆಯ ಒಡತಿ ತ್ರಿವೇಣಿ ಅವರ ಅಂಕಣಗಳು ದಟ್ಸ್‌ಕನ್ನಡದಲ್ಲೂ, ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಚಿರಪರಿಚಿತ. ಅವರ 'ತುಳಸಿವನ' ಕೃತಿ ಬಿಡುಗಡೆಯಾಗಲಿದೆ. ಮತ್ತೊಬ್ಬ ಲೇಖಕಿ, ಸುಪ್ತದೀಪ್ತಿ ಕಾವ್ಯನಾಮದಿಂದ ಕನ್ನಡ ಆನ್‌ಲೈನ್ ಜಗತ್ತಿನಲ್ಲಿ ಆತ್ಮೀಯವಾಗಿಬಿಟ್ಟಿರುವ ಜ್ಯೋತಿ ಮಹಾದೇವ್. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವನಗಳ ಮೂಲಕ ಬಹಳಷ್ಟು ಹಿಂದೆಯೇ ನೆಲೆಯೂರಿದ್ದ ಜ್ಯೋತಿ ಅವರು ತಮ್ಮ 'ಭಾವ ಬಿಂಬ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇಬ್ಬರು ಲೇಖಕಿಯರೂ ವಿದೇಶದಲ್ಲಿದ್ದುಕೊಂಡು ಆನ್‌ಲೈನ್ ಲೋಕದ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅವರಿಬ್ಬರೂ ಒಂದೇ ವೇದಿಕೆಯಲ್ಲಿ, ಕನ್ನಡ ನಾಡಿನ ರಾಜಧಾನಿಯಲ್ಲಿ ಕೃತಿ ಬಿಡುಗಡೆಗೆ ಹೊರಟಿರುವುದು ವಿಶೇಷವಾಗಿದ್ದು, ಅಭಿಮಾನಿಗಳು, ಓದುಗವರ್ಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.