Webdunia - Bharat's app for daily news and videos

Install App

ವೆಬ್‌ದುನಿಯಾ ವಾರದ ಬ್ಲಾಗ್: ಅವಧಿ

Webdunia
ಗುರುವಾರ, 3 ಏಪ್ರಿಲ್ 2008 (20:15 IST)
ಅಭಿಮನ್ಯು
ಬೆಳೆಯುತ್ತಿರುವ ಮತ್ತು ಬೆಳಗುತ್ತಿರುವ ಕನ್ನಡ ಬ್ಲಾಗ್ ಲೋಕದಲ್ಲೊಂದು ಸುತ್ತು ವಿಹರಿಸಿದಾಗ ಇಲ್ಲಿ ಹಲವಾರು ಬ್ಲಾಗ್ ತಾರೆಗಳು ದೊರೆಯುತ್ತವೆ. ಮನಮುಟ್ಟುವ ಮತ್ತು ತಟ್ಟುವ ಬ್ಲಾಗುಗಳ ಸಾಲು ಸಾಲೇ ಇತ್ತೀಚಿನ ದಿನಗಳಲ್ಲಿ ಬೆಳಕು ಕಾಣುತ್ತಿವೆ.

ಕೆಲವು ಬ್ಲಾಗ್‌ಗಳು ಆಂತರ್ಯದ ದನಿಯಾಗಿದ್ದರೆ, ಇನ್ನು ಕೆಲವು ಭಾವನೆಗಳ ಬಿತ್ತರ. ಮತ್ತೆ ಕೆಲವರಿಗೆ ಅವರದ್ದೇ ಕತೆ, ಕಾವ್ಯ, ಲಹರಿಗಳ ಸಂಕಲನ. ಈ ಮಧ್ಯೆ ಒಂದು ನಿರ್ದಿಷ್ಟ ಉದ್ದೇಶದಿಂದ ಹೋರಾಟದ, ಸುಧಾರಣೆಯ ಕೆಚ್ಚಿನಿಂದ(ಕಿಚ್ಚಿನಿಂದ) ಬ್ಲಾಗಿಸುವವರೂ ಇದ್ದಾರೆ. ಇವುಗಳಲ್ಲಿ ಅತ್ಯುತ್ತಮ ಬ್ಲಾಗ್ ಅಂತ ಆರಿಸೋದು ಕಷ್ಟದ ಸಂಗತಿ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ, ಓದಲೂ ಚೆನ್ನ.

ಹಾಗಾಗಿ ಇದುವೇ ಅತ್ಯುತ್ತಮ ಬ್ಲಾಗು ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟಕರ ಎಂಬಷ್ಟರ ಮಟ್ಟಿಗೆ ಕನ್ನಡ ಬ್ಲಾಗಿಗರು ಅದ್ಭುತ ಪ್ರಯತ್ನ ಮಾಡುತ್ತಿದ್ದಾರೆ. ಈ ಬ್ಲಾಗುಗಳನ್ನು ಗುರುತಿಸಿ ಪರಿಚಯಿಸುವ ಮತ್ತು ವಾರಕ್ಕೊಂದು ಬ್ಲಾಗಿನ ಮೇಲೆ ಬೆಳಕು ಚೆಲ್ಲುವ ಈ ಅಭಿಯಾನವನ್ನು ನಾವಿಂದು ಆರಂಭಿಸುತ್ತಿದ್ದೇವೆ.

ಈ ಬಾರಿ ನಮ್ಮ ತಂಡ ಆರಿಸಿರುವುದು 'ಅವಧಿ' ಎಂಬ ಬ್ಲಾಗನ್ನು. ನೇರವಾಗಿ ಹೃದಯಕ್ಕೇ ತಟ್ಟುವ ಈ ಬ್ಲಾಗಿನ ಪ್ರಕಟಣೆಗಳು ಉತ್ತಮ ಅಭಿರುಚಿಯ ಪ್ರತೀಕ. ಕೆಲವು ಬರಹಗಳು ನಮ್ಮದೇ ಅಂತರಂಗದ ಪ್ರತಿಬಿಂಬವೋ ಎಂಬಂತೆ ಕಾಡುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಿದ್ದರೆ ರುಚಿ-ಶುಚಿಯ ಹೂರಣವುಳ್ಳ ಸಿಹಿಸಿಹಿ ಹೋಳಿಗೆಯನ್ನು ಮೆದ್ದಂತಾಗುವ ಖುಷಿ ಕೊಡುತ್ತಿದೆ ಅವಧಿ ಬಳಗ. ಅವಧಿಗೆ ಭೇಟಿ ನೀಡಿ ವಿಹರಿಸಿ ಹೊರ ಬಂದ ನಂತರವೂ ಅದೆಷ್ಟೋ ಹೊತ್ತಿನ ತನಕವೂ ಅದರ ಅನುಭೂತಿ ಮನಸ್ಸಿನ ಮೇಲೆ ಮುದವಾಗಿ ಸವಾರಿ ಮಾಡುತ್ತಿರುತ್ತದೆ. ಇದು ಕ್ಲಾಸ್ ಮತ್ತು ಕ್ಲಾಸಿಕ್ ಕೂಡ!

ಅದರಲ್ಲಿರುವ ತೀರಾ ಇತ್ತೀಚಿನ ಬರಹದ ಬಗ್ಗೆ ಕಣ್ಣಾಡಿಸೋಣ:

" ಕದವ ತಟ್ಟಿದವರಾರು" ಎಂಬ ತಲೆಬರಹದಡಿಯಲ್ಲಿ ಶಾಲೆಯಲ್ಲಿ ಚಂದ್ರಗ್ರಹಣ ಪಾಠ ಆಗ್ತಾ ಇರೋವಾಗಿನ ಸನ್ನಿವೇಶ ಈ ರೀತಿ ವಿವರಿಸಲಾಗಿದೆ.:

" ಭೂಮಿ ಥರಾನೇ ತಿರುಗೋಕ್ಕೆ ಹೇಳಿದ್ರು. ಎಲ್ಲಾ ಸಹಪಾಠಿಗಳ ಕಣ್ಣು ನನ್ನ ಕಡೆನೇ ಇತ್ತು. ತಿರುಗಿದೆ. ಥೇಟ್ ಭೂಮಿ ಥರಾನೇ ತಿರುಗಿದೆ. ಆದ್ರೆ ಶಾಲೆ ಮಾತ್ರ ಗಪ್ ಚಿಪ್. ನನ್ನ ಚಡ್ಡಿಯ ಹಿಂಭಾಗ ಹರಿದಿತ್ತು. ಅಮ್ಮ ಹೇಗೋ ಅದಕ್ಕೆ ತೇಪೆ ಹಚ್ಚಿದ್ರು. ಭೂಮಿ ಥರಾ ತಿರುಗ್ತಾ ತಿರುಗ್ತಾ ನಾನು ನನ್ನನ್ನೇ ಬಿಚ್ಚಿಟ್ಟುಕೊಂಡಿದ್ದೆ. ಒಂದು ಸಲ ತಿರುಗಿದ್ದಕ್ಕೇ ಬೆಳಕು ಕತ್ತಲಾಗಿ ಹೋಗಿತ್ತು"

ಈ ಸಾಲುಗಳನ್ನೊಂದು ಬಾರಿ ಓದಿ ನೋಡಿ, ಅದರಲ್ಲಿ ನೋವಿನ ಆ ದಿನಗಳ ಕಹಿವಾಸ್ತವದ ನೆನಪು ತುಂಬಿಕೊಂಡಿದೆ. ಬಡತನ ನಡುವೆಯೂ ಮಗನನ್ನು ಓದಿಸುವ ಅಮ್ಮನ ವಾತ್ಸಲ್ಯದ ಮತ್ತು ಮಹದಾಕಾಂಕ್ಷೆಯ ಸ್ಪರ್ಶವಿದೆ.

ಮತ್ತೊಂದು ಸಾಲು ನೋಡಿ:

" ಸ್ಕೂಲ್ ಟ್ರಿಪ್ ಅಂದ್ರೆ ಸಂಕೋಚದ ಮುದ್ದೆ ಆಗೋಗ್ತಿದ್ವಿ. ದುಡ್ಡಿಲ್ಲ ಅಂತಾ ಗೊತ್ತಾಗುತ್ತಲ್ಲಾ ಅಂತಾ. ಶನಿವಾರ ಬರುತ್ತೆ ಅಂದ್ರೆ ಸಾಕು, ಭೂಮಿ ಬಾಯ್ಬಿಟ್ಟ ಹಾಗಾಗ್ತಿತ್ತು. ಯಾಕೆಂದ್ರೆ ಶನಿವಾರ ಕಲರ್ ಡ್ರೆಸ್ ದಿನ. ಎಲ್ರೂ ಶನಿವಾರ ಬರ್‍ಲಿ ಅಂತಾ ಕಾಯ್ತಿದ್ರು. ಮನೇನಲ್ಲಿದ್ದ ಬಣ್ಣ ಬಣ್ಣದ ಡ್ರೆಸ್ ಎಲ್ಲಾ ಆಚೆ ಬರ್ತಿತ್ತು. ಆದ್ರೆ ನಾನು ಮಾತ್ರ ಮುದುಡೋಗ್ತಿದ್ದೆ. ಕಲರ್ ಡ್ರೆಸ್ ಅಂತಾ ಹಾಕ್ಕೊಳ್ಳೋದಕ್ಕೆ ಏನಿತ್ತು ನನ್ನತ್ರ? ಶನಿವಾರಾನೂ ಯೂನಿಫಾರ್ಮನ್ನೇ ಹಾಕ್ಕೊಂಡೋಗ್ತಿದ್ದೆ. ಶಾಲೆ ಮೈದಾನದಲ್ಲಿ, ಕ್ಲಾಸ್ ರೂಮಲ್ಲಿ ಬಣ್ಣ ಬಣ್ಣದ ಡ್ರೆಸ್ ಗಳ ಮಧ್ಯೆ ವೈಟ್ ಅಂಡ್ ವೈಟ್. ಅದ್ಕೇ ಆಗ್ಲೂ ಈಗ್ಲೂ ನಾನು ಯೂನಿಫಾರ್ಮ್ ಪರ. ಅಷ್ಟೇ ಅಲ್ಲ, ಎಲ್ಲಾ ಆರು ದಿನಾನೂ ಯೂನಿಫಾರ್ಮೇ ಇರ್ಬೇಕು ಅನ್ನೋದರ ಪರ. ಯೂನಿಫಾರ್ಮ್ ನಮ್ಮನ್ನು ಮಾತ್ರ ಅಲ್ಲ, ನಮ್ಮ ಸಮಸ್ಯೆಗಳ ಮಾನಾನೂ ಕಾಪಾಡೋದು."

ಬಹುಶಃ ಈ ಸಾಲುಗಳನ್ನು ಓದಿದ ಪ್ರತಿಯೊಬ್ಬರಿಗೂ ಎದೆಯೊಳಗೆ ನೋವಿನ ಛಳಕೊಂದು ಮಿಂಚಿ ಮರೆಯಾದ ಅನುಭವವಾಗಿರಬಹುದು.

ಅವಧಿ ಬ್ಲಾಗ್ ನಿರ್ಮಾತೃಗಳೇ ಹೇಳಿಕೊಳ್ಳುವಂತೆ, ಇದು ಕನಸುಗಳ ಬೆಂಬತ್ತಿದ ನಡಿಗೆ. ಓಡುವ ತವಕವೂ ಸೇರಿಕೊಳ್ಳುವ ಈ ಪಯಣದಲ್ಲಿ ಭರವಸೆಯ ಮೈಲಿಗಲ್ಲುಗಳು ಮಾತಿಗೆ ಸಿಗುತ್ತವೆ. ಎಲ್ಲರೂ ಜೊತೆಗಿದ್ದೇವೆಂಬ ಭಾವದ ತಂಪಿದೆ.

ಹ್ಯಾಟ್ಸ್ ಆಫ್ ಅವಧಿ. avadhi.wordpress.com

( ಪ್ರತಿವಾರ ಒಂದೊಂದು ಉತ್ತಮ ಬ್ಲಾಗನ್ನು ಗುರುತಿಸುವ ಕಾರ್ಯವನ್ನು ವೆಬ್‌ದುನಿಯಾ ಕೈಗೆತ್ತಿಕೊಂಡಿದೆ. ಅಕ್ಷರ ದೋಷವಿಲ್ಲದ, ತೀರಾ ವೈಯಕ್ತಿಕವಲ್ಲದ, ಜಾಗೃತಿ ಮೂಡಿಸುವ, ಆಸಕ್ತಿದಾಯಕ ಬ್ಲಾಗುಗಳಿಗೆ ಆದ್ಯತೆ ನೀಡಲಾಗುತ್ತದೆ. ಕನ್ನಡ ಬ್ಲಾಗ್ ಲೋಕ ಪ್ರಜ್ವಲಿಸಲಿ ಎಂಬುದು ನಮ್ಮ ಹಾರೈಕೆ. -ಸಂ )

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments