Webdunia - Bharat's app for daily news and videos

Install App

ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ

Webdunia
ಅಣೇಕಟ್ಟೆ ವಿಶ್ವನಾಥ್

ಒಂದು ಎಣ್ಣೆ ಯುದ್ಧ!: ಯುದ್ದಗಳು ನಿರಂತರ ನಡೆದೇ ಇರುತ್ತವೆ. ಇತಿಹಾಸದ ಪುಸ್ತಕದ ತುಂಬಾ, ಪುರಾಣದ ಕತೆಗಳ ತುಂಬಾ ಯುದ್ದಗಳು ಕುತೂಹಲಗಳನ್ನು ಕಟ್ಟಿಕೊಡುತ್ತಾ ಸಾಗುತ್ತವೆ. ರಾಕ್ಷಸರ ವಿರುದ್ದ ದೇವತೆಗಳು ನಡೆಸಿದ ಯುದ್ದ, ರಾಜ್ಯ ವಿಸ್ತರಣೆಗಾಗಿ ರಾಜರು ನಡೆಸಿದ ಯುದ್ದಗಳು ಅನ್ಯಾಯದ ವಿರುದ್ದ ನ್ಯಾಯದ ಯುದ್ದ, ಅಧರ್ಮದ ವಿರುದ್ದ ಧರ್ಮದ ಯುದ್ದ ಹೀಗೆ ಯುದ್ದದ ಕಲ್ಪನೆ ಬಂದಾಗಲೆಲ್ಲಾ ಖಡ್ಗ, ಗುರಾಣಿ, ಈಟಿ, ಕುದುರೆ, ಆನೆಗಳ ದಂಡು, ರಕ್ತದ ಕೋಡಿ ಕಣ್ಣಿಗೆ ಕಟ್ಟುತ್ತದೆ. ಒಂದೆಡೆ ಬಲಿಯಾದ ಬದುಕುಗಳ ನೋವುಗಳು ಮತ್ತೊಂದೆಡೆ ವಿಜಯದ ಸಂಭ್ರಮ. ಇಂತಹ ಯುದ್ದಗಳು ಮುಂದುವರೆದಂತೆ ಬಂದೂಕು ಬಾಂಬುಗಳಾದವು. ಇವು ಯಾವೂ ಬದುಕಲಿಕ್ಕಾಗಿ ಬಂದಂತವಲ್ಲ. ಈ ಯುದ್ದಗಳು ರಣಕಹಳೆಯನ್ನು ಮೊಳಗಿಸಿ ರಣರಂಗಕ್ಕೆ ಕರೆದು ಹೋರಾಡಿ ಸಾಯುವ ಇಲ್ಲವೆ ಸೋಲುವ ಯುದ್ದಗಳು. ಮನುಷ್ಯ ಇನ್ನೂ ಬುದ್ದಿವಂತನಾದಂತೆ ಈ ಯುದ್ದಗಳನ್ನು ತೆರೆಮರೆಯಲ್ಲಿ ನಿಂತು ಕಾಣದ ಕೈಯನ್ನು ಬಳಸಿ ನಡೆಸುತ್ತಿರುವ ಯುದ್ದಗಳಿವೆಯಲ್ಲ ಇವು ಆ ರಣರಂಗದ ಯುದ್ದಗಳಿಗಿಂತಲೂ ಅಪಾಯಕಾರಿ. ಒಂದೇ ಬಾರಿ ಕೊಚ್ಚಿ ಕೊಲ್ಲದೆ ನಿಧಾನವಾಗಿ ಬಹುಕಾಲ ನರಳಿ ಸಾಯುವಂತೆ ಮಾಡುವ ಇತ್ತೀಚಿನ ಯುದ್ದಗಳು ಬರಿಗಣ್ಣಿಗೆ ಕಾಣುವಂತಹವಲ್ಲ. ಅವುಗಳು ನೋಡಲು ಯುದ್ದದಂತೆ ಕಾಣುವುದೂ ಇಲ್ಲ. ಅಂಥಹ ಅಪಾಯಕಾರಿ ಯುದ್ದಗಳಲ್ಲಿ ಈ ಎಣ್ಣೆಯುದ್ದವೂ ಒಂದು.

1998 ರ ಆಗಸ್ಟ್ ತಿಂಗಳಲ್ಲಿ ದೆಹಲಿ ಮತ್ತು ಇನ್ನಿತರ ಬಹುತೇಕ ಪ್ರದೇಶಗಳಲ್ಲಿ 41 ಜನರು ವಿಚಿತ್ರ ರೋಗಗಳಿಗೆ ತುತ್ತಾಗಿ ಅಸುನೀಗಿದರು. 2300 ಜನರು ರೋಗಗ್ರಸ್ಥರಾದರು. ವಾಂತಿ ಭೇದಿಯಾಯಿತು. ಮೈ ಕೈ ಊದಿಕೊಂಡಿತು. ಕಾರಣ ಅವರು ಅಡುಗೆಗೆ ಬಳಸುವ ಸಾಸಿವೆ ಎಣ್ಣೆಗೆ ಕಲಬೆರಕೆಯಾಗಿತ್ತು. ಈ ಸುದ್ದಿಯನ್ನು ನೀವು ಕೇಳಿದ್ದಿರಬಹುದು. ಈ ಎಣ್ಣೆಗೆ ಕಲಬೆರಕೆಯಾಗಿದ್ದು ಯಾವ ಎಣ್ಣೆ ಎಂದು ಹೇಳಿದರೆ ನೀವು ನಂಬಲಿಕ್ಕಿಲ್ಲ. ಡೀಸಲ್! ಮತ್ತು ಕೈಗಾರಿಕೆಗಳಲ್ಲಿ ವೇಸ್ಟಾಗಿ ಉಳಿಯುವ ಎಣ್ಣೆ. ಅದೇ 1998ರ ಆಗಸ್ಟ್ 27 ರಂದು ಕೇಂದ್ರ ಸರ್ಕಾರ ಸಾಸಿವೆ ಎಣ್ಣೆಯ ಮಾರಾಟವನ್ನು ನಿಷೇಧಿಸಿತು. ಸಾಸಿವೆ ಎಣ್ಣೆ ಎಂದರೆ ಉತ್ತರ ಭಾರತದ ಬಹು ಜನರ ಪ್ರಿಯ ಎಣ್ಣೆ. ಮುಂದುವರೆದಂತೆ 1998ರ ಸೆಪ್ಟಂಬರ್ 4 ರಂದು ಸರ್ಕಾರ ಎಲ್ಲಾ ಪ್ಯಾಕ್ ಮಾಡದ ಎಣ್ಣೆಗಳ ಮಾರಾಟವನ್ನು ನಿರ್ಭಂಧಿಸಿತು. ನೋಡಿ, ತಮ್ಮನ್ನು ಅಧಿಕಾರಕ್ಕೆ ತಂದ ಜನರ ಆರೋಗ್ಯದ ಮೇಲೆ ಸರ್ಕಾರಕ್ಕೆ ಎಷ್ಟೊಂದು ಕಾಳಜಿ ಅಲ್ಲವೇ?

ಹಿಂದಿನ ಕತೆ ಕೇಳಿ, 1998ರ ಜುಲೈನಲ್ಲಿ ಸರ್ಕಾರ ಮಿಲಿಯಗಟ್ಟಲೆ ಸೋಯಾಬೀನನ್ನು ಅಮೇರಿಕಾದಿಂದ ತರಿಸಿಕೊಂಡಿತ್ತು. ಎಷ್ಟೇ ಆದರೂ ವಿದೇಶದ ಎಣ್ಣೆಬೀಜಗಳನ್ನು ತರಿಸಿಕೊಳ್ಳುವ ಬಗ್ಗೆ ವಿಚಾರವನ್ನೇ ಮಾಡಿರಲಿಲ್ಲ. ಅಮೇರಿಕಾದಲ್ಲಿ ಕೊಳೆತು ನಾರುತ್ತಿದ್ದ ಸೋಯಾಬೀನ್ ಅನ್ನು ತೃತೀಯ ರಾಷ್ಟ್ತ್ರಗಳ ಮೇಲೆ ಹಾಕಿ ಕೈತೊಳೆದುಕೊಳ್ಳಬೇಕಾದ ದರ್ದು ಅಮೇರಿಕಾಕ್ಕೆ ಇತ್ತು, ಮತ್ತು ಈಗಲೂ ಇದೆ. ಅದಕ್ಕಾಗಿ ಇಂತದ್ದೊಂದು ನಾಟಕ ನಡೆಯಿತು. ಇದಕ್ಕಿಂತ ಮೊದಲೂ ಸಾಸಿವೆ ಎಣ್ಣೆಯಲ್ಲಿ ಕಲಬೆರಕೆ ಇತ್ತಾದರೂ ಅದು ಶೇ.0.1ಕ್ಕಿಂತ ಮೀರಿರಲಿಲ್ಲ. ಈ ಬಾರಿ ಅದು ಶೇ.10 ರಿಂದ 30 ಆಗಿ ಈ ಜನರ ಜೀವಕ್ಕೆ ಮುಳುವಾಗಿತಲ್ಲ ಇದೆಲ್ಲಾ ಸೋಯಾಬೀನ್ ಎಣ್ಣೆಗಾರರ ಪಿತೂರಿ. ಬಹುರಾಷ್ಟ್ತ್ರೀಯ ಕಂಪನಿಗಳು ಇದರಲ್ಲಿ ಶಾಮೀಲು. ಈ ಕಲಬೆರಕೆ ಕೇಸಿನ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯ ಬಂದಿತಾದರೂ ಇಂದಿಗೂ ಅದು ಪ್ರಶ್ನೆಯಾಗಿಯೇ ಉಳಿದಿದೆ.

ತಮ್ಮ ದೇಶದಲ್ಲಿ ಹಂದಿ ಸಾಕಲೆಂದು ಸೋಯಾಬೀನ್ ಬೆಳೆದವರು. ಈಗ ನಮಗೆ ತಿನ್ನಿ ಎನ್ನುತ್ತಿದ್ದಾರಲ್ಲ ಅಮೇರಿಕೆಯವರು ನಮ್ಮನ್ನು ಏನೆಂದುಕೊಂಡಿದ್ದಾರೆಯೋ ಗೊತ್ತಿಲ್ಲ. 1930 ರಲ್ಲಿ ಸೋಯಾಬೀನನ್ನು ಹಂದಿಗೆ ಬಳಸುತ್ತಿದ್ದರು. ಸೋಯಾಬೀನ್ ಬಳಸುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ತೂಕ ಹೆಚ್ಚಾಗುತ್ತದೆ, ಥೈರಾಯಿಡ್ ಸಮಸ್ಯೆ ಹೆಚ್ಚಾಗುತ್ತದೆ. ಅಲ್ಲಿಂದ ಇಲ್ಲಿಗೆ ಬರುವ ಕುಲಾಂತರಿ ಸೋಯಾಬೀನ್ ಮೈತುಂಬಾ ವಿಷವನ್ನೆ ತಿಂದುಡು ಬೆಳೆದ ಕಂತ್ರಿ ಬೀಜಗಳು ಇವುಗಳನ್ನು ತೃತೀಯ ರಾಷ್ಟ್ತ್ರಗಳ ಹೊಟ್ಟೆಗೆ ಕಟ್ಟಲಾಗುತ್ತಿದೆ. ಈ ಹಂದಿಗೆ ಬಳಸುತ್ತಿದ್ದ ಸೋಯಾಬೀನ್ ಉತ್ಪಾದನೆ 1942 ರ ಸುಮಾರಿಗೆ ವಿಪರೀತ ಹೆಚ್ಚಾಗಿತು. ಇದರ ಎಣ್ಣೆಯನ್ನು ಏನು ಮಾಡುವುದು ಎಂಬ ಪ್ರಶ್ನೆ ಎದುರಾಯಿತು. ಆಗ ಅವರಿಗೆ ನಮ್ಮ ಏಷ್ಯಾದ ದೇಶಗಳ ಮುಖ್ಯ ಬೆಳೆಗಳನ್ನು ಹತ್ತಿಕ್ಕಿ ಇಲ್ಲಿ ಸೋಯಾಬೀನ್ ಸಾಮ್ರಾಜ್ಯ ಕಟ್ಟುವ ಕನಸು ಬಿತ್ತು. ಅದಕ್ಕಾಗಿ ಈ ಎಣ್ಣೆಯುದ್ದ ಪ್ರಾರಂಭವಾಯಿತು. ಬಹುರಾಷ್ಟ್ತ್ರೀಯ ಕಂಪನಿಗಳಿಗೆ ಮಣೆ ಹಾಕುವ ಸರ್ಕಾರ ಅವುಗಳ ತಾಳಕ್ಕೆ ಕುಣಿಯುವುದು ಅನಿರ್ವಾಯವಾಯಿತು. ಹಾಗಾಗಿ ಸಾಸಿವೆ ಎಣ್ಣೆಯ ಕಲಬೆರಕೆ ಬಗ್ಗೆ ತನಿಖೆ ಮಾಡುವ ಬದಲು ಅದರ ಮಾರಾಟವನ್ನು ನಿಷೇಧಿಸಿತು. ಇದರಿಂದ ಸಾಸಿವೆ ಎಣ್ಣೆಯ ವ್ಯಾಪಾರಸ್ಥರು ಸಾಸಿವೆ ಖರೀದಿಯನ್ನು ನಿಲ್ಲಿಸಿದರು. ಕೊಳ್ಳುವವರು ಇಲ್ಲದ ಕಾರಣ ರೈತರು ಬೆಳೆಯುವುದನ್ನು ಕಡಿಮೆ ಮಾಡುತ್ತಾರೆ. ಹೀಗೆ ದೀರ್ಘಾವಧಿಯಲ್ಲಿ ಸಾಸಿವೆಯನ್ನು ಬೆಳೆಸುವುದನ್ನೇ ನಿಲ್ಲಿಸುವ ಉದ್ದೇಶವನ್ನುಹೊಂದಿದ್ದವು.

ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...


ಈ ಬಹುರಾಷ್ಟ್ತ್ರೀಯ ಕಂಪನಿಗಳ ಎಣ್ಣೆಯುದ್ದದ ಮುಂದಿನ ಟಾರ್ಗೆಟ್ ನಮ್ಮೂರಿನ ಎಣ್ಣೆಗಾಣಗಳು. ಎಣ್ಣೆ ಗಾಣಗಳು ಈಗ ಕಣ್ಣಿಗೆ ಕಾಣದಂತಾಗಿವೆ. ಸ್ಥಳೀಯವಾಗಿ ಬೆಳೆಯುವ ಎಣ್ಣೆಕಾಳುಗಳನ್ನು ಎತ್ತು ಅಥವಾ ಕೋಣಗಳನ್ನು ಕಟ್ಟಿ ಎಣ್ಣೆ ಮಾಡಿಕೊಡುವ ಗಾಣಿಗರ ಎಣ್ಣೆಗಾಣಗಳು ಇದ್ದವು. ಯಾವುದೇ ರಾಸಾಯನಿಕಗಳನ್ನು ಬಳಸದೆ, ವಿದ್ಯುತ್ತಿನ ನೆರವಿಲ್ಲದೆ, ದೊಡ್ಡ ಉಪಕರಣಗಳೂ ಇಲ್ಲದೆ, ಸರಳವಾಗಿ, ನೈಸರ್ಗಿಕವಾಗಿ ತೆಗೆಯುತ್ತಿದ್ದ ಎಣ್ಣೆಗೆ ಕಾರ್ಖಾನೆಗಳಲ್ಲಿ ತಯಾರಾಗುವ ಎಣ್ಣೆಯನ್ನು ಹೋಲಿಸಲು ಬರುವುದಿಲ್ಲ. ಈ ಎಣ್ಣೆಯಲ್ಲಿ ನಿಸರ್ಗದ ತಾಜಾತನ ಇರುತ್ತಿತ್ತು, ಮಧುರ ಸುವಾಸನೆ ಇರುತ್ತಿತ್ತು. ಪೋಷಕಾಂಶಗಳು ಅತೀ ಸಮೃದ್ದವಾಗಿರುತ್ತವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿರುತ್ತದೆ. ಇಂತಹ ಎಣ್ಣೆಯನ್ನು ಎಣ್ಣೆಗಾಣಿಗರು ತಲೆಮೇಲೆ ಹೊತ್ತು ಊರಿಗೆ ಮಾರಲು ಬರುತ್ತಿದ್ದರು. ಎಣ್ಣೆ ಕಾಳು ಕೊಟ್ಟರೆ ಎಣ್ಣೆ ಕೊಡುತ್ತಿದ್ದರು. ಹರಳು (ಓಡಲ), ಹುಚ್ಚೆಳ್ಳು, ಎಳ್ಳು, ಕೊಬ್ಬರಿ ಚೂರು ಕೊಟ್ಟು ಎಣ್ಣೆ ಪಡೆಯುತ್ತಿದ್ದರು. ಒಟ್ಟಿನಲ್ಲಿ ಸ್ಥಳೀಯವಾಗಿ ಎಲ್ಲರ ಮನೆಗಳಿಗೆ ಎಣ್ಣೆಯನ್ನು ಪೂರೈಸುತ್ತಿದ್ದ ಎಣ್ಣೆಗಾಣಗಳನ್ನು ಮುಚ್ಚಲಿಕ್ಕಾಗಿಯೇ ಸರ್ಕಾರ ಪ್ಯಾಕ್ ಮಾಡದ ಸ್ಥಳೀಯ ಎಣ್ಣೆಗಳ ಮಾರಾಟವನ್ನು ನಿಷೇಧಿಸಿತು. ಅದೂ ಜನರ ಆರೋಗ್ಯದ ಹೆಸರಿನಲ್ಲಿ. ಇದರಿಂದ ದೇಶದ ತುಂಬಾ ಇದ್ದ ನಮ್ಮೂರಿನ ಗಾಣಗಳು ಮುಚ್ಚಿ ಹೋದವು. ಲಕ್ಷಾಂತರ ಗಾಣಿಗರ ಬದುಕುಗಳು ಎಣ್ಣೆಯುದ್ದಕ್ಕೆ ಬಲಿಯಾಗಿ ಹಳ್ಳಿಗಳಲ್ಲಿ ಇಟ್ಟಾಡಿದವು. ಒಂದಿಷ್ಟು ನಗರಕ್ಕೆ ಮಾರಾಟವಾದವು. ಈ ದಿಸೆಯಲ್ಲಿ ಈಗ ದೇಶದ ತುಂಬಾ ಇದ್ದ ವೈವಿದ್ಯಮಯವಾದ ಎಣ್ಣೆ ಬೀಜಗಳು ಕಣ್ಮರೆಯಾದವು. ಹುಚ್ಚೆಳ್ಳು, ಅಗಸೆ, ಸಾಸಿವೆ, ಕುಸುಬೆ ಇನ್ನೂ ಮುಂತಾದ ಎಣ್ಣೆ ಬೀಜಗಳು ಈ ಯುದ್ದಕ್ಕೆ ಬಲಿಯಾದವು.

ಈ ಯುದ್ದದಲ್ಲಿ ಮತ್ತೊಬ್ಬ ಪ್ರಬಲ ಪ್ರತಿಸ್ಪರ್ಧಿ ತೆಂಗು. ತೆಂಗನ್ನು ಲಿಡಾಕ್ಟರ್ ಕೊಕೊನಟ್ ಎನ್ನುತ್ತಾರೆ ಅಂತಾರಾಷ್ಟ್ತ್ರೀಯ ಆರೋಗ್ಯ ತಜ್ಞರೊಬ್ಬರು. ಅತ್ಯದ್ಬುತವಾತ ಅಹಾರವಾದ ತೆಂಗಿನ ಹೆಸರಿಗೆ ಮಸಿ ಹಚ್ಚುವ ಹುನ್ನಾರಗಳು ನಡೆದವು ಮತ್ತು ನಡೆಯುತ್ತಿವೆ. ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಇದನ್ನು ತಿನ್ನಬೇಡಿ ಇದು Saturated fat, ಇದು ರಕ್ತದಲ್ಲಿ ಕೊಲೆಸ್ಟರಾಲ್ ಹೆಚ್ಚಾಗಲು ಕಾರಣ. ಇದರ ಬಳಕೆಯಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ ಎಂದು ಗಾಸಿಪ್ ಹಬ್ಬಿಸಿ ಅಪಪ್ರಚಾರ ಮಾಡಲಾಯಿತು. ಈಗಲೂ ಜನರು ತೆಂಗನ್ನು ಬಳಸದಂತೆ ಮಾಡಲಾಗುತ್ತಿದೆ. ಈ ಪಿತೂರಿ ಸುಮಾರು ದಶಕಗಳಿಂದ ನಡೆದಿದೆ. ಉಷ್ಣವಲಯದ ಪ್ರಮುಖ ಅಡುಗೆ ಎಣ್ಣೆಯ ಮೂಲವಾದ ತೆಂಗನ್ನು ಬಗ್ಗುಬಡಿಯಲು 1960ರಿಂದಲೂ ನಿರಂತರವಾದ ಪ್ರಯತ್ನಗಳು ನಡೆಯುತ್ತಿವೆ. ಈ ಮೂಲಕ ತೃತೀಯ ಜಗತ್ತಿನ ಪ್ರಮುಖ ಆರ್ಥಿಕ ಬೆನ್ನೆಲುಬಾದ ತೆಂಗನ್ನು ನಾಶಮಾಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ನಿಜವಾದ ತೆಂಗಿನ ಮಹಿಮೆಯ ಇನ್ನೂ ಜನರಿಗೆ ತಿಳಿದಿರುವುದಿಲ್ಲ. ತಾಯಿಯ ಎದೆಹಾಲಿನಷ್ಟು ಶ್ರೇಷ್ಠವಾದ ತೆಂಗನ್ನು ಎಲ್ಲರೂ ಅಡುಗೆಗೆ, ತಲೆ ಕೂದಲಿಗೆ, ಬಾಡಿ ಮಸಾಜ್‌ಗೆ ಧೈರ್ಯವಾಗಿ ಬಳಸಬಹುದು. ಈ ಕುರಿತು ತೆಂಗಿನ ಮೇಲೆ ನೂರಾರು ಅಧ್ಯಯನಗಳು ನಡೆದು ತೆಂಗು ಪ್ರಪಂಚದ ಒಂದು ತಾಕತ್ತು ಇರುವ ಆರೋಗ್ಯವಂತ ಎಣ್ಣೆಳಿ ಎಂದು ದೃಢಪಟ್ಟಿರುತ್ತದೆ. ಕೇವಲ 'ಕೊಲೆಸ್ಟರಾಲ್‌ಗೆ ಮಾರಿ' ಎಂಬ ಹಣೆಪಟ್ಟಿ ಕಟ್ಟಿ ಹೃದಯಾಘಾತದ ಮಸಿ ಹಚ್ಚಿ ತೆಂಗನ್ನು ಅಭಿವೃದ್ದಿಶೀಲ ರಾಷ್ಟ್ತ್ರಗಳಲ್ಲಿ ನೆಲಸಮ ಮಾಡುವ ಹುನ್ನಾರಗಳು ನಡೆದಿವೆ. ತಮ್ಮ ಎಣ್ಣೆಗಳನ್ನು ಇಲ್ಲಿ ಮಾರಾಟಮಾಡಲು ಅವು ಯಶಸ್ವಿಯಾಗಿವೆ. ಅದರ ದುಷ್ಪರಿಣಾಮಗಳನ್ನು ಈಗಾಗಲೇ ಕಾಣುತ್ತಿದ್ದೇವೆ. ನಮ್ಮ ವಿಜ್ಞಾನಿಗಳಿಗೇನು ಆಗಿದೆಯೋ ಗೊತ್ತಿಲ್ಲ. ತೆಂಗಿನ ಹಿರಿಮೆಯ ಬಗ್ಗೆ ಧೈರ್ಯವಾಗಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ.

ವೈವಿಧ್ಯತೆಗೆ ಹೆಸರಾದ ಭಾರತ ದೇಶದಲ್ಲಿ ಮಾತ್ರ ವಗ್ಗರಣೆ ಹಾಕಿ ಅಡುಗೆಮಾಡಿ ತಿನ್ನುವ ಆಹಾರ ಸಂಸ್ಕ್ಕತಿ ಇದೆ. ಪ್ರಪಂಚದ ಉಳಿದೆಡೆ ಎಲ್ಲೂ ವಗ್ಗರಣೆ ಹಾಕಿ ತಿನ್ನುವುದಿಲ್ಲ. ನಮ್ಮ ರುಚಿಗಳಲ್ಲಿ ವೈವಿಧ್ಯತೆ ಇದೆ. ಅದಕ್ಕೆ ಮುಖ್ಯ ಕಾರಣಗಳಲ್ಲಿ ಎಣ್ಣೆಯೂ ಒಂದು. ವಿಧ ವಿಧದ ಎಣ್ಣೆಗಳನ್ನು ಸೇರಿಸಿ ಅಡುಗೆ ಮಾಡುತ್ತೇವೆ. ಆದರೆ ಇದೀಗ ನಮ್ಮ ಮನೆಗೂ ಸೋಯಾಬೀನ್ ಎಣ್ಣೆಯ ಪ್ಯಾಕ್‌ಗಳು ಬಂದಿವೆಯಲ್ಲಾ ಇದು ತೀರಾ ದುರಂತದ ವಿಷಯ. ರೊಟ್ಟಿಯ ಜೊತೆ ಸ್ವಲ್ಪ ಹುಚ್ಚೆಳ್ಳೆಣ್ಣೆ, ಮುದ್ದೆ ಅನ್ನದ ಜೊತೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ, ವಗ್ಗರಣೆಗೆ ಶೇಂಗಾ ಎಣ್ಣೆ ಅಥವಾ ಕಾಯಿರಸ ಹಿಂಡಿ ವಗ್ಗರಣೆ, ಅಡುಗೆಗೆ ತೆಂಗಿನಕಾಯಿ ಹೀಗೆ ಎಣ್ಣೆಗಳನ್ನು ಅಡುಗೆಗಳಲ್ಲಿ ಬಳಸುವ ಪ್ರಮಾಣ ಹಾಗೂ ಅವುಗಳನ್ನು ತಿನ್ನುವ ಕ್ರಮ ಇದೆಯಲ್ಲ ಅದು ನೂರಕ್ಕೆ ನೂರರಷ್ಟು ಭಾರತದಲ್ಲಿ ಸರಿಯಾಗಿಯೇ ಇದೆ. ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳಿಲ್ಲ. ಎಷ್ಟನ್ನು ಹೇಗೆ, ಯಾವಾಗ, ತಿನ್ನಬೇಕು ಎಂಬುದು ನಮ್ಮವರಿಗೆ ಸರಿಯಾಗಿ ಗೊತ್ತಿದೆ. ಸೋಯಾಬೀನ್, ವನಸ್ಪತಿ ಮುಂತಾದ ಎಣ್ಣೆಗಳು ಬಂದು ನಮ್ಮನ್ನು ದಿಕ್ಕು ತಪ್ಪಿಸುತ್ತಿವೆ ಅಷ್ಟೆ. ಜೊತೆಗೆ ಅರ್ದಂಬರ್ಧ ತಿಳಿದ ಡಯಟೀಶಿಯನ್‌ಗಳು ನಮ್ಮನ್ನು ಸ್ಲಿಮ್ ಆಗಿ ಕಾಣುವ ನೆಪದಲ್ಲಿ ದಾರಿತಪ್ಪಸುತ್ತಿದ್ದಾರೆ. ನಮ್ಮ ಆಹಾರದ ಸಂಸ್ಕ್ಕತಿಯಲ್ಲಿ ಯಾರೂ ದಪ್ಪನಾಗಲು, ಕೊಬ್ಬು ತುಂಬಲು ಸಾಧ್ಯವಿಲ್ಲ. ಬದಲಾಗಿ ಬದಲಾದ ಆಹಾರ ಸಂಸ್ಕ್ಕತಿ ಇದಕ್ಕೆ ಕಾರಣವಾಗಿದೆ. ಬೇಕರಿ ತಿನಿಸುಗಳು, ವನಸ್ಪತಿ, ಪ್ಯಾಕ್ ಮಾಡಿದ ಕರಿದ ಪದಾರ್ಥಗಳು ಮೈಬಗ್ಗಿಸಿ ದುಡಿಯದ ದುಡಿಮೆಗಳು ಬೊಜ್ಜಿಗೆ ಕಾರಣ. ಇನ್ನೊಂದು ಕೊನೆಯ ಸತ್ಯ, ಯಾವುದೇ ಸಸ್ಯ ಮೂಲದ ಎಣ್ಣೆಗಳಲ್ಲಿ ಹಾನಿಕಾರಕ ಕೊಲೆಸ್ಟರಾಲ್ ಇರುವುದಿಲ್ಲ. ಪ್ರಾಣಿಜನ್ಯ ಕೊಬ್ಬಿನಲ್ಲಿ ಮಾತ್ರ ಅಂತಹ ಕೊಲೆಸ್ಟರಾಲ್ ಇದೆ. ಆದರೂ ಶ್ರಮಬಿದ್ದು ದುಡಿಯುವ ಜನ ಮಿತವಾಗಿ ಸೇವಿಸಬಹುದು. ನಾವು ಹಳ್ಳಿಯ ಜನ ದುಡಿಯುವ ಜನ, ಹೊತ್ತೂ ಬೈಗೂ ನೆಲದ ಧೂಳು ನೆತ್ತಿಗೇರಿಸಿಕೊಳ್ಳುವವರು ಕಲ್ಲು ತಿಂದರೂ ಕರಗುತ್ತದೆ. ಅದು ನಮ್ಮೂರಿನ ಕಲ್ಲಾಗಿದ್ದರೆ ಮಾತ್ರ. ಆದರೆ ವಿದೇಶದ ಅನ್ನ ತಿಂದರೂ ಅದು ನಮಗೆ ಒಗ್ಗುವುದಿಲ್ಲ.

ಹೀಗೆ ಎಣ್ಣೆಯುದ್ದ ನಿರಂತರ ನಡೆಯುತ್ತಲೇ ಇದೆ. ಇದಕ್ಕೆ ನೀವೇನಾದರೂ ಕೈ ಜೋಡಿಸಬೇಕೆಂದಿದ್ದರೆ ಒಂದು ಪುಟ್ಟ ಕೆಲಸವನ್ನು ಮಾಡಬಹುದು. ನಿಮ್ಮ ಪ್ಯಾಕ್‌ಗಳ ಎಣ್ಣೆ ತರುವುದನ್ನು ನಿಲ್ಲಿಸಿ. ತೆಂಗಿನ ಬಳಕೆಯನ್ನು ಹೆಚ್ಚಿಸಿ. ತೆಂಗಿನ ಎಣ್ಣೆಯಲ್ಲಿಯೇ ವಗ್ಗರಣೆ ಮಾಡಬಹುದು. ನಮ್ಮ ಹಿರಿಯರು ಮಾಡುತ್ತಿದ್ದುದೇ ಹಾಗೆ. ನಿಮ್ಮನೆಯ ತೆಂಗಿನ ಕಾಯಿಯನ್ನು ಹೆಚ್ಚು ಬಳಸಿರಿ. ನಿಮ್ಮ ನೆರೆ ಹೊರೆಯವರಿಗೆ ಈ ವಿಷಯ ಹಂಚಿಕೊಂಡರೆ ಅಷ್ಟೇ ಸಾಕು. ನೀವು ಮಾಡುವ ಈ ಪುಟ್ಟ ಕೆಲಸವೂ ಈ ಯುದ್ದದಲ್ಲಿ ದೊಡ್ಡ ಕೊಡುಗೆಯಾಗಲಿದೆ.

ಮುಂದೆ ಕ್ಲಿಕ್ ಮಾಡಿ...


ಕೊಲೆಸ್ಟೆರಾಲ್ ಕುರಿತ ಸತ್ಯ ಮತ್ತು ಮಿಥ್ ಯ: ಎಣ್ಣೆಯ ಹೆಸರಿನಲ್ಲಿ ಏನೆಲ್ಲಾ ಹೊಲಸು ವಲ್ಗರ್‌ಗಳು ನಡೆಯುತ್ತಿವೆ ಎಂದರೆ ಅಚ್ಚರಿಯಾಗುತ್ತದೆ. ಎಲ್ಲರೂ ಎಣ್ಣೆಗಳಿಗೂ, ಕೊಲೆಸ್ಟರಾಲ್‌ಗೂ ಮತ್ತು ಹೃದಯ ಸಂಬಂಧಿ ರೋಗಗಳಿಗೂ ಬೆಸುಗೆ ಹಾಕುತ್ತಿದ್ದಾರೆ. ಕೊಲೆಸ್ಟರಾಲ್ ಎಂದರೆ ಎಣ್ಣೆ ಅಲ್ಲ, ಕೊಬ್ಬೂ ಅಲ್ಲ, ಇದರ ಬಗ್ಗೆ ಮಾತನಾಡಬೇಕಾದ ಡಾಕ್ಟರುಗಳು ಮಾತನಾಡುತ್ತಿಲ್ಲ. ಈ ಡಾಕ್ಟರುಗಳು ಇಂದಿಗೂ ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಎಂದು ಹೇಳುತ್ತಿದ್ದಾರೆ. ಜನರಲ್ಲಿ ಕೊಲೆಸ್ಟರಾಲ್ ಎಂದು ಭಯ ಹುಟ್ಟಿಸಿ ಮಾನಸಿಕವಾಗಿ ಕೊಲ್ಲಲಾಗುತ್ತಿದೆ. ಈ ಮೂಲಕ ಹೃದಯ ಸ್ನೇಹಿ ಎಂಬ ಹೆಸರಿನಲ್ಲಿ ಸುಮಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದೇವೆ. ಮತ್ತೊಂದು ಸತ್ಯವೆಂದರೆ ತೆಂಗಿನ ಎಣ್ಣೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಎಂಬುದು ಹಾಗಿರಲಿ ಮುಂದೊಂದು ದಿನ ಹೃದಯ ಸಂಬಂಧಿ ಕಾಯಿಲೆಗಳಿಗೆ ಓಷಧಿಯಾಗಿಯೂ ತೆಂಗಿನ ಎಣ್ಣೆ ಬಳಕೆಯಾಗಲಿದೆ! ತೆಂಗಿನಲ್ಲಿ ಹಾನಿಕಾರಕವಾದದ್ದು ಏನೂ ಇಲ್ಲ ಇದರಲ್ಲಿ ಇರುವುದೆಲ್ಲ ಅಮೃತ ಸಮಾನ. ಹಾಗಾಗಿ ತೆಂಗಿನ ಸೀಮೆಯ ಜನರಿಗೆಲ್ಲ ಈ ವಿಷಯ ತಿಳಿಸಲು ಈ ಲೇಖನ.

ಕೊಲೆಸ್ಟೆರಾಲ್ ಈ ಪದವನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಕೇಳಿಯೇ ಇರುತ್ತೀರ. ಅದಕ್ಕೆ ಕಾರಣ ಕೊಲೆಸ್ಟೆರಾಲ್ ಕುರಿತ ಅಬ್ಬರದ ಪ್ರಚಾರ. ನೀವು ಯೋಚಿಸುತ್ತಿರುವಂತೆ ಕೊಲೆಸ್ಟೆರಾಲ್ ಎಂಬುದು ಹಾನಿಕಾರಕ ವಸ್ತು, ಅದನ್ನು ಯಾವುದೇ ಕಾರಣದಿಂದ ನಿಯಂತ್ರಿಸಬೇಕು. ಇದು ಸತ್ಯವಲ್ಲ. ಸತ್ಯವೆಂದರೆ ಅದು ನಮ್ಮ ದೇಹದಲ್ಲಿ ಇರಬೇಕಾದ ಅತ್ಯವಶ್ಯಕ ಅಂಶ. ಏಕೆಂದರೆ, ಕೊಲೆಸ್ಟೆರಾಲ್ ಅನ್ನು ನಮ್ಮ ಶರೀರದ ಪ್ರತೀ ಜೀವಕೋಶದಲ್ಲಿ ಕಾಣಬಹುದು. ಜೊತೆಗೆ ನಮ್ಮ ಶರೀರದ ಪ್ರತೀ ಜೀವಕೋಶವೂ ಕೊಲೆಸ್ಟೆರಾಲನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಕೊಲೆಸ್ಟೆರಾಲ್ ಬರೀ ಆರೋಗ್ಯದ ದೃಷ್ಠಿಯಿಂದ ಮಾತ್ರವಲ್ಲ, ನಮ್ಮ ಜೀವನದ ದೃಷ್ಠಿಯಿಂದಲೂ ಹೆಚ್ಚು ಮಹತ್ವದ್ದು. ಹಾಗಾದರೆ ಈಗ ಕೊಲೆಸ್ಟೆರಾಲ್ ಎನ್ನುವುದು ಏನು ಮತ್ತು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ನೋಡೋಣ.

ಕೊಲೆಸ್ಟೆರಾಲ್ ಎಂದರೆ ಏನು ಎಂದು ತಿಳಿಯುವುದಕ್ಕಿಂತ ಮೊದಲು ಕೊಲೆಸ್ಟೆರಾಲ್ ಎಂದರೆ ಏನಲ್ಲ ಎಂದು ತಿಳಿಯೋಣ. ಕೊಲೆಸ್ಟೆರಾಲ್ ಎಂದರೆ ಅದು ಕೊಬ್ಬಲ್ಲ!; ಇದು ಕೊಬ್ಬಿನಿಂದ ತಯಾರಾದದ್ದೂ ಅಲ್ಲ; ಮತ್ತು ಇದು ಬರೀ ಸ್ಯಾಚುರೇಟೆಡ್ ಫ್ಯಾಟ್‌ಗಳಿಂದ ತಯಾರಾದದ್ದೂ ಅಲ್ಲ. ಇದೂ ಕೂಡ ಒಂದು ಆಲ್ಕೋಹಾಲ್ (ಮದ್ಯಸಾರ) ಇದಕ್ಕೆ ಲಿಪಿಡ್ ಆಲ್ಕೋಹಾಲ್ ಎನ್ನುತ್ತೇವೆ. ಕೊಲೆಸ್ಟೆರಾಲ್ ಎಂಬುದು ಒಂದು ಹಾನಿಕಾರಕ ವಸ್ತು ಮತ್ತು ಅದನ್ನು ಊಟದಲ್ಲಿ ಕಡಿಮೆ ಮಾಡಬೇಕು ಎಂಬ ಆಲೋಚನೆಯನ್ನು ನಿಲ್ಲಿಸಿರಿ. ಅದು ಹಾಗಿಲ್ಲ. ಕೊಲೆಸ್ಟೆರಾಲ್ ಎಂಬುದು ಹಲವಾರು ಕಾರಣದಿಂದ ನಮ್ಮ ದೇಹಕ್ಕೆ ಅತೀ ಅವಶ್ಯಕವಾಗಿದೆ. ಪ್ರತಿದಿನ ನಮ್ಮ ದೇಹದ ಜೀವಕೋಶಕಗಳು ಸಾಯುತ್ತವೆ, ಅಂದರೆ ಹಾಳಾಗುತ್ತಿರುತ್ತವೆ. ಹೀಗೆ ಸತ್ತು ಹೋದ ಜೀವಕೋಶಗಳನ್ನು ದೇಹವು ಬದಲೀ ಮಾಡಬೇಕು. ಉದಾಹರಣೆಗೆ ಬೆರಳುಗಳ ಉಗುರು, ಕೂದಲು, ಗಾಯ ಮತ್ತು ಚರ್ಮದ ಜೀವಕೋಶಗಳು ಮುಂತಾದವು.

ಒಟ್ಟಾರೆಯಾಗಿ ನಮ್ಮ ಜೀವಮಾನದಲ್ಲಿ ಪ್ರತೀ ಜೀವಕೋಶವೂ ಬಹಳಷ್ಟು ಬಾರಿ ಬದಲಾಗುತ್ತದೆ. ಹೀಗೆ ಬದಲಾಗುವಾಗ ಈ ಹೊಸ ಜೀವಕೋಶಗಳನ್ನು ಕಟ್ಟಲು ಕೊಲೆಸ್ಟೆರಾಲ್ ಅವಶ್ಯಕ. ಕೊಲೆಸ್ಟೆರಾಲ್ ಎಂಬುದು ಮೆದುಳಿನಲ್ಲಿ ಮತ್ತು ನರಗಳ ಜೀವಕೋಶಗಳಲ್ಲಿಯೂ ಕಂಡು ಬರುತ್ತದೆ. ಮೆದುಳು ಮತ್ತು ನರವ್ಯೂಹ ಕೆಲಸ ಮಾಡಲು ಇದು ಅವಶ್ಯಕ.

1. ದೇಹದಲ್ಲಿನ ಹಾರ್ಮೋನ್ ಸ್ರವಿಸುವಿಕೆ ಸುಸ್ಥಿತಿಯಲ್ಲಿಡಲು ಕೊಲೆಸಾ್ತ್ರಲ್ ಅವಶ್ಯಕ. ಪುರುಷ ಹಾಗೂ ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನ್ ಸ್ರವಿಕೆಗೆ ಇದು ಅತ್ಯವಶ್ಯಕ.
2. ದೇಹದ ಆಯಾಸವನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿ.
3. ದೇಹದ ಸರಿಯಾದ ಕೆಲಸ ಕಾರ್ಯಗಳಿಗೆ ಕೊಲೆಸ್ಟೆರಾಲ್ ಅವಶ್ಯಕ.
4. ಸೂರ್ಯನ ಬೆಳಕು ಚರ್ಮವನ್ನು ಸೇರಿ ವಿಟಮಿನ್ ಡಿ 3 ತಯಾರಾಗಲು ಇದು ಅತೀ ಮುಖ್ಯವಾಗಿದೆ.
5. ದೇಹದಲ್ಲಿ ಕೊಬ್ಬುಗಳು ಜೀರ್ಣವಾಗಲು ಕೊಲೆಸ್ಟೆರಾಲ್ ಅತ್ಯವಶ್ಯಕ.

ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...


ನಿಮಗೆ ಎಷ್ಟು ಬೇಕೋ ಅಷ್ಟು ಕೊಲೆಸ್ಟೆರಾಲ್ ತಿನ್ನ ಿ: ಕೊಲೆಸ್ಟೆರಾಲ್ ಅತೀ ಅವಶ್ಯಕವಾಗಿದ್ದು ಪ್ರತಿಯೊಬ್ಬರ ಜೀವಕೋಶವೂ ಅದನ್ನು ತಯಾರಿಸಲು ಶಕ್ತವಿರುತ್ತದೆ. ನಮ್ಮ ದೇಹ ಬರೀ 300 ಮಿಲಿ ಗ್ರಾಂ ಕೊಲೆಸ್ಟೆರಾಲನ್ನು ಆಹಾರದಿಂದ ಪಡೆದುಕೊಳ್ಳುತ್ತದೆ. ಆದರೆ ದೇಹಕ್ಕೆ ಇದಕ್ಕಿಂತ ಬಹಳಷ್ಟು ಕೊಲೆಸ್ಟೆರಾಲ್ ಅವಶ್ಯಕವಿರುತ್ತದೆ. ಇನ್ನು ಉಳಿದಂತೆ ಅವಶ್ಯಕತೆ ಬಿದ್ದ ಕೊಲೆಸ್ಟೆರಾಲನ್ನು ದೇಹವೇ ತಯಾರುಮಾಡಿಕೊಳ್ಳುತ್ತದೆ. ಇದರಲ್ಲಿ ಬಹಳಷ್ಟು ಭಾಗ ಪಿತ್ತಜನಕಾಂಗದಲ್ಲಿ ತಯಾರಾಗುತ್ತದೆ. ಈ ಕಾರಣದಿಂದ, ನೀವು ಕಡಿಮೆ ಕೊಲೆಸ್ಟೆರಾಲ್ ತಿಂದರೆ ದೇಹವು ಹೆಚ್ಚು ಕೊಲೆಸ್ಟೆರಾಲ್ ಉತ್ಪತ್ತಿ ಮಾಡಿಕೊಳ್ಳುತ್ತದೆ. ನೀವು ಹೆಚ್ಚು ಕೊಲೆಸ್ಟೆರಾಲ್ ತಿಂದರೆ ದೇಹವು ಕಡಿಮೆ ಕೊಲೆಸ್ಟೆರಾಲ್ ಉತ್ಪತ್ತಿ ಮಾಡಿಕೊಳ್ಳುತ್ತದೆ. ಹಾಗಾಗಿ ನೀವೆಷ್ಟು ಕೊಲೆಸ್ಟೆರಾಲ್ ತಿನ್ನುತ್ತೀರಾ ಎಂಬ ವಿಷಯ ಮುಖ್ಯವಲ್ಲ.

ಒಟ್ಟಾರೆಯಾಗಿ ಕೊಲೆಸ್ಟೆರಾಲ್ ಎಂಬುದು ನಮ್ಮ ದೇಹದಲ್ಲಿ ಇರಲೇಬೇಕಾದ ಒಂದು ಅಣು ಅಥವಾ ಅಲ್ಕೋಹಾಲ್ ಎಂಬುದು ತಿಳಿಯಿತು. ಇದು ನೀರಿನಲ್ಲಿ ಕರಗುವುದಿಲ್ಲ. ಆದ್ದರಿಂದ ಇದನ್ನು ಜೀವಕೋಶಗಳ ಒಳಪದರವನ್ನು Water Proof ಮಾಡಲಿಕ್ಕೆ ಇದು ಬಳಕೆಯಾಗುತ್ತದೆ. ನಮ್ಮ ದೇಹದ ಮೆದುಳು ಮತ್ತು ನರವ್ಯೂಹದಲ್ಲಿ ಕೊಲೆಸ್ಟೆರಾಲನ್ನು ಹೆಚ್ಚಾಗಿ ಕಾಣಬಹುದು.

ಈಗ ಲಿಪೊಪ್ರೋಟೀನ್‌ಗಳ ಬಗ್ಗೆ ತಿಳಿಯಬೇಕು. ಈ ಲಿಪೋಪ್ರೋಟೀನ್‌ಗಳೆಂದರೆ ಕೊಬ್ಬು ಮತ್ತು ಪ್ರೋಟೀನ್‌ನಿಂದ ಆದ ವಸ್ತು. ಇವುಗಳು ರಕ್ತದಲ್ಲಿರುತ್ತವೆ. ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ಸಬ್ಮರಿನ್‌ಗಳು ಸಂಚರಿಸುವಂತೆ ಇವು ಒಂದೆಡೆಯಿಂದ ಮತ್ತೊಂದು ಕಡೆಗೆ ರಕ್ತನಾಳಗಳಲ್ಲಿ ಸಂಚರಿಸುತ್ತಿರುತ್ತವೆ. ಇವುಗಳೆ ಈ ಕೊಲೆಸ್ಟೆರಾಲನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯುತ್ತವೆ. ಈ ಲಿಪೋಪ್ರೋಟೀನ್‌ಗಳಿಗೆ ಕೊಲೆಸ್ಟೆರಾಲ್ ಹೊತ್ತೊಯ್ಯುವ ಸಬ್ಮರಿನ್‌ಗಳೆಂದು ಕರೆಯೋಣ. ಈ ಸಬ್ಮರೀನ್‌ಗ ಗುಣಮಟ್ಟದ ಆಧಾರದ ಮೇಲೆ ಇವುಗಳನ್ನು ಎರಡು ವಿಧಗಳಾಗಿ ವಿಂಗಡಿಸುತ್ತಾರೆ. ಒಂದು HDL (High density lipoprotein) ಮತ್ತೊಂದು LDL (Low density lipoprotein) HD Lಗೆ ದೊಡ್ಡ ಸಬ್ಮರೀನ್ LD Lಗೆ ಚಿಕ್ಕ ಸಬ್ಮರೀನ್‌ಗಳೆಂದು ಕರೆಯೋಣ. ಈ ದೊಡ್ಡ ಸಬ್ಮರೀನ್‌ಗಳ ಕೆಲಸವೇನೆಂದರೆ ಹೃದಯದ ಭಾಗಗಳೂ ಸೇರಿದಂತೆ ದೇಹದ ಎಲ್ಲಾ ಅಂಗಾಂಶಗಳಿಂದ ಕೊಲೆಸ್ಟೆರಾಲನ್ನು ಪಿತ್ತಜನಕಾಂಗಕ್ಕೆ ಅಂದರೆ ಲಿವರ್‌ಗೆ ಹೊತ್ತು ತರುತ್ತದೆ. ಹೀಗೆ ಹೊತ್ತು ತಂದ ಕೊಲೆಸ್ಟೆರಾಲ್‌ನಿಂದ ಪಿತ್ತರಸದೊಂದಿಗೆ ಸೇರಿ ಮುಂದಕ್ಕೆ ಹೋಗುತ್ತದೆ ಅಥವಾ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತದೆ.

ಆದರೆ ಈ LDL ಎನ್ನುವ ಚಿಕ್ಕ ಸಬ್ಮರೀನ್‌ಗಳ ಕೆಲಸ ಉಲ್ಟಾ! ಇವು ಲಿವರ್‌ನಿಂದ ಕೊಲೆಸ್ಟೆರಾಲನ್ನು ದೇಹದ ಅಂಗಾಶಗಳಿಗೆ ಸರಬರಾಜು ಮಾಡುತ್ತದೆ. ಜೀವಕೋಶಗಳಿಗೆ ಕೊಲೆಸ್ಟೆರಾಲ್ ಬೇಕಾದಾಗ ಅವು ಈ LD Lಗಳನ್ನು ಕರೆಸುತ್ತವೆ. ಇವು ಜೀವಕೋಶದ ಒಳಭಾಗಕ್ಕೆ ಕೊಲೆಸ್ಟೆರಾಲನ್ನು ಅನ್ಲೋಡ್ ಮಾಡಿ ವಾಪಸ್ಸು ಸಾಗುತ್ತವೆ. ರಕ್ತದಲ್ಲಿನ ಶೇ. 60ರಿಂದ 80ರಷ್ಟು ಕೊಲೆಸ್ಟೆರಾಲ್‌ನ ಸಾಗಾಟ ಈ LD Lಗಳಿಂದ ಸಾಗುತ್ತದೆ. ಬರೀ ಶೇ. 15ರಿಂದ 20ರಷ್ಟು ಕೊಲೆಸ್ಟೆರಾಲ್ ಸಾಗಾಟ ಈ HD Lಗಳಲ್ಲಿ ನಡೆಯುತ್ತದೆ. ಕೇವಲ ಒಂದಿಷ್ಟು ಕೊಲೆಸ್ಟೆರಾಲ್ ಮಾತ್ರ ಇವೆರಡೂ ಅಲ್ಲದ ಲಿಪೊಪ್ರೋಟೀನ್‌ಗಳಲ್ಲಿ ನಡೆಯುತ್ತದೆ.
ಹೀಗೆ ರಕ್ತದಲ್ಲಿರುವ ಈ ಲಿಪೊಪ್ರೋಟೀನ್‌ಗಳಲ್ಲಿ HD Lಗಳನ್ನು ಒಳ್ಳೆಯವೆಂದು, LD Lಗಳನ್ನು ಕೆಟ್ಟವೆಂದು ಕರೆಯಲಾಗುತ್ತದೆ. ಕಾರಣವೇನೆಂದರೆ ಸಾಕಷ್ಟು ಸಂಶೋಧನೆಗಳಿಂದ ತಿಳಿದಿರುವಂತೆ ಈ HD Lಗಳ ಪ್ರಮಾಣ ಅವಶ್ಯಕತೆಗಿಂತ ಕಡಿಮೆಯಾಗುತ್ತಾ ಸಾಗಿದರೆ ಅಥವಾ ಈ LD Lಗಳ ಪ್ರಮಾಣ ಅವಶ್ಯಕತೆಗಿಂತ ಜಾಸ್ತಿ ಆದರೆ ಹೃದಯಾಘಾತದ ಸಂಭವ ಹೆಚ್ಚಿರುತ್ತದೆ. ಹಾಗೆಯೇ ಈ HD Lಗಳ ಪ್ರಮಾಣ ಹೆಚ್ಚಿದ್ದು LD Lಗಳ ಪ್ರಮಾಣ ಕಡಿಮೆಯಾದರೆ ಇದರಿಂದ ಹೃದಯಾಘಾತದ ಸಂಭವ ಅತೀ ಕಡಿಮೆ!

ಈ ಕೆಳಗಿನ ಅಂಶಗಳು ರಕ್ತದಲ್ಲಿ LDL ಹೆಚ್ಚಾಗಲು ಮತ್ತು HDL ಕಡಿಮೆಯಾಗಲು ಕಾರ ಣ:
1. ಸೀಗರೇಟು ಸೇವನೆ
2. ಶ್ರಮಬಿದ್ದು ಕೆಲಸ ಮಾಡದೇ ಇರುವುದು.
3. ಹೆಚ್ಚು ತೂಕ ಮತ್ತು ಬೊಜ್ಜು ಇರುವುದು.
4. ಮಾನಸಿಕ ಒತ್ತಡ.
5. ರಕ್ತದೊತ್ತಡ.
6. ಅತೀ ಕಡಿಮೆ ನೀರು ಕುಡಿಯುವುದು.
7. ಅನೈಸರ್ಗಿಕ ಆಹಾರ ಪದ್ದತಿ
8. ಮದ್ಯಪಾನ

ಇವು ಮುಖ್ಯವಾಗಿ ರಕ್ತದಲ್ಲಿನ ಕೆಟ್ಟದೆನ್ನುವ LDL ಪ್ರಮಾಣ ಹೆಚ್ಚಾಗಲು ಕಾರಣ. ಮತ್ತು ಇದರಿಂದ ಒಳ್ಳೆಯದಾದ HDL ಪ್ರಮಾಣವು ಕಡಿಮೆಯಾಗಿ ಹೃದಯ ಸಂಬಂಧಿ ಕಾಯಿಲೆಗಳು ಬಂದೊದಗುತ್ತವೆ. ಹೆಚ್ಚು ಶ್ರಮಬಿದ್ದು ಕೆಲಸಮಾಡುವವರಿಗೆ ಹೃದಯ ಸಂಬಂಧಿ ಕಾಯಿಲೆಗಳ ಸಂಭವ ಕಡಿಮೆ. ಶ್ರಮವಿಲ್ಲದೆ ಇದ್ದರೆ ನಿತ್ಯವೂ ಆಟವಾಡುವುದು ಇಲ್ಲವೆ ವ್ಯಾಯಾಮ ಮಾಡುವುದು ಅವಶ್ಯಕ. ಇದರಿಂದ ರಕ್ತದಲ್ಲಿನ HDL ಪ್ರಮಾಣ ಹೆಚ್ಚಾಗಿ LDL ಪ್ರಮಾಣ ಕಡಿಮೆಯಾಗುತ್ತದೆ.

ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...


ತೆಂಗಿನೆಣ್ಣೆ ಮತ್ತು ಕೊಲೆಸ್ಟೆರಾಲ ್: ಓಬೀರಾಯನ ಕಾಲದಿಂದಲೂ ಎಣ್ಣೆ ಕಂಪನಿಗಳು ಮತ್ತು ವಿಜ್ಞಾನಿ ರಾಜಕಾರಣಿಗಳು ಸ್ಯಾಚುರೇಟೆಡ್ ಫ್ಯಾಟ್‌ಗಳು ಆರೋಗ್ಯಕ್ಕೆ ಮಾರಕ ಎಂದು ಹೇಳುತ್ತಾ ಬಂದಿವೆ. ಜನಸಾಮಾನ್ಯರಲ್ಲಿ ಇದು ಸಾಮಾನ್ಯ ನಂಬಿಕೆಯಾಗಿ ಉಳಿದಿದೆ. ಆದರೆ ಹೀಗೆ ಸ್ಯಾಚುರೇಟೆಡ್ ಫ್ಯಾಟ್‌ಗಳೆಂಬ ತಾಂತ್ರಿಕವಾದ ವರ್ಗಿಕರಣದಿಂದ ತೆಂಗಿನ ಎಣ್ಣೆಯ ಮೇಲೆ ಗೂಬೆ ಕೂರಿಸಲಾಗಿದೆ. ಎಣ್ಣೆಯ ಸತ್ಯ ಇಲ್ಲಿದೆ ನೋಡಿ.

ಈ ಸ್ಯಾಚುರೇಟೆಡ್ ಫ್ಯಾಟ್ ಅಥವಾ ಸಂತೃಪ್ತ ಕೊಬ್ಬು ಎಂದು ಹೇಳುವ ಈ ಎಣ್ಣೆಗಳಲ್ಲಿ ಕಾರ್ಬನ್ ಅಣುಗಳು ಹೈಡ್ರೋಜನ್ ಅಣುಗಳ ಜೊತೆ ಸೇರುವುದರಿಂದ ಇದು ಗಟ್ಟಿಯಾಗಿರುತ್ತದೆ. ಅಂದರೆ ಕೊಠಡಿಯ ಉಷ್ಣಾಂಶ 76 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಗಟ್ಟಿ ಇರುತ್ತದೆ. ಈ ಎಣ್ಣೆಗಳಲ್ಲಿ ಕಂಡು ಬರುವ ಫ್ಯಾಟೀ ಆಸಿಡ್‌ಗಳಲ್ಲಿ ಇರುವ ಇಂಗಾಲದ ಅಣುಗಳ ಚೈನನ್ನು ಆಧರಿಸಿ ಈ ಕೆಳಗಿನಂತೆ ವರ್ಗೀಕರಣ ಮಾಡುತ್ತಾರೆ.

1. ಸಣ್ಣ ಸರಪಳಿ ಕೊಬ್ಬು - Short chain fatty acid ( ಇಂಗಾಲದ ಅಣುಗಳು ಎರಡರಿಂದ ನಾಲ್ಕು ಇರುತ್ತವೆ)
2. ಮಧ್ಯಮ ಸರಪಳಿ ಕೊಬ್ಬು - Medium chain fatty acid ( ಇಂಗಾಲದ ಅಣುಗಳು ಎಂಟರಿಂದ ಹನ್ನೆರಡು ಇರುತ್ತವೆ)
3. ಉದ್ದ ಸರಪಳಿ ಕೊಬ್ಬು - Long chain fatty acid ( ಇಂಗಾಲದ ಅಣುಗಳು ಹದಿನಾಲ್ಕರಿಂದ ಇಪ್ಪತ್ನಾಲ್ಕು ಇರುತ್ತವೆ)

ಈ ಎಣ್ಣೆಗಳಲ್ಲಿ ಕಂಡು ಬರುವ ಕೊಬ್ಬಿನ ಸರಪಳಿ ಕಡಿಮೆ ಇದ್ದಷ್ಟೂ ಅತೀ ಬೇಗ ಜೀರ್ಣವಾಗುತ್ತವೆ. ಅದು ಹೆಚ್ಚುತ್ತಾ ಹೋದಂತೆಲ್ಲಾ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಅದೂ ಈ ಸಣ್ಣ ಸರಪಳಿಯ ಕೊಬ್ಬು ಮತ್ತು ಮಧ್ಯಮ ಸರಪಳಿಯ ಕೊಬ್ಬು ಕರುಳಿನಿಂದ ನೇರವಾಗಿ ಶಕ್ತಿಯಾಗಿ ರಕ್ತನಾಳಗಳಿಗೆ ಸೇರುತ್ತದೆ. ಇದು ರಕ್ತದ HDL ಅಥವಾ LDL ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನುಂಟುಮಾಡುವುದಿಲ್ಲ. ನಿಜವಾಗಿ ಈ ಎಣ್ಣೆಯು ನಿಮ್ಮನ್ನು ಹೃದಯ ಸಂಬಂಧಿರೋಗಗಳಿಂದ ರಕ್ಷಿಸುತ್ತದೆ. ಪ್ರಾಕೃತಿಕವಾಗಿ ದೊರೆಯುವ ಹೈಡ್ರೊಜನೇಟ್ಮಾಡದ ತೆಂಗಿನ ಎಣ್ಣೆಯ ಸೇವನೆಯಿಂದ HDL ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೃದಯ ಸಂಬಂಧಿ ರೋಗಗಳು ಬರದಿರಲು ಸಹಾಯ ಮಾಡುತ್ತದೆ.

ಪ್ರತಿನಿತ್ಯವೂ ಹೆಚ್ಚಾಗಿ ತೆಂಗಿನ ಎಣ್ಣೆಯನ್ನೇ ಬಳಸುವ ಜನರಲ್ಲಿ ಹೃದಯ ಸಂಬಂಧಿ ರೋಗಗಳು ಕಡಿಮೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಮಧ್ಯಮ ಸರಪಳಿ ಕೊಬ್ಬುಗಳನ್ನು ಹೊಂದಿರುವ ತೆಂಗಿನ ಎಣ್ಣೆಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ವಾಸಿಯಾಗುತ್ತವೆ. ತೆಂಗಿನ ಎಣ್ಣೆಯನ್ನು ಹೃದಯ ಸಂಬಂಧಿ ಕಾಯಿಲೆಗಳಿಗೆ ಓಷಧಿಯಾಗಿ ಬಳಸುವ ಕಾಲ ದೂರವಿಲ್ಲ.

ಹೃದಯ ಕಾಯಿಲೆಗಳು ಪ್ರಾರಂಭವಾಗೋದು ಹೇಗೆ ಗೊತ್ತಾ?: ಹೃದಯದ ಶುದ್ದ ರಕ್ತವಾಹಿನಿಗಳಲ್ಲಿ ಕೆಲವು ಗಾಯಗಳು ಉಂಟಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಕಲವು ವಿಷ ವಸ್ತುಗಳು, ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮುಂತಾದವು. ಈ ಗಾಯ ಬಹಳ ಬೇಗ ವಾಸಿಯಾಗದೆ ಉಳಿದರೆ ಅಲ್ಲಿ ಮತ್ತಷ್ಟು ಅಪಾಯ ಉಂಟಾಗುತ್ತದೆ. ಈ ಗಾಯದ ಕಲೆ ದಪ್ಪನಾಗುತ್ತಾ ಹೋಗುತ್ತದೆ. ರಕ್ತ ಹೆಪ್ಪಾಗಲು ಕಾರಣವಾದ ರಕ್ತ ಪಟ್ಟಿಕೆಗಳು ( platelets) ಎಂಬ ಪ್ರೋಟೀನ್‌‌ಗಳು ರಕ್ತದಲ್ಲಿ ಸರಾಗವಾಗಿ ಸಂಚರಿಸುತ್ತಿರುತ್ತವೆ. ಈ ರಕ್ತ ಪಟ್ಟಿಕೆಗಳು ಗಾಯವನ್ನು ವಾಸಿಮಾಡುವ ದೃಷ್ಟಿಯಿಂದ ಗಾಯದ ಸುತ್ತಾ ಬ್ಯಾಂಡೇಜ್ ರೀತಿ ವರ್ತಿಸುತ್ತವೆ. ಹೀಗೆ ಶುದ್ದ ರಕ್ತನಾಳಗಳಲ್ಲಿ ರಕ್ತವು ಹೆಪ್ಪಾಗುತ್ತದೆ. ಶುದ್ದ ರಕ್ತನಾಳಗಳಲ್ಲಿ ಹೆಪ್ಪಾದ ರಕ್ತದ ಸುತ್ತಲೂ ದುರ್ಮಾಂಸ ಬೆಳೆದುಕೊಳ್ಳುತ್ತದೆ. ಹೀಗೆ ಗಾಯವಾದ ಜಾಗದಲ್ಲಿ ವಾಸಿಮಾಡಲು ರಕ್ತಪಟ್ಟಿಕೆಗಳು, ಕ್ಯಾಲ್ಸಿಯಂ, ಕೊಲೆಸ್ಟೆರಾಲ್ ಎಲ್ಲಾ ಬಂದು ಸೇರುತ್ತವೆ. ಇದರಿಂದ ರಕ್ತನಾಳ ಕಟ್ಟಿಕೊಂಡು ರಕ್ತಸಂಚಾರ ಹೆಚ್ಚು ಕಡಿಮೆಯಾಗಿ ಹೃದಯಾಘಾತ ಸಂಭವಿಸುತ್ತದೆ. ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ರಕ್ತನಾಳಗಳಲ್ಲಿ ಹೀಗೆ ಉಂಟಾಗುವುದನ್ನು ಹೃದಯ ಸಂಬಧಿ ಕಾಯಿಲೆಗಳು ಎನ್ನುತ್ತೇವೆ. ಅಮೇರಿಕಾದಲ್ಲಿ ಈ ಕೇಸು ಬಹಳ.

ಕೆಲವು ಬಾರಿ ಈ ಹೃದಯ ಸಂಬಂಧಿ ಕಾಯಿಲೆಗಳನ್ನು ಆಂಟಿಬಯಾಟಿಕ್‌ಗಳನ್ನು ಬಳಸಿ ವಾಸಿ ಮಾಡಬಹುದು. ಆದರೆ ಇದಕ್ಕೆ ಮಿತಿಯಿದೆ. ಆಂಟಿ ಬಯಾಟಿಕ್‌ಗಳು ಯಾವಾಗಲೂ ಬ್ಯಾಕ್ಟೀರಿಯಾ ವಿರುದ್ದ ಕೆಲಸ ಮಾಡುತ್ತವೆ. ಆದರೆ ವೈರಸ್‌ಗಳಿಂದ ಉಂಟಾದ ಸಮಸ್ಯೆ ಹಾಗೆಯೇ ಉಳಿಯುತ್ತದೆ. ಆದರೆ, ಈ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ದ ಸೆಣಸುವ ಏಕಮಾತ್ರ ಓಷಧಿ ಎಂದರೆ ಮಧ್ಯಮ ಸರಪಳಿ ಕೊಬ್ಬುಗಳನ್ನು ಹೊಂದಿರುವ ತೆಂಗಿನೆಣ್ಣೆ. ಇದು ಕಾಯಿಲೆಯನ್ನು ಮೂಲದಲ್ಲಿಯೇ ವಾಸಿ ಮಾಡುವ ಶಕ್ತಿಯನ್ನು ಹೊಂದಿದೆ. ಈ ಕಾಯಿಲೆಗೆ ಕಾರಣವಾಗುವ 12 ವಿವಿಧ ಜೀವಾಂಕುರಗಳನ್ನು ತೆಂಗಿನೆಣ್ಣೆ ಕೊಲ್ಲಬಲ್ಲದು. ಅಲ್ಲದೆ ಅಲ್ಸರ್, ಶ್ವಾಸಕೋಶದ ಸೋಂಕು, ಗುಳ್ಳೆಗಳೇಳುವ ಚರ್ಮರೋಗ, ಪಾರ್ಶವಾಯು ಇನ್ನೂ ಮುಂತಾದ ಕಾಯಿಲೆಗಳ ವಿರುದ್ದ ರಕ್ಷಣೆ ನೀಡುತ್ತದೆ. ನೀವು ಹೃದಯ ಸಂಬಂಧಿ ರೋಗದಿಂದ ಸಾಯದೆ ಉಳಿಯಬೇಕು ಎಂದೆನಿಸಿದರೆ ಇಂದಿನಿಂದಲೇ ತೆಂಗಿನ ಎಣ್ಣೆಯನ್ನು ತಿನ್ನುವುದು ಪ್ರಾರಂಭಿಸಿರಿ.

ಅಮೇರಿಕಾದಲ್ಲಿ ಅರ್ಧ ಜನ ಸಾಯುವುದು ಇದೇ ಹೃದಯ ಸಂಬಂಧಿ ಕಾಯಿಲೆಯಿಂದ. ಎಲ್ಲಿ ತೆಂಗಿನೆಣ್ಣೆ ತಿನ್ನುತ್ತಾರೆಯೊ ಅಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಅತೀ ವಿರಳ. ಶ್ರೀಲಂಕಾದಲ್ಲಿ ಜನರ ನಿತ್ಯದ ಆಹಾರದ ಭಾಗ ತೆಂಗು. ಹೃದಯದ ಸಂಬಂಧಿ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಪ್ರಪಂಚದಲ್ಲಿಯೇ ಅತೀ ಕಡಿಮೆ ಇರುವುದು ಶ್ರೀಲಂಕಾದಲ್ಲಿ. ತೆಂಗು ತಿಂದರೆ ನಿಮ್ಮ ಹೃದಯ ನಿಮ್ಮ ಕೈಯಲ್ಲಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮುಖದಲ್ಲಿರುವ ಕಪ್ಪು ಕಲೆ ನಿವಾರಿಸಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ

ತಲೆನೋವು ಪರಿಹಾರಕ್ಕೆ ಈ ಯೋಗ ಸೂಕ್ತ

ಈ ಖಾಯಿಲೆ ಇರುವವರು ರಾತ್ರಿ ಮೊಸರು ತಿನ್ನಬಾರದು

ಬೇಯಿಸಿದ ಆಹಾರವನ್ನು ಫ್ರಿಡ್ಜ್ ನೊಳಗೆ ಎಷ್ಟು ಹೊತ್ತು ಇಟ್ಟು ಸೇವಿಸಬಹುದು

ರಾತ್ರಿ ಮಲಗುವ ಮುನ್ನ ತ್ವಚೆಯ ರಕ್ಷಣೆಗಾಗಿ ಈ ಕೆಲಸ ಮಾಡಿ