Webdunia - Bharat's app for daily news and videos

Install App

ವೆಬ್‌ದುನಿಯಾ ವಾರದ ಬ್ಲಾಗ್: ಜೋಗಿ ಮನೆ

Webdunia
- ಉದಯಸಿಂಹ

ಕನ್ನಡಪ್ರಭ ಪತ್ರಿಕೆಯ ಓದುಗರಿಗೆ ಜೋಗಿ ಹೆಸರು ಚಿರಪರಿಚಿತ. ಪತ್ರಿಕಾ ವಲಯದವರಿಗೆ ಆ ಹೆಸರು ಚಿರಪರಿಚಿತ. ಕೆಲ ಕಾದಂಬರಿ, ಕಥಾಸಂಕಲನಗಳು ಪ್ರಕಟಗೊಂಡಿರುವುದರೊಂದಿಗೆ ಉದಯೋನ್ಮುಖ ಬರಹಗಾರನಾಗಿ ಸಾಹಿತ್ಯಕ ವಲಯದಲ್ಲೂ ಆ ಹೆಸರು ಪರಿಚಿತ.

ಜೋಗಿ ಎಂಬ ಈ ವಿಶಿಷ್ಟ ಉಪನಾಮ ಹೊತ್ತ ಎಚ್. ಗಿರೀಶ್ ರಾವ್ ಅವರು ಬ್ಲಾಗ್‌ಗೆ ಕೈಹಾಕಿದಾಗ ಎಲ್ಲೆಡೆಯಿಂದ ಬಹು ಅಪೇಕ್ಷೆಗಳು ಆವರಿಸುವುದು ಸಹಜ. ಯಾರಿಗೇ ಆಗಲೀ ಇಂಥ ಸ್ಥಿತಿಯು ಒತ್ತಡವೂ ಹೌದು, ಸ್ಫೂರ್ತಿಯೂ ಹೌದು. ಆದರೆ ಜೋಗಿ ನಿರೀಕ್ಷೆಯನ್ನು ಸುಳ್ಳಾಗಿಸುವುದಿಲ್ಲ.

ಅನುಭವೀ ಪತ್ರಕರ್ತನಿಂದ ಅನುಭವೀ ಬರಹಗಾರನಾಗಿ ರೂಪಾಂತರಗೊಂಡ ಜೋಗಿಯನ್ನು ನಾವು 'ಜೋಗಿ ಮನೆ'ಯಲ್ಲಿ ನೋಡಬಹುದು ( jogimane.blogspot.com). ಪತ್ರಿಕೆ, ಪುಸ್ತಕ ಇತ್ಯಾದೆಡೆಗಳಲ್ಲಿ ಪ್ರಕಟವಾದ ಜೋಗಿ ಬರಹಗಳು ಬಹುತೇಕವಾಗಿ ಇಲ್ಲಿ ಕಾಣಿಸುತ್ತವೆಯೆಂಬ ಅಂಶವನ್ನು ಹೊರಗಿಟ್ಟು ನೋಡಿದರೆ ಈ ಬ್ಲಾಗ್ ಒಂದು ಉತ್ತಮ ಸಾಹಿತ್ಯಕ ಮೌಲ್ಯವುಳ್ಳದ್ದೆಂಬುದು ನಿಚ್ಚಳವಾಗಿ ತೋರುತ್ತದೆ.

ಜೋಗಿಮನೆಯಲ್ಲಿ ಹೆಚ್ಚಾಗಿ ಕಾಣಸಿಗುವುವು ಪುಸ್ತಕ ವಿಮರ್ಶೆ, ಕಥೆ, ಸಾಹಿತ್ಯಕ ಲೇಖನ ಮತ್ತು ಸುದ್ದಿಗಳು. ಇವುಗಳಲ್ಲಿ ಚಿಂತನೆಗೀಡು ಮಾಡುವುವು ಹಲವು. 'ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ' ಎಂಬ ಲೇಖನದಲ್ಲಿ ಅವರು ನೊಬೆಲ್ ವಿಜೇತ ಸಾಹಿತಿ ಗಾಲ್ಸ್ ವರ್ದಿ ಅವರ ಬಗ್ಗೆ ಬರೆಯುತ್ತಾರೆ. ಲೇಖನದ ಆರಂಭದಲ್ಲಿ ನಾವು ವರ್ದಿಯವರ ವ್ಯಕ್ತಿ ಚಿತ್ರಣದ ಗುಂಗಿನಲ್ಲಿದ್ದರೆ ಅಂತ್ಯದಲ್ಲಿ ಚಿತ್ರಣವೇ ದಿಢೀರ್ ಆಗಿ ಬೇರೆಯಾಗುತ್ತದೆ. "...ಒಳ್ಳೆಯ ಸಾಹಿತಿಗಳೆಲ್ಲ ಆಯಾ ದೇಶದ ವಿರುದ್ಧ ತಿರುಗಿಬಿದ್ದವರೇ. ದೇಶಪ್ರೇಮಿ ಖಂಡಿತಾ ಒಳ್ಳೆಯ ಲೇಖಕ ಆಗಲಾರ. ಪ್ರಭುತ್ವವನ್ನು ಮೆಚ್ಚಿಕೊಂಡು ಹಾಡುವವನು ಒಳ್ಳೆಯ ಕವಿ ಆಗಲಾರ...". ದೇಶಪ್ರೇಮಿ ಎಂದು ಅವರು ಬಳಸಿದ ಪದ ಆಯತಪ್ಪಿ ಮೂಡಿದಂತೆ ತೋರುತ್ತದಾದರೂ ಅವರು ನೈತಿಕತೆಯ ಸೋಗನ್ನು ಮೀರಿ ನಿಂತವ ಉತ್ತಮ ಸಾಹಿತಿ ಆಗುತ್ತಾನೆಂದು ಹೇಳುವುದು ವಿಚಾರಪ್ರಚೋದಕವಾಗಿದೆ. ಅದಕ್ಕೇ ಬಹುಶಃ ಬಂಡಾಯ ಸಾಹಿತ್ಯಗಳು ತೀಕ್ಷ್ಣವಾಗಿರುತ್ತವೆ.

ಇನ್ನೊಂದೆಡೆ ಅವರು 'ರಾಂಗ್ ನಂಬರ್' ಕತೆಯಲ್ಲಿ ಮಾನಸಿಕ ಸಂಕೀರ್ಣತೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಫೋನಿನಲ್ಲಿ ಹುಡುಗಿಯೊಬ್ಬಳ ಸುಮಧುರ ಕಂಠಸಿರಿಯನ್ನು ಆಲಿಸುವ ಲೆಕ್ಕದ ಮಾಸ್ಟರರು ಕೊನೆಗೆ ಜೀವನದ ಲೆಕ್ಕಾಚಾರಗಳಿಂದ ಖಾಯಂಆಗಿ ಹೇಗೆ ವಿಮುಕ್ತರಾದರು ಎಂಬುದನ್ನು ನಾವು ಓದುವಾಗ ನಮ್ಮ ಇನ್ಯಾವುದೋ ಸ್ವಯಂಆನುಭವಗಳು ಧುತ್ತೆಂದು ತಲೆತಿನ್ನುತ್ತವೆ. ಹೆಣ್ಣೆಂಬ ಮಾಯಾಜಿಂಕೆಯ ಸಂಗ ಮಾಡಿದ ಗಂಡಸು ಅವಳಿಂದ ಬಿಡಿಸಿಕೊಳ್ಳುವುದು ಅಸಾಧ್ಯ ಎಂಬ ತಿರುಳು ನೀಡುವ ಈ ಕತೆಯು ಚಿಂತೆಗೀಡಾದವರ ಚಿಂತನೆಗೆ ಆಹಾರವಾಗುತ್ತದೆ.

ಓದುಗ ಮತ್ತು ಲೇಖಕರ ನಡುವೆ ಸಂಬಂಧ ಇರಬೇಕೆ ಬೇಡವೇ ಎಂಬುದನ್ನು ಜೋಗಿಯವರು 'ಓದುಗ ಪ್ರಭು ಮತ್ತು ಲೇಖಕ ಮಹಾಶಯ' ಲೇಖನದಲ್ಲಿ ಅದ್ಭುತವಾಗಿ ಬಿಂಬಿಸಿದ್ದಾರೆ. ಸಾಹಿತಿಯೊಬ್ಬನ ಕೃತಿಯನ್ನು ಕೃತಿಯ ಮೌಲ್ಯದಿಂದ ಅಳೆಯಬೇಕೇ ಹೊರತು, ಸಾಹಿತಿಯ ವೈಯಕ್ತಿಕ ಜೀವನದ ಮೌಲ್ಯದಿಂದಲ್ಲ ಎಂದು ಜೋಗಿ ಹೇಳುತ್ತಾರೆ. ಸಾಹಿತ್ಯ ವಲಯದಲ್ಲಿರುವವರು, ಅಥವಾ ಸಾಹಿತಿಗಳನ್ನು ಹತ್ತಿರದಿಂದ ಬಲ್ಲವರು ಜೋಗಿಯವರ ವಾದವನ್ನು ಇನ್ನೂರಾಣೆ ಪುರಸ್ಕರಿಸುತ್ತಾರೆ.

"... ಓದುಗ ಮೊಂಡು ಹಿಡಿದು ಜಗಳಕ್ಕೆ ಬಂದು ನಾನೇ ನಿನ್ನ ಓದುಗ, ನಿನ್ನನ್ನು ಉದ್ಧರಿಸಿದವನು ನಾನೇ ಎಂದಾಗ ಅಂಥ ಮಾತು ಬರಬಹುದೇ ವಿನಾ, ಓದುಗ ಮತ್ತು ಲೇಖಕರ ನಡುವೆ ಅದನ್ನು ಮೀರಿದಂಥ ಸಂಬಂಧ ಇರಲಾರದು, ಇರಲೂಬಾರದು. ಪ್ರತಿಯೊಬ್ಬ ಪ್ರತಿಭಾವಂತನೂ ತನ್ನ ತನ್ನ ಮಾಧ್ಯಮದ ಮೂಲಕವೇ ಪ್ರಕಟಗೊಳ್ಳುವುದು ಸರಿಯಾದ ಕ್ರಮ. ನಟ ನಟನೆಯ ಮೂಲಕ, ನಾಟಕಕಾರ ಮತ್ತು ನಿರ್ದೇಶಕ ನಾಟಕ, ಸಿನಿಮಾಗಳ ಮೂಲಕ, ಗಾಯಕ ಹಾಡಿನ ಮೂಲಕ.. ಇವರಿಗೆಲ್ಲ ತಮ್ಮನ್ನು ತೋರ್ಪಡಿಸಿಕೊಳ್ಳುವುದಕ್ಕೇ ಮತ್ತೊಂದು ಮೈ ಇದೆ. ಓದುಗರಿಗೆ ಸ್ವೀಕರಿಸುವುದಕ್ಕೆ ಕೂಡ. ಅಲ್ಲಿಗೆ, ಬೇರೆ ಯಾವುದೇ ಥರದ ಮುಖಾಮುಖಿ ಅಗತ್ಯವಿಲ್ಲ ಎಂದ ಹಾಗಾಯಿತಲ್ಲ...."

ಲೇಖಕನ ವೈಯಕ್ತಿಕ ವಿಷಯಗಳು ಓದುಗನಿಗೆ ಅನಗತ್ಯ ಎಂದು ಹೇಳಿ ಜೋಗಿಯವರು ತಮ್ಮ ಬ್ಲಾಗಿನಲ್ಲಿ ಸವಿವರವಾಗಿ (ಬೇರೆಯವರಿಗೆ ಹೋಲಿಸಿದರೆ) ತಮ್ಮ ಬಗ್ಗೆ ಪರಿಚಯ ಮಾಡಿಕೊಳ್ಳುತ್ತಾರೆ. ಇದಿರಲಿ, ಒಟ್ಟಿನಲ್ಲಿ, ಜೋಗಿಮನೆಗೆ ನೀವು ಕಾಲಿಟ್ಟು ಒಳಹೊಕ್ಕರೆ ಅಲ್ಲೆಲ್ಲಾ ನಿಮಗೆ ಅನುಭವ ವಿಚಾರಗಳು ನಿಮ್ಮನ್ನು ಪ್ರಚೋದಿಸುತ್ತವೆ, ಇಲ್ಲವೇ ಕಾಡುತ್ತವೆ, ಇಲ್ಲವೇ ಸಮಾಧಾನ ನೀಡುತ್ತವೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments