Webdunia - Bharat's app for daily news and videos

Install App

ಬ್ಲಾಗ್ ಲೋಕದೊಳಗೆ ಇಣುಕಿ...

ವೆಬ್‌ದುನಿಯಾದಿಂದ ಕನ್ನಡ ಬ್ಲಾಗ್ ದುನಿಯಾಕ್ಕೊಂದು ಸುತ್ತು...

Webdunia
ಅವಿನಾಶ್ ಬಿ.
ND
ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು. ಸರಕಾರದ ಧೋರಣೆ ಬಗ್ಗೆ, ನಿಮ್ಮೂರಿನ ಸಮಸ್ಯೆಗಳ ಬಗ್ಗೆ... ನಿಮಗೇನನಿಸುತ್ತದೋ... ಬರೆದು ಬಿಡಿ... ಅಲ್ಲಲ್ಲ... (ಬ್ಲಾಗಿಗರ ಭಾಷೆಯಲ್ಲೇ ಹೇಳುವುದಾದರೆ) ಕೀಬೋರ್ಡ್ ಕುಟ್ಟಿ ಬಿಡಿ!

ಕೆಲವು ಬ್ಲಾಗುಗಳು ಮಾಹಿತಿ ಗುಚ್ಛವಾಗಿ ಕಾರ್ಯನಿರ್ವಹಿಸುತ್ತಿವೆ. ಮತ್ತೆ ಕೆಲವು ಬ್ಲಾಗುಗಳು ಮನಸ್ಸಿಗೆ ಹತ್ತಿರವಾಗುವ ಆತ್ಮೀಯ ವಾಕ್ಯವೃಂದಗಳು, ಕವನ ಶೃಂಖಲೆಗಳು, ಭಾವನಾ ಲಹರಿಗಳು ಮುಂತಾದವುಗಳ ಮೂಲಕ ಆಪ್ತವಾಗುತ್ತವೆ. ಬೇರಾರಲ್ಲೂ ದುಃಖ ತೋಡಿಕೊಳ್ಳಲಾಗದ ವಿರಹಿಗಳು ಇಲ್ಲಿ ತಮ್ಮ ಮನಸ್ಸಿನ ವೇದನೆಯನ್ನು ಅಕ್ಷರರೂಪಕ್ಕಿಳಿಸುತ್ತಾರೆ. ಬರೆದವನಿಗೆ ಗೊತ್ತು ಆ ಅಕ್ಷರಗಳ ಹಿಂದಿರುವ ನೋವು. ಓದುವವರ ಮತ್ತು ಅಂಥದ್ದೇ ಪರಿಸ್ಥಿತಿಯ ಅನುಭವವಿರುವವರ ಮನಸ್ಸು ಒಮ್ಮೆ ಆರ್ದ್ರವಾಗುವುದು ಮಾತ್ರ ಸುಳ್ಳಲ್ಲ.

ಈ ಬ್ಲಾಗು ಲೋಕದಲ್ಲಿ ಅದೆಷ್ಟೋ ಪ್ರೇಮಕವನಗಳು ಹುಟ್ಟಿಕೊಳ್ಳುತ್ತವೆ... ಸಮಕಾಲೀನ ಪರಿಸ್ಥಿತಿಯ ಕುರಿತು ಗಂಭೀರ ಲೇಖನಗಳು, ಕನ್ನಡ ಭಾಷೆ ಉಳಿಸುವುದು ಮತ್ತು ಬೆಳೆಸುವುದರ ಬಗ್ಗೆ ಚರ್ಚೆಗಳು, ಕನ್ನಡ ಮತ್ತು ಕನ್ನಡಿಗರ ಏಳಿಗೆಗೆ ಸಲಹೆಗಳು ಪುಂಖಾನುಪುಂಖವಾಗಿ ಮೂಡಿಬರುತ್ತವೆ.

ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಕನ್ನಡಿಗರಿಗೆ ತಲುಪಿಸುವ, ಹಿರಿಯ ಕವಿಗಳ ಕವನಗಳನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ, ಚಲನಚಿತ್ರದ ಹಾಡುಗಳು, ವೀಡಿಯೋ ತುಣುಕುಗಳನ್ನು ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡುವ, ರುಚಿಯಾದ ಅಡುಗೆ ಮಾಡುವುದನ್ನು ತಿಳಿಸಿಕೊಡುವ, ಚಾರಣ-ಪ್ರವಾಸ ಕಥನಗಳನ್ನು, ವೈದ್ಯಕೀಯ ಜಗತ್ತಿನ ಆಗುಹೋಗುಗಳನ್ನು, ಸುಂದರವಾಗಿ ಹೆಣೆದ ಕಥೆಗಳನ್ನು-ಕವನಗಳ ರಸದೌತಣವನ್ನು ಉಣಬಡಿಸುವ ಬ್ಲಾಗುಗಳು ಸಾಕಷ್ಟಿವೆ. ಅಂತೆಯೇ, ಸಿನಿಮಾ ಜಗತ್ತಿನ ಆಗುಹೋಗುಗಳನ್ನು, ಅಪರಾಧ ಜಗತ್ತಿನ ತಲ್ಲಣಗಳನ್ನು, ರಾಜಕೀಯ ಕ್ಷೇತ್ರದ ಬೆಳವಣಿಗೆಗಳನ್ನು ವಿಶ್ಲೇಷಿಸುವ ನಮ್ಮ ಮಾಧ್ಯಮ ಮಿತ್ರರ ಬ್ಲಾಗುಗಳು ತಮ್ಮದೇ ಪ್ರಭಾ ವಲಯವನ್ನು ಸೃಷ್ಟಿಸಿಕೊಂಡಿವೆ.

ಜಗತ್ತಿನ ಆಗುಹೋಗುಗಳನ್ನು ವಕ್ರದೃಷ್ಟಿಯಲ್ಲೇ ನೋಡುತ್ತಾ, ಓದುಗರ ಮನಸ್ಸನ್ನೊಮ್ಮೆ ಹಗುರಾಗಿಸುವ, ನಕ್ಕು ನಗಿಸುವ ವಿಡಂಬನಾತ್ಮಕ ಬ್ಲಾಗುಗಳು ಕೆಲವಿವೆ. ಅವುಗಳ ಕಾಮೆಂಟ್ ವಿಭಾಗಗಳು ಕೂಡ ಮನಸ್ಸಿನ ಭಾರ ಕಳೆದುಕೊಳ್ಳುವ ಹಗುರಾಗಿಸಿಕೊಳ್ಳಲು ಇರುವ ತಾಣಗಳಂತಿರುತ್ತವೆ. ಮತ್ತೊಂದೆಡೆ ತಮ್ಮ ದಿನಚರಿಗೆ ಸೀಮಿತವಾದ ಬ್ಲಾಗುಗಳು, ಸಾಹಿತ್ಯ ಲೋಕದ ಆಗುಹೋಗುಗಳನ್ನು, ಸಾಹಿತ್ಯ ವಿಮರ್ಶೆಯನ್ನು, ಲೋಕಾಭಿರಾಮ ವಿಚಾರಗಳನ್ನು ಚರ್ಚಿಸುವ ಬ್ಲಾಗುಗಳು ಇಲ್ಲಿವೆ. ಇಲ್ಲಿ ಕಂಡು ಬರುವ ಟಿಪ್ಪಣಿಗಳು (ಕಾಮೆಂಟ್‌ಗಳು) ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುತ್ತವೆ. ಗಂಭೀರ ಚರ್ಚೆಗೆ ವೇದಿಕೆಯೂ ಆಗುತ್ತವೆ.

ದೂರದ ನಾಡಿನಲ್ಲಿದ್ದುಕೊಂಡು ಕನ್ನಡದ ಭಾವಗಂಧವನ್ನು ಆಸ್ವಾದಿಸಲಾರದೆ ಮತ್ತು ಕನ್ನಡದ ಸಿರಿಗಂಧದ ಕಂಪನ್ನು ಬಿಟ್ಟಿರಲು ಸಾಧ್ಯವಾಗದೆ ಚಡಪಡಿಸುತ್ತಿರುವವರಿಗೆ ಕನ್ನಡ-ಕನ್ನಡಿಗರನ್ನು ಬೆಸೆಯುವ ಕೊಂಡಿಯಾಗಿಯೂ ಈ ಬ್ಲಾಗುಗಳು ಕಾರ್ಯ ನಿರ್ವಹಿಸುತ್ತವೆ. ಧಾರ್ಮಿಕ, ಆಧ್ಯಾತ್ಮಿಕ ಕಂಪನ್ನು ಪಸರಿಸುವ ಬ್ಲಾಗ್ ತಾಣಗಳೂ ಇವೆ.

ಒಟ್ಟಾರೆಯಾಗಿ, ಬ್ಲಾಗು ಎಂಬುದು ಅದ್ಭುತ ಮಾಧ್ಯಮವಾಗಿ ಕನ್ನಡದ ಅಂತರ್ಜಾಲ ಲೋಕದಲ್ಲೂ ಬೆಳವಣಿಗೆ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ.

ಈ ಮಾತು ಈಗ ಯಾಕೆ ಹೇಳಬೇಕಾಯಿತೆಂದರೆ, ದಕ್ಷಿಣ ಭಾರತದ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಬ್ಲಾಗು ಲೋಕ ಈಗಷ್ಟೇ ದಷ್ಟಪುಷ್ಟವಾಗತೊಡಗಿದೆ. ಕೆಲವು ಬ್ಲಾಗುಗಳು ದಿನಂಪ್ರತಿ ಪತ್ರಿಕೆ ಹೊರಬಂದ ರೀತಿಯಲ್ಲೇ ಸರಿಯಾದ ಸಮಯಕ್ಕೆ ಪ್ರಕಾಶಿತವಾಗುತ್ತವೆ. ಆರಂಭಶೂರತ್ವ ಪ್ರದರ್ಶಿಸಿ, ಅರ್ಧದಲ್ಲೇ ಕೈಬಿಟ್ಟವರೂ ಇರುತ್ತಾರೆ. ಕಳೆದ ವರ್ಷ ನೂರರ ಆಸುಪಾಸು ಇದ್ದ ಬ್ಲಾಗುಗಳ ಸಂಖ್ಯೆ ಒಂದು ವರ್ಷದಲ್ಲಿ ಅದ್ಭುತ ಅನ್ನಿಸುವಷ್ಟು ಬೆಳವಣಿಗೆ ಸಾಧಿಸಿದೆ. ಕಾಲದೊಂದಿಗಿನ ಈ ಓಟದಲ್ಲಿ ಕೆಲವು ಬ್ಲಾಗುಗಳು ತಣ್ಣಗೆ ಮಲಗಿದ್ದರೆ, ಮತ್ತೆ ಕೆಲವು ಬ್ಲಾಗುಗಳು ಶರವೇಗದಿಂದ ಮುನ್ನಡೆಯುತ್ತಿವೆ.

ಇಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಸಾಫ್ಟ್‌ವೇರ್ ಕ್ಷೇತ್ರದತ್ತ ಇಂದಿನ ಯುವಜನಾಂಗ ಆಕರ್ಷಿತವಾಗುತ್ತಿದೆ ಎಂಬುದು ಹಳೆಯ ಮಾತು. ಹಾಗೆಯೇ ಹಿಂದಿನ ಕಾಲದಲ್ಲಿ ಜೀವನದ ಜಂಜಾಟಗಳಿಂದ ಮುಕ್ತರಾಗಿ, ನಿರ್ಲಿಪ್ತ ಭಾವದಿಂದಿರುವ ಸಂನ್ಯಾಸಿಗಳಿರುತ್ತಿದ್ದರು. ಈಗ ಅಂತಹವರೆಲ್ಲಾ (ಭಾವನೆಗಳೇ ಇಲ್ಲದ ಎಂಬರ್ಥದಲ್ಲಿ) ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗುತ್ತಿದ್ದಾರೆ ಎಂಬ ವಿಡಂಬನಾತ್ಮಕ ವಾಕ್ಯವನ್ನೂ ಹೆಚ್ಚಿನವರು ಕೇಳಿರಬಹುದು. ಆದರೆ ಅದಕ್ಕೆ ತದ್ವಿರುದ್ಧವಾಗಿ, ಸಾಫ್ಟ್‌ವೇರ್ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿರುವವರು ಇಂದು ಮಾಧ್ಯಮ ಮಿತ್ರರಿಗೆ (ವರದಿಗಾರರು, ಉಪಸಂಪಾದಕರು) ಸರಿಸಾಟಿಯಾಗಿ ನಿಂತು ಈ ಕನ್ನಡ ಬ್ಲಾಗ್ ಲೋಕವನ್ನು ಬೆಳಗುತ್ತಿದ್ದಾರೆ.

ಬ್ಲಾಗ್ ಹೊಂದಿರುವವರಲ್ಲಿ, ಹಿರಿಯ ವಯಸ್ಕರಿಗಿಂತಲೂ ನಮ್ಮ ಕನ್ನಡದ ಯುವ ಜನಾಂಗವೇ ಮುಂದೆ ಇದೆ ಎಂಬುದು ಸರ್ವ ವಿದಿತ. ಕೆಲಸದ ಒತ್ತಡದ ನಡುವೆ ಒಂದಷ್ಟು ಬಿಡುವು ಮಾಡಿಕೊಂಡು ಅವರು ಬರೆಯುತ್ತಿರುವ ಬ್ಲಾಗುಗಳಲ್ಲಿ ಕೆಲವೊಂದು ಎಷ್ಟು ಆಪ್ಯಾಯಮಾನವಾಗುತ್ತವೆ ಎಂದರೆ, ಓದಿ ಪೂರ್ಣಗೊಳಿಸದಿದ್ದರೆ, ಆ ದಿನ ಎಂಥದ್ದೋ ಒಂದು ಕೊರತೆ ಮನಸ್ಸನ್ನು ಕಾಡುತ್ತಲೇ ಇರುತ್ತದೆ. ಕೆಲವರಿಗೆ ಬರೆಯಲು ತುಡಿತವಿದೆ, ಎಲ್ಲಿಂದ ಆರಂಭಿಸಬೇಕೆಂಬುದು ತೋಚುವುದಿಲ್ಲ, ಮತ್ತೆ ಕೆಲವರಿಗೆ ಅದಮ್ಯ ಆಕಾಂಕ್ಷೆಯಿದೆ, ಕೀಬೋರ್ಡ್‌ಗೆ ತಮ್ಮ ಭಾವನೆಗಳನ್ನು ಇಳಿಸುವಾಗ ಅದೆಷ್ಟೋ ಅಕ್ಷರ ದೋಷಗಳು ನುಸುಳಿಬಿಡುತ್ತವೆ. ಅದನ್ನೊಂದು ಹೊರತುಪಡಿಸಿದರೆ, ಬರವಣಿಗೆಗೆ ಮುಂದಾಗುವ ಅವರ ಹುರುಪು ಇದೆಯಲ್ಲ, ಅದು ಮೆಚ್ಚಬೇಕಾದದ್ದು.

ಕನ್ನಡದ ಬ್ಲಾಗು ಲೋಕ ಮತ್ತಷ್ಟು ಬೆಳಗಲಿ ಎಂಬ ಹಾರೈಕೆಯೊಂದಿಗೆ, " ವೆಬ್‌ದುನಿಯಾ ಕನ್ನಡ" ವು ವಾರಕ್ಕೊಂದು ಬ್ಲಾಗನ್ನು ಪುಟ್ಟದಾಗಿ ವಿಶ್ಲೇಷಿಸಿ, ' ವಾರದ ಬ್ಲಾಗ್' ಎಂಬೊಂದು ಅಂಕಣವನ್ನು ಮುಂದಿನ ವಾರದಿಂದ ಆರಂಭಿಸುತ್ತಿದೆ. ರಚನಾತ್ಮಕ, ಮಾಹಿತಿಪೂರ್ಣ ಸಾಹಿತ್ಯವುಳ್ಳ ಯಾವುದೇ ಬ್ಲಾಗುಗಳಿಗೆ ಇಲ್ಲಿ ಅವಕಾಶವಿದೆ. ಆದರೊಂದು ಷರತ್ತು- ಅವು ಸಕ್ರಿಯವಾಗಿರುವ ಬ್ಲಾಗ್‌ಗಳಾಗಿರಬೇಕು. ಯಾವುದೇ ಬ್ಲಾಗುಗಳಲ್ಲಿ ಪ್ರಕಟವಾಗಿರುವ ವಿಷಯಗಳಿಗೆ ಆಯಾ ಲೇಖಕರೇ ಜವಾಬ್ದಾರಿ.

ಬನ್ನಿ, ಇದರಲ್ಲಿ ನೀವೂ ಪಾಲ್ಗೊಳ್ಳಿ. ಸಲಹೆ ಸೂಚನೆಗಳನ್ನು ನೀಡಿ. ಚರ್ಚಿಸಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments