' ಅನ್ವೇಷಿ' ಅರ್ಧ ಶತಮಾನದ ಹಿಂದೆ... ನಮ್ಮಜ್ಜ, ತಾತಂದಿರ ಕಾಲವದು. 1947ರಲ್ಲಿ ಭಾರತಕ್ಕೆ ಸಾತಂತ್ರ್ಯ ಸಿಕ್ಕಾಗ ನಮ್ಮಜ್ಜಂದಿರಿಗೂ ಸ್ವಾತಂತ್ರ್ಯ ಸಿಕ್ತು. ಅದು ವಂಶ ಪಾರಂಪರ್ಯವಾಗಿ ಹರಿದು ಸ್ವಾತಂತ್ರ್ಯ ಅನ್ನೋ ಆಜನ್ಮಸಿದ್ಧ ಹಕ್ಕು ನನ್ನ ಪಾಲಿಗಾಯಿತು. ಹೌದು, ಜನ್ಮ ಪೂರ್ವತಃವಾಗಿಯೇ ನನಗೆ ಈ ಹಕ್ಕು ಲಭಿಸಿತ್ತು.
ND
ಅಂತೂ ನಾನು ಬೆಳೆದು, ಭಾರತದ ಬಡ 'ಮತದಾರ'ನ ವಯಸ್ಸೂ ಆಯಿತು. ಆಗೊಂದು ಮನಸ್ಸೂ ಆಯಿತು. ಅದೇನೆಂದರೆ ದಿಢೀರ್ ಶ್ರೀಮಂತನಾಗಬೇಕು. ಯೋಚಿಸಿದೆ, ಏನು ಮಾಡೋಣ? ಹಾಂ.....ಒಂದು ಐಡಿಯಾ ಹೊಳೆಯಿತು. ಕಳ್ಳತನ ಮಾಡಿದರೆ ಬೇಕಾದಷ್ಟು ಗಳಿಸಬಹುದು.
ಹೌದು, ಅಂದಿನಿಂದಲೇ ನನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಿದೆ. ಸಣ್ಣ ಪುಟ್ಟ ಕಳ್ಳತನ ಮಾಡಿದೆ. ಅದೂ ಚಾಕಚಕ್ಯತೆಯಿಂದ... ಪೊಲೀಸರ ವ್ಯಾಪ್ತಿಗೆ ಹೊರತಾದ ಕಳ್ಳತನ ಮಾಡಿದೆ. ಆದರೆ ಕೆಲವೇ ದಿನಗಳಲ್ಲಿ 'ಸಂಪಾದನೆ' ಕಡಿಮೆಯಾಯಿತೆಂದು ತೋರಿತು. ಸ್ವಲ್ಪ 'ಎತ್ತರ'ಕ್ಕೇರಿದೆ. ಮಹಡಿ ಮನೆ, ನವ್ಯ ಬಂಗಲೆಗಳುಳ್ಳವರತ್ತ ಕಣ್ಣು ಹಾಯಿಸಿದೆ. ಒಂದೆರೆಡು ಬಾರಿ ಜೈಲಿಗೆ ಹೋಗಿ ಬಂದೆ. ಅಷ್ಟೊತ್ತಿಗಾಗಲೇ ನಮ್ಮ ಊರಿನ ಸುತ್ತಮುತ್ತ ನಾನು 'ಪ್ರಸಿದ್ಧ'ನಾಗಿದ್ದೆ. ನಿಧಾನವಾಗಿ ಗ್ಯಾಂಗೊಂದನ್ನು ಕಟ್ಟಿದೆ. ಬಾಲ ಅಲ್ಲಾಡಿಸುತ್ತಾ ನನ್ನಾಜ್ಞೆಗೆ ಕಾಯುತ್ತಿರುವ ಚಮಚಾಗಳನ್ನು ಸಂಪಾದಿಸಿದೆ. ಅವಕ್ಕೊಂದಿಷ್ಟು ಬಿಸಾಕಿದರೆ ಬಾಲ ಮಡಚಿಕೊಂಡು ನನ್ನ ಕೆಲಸ ಮಾಡಿಕೊಡುತ್ತವೆ.
ಆದರೂ ಅನೇಕ ಕೊಲೆ, ಸುಲಿಗೆ, ಆತ್ಯಾಚಾರ, ವಂಚನೆ ಮುಂತಾದ 'ಸಣ್ಣ ಪುಟ್ಟ' ಕೆಲಸಗಳಿಂದ ನನಗೆ ಬೇಕಾದಷ್ಟು ಸಂಪಾದಿಸಲು ಆಸಾಧ್ಯ ಎನ್ನಿಸಿತು. ಹಾಗಾದರೆ ಇನ್ನೇನು ಉಪಾಯ? ಯೋಚಿಸಬೇಕಾದ ಪರಿಸ್ಥಿತಿ ಬರಲಿಲ್ಲ. ಇದ್ದೇ ಇದೆಯಲ್ಲ....'ರಾಜಕೀಯ'! ಅದಕ್ಕೆ ಧುಮುಕುಲು ಯೋಚಿಸುತ್ತಲೇ ಇರುವಾಗ 'ರೋಗಿ ಬಯಸಿದ್ದೂ ಹಾಲನ್ನ, ವೈದ್ಯ ಹೇಳಿದ್ದೂ ಹಾಲನ್ನ' ಎಂಬಂತೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷನೋರ್ವ ನನ್ನನ್ನು ಭೇಟಿಯಾದ. ಇದಕ್ಕೆ ಕಾರಣ ನನ್ನ ಸಿದ್ಧಿ-ಪ್ರಸಿದ್ಧಿ.
ಅದಾಗಲೇ ಕೇಂದ್ರದಲ್ಲಿನ ಆಡಳಿತ ಸರಕಾರದಲ್ಲಿ ಭಿನ್ನಮತಗಳು ಉಲ್ಬಣವಾಗಿ, ಪರಾಕಾಷ್ಠೆಗೇರಿ, ಕೊನೆಗೆ ಪಕ್ಷವು ಒಡೆದು ಚೂರು ಚೂರಾಗಿ ಸರಕಾರ ವಿಸರ್ಜನೆಯಾಗಿ ಲೋಕಸಭಾ ಚುನಾವಣೆ ಘೋಷಿಸಿಯಾಗಿತ್ತು. ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ನಾನು ಸೇರಿದ ಆ ಪಕ್ಷದ ಅಧ್ಯಕ್ಷ ಟಿಕೆಟು ನೀಡಿದ. ಅಬ್ಬಾ! ಆರಿಸಿ ಬಂದರೆ ಸರಕಾರವನ್ನು ಎಷ್ಟು ಬೇಕಾದರೂ ದೋಚಿ, ಹೋದ ಹಣವನ್ನೆಲ್ಲಾ ಮರು ಸಂಪಾದಿಸಬಹುದು ಎಂದು ಯೋಚಿಸಿದ್ದೇ ತಡ, ಕಾರ್ಯಪ್ರವೃತ್ತನಾದೆ. ನಾನು ಸ್ಪರ್ಧಿಸಿದ ಕ್ಷೇತ್ರದಲ್ಲಿ ಎಲ್ಲರಿಗೂ (ಬೇಕಾದವರಿಗೆ) ದಿನಂಪ್ರತಿ ತಲಾ 50 ತೊಟ್ಟೆ ಸರಾಯಿ ಸರಬರಾಜು ಮಾಡಿದೆ, ಉಳಿದವರಿಗೆಲ್ಲಾ ಹಣ, ಸೀರೆ ಹಂಚಿದೆ. ಅಂತೂ ಜನರ ಮನಸ್ಸನ್ನು ನಾನು "ಗೆದ್ದೇ" ಬಿಟ್ಟೆ.
ನನ್ನ ವಿರುದ್ದ ನಿಂತ ಆಭ್ಯರ್ಥಿಯೊಬ್ಬ "ಪ್ರಾಮಾಣಿಕ" ಎಂಬ ಅಪ್ರಯೋಜಕ ಹಣೆಪಟ್ಟಿ ಧರಿಸಿದ್ದ ಬಡಪಾಯಿಯಾಗಿದ್ದ. ಆತ ಹೋದಲ್ಲೆಲ್ಲಾ ಬೆರಳಣಿಕೆಯಷ್ಟು ಜನ ಸೇರುವುದನ್ನು ನೋಡಿ ಅಯ್ಯೋ ಅನ್ನಿಸುತ್ತಿತ್ತು. ಚುನಾವಣೆ ನಡೆದು ಫಲಿತಾಂಶ ಬಂದೇ ಬಂತು. ಫಲಿತಾಂಶ ನಿಮಗೇನೂ ಹೇಳಬೇಕಾಗಿಲ್ಲ ತಾನೇ? ನನ್ನ ಕ್ಷೇತ್ರದಲ್ಲಿ 100 ಶೇಕಡಾ ಮತ ಗಳಿಸಿ ನಾನು ಆಯ್ಕೆಯಾದೆ. 100 ಶೇಕಡಾ ಹೇಗಂತೀರಾ? ನನ್ನ ಎದುರಾಳಿಯಾದ ಪ್ರಾಮಾಣಿಕ ಅಭ್ಯರ್ಥಿಯ ಸ್ವಂತ ಮತವನ್ನೇ ನನ್ನ ಕಡೆಯವರು ಅವನಿಗಿಂತಲೂ ಮೊದಲೇ ಹೋಗಿ ಹಾಕಿ ಬಂದಿದ್ದರು. ಮತ್ತೆ ಮತ ಪೆಟ್ಟಿಗೆ ವಶ, ಬೂತ್ ವಶಗಳು ಇದ್ದದ್ದೇ ಅಲ್ವೇ! ಒಟ್ಟಿನಲ್ಲಿ ನಾನು ಆರಿಸಿ ಬಂದೆ.
ಕೊನೆಗೆ ನಾವೊಂದೆರಡ್ಮೂರು ಪಕ್ಷಗಳು ಒಟ್ಟು ಸೇರಿ ಚೌಚೌ ಸರಕಾರ ರಚಿಸಿದೆವು. ನನಗೂ ಒಂದು ಮಂತ್ರಿ ಪದವಿ ಸಿಕ್ತು. ಆದರೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಿಲ್ಲವೆಂದು ನಾನು ಸಿಡಿದೆದ್ದೆ. ರಾಜೀನಾಮೆ ನೀಡಲು ಮುಂದಾದೆ. ನಾನು ಹೊಸಬನಾದುದರಿಂದ, ನನ್ನತ್ತ ಯಾರೂ ಗಮನ ಹರಿಸುವುದಿಲ್ಲವೆಂದು ತಿಳಿದು ಬಂದಾಗ, ತೆಪ್ಪಗಾಗಿ 'ಸಿಕ್ಕಿದ್ದು ದೇವರ ಪುಣ್ಯ' ಎಂಬಂತೆ ಸ್ವೀಕರಿಸಿದೆ, ನಮ್ಮ ಪ್ರಧಾನಿಯವರಿಗೆ 'ಸಂಪೂರ್ಣ ಬೆಂಬಲ' ನೀಡುತ್ತೇವೆ ಎಂದು ಘೋಷಿಸಿ ಎಲ್ಲರಿಂದಲೂ ಶಹಭಾಸ್ ಪಡೆದೆ.
ಆದರೆ ನನ್ನೊಳಗಿನ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಮುಂದಿನ ಬಾರಿ ಇವರಿಗೆ ಬುದ್ಧಿ ಕಲಿಸೋಣವೆಂದುಕೊಂಡು "ಮುಂದಿನ ಚುನಾವಣೆಗೆ' ತಯಾರಿ ಮಾಡಿಕೊಳ್ಳುವತ್ತ ದೃಷ್ಟಿ ನೆಟ್ಟೆ. ಹೇಗೆ? ಈಗ ಸಿಕ್ಕಿರೋ ಸಚಿವಾಲಯದಿಂದ ಖಜಾನೆಯನ್ನು ದೋಚುವುದು. ಹೇಗಿದ್ದರೂ "ಹುಟ್ಟುಗುಣ ...' ಎಲ್ಲವನ್ನು ಜೇಬಿಗಿಳಿಸಿದೆ. ರಾಜಾರೋಷವಾಗಿ ಭಾಷಣ ಬಿಗಿದು, "ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ'' ಮುಂತಾದ "ನಿಕೃಷ್ಟ' ವಾಕ್ಯ ಪ್ರಯೋಗ ಮಾಡಿ ಜನರನ್ನು ಮರುಳುಗೊಳಿಸತೊಡಗಿದೆ. ಹೋದಲ್ಲೆಲ್ಲಾ ಹಾರ ಹಾಕುವಂತೆ, ಜಯಘೋಷ ಹಾಕುವಂತೆ, ಲಾರಿಗಟ್ಟಲೆ ಜನ ಸೇರುವಂತೆ ನನ್ನ ಚಮಚಾಗಳು ನೋಡಿಕೊಂಡರು.
ನನ್ನ ಈ ಜನಪ್ರಿಯತೆಯನ್ನು ಕಂಡು ನಮ್ಮ ಪಕ್ಷಾಧ್ಯಕ್ಷ ಮೆತ್ತಗಾದ. ಮಾತ್ರವಲ್ಲ, ಇತರ ಪಕ್ಷಗಳವರೂ ನನ್ನತ್ತ ಕಣ್ಣು ಹಾಯಿಸತೊಡಗಿದರು. ಆದಾಗಲೇ ನಮ್ಮ ಸರಕಾರದಲ್ಲಿ ಭಿನ್ನಾಭಿಪ್ರಾಯಗಳೆದ್ದು ಸರಕಾರ ಉರುಳುವ ಹಂತಕ್ಕೆ ಬಂದಿತ್ತು. ಅನೇಕ ಪಕ್ಷಗಳವರು ನನ್ನನ್ನು ಸೆಳೆಯಲು ಯೋಚಿಸಿದರು. ಕೆಲವರು ನನಗೆ "ಗೌರವ"ಧನ ಕೊಡಲು ಬಂದರು. ಕೊಟ್ಟವರನ್ನೆಲ್ಲಾ ಚೆನ್ನಾಗಿ ಸತ್ಕರಿಸಿ ಅವರು ಹೇಳಿದ್ದಕ್ಕೆಲ್ಲಾ ಕೋಲೆ ಬಸವನಂತೆ ತಲೆ ಆಡಿಸಿ, ಸಿಕ್ಕಿದ್ದನ್ನೆಲ್ಲಾ ದೇವರ ಕಾರ್ಯವೆನ್ನುವಂತೆ ಜೇಬಿಗಿಳಿಸಿದೆ.
ಆದರೆ ನನ್ನ ಈ ಘನ ಕಾರ್ಯಗಳನ್ನು ತಿಳಿದ ನಮ್ಮ ಪಕ್ಷಾಧ್ಯಕ್ಷ ಅನೇಕರ ಒತ್ತಡಕ್ಕೆ ಮಣಿದು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ. ನಾನು ಸಿಡಿದೆದ್ದೆ. ಘರ್ಜಿಸಿದೆ. ರೋಷಗೊಂಡೆ. ಕೊನೆಗೆ ಇದ್ದೇ ಇದೆಯಲ್ಲ, ಪ್ರತ್ಯೇಕ ಪಕ್ಷ... ರಚಿಸಿದೆ. ಅದಕ್ಕೆ ಅಖಿಲ ಭಾರತ ಭ್ರಷ್ಟ ಪಕ್ಷ (ಅಭಾಭ್ರಪ) ಎಂದು ಸರ್ವತ್ರ ಪರಿಚಿತವಾಗಿರುವ ಪದವುಳ್ಳ ಹೆಸರಿಟ್ಟೆ. ಯಾಕೆಂದರೆ ಈ ದೇಶದಲ್ಲಿ 'ಭ್ರಷ್ಟ' ಎಂಬ ಶಬ್ದ ಒಂದು ಸಣ್ಣ ಮಗುವಿನ ಬಾಯಲ್ಲೂ ಕೇಳಿ ಬರುತ್ತಿರುತ್ತದೆ. ಅಷ್ಟು ಹಾಸುಹೊಕ್ಕಾಗಿದೆ ಆ ಶಬ್ದ.
ನನ್ನ ಉಚ್ಚಾಟನೆಯಾದ ಬಳಿಕ ಭಿನ್ನಮತ ತೀವ್ರವಾಗಿ ಸರಕಾರ ಉರುಳಿ ಬಿತ್ತು. ಇದರಲ್ಲಿ ನನ್ನ ಅಮೋಘ ಕೈವಾಡವಿತ್ತೆನ್ನುವುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಸರಿ, ಮತ್ತೆ ಚುನಾವಣೆ ಘೋಷಿಸಲಾಯಿತು. ನನ್ನ "ಮಾಮೂಲಿ ಪ್ರಕ್ರಿಯೆ'ಗಳಿಂದ ಮತ್ತೆ ಆರಿಸಿ ಬಂದೆ. ನನ್ನ ವಿರುದ್ಧ ನಿಂತವರೆಲ್ಲಾ ಠೇವಣಿ ಕಳಕೊಂಡರು. ಈ ಬಾರಿಯ ಚುನಾವಣೆಯಲ್ಲಿ ಅನೇಕ ಪಕ್ಷಗಳ ಸದಸ್ಯರು ಸ್ವರ್ಧಿಸಿದ್ದರು. ನನ್ನ ಅಭಾಭ್ರಪದ ಓರ್ವ ಕಿರಿಯ ಸದಸ್ಯನೂ ವಿಜಯಿಯಾದ.
ಫಲಿತಾಂಶಗಳೆಲ್ಲಾ ಘೋಷಿಸಲ್ಪಟ್ಟವು. ಒಟ್ಟು 545 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಮಾತ್ರ ವಿಚಿತ್ರವಾಗಿತ್ತು. ಅಭಾಭ್ರಪದ ನಮ್ಮಿಬ್ಬರನ್ನು ಹೊರತುಪಡಿಸಿ ಇತರ 540 ಎಂ.ಪಿ.ಗಳೂ 543 ವಿವಿಧ ಪಕ್ಷಗಳಿಗೆ ಸೇರಿದವರು!
ಈರ್ವರು ಸದ್ಯಸರುಳ್ಳ ಏಕೈಕ ಅತಿದೊಡ್ಡ ಪಕ್ಷದ ನಾಯಕನಾದ ನನ್ನನ್ನು ಸರಕಾರ ರಚಿಸುವಂತೆ ರಾಷ್ಟ್ರಪತಿಗಳು ಆಹ್ವಾನಿಸಿದರು. ಪತ್ರಿಕೆಗಳು ಏನೇನೆಲ್ಲಾ ಬರೆದವು. ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳದೆ ನಾನು, ಲಂಚದ ಹೊಳೆಯನ್ನೇ ಹರಿಸಿ, ಒಂದೇ ದಿನದಲ್ಲಿ ಬಹುಮತ ಸಾಬೀತು ಪಡಿಸಿದೆ. ಅದೂ 100 ಶೇಕಡಾ ಬಹುಮತ. ಇನ್ನು ಪ್ರತಿಪಕ್ಷದ ಪ್ರಶ್ನೆಯೇ ಏಳುವುದಿಲ್ಲ. ಅಂದಿನಿಂದ ಶುರುವಾಯಿತು ನನ್ನ ರಾಜ್ಯಭಾರ. ನಾನು ಪ್ರಧಾನಿಯಾದೆ. 544 ಎಂ.ಪಿ.ಗಳಿಗೆ 544 ಕ್ಯಾಬಿನೆಟ್ ದರ್ಜೆಯ ಸಚಿವ ಪದವಿಗಳನ್ನು (ಸೃಷ್ಟಿಸಿ) ನೀಡಲು ಯೋಚಿಸಿದೆ. ಪತ್ರಿಕೆಗಳು ಜಂಬೋ ಜೆಟ್ ಎಂದು ಬರೆದವು. ನಾನು ಕೇರ್ ಮಾಡಲಿಲ್ಲ. ನನ್ನ ಕ್ಯಾಬಿನೆಟ್ ಪ್ರಮಾಣ ವಚನ ಸ್ವೀಕಾರದ ಪ್ರಕ್ರಿಯೆಗಳಿಗೆ ಒಂದು ತಿಂಗಳೇ ಹಿಡಿಯಿತು. ಕೆಲವರು ಲಂಚದ ಹೆಸರಿನಲ್ಲಿ, ಕೆಲವರು ಭ್ರಷ್ಟಾಚಾರದ ಹೆಸರಿನಲ್ಲೆಲ್ಲಾ ಪ್ರತಿಜ್ಞಾವಿಧಿ ಸ್ವೀಕರಿಸಿ ತಮ್ಮ ನೈಪುಣ್ಯ ಮೆರೆದರು.
ಈಗ ಪ್ರಥಮ ಸಮಸ್ಯೆ ಉಧ್ಬವಿಸಿತು. 544 ಸಚಿವರಿಗೆ ವಸತಿ ವ್ಯವಸ್ಥೆ... ಸರಿ, ದೆಹಲಿಯ ಎಲ್ಲಾ ಪ್ರತಿಷ್ಠಿತ ಬಂಗಲೆಗಳಲ್ಲಿರುವವರೆಲ್ಲಾ ತಮ್ಮ ಜಾಗ ಖಾಲಿ ಮಾಡಿ ಜೋಪಡಿಗಳಲ್ಲಿ ನೆಲೆಸುವಂತೆ ಅಜ್ಞೆ ಮಾಡಿದೆ. ಆ ಸ್ಥಳಗಳಲ್ಲಿ ಇದ್ದ ಬಂಗಲೆಗಳನ್ನು ಕೆಡಹಿ ತಮ್ಮ ಅಭಿರುಚಿಗನುಗುಣವಾದ ಬಂಗಲೆಗಳನ್ನು ಎಲ್ಲಾ ಸಚಿವರಿಗೆ ಸರಕಾರೀ ವೆಚ್ಚದಲ್ಲಿ ಕಟ್ಟಿಸುವುದಾಗಿ ಘೋಷಿಸಿದೆ.
ಪತ್ರಿಕೆಗಳು ಮತ್ತೆ ಬೊಬ್ಬಿಟ್ಟವು. ಕೂಡಲೇ ನಾನೊಂದು ತುರ್ತು ಪತ್ರಿಕಾ ಗೋಷ್ಠಿ ಕರೆದು, ಸಾಮಾಜಿಕ ನ್ಯಾಯಕ್ಕಾಗಿ, ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಇದನ್ನು ಮಾಡಲಾಯಿತೆಂದು ಹೇಳಿಕೆ ನೀಡಿದೆ.
ಆದರೆ ಸರಕಾರೀ ಹಣ ಬಿಡುಗಡೆಯಾಗದೆ, ಸಚಿವರುಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮಾಧಾನಿಸಲೆತ್ನಿಸಿದೆ. ಊಹೂಂ...ಸಾಧ್ಯವಾಗಲಿಲ್ಲ. ಆಯ್ತು, ರಾಜೀನಾಮೆ ನೀಡಿ, ಹೊರ ನಡೆಯಿರಿ... ಘರ್ಜಿಸಿಯೇ ಬಿಟ್ಟೆ. ಈ ಔಷಧವು ಕೆಲಸ ಮಾಡಿತು. ಎಲ್ಲರೂ ದಿಢೀರನೇ ತೆಪ್ಪಗಾಗಿ ನಾನು ದಬಾಯಿಸಿದ್ದನ್ನೇ ಅಮೂಲ್ಯ ಸಲಹೆ ಅಂತ ಪರಿಗಣಿಸಿ ನನ್ನನ್ನು ಅಭಿನಂದಿಸಲಾರಂಭಿಸಿದರು.
ಸ್ವಲ್ಪ ದಿನಗಳಲ್ಲಿ, ಮತ್ತೆ ಆರಂಭವಾಯಿತು ಕಿರಿಕಿರಿ- ಖಾತೆ ಹಂಚಿಕೆಯ ಜಗಳ. ನಿಮಗೆ ವೈಭವೋಪೇತ ವಸತಿ ಕಲ್ಪಿಸಿ ಈಗಷ್ಟೇ ಸುಸ್ತಾಗಿದ್ದೇನೆ. ಇನ್ನೈದು ದಿನಗಳಲ್ಲಿ ನಿಮಗೆ ಬೇಕಾದ ಖಾತೆ ಕೊಡುತ್ತೇನೆ ಎಂದು ಭರವಸೆಯಿತ್ತೆ. ಭಾರೀ ಸಮಾಧಾನಗೊಂಡ ಅವರೆಲ್ಲಾ ಹೊರ ನಡೆದರು. ನಾನು ನಿಟ್ಟುಸಿರು ಬಿಟ್ಟೆ.
ಇನ್ನು ಖಾತೆಯನ್ನು ಹಂಚಲು ಆರಂಭಿಸಿದೆ. ನನ್ನ ಪಕ್ಷದ ಇನ್ನೋರ್ವ ಸದಸ್ಯನನ್ನು ಕರೆದು ಅವನಿಗೆ "ಭ್ರಷ್ಟಾಚಾರ, ನಯವಂಚನೆ ಮತ್ತು ನಿರಾಕರಣೆ"ಯ ಖಾತೆಯನ್ನು ನೀಡಿದೆ. ಅವ ಸಂತೋಷಗೊಂಡು ಮುನ್ನಡೆದ. ಆದರೆ ಇನ್ನೂ 543 ಖಾತೆಗಳನ್ನು ಹೇಗಪ್ಪಾ ತಯಾರಿಸುವುದು ಎಂದು ಆಲೋಚಿಸಿದಾಗ ನನ್ನ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ನಾನು ಅನೇಕ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದೆ. ಅಂತಾರಾಷ್ಟ್ರೀಯ ಭಾಷೆಯಾಗಿ ಕನ್ನಡದ ಮಹತ್ವ, ಮುಂದಿನ ಅಮೆರಿಕಾ ಚುನಾವಣೆಯಲ್ಲಿ ಒಬಾಮಾ ಜಯಗಳಿಸುವರೇ, ಚಾರ್ಲ್ಸ್ ಡಯಾನಾರ ಸಂಬಂಧದಿಂದ ಬ್ರಿಟನ್ ಜನತೆಯ ಮೇಲೆ ಪರಿಣಾಮ, ನ್ಯೂಜಿಲೆಂಡ್ ಏಕೆ ಅಷ್ಟೊಂದು ಸ್ವಚ್ಛವಾಗಿದೆ, ಜರ್ಮನಿಯ ರಾಷ್ಟ್ರ ಭಾಷೆಯಾಗಿ ಹಿಂದಿ ಏಕಾಗಬಾರದು, ಮಲೇಷ್ಯಾದಲ್ಲಿ ತಮಿಳು ಮಾತೃಭಾಷೆಯೇಕೆ ಮಾಡಬಾರದು, ಕೆನಡಾದಲ್ಲಿ ಉರ್ದು ಭಾಷೆ ಯಾಕೆ ಜಾರಿಗೆ ತರಬಾರದು, ಅಮೆರಿಕಾದ ರಸ್ತೆಗಳಲ್ಲಿ ಎತ್ತಿನ ಗಾಡಿಗಳು ಏಕಿಲ್ಲ, ಬ್ರಿಟಿಷ್ ಸಚಿವರುಗಳು ಜೋಪಡಿಗಳಲ್ಲೇಕೆ ವಾಸಿಸುವುದಿಲ್ಲ, ಆಸ್ಟ್ರೇಲಿಯನ್ನರು ಏಕೆ ಸೀರೆ ಉಡುವುದಿಲ್ಲ, ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟರೆ ಬಹುಸಂಖ್ಯಾತರಿಗೇನು ಕೇಡು? ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೇಗಿದೆ... ಪ್ರತಿಭಾವಂತರಿಗೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಯಾಕೆ ಕೊಡಬೇಕು?...ಇತ್ಯಾದಿ....ಇತ್ಯಾದಿಗಳ ಕುರಿತು ಪರಾಮರ್ಶಿಸಲು.ಒಟ್ಟು 543 ಸಮಿತಿಗಳನ್ನು ರಚಿಸಿದೆ. ಒಂದೊಂದು ಸಮಿತಿಗೆ ಒಂದೊಂದು ಸಚಿವರು ಮುಖ್ಯಸ್ಥರು, ಅವರ ಕುಟುಂಬಸ್ಥರೆಲ್ಲಾ ಆ ಸಮಿತಿಯ ಸದಸ್ಯರು.
ನಾನು ಸಂಪುಟ ಸಭೆ ಕರೆದು ಘೋಷಿಸಿದೆ. ಮಿತ್ರರೇ, ನಿಮ್ಮನ್ನೂ ಈ ಎಲ್ಲಾ ಸಮಿತಿಗಳ ಮುಖಂಡರನ್ನಾಗಿಸಲಾಗಿದೆ. ನೀವು ಸಂಬಂಧಪಟ್ಟ ದೇಶಗಳಿಗೆ ಹೋಗಿ, ಈ ಬಗ್ಗೆ ಎಷ್ಟು ಬೇಕೋ ಅಷ್ಟು ಕಾಲ ಅಧ್ಯಯನ ನಡೆಸಿ ಬನ್ನಿ. ಎಲ್ಲರ ವೆಚ್ಚವನ್ನೂ, ಭಾರತದ ಘನ ಸರಕಾರ ಭರಿಸುತ್ತದೆ. ನೀವು ಹಿಂತಿರುಗಿ ಬಂದ ಬಳಿಕ ನಿಮ್ಮ ಖಾತೆಗಳನ್ನು ಸಿದ್ದಪಡಿಸುತ್ತೇನೆ. ಬೆಸ್ಟ್ ಆಫ್ ಲಕ್.... ಹೋಗಿ ಬನ್ನಿ.... ಅಂದು ಬಿಟ್ಟೆ. ಎಲ್ಲಾ ಸಚಿವರೂ ಹೊರಟು ಬಿಟ್ಟರು. ಇದಕ್ಕೆ ಸುಮಾರು ಎರಡು ತಿಂಗಳು ಹಿಡಿದವು. ಎಲ್ಲಾ ಫ್ಲೈಟ್‌ಗಳು ರಾತ್ರಿಯೇ ಇದ್ದುದರಿಂದ ನನಗಂತೂ ರಾತ್ರಿ ನಿದ್ದೆ ಇಲ್ಲ. ಹಗಲು ಕಚೇರಿಯಲ್ಲೋ, ಸಂಸತ್ತಿನಲ್ಲೋ.. ನಿದ್ದೆ ಮಾಡುತ್ತಿದ್ದೆ.
ರಾಷ್ಟ್ರದ ಕಾರ್ಯಭಾರಗಳನ್ನು ನಾವಿಬ್ಬರೇ ನೋಡಿಕೊಳ್ಳತೊಡಗಿದ್ದೆವು. ಪತ್ರಿಕೆಗಳು ಖಂಡಿಸಿದವು, ಛೀಮಾರಿ ಹಾಕಿದವು, ಬೊಬ್ಬಿಟ್ಟವು. ಹುಚ್ಚ ಪ್ರಧಾನಿ ಎಂದು ಬಣ್ಣಿಸಿದವು. ರಾಷ್ಟ್ರದ ಖಜಾನೆಯನ್ನು ದೋಚಿ ಮಂತ್ರಿಗಳ ಮಜಾಕ್ಕಾಗಿ ಬಳಸಲಾಗುತ್ತದೆ ಎಂದು ದೂರಿದವು. ನನ್ನ "ನಿರಾಕರಣೆ ಸಚಿವ" ಪತ್ರಿಕಾ ಗೋಷ್ಠಿ ಕರೆದು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ.
ಆದರೆ ಆಶ್ಚರ್ಯಕರವಾಗಿ, ವಿದೇಶಕ್ಕೆ ತೆರಳಿದ್ದ ಸಚಿವರೆಲ್ಲಾ ನಾನಂದು ಕೊಂಡಿದ್ದಕ್ಕಿಂತ ಮೊದಲೇ ಬಂದು ಬಿಟ್ಟಿದ್ದರು. ಕಾರಣ? ತನ್ನ ವಿರೋಧಿ ತನಗಿಂತ ಬೇಗ ಬಂದು ಮಹತ್ವದ ಖಾತೆಯನ್ನು ಪಡೆದರೆ ಎಂಬ ಭಯ. ತಲೆನೋವು ಮತ್ತೆ ಆರಂಭವಾಯಿತು. ಕೆಲವು ಎಂ.ಪಿ.ಗಳು ಬಂದು, ಖಾತೆಗಳನ್ನು ನಿರ್ಧರಿಸಿದ್ದೀರೆ ಎಂದು ಕೇಳಿದರು. ನಾನು "ತುಂಬಾ ಬ್ಯುಸಿಯಾಗಿದ್ದುದರಿಂದ ಇನ್ನೂ ಇಲ್ಲ' ಎಂದುತ್ತರಿಸಿದೆ. ಶುರುವಾಯಿತು ಗದ್ದಲ, ಪ್ರತಿಭಟನೆ. "ಜನಪ್ರತಿನಿಧಿಗಳಿಗೆ ಸಚಿವ ಪದವಿ ಕೊಡದಿದ್ದುದರಿಂದ ರಾಷ್ಟ್ರವು ನರಳುತ್ತಿದೆ' ಎಂದು ಕೂಗಾಡಿದರು.
ನಾನು ನನ್ನ ತಾಳ್ಮೆಯ ಕಟ್ಟೆಯನ್ನು ಒಡೆಯಲು ಬಿಡಲಿಲ್ಲ. ಶಾಂತವಾಗಿ ಉತ್ತರಿಸಿದೆ. " ಓ.ಕೆ. ನಿಮಗೆ ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಹೋಗಬಹುದು'. ಈ ಮ್ಯಾಜಿಕ್ ವಾಕ್ಯ ಮತ್ತೆ ನನ್ನ ಸಹಾಯಕ್ಕೆ ಬಂತು. "ಹ್ಹೆ.....ಹ್ಹೆ....ಇಲ್ಲ ಮಹಾಸ್ವಾಮಿ, ಹಾಗೇನಿಲ್ಲ, ಭಾರತದ ಬಡ ಪ್ರಜೆಗಳು, ತಮ್ಮ ಪ್ರತಿನಿಧಿಗಳು ಸಚಿವರಾಗುವುದನ್ನು ನೋಡಲು ಬಯಸುತ್ತಾರೆ ಎಂಬುದನ್ನು ನಾವು ನಿಮಗೆ ತಿಳಿಸಲು ಬಂದೆವಷ್ಟೇ. ತಾವು ತಪ್ಪು ತಿಳಿದುಕೊಳ್ಳಬೇಡಿ' ಎನ್ನುತ್ತಾ ತಣ್ಣಗಾಗಿ ಬಾಲಮಡಚಿಕೊಂಡು ಹೋದರು.
ನಾನೀಗ ಕಠಿಣನಾದೆ. "ನೋಡಿ, ಇದೇ ಕೊನೆ, ಇದೇ ಆರಂಭ, ಇನ್ನೂ ಮುಂದೆ ಯಾರೂ ಚಕಾರವೆತ್ತಬಾರದು. ನೀವೆಲ್ಲರೂ ಖಾತೆಗಳಿಲ್ಲದ ಸಚಿವರಾಗಿಯೇ ಉಳಿಯಿವಿರಿ' ಎಂದು ಹೇಳಿ ನಾನೇ ಎಲ್ಲಾ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡು "ದೋಚ ತೊಡಗಿದ್ದೆ'. ಮಧ್ಯೆ ಮದ್ಯೆ ವಿದೇಶ ಪ್ರಯಾಣ. ನಮ್ಮ ಮನೆಯ ಟಾಮಿಯ ಕಾಲಿಗೆ ಮುಳ್ಳು ಚುಚ್ಚಿತು. ಚಿಕಿತ್ಸೆಗಾಗಿ ನಾನು ಸಂಸಾರ ಸಮೇತನಾಗಿ ಮೊಮ್ಮಕ್ಕಳು, ಮರಿಮಕ್ಕಳೊಂದಿಗೆ ಅಮೆರಿಕಕ್ಕೆ ಹೋಗಿ ಒಂದು ತಿಂಗಳು ಇದ್ದು ಬಂದೆ. ಇದಲ್ಲದೆ ನಮ್ಮ ಮನೆಯ ಪ್ರೀತಿಯ ಬೆಕ್ಕಿಗೂ ಸ್ವಲ್ಪ ಏಟಾಗಿದ್ದುದರಿಂದ ಚಿಕಿತ್ಸೆಗಾಗಿ ವಿದೇಶಕ್ಕೆ ರವಾನಿಸಿದೆ. ಆ ಬಳಿಕವೂ ವಿವಿಧ ಕಾರಣಗಳನ್ನೊಡ್ಡಿ ವಿ.ಪ್ರ. ಕೈಗೊಂಡು ಮಜಾ ಉಡಾಯಿಸಿದೆ. ನನ್ನಪ್ಪನ ಗಂಟೇನೂ.......!
ಇಷ್ಟೊತ್ತಿಗಾಗಲೇ ಭಾರತದಲ್ಲಿ ಭಿನ್ನಮತದ ಅಲೆಯೊಂದು ತೀವ್ರವಾಗಿತ್ತು. ನಾನು ಮಾಡಿದ್ದೆಲ್ಲಾ ಹಗರಣ ಎಂದು ಶುದ್ಧ ಆಪಾದನೆಗಳೊಂದಿಗೆ ಒಂದೊಂದೇ ಬೆಳಕಿಗೆ ಬರತೊಡಗಿದ್ದವು. ಮೇವು ತಿಂದ ಪ್ರಧಾನಿಗೆ ಧಿಕ್ಕಾರ, ಗೊಬ್ಬರ (ಯೂರಿಯಾ) ನುಂಗಿದ ಪ್ರಧಾನಿ, ಬೋಫೋರ್ಸ್ ಗನ್ ಕಬಳಿಸಿದ ಪ್ರಧಾನಿ, ಫೋರ್ಜರಿ ಮಾಡಿದ ಪ್ರಧಾನಿ, 1 ಲಕ್ಷ ಡಾಲರ್ ವಂಚಕ ಪ್ರಧಾನಿ, ದೇಶವನ್ನು ಲೂಟಿಗೈದ ಪ್ರಧಾನಿ, ಹವಾಲಾ ಜಾಲದಲ್ಲಿ ಭಾಗಿಯಾಗಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಭ್ರಷ್ಟ ಪ್ರಧಾನಿ, ಲಂಚ ನೀಡಿ ಸಂಸದರನ್ನು ಖರೀದಿಸಿದ ಪ್ರಧಾನಿ ಎಂಬಿತ್ಯಾದಿ ಸಹಸ್ರನಾಮಾರ್ಚನೆ ಅಲ್ಲಲ್ಲಿ ಕೇಳಿ ಬರುತ್ತಿತ್ತು.
ಅದಾಗಲೇ, ಸಿಬಿಐ ತನಿಖೆ ಆರಂಭಿಸಿತ್ತು. ಒಂದು ಪ್ರಕರಣದಲ್ಲಂತೂ ನನ್ನನ್ನು ಬಂಧಿಸುವವರೆಗೆ ಮುಂದುವರಿದ ಅದರ ನಿರ್ದೇಶಕನನ್ನು ಎತ್ತಂಗಡಿ ಮಾಡಿಸಿದೆ. ನನ್ನ ಅಪ್ತನೋರ್ವನನ್ನು ಆ ಸ್ಥಾನಕ್ಕೆ ನೇಮಿಸಿದೆ. ರಾಜೀನಾಮೆಗೆ ಎಲ್ಲೆಲ್ಲಿಂದಲೂ ಆಗ್ರಹ ಕೇಳಿ ಬರುತ್ತಿತ್ತು. ನಾನಂತೂ ದೃಢವಾಗಿ "ಸತ್ತ ಮೇಲೆ ಖಂಡಿತವಾಗಿಯೂ ರಾಜೀನಾಮೆ ನೀಡುವೆ, ಅಲ್ಲಿ ತನಕ ವಿಶ್ವವೇ ಎದುರಾದರೂ ರಾಜೀನಾಮೆ ನೀಡಲಾರೆ, ಮಾತ್ರವಲ್ಲ ಬಂಧನವಾದರೂ ಜೈಲಿನಿಂದಲೇ ಆಡಳಿತ ನಡೆಸುವೆ'ನೆಂದು ಘಂಟಾಘೋಷವಾಗಿ ಸಾರಿದೆ. ಅದಾಗಲೇ ನನ್ನ ಆಡಳಿತಾವಧಿಯ ಕೊನೆಯ ವರ್ಷದಲ್ಲಿದ್ದೆ. ನನ್ನ"ಸಾಧನೆಯ ಸಮಾವೇಶ'ವೊಂದನ್ನು ಮಾಡಲು ಉದ್ದೇಶಿಸಿದೆ. ಮಿಲಿಯಗಟ್ಟಲೆ "ನನ್ನದಲ್ಲದ' ಹಣ ನೀರಿನಂತೆ ಖರ್ಚಾಯಿತು. ಆದರೆ ಆ ಸಮಾವೇಶದಲ್ಲಿ ಮಳೆ ಜೋರಾಗಿ ಬರುತ್ತಿತ್ತು...
ಮುಖಕ್ಕೆ ಒಂದು ಬಕೆಟು ನೀರು ರಭಸದಿಂದ ಅಪ್ಪಳಿಸಿದಂತಾಯಿತು. "ದಿನಾ ಏರುತ್ತಿರುವ ಬೆಲೆಗಳಿಂದಾಗಿ ಒಂದು ತುತ್ತು ಅನ್ನ ಮಾಡೋಕೂ ಅಕ್ಕಿ ಇಲ್ಲ. ಇದೊಂದು ಸತ್ತ ಹೆಣ ಬಿದ್ಕೊಂಡ್ಹಾಗೆ ಬಿದ್ದಿದೆ. ಮನೆಯವರ ಪರಿಜ್ಞಾನ ಒಂಚೂರೂ ಇಲ್ಲ. ಹೋಗ್ರಿ, ತಗೊಳ್ಳಿ ನನ್ನ ಕರಿಮಣಿ. ಅದನ್ನು ಮಾರಿ ಅದಕ್ಕೆ ಸಿಗುವ "ಅರ್ಧ ಕಿಲೋ' ಅಕ್ಕಿಯನ್ನು ತನ್ನಿ. ಇವತ್ತಾದ್ರೂ ಊಟ ಮಾಡೋಣ' ಎಂದು ವಟಗುಟ್ಟುವುದು ಕೇಳಿ ನಿದ್ರಾಲೋಕದಿಂದ ಈ ಲೋಕಕ್ಕೆ ಬಂದೆ. ಹೆಂಡ್ತಿ ಮುಖ ನೋಡಲಾರ್ದೆ ತಲೆತಗ್ಗಿಸಿಕೊಂಡು ನಮ್ಮ ಸ್ವಾತಂತ್ರ್ಯದ ಮಹೋತ್ಸವ ಸಂದರ್ಭದಲ್ಲಿ ಬಡ ಭಾರತೀಯನ ಸ್ಥಿತಿ ನೆನೆಯುತ್ತಾ, ಒಂದೆರಡು ಹನಿ ಕಣ್ಣೀರಿನೊಂದಿಗೆ ಮುಖಕ್ಕೆ ನೀರು ಹಚ್ಚಿಕೊಂಡು ಒಂದು ಚೀಲದ ತುಂಬಾ ಇದ್ದ ಬದ್ದ ನೋಟುಗಳನ್ನೆಲ್ಲಾ ತುಂಬಿಕೊಂಡು, ಜೇಬು ತುಂಬಾ (!) ಅಕ್ಕಿ ತರಲು ಅಂಗಡಿಯತ್ತ ಧಾವಿಸಿದೆ.