Webdunia - Bharat's app for daily news and videos

Install App

ಬಹುಪಯೋಗಿ ನೆಲ್ಲಿಯ ಬಲ್ಲಿರೇನು?

Webdunia
ಸಂಸ್ಕೃತದಲ್ಲಿ ಆಮಲಕ್ಕಿ, ಧಾತ್ರಿಫಲ, ವಾಯಸ್ಥ ಎಂಬಿತ್ಯಾದಿ ಹೆಸರಿನಿಂದ ಪ್ರಸಿದ್ಧವಾಗಿರುವ ನೆಲ್ಲಿಕಾಯಿಯು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಆರೋಗ್ಯವರ್ಧಕ, ಶಕ್ತಿವರ್ಧಕ ಔಷಧಿಯಾಗಿ ಪ್ರಸಿದ್ಧವಾಗಿರುವ ಸಸ್ಯ ಗುಂಪಿಗೆ ಸೇರಿದ ನೆಲ್ಲಿಕಾಯಿ ರಾಸಾಯನ ಆಯುರ್ವೇದ ಪದ್ಧತಿಯಲ್ಲಿ ಮಾನ್ಯತೆ ಪಡೆದಿದೆ.

ರಸಾಯನ ಎಂಬುದು ಆಯುರ್ವೇದೀಯ ಸಸ್ಯಾಂಶಗಳ ಮಿಶ್ರಣವಾಗಿದ್ದು, ಇದು ಆಯಸ್ಸು ವರ್ಧನೆಯಲ್ಲಿ ಮತ್ತು ಶಕ್ತಿವರ್ಧನೆಯಲ್ಲಿ ಅತ್ಯಂತ ಪ್ರಭಾವಿಯಾಗಿ ಕೆಲಸ ಮಾಡುತ್ತದೆ. ಆಯುರ್ವೇದದ ಅತಿ ಮುಖ್ಯ ಪಠ್ಯಗಳಲ್ಲೊಂದಾದ ಚರಕ ಸಂಹಿತೆಯಲ್ಲಿ ಈ ರಸಾಯನವನ್ನು ರೋಗ ನಿರೋಧಕ ಔಷಧವೆಂದು ಬಣ್ಣಿಸಿದೆ.

ಕೂದಲು ನಮ್ಮ ಸೌಂದರ್ಯದಲ್ಲಿ ಅತ್ಯಂತ ಮುಖ್ಯಪಾತ್ರ ವಹಿಸುತ್ತದೆ. ಆದರೆ ಒತ್ತಡ ಪರಿಸ್ಥಿತಿಗಳು, ನಿರಂತರ ದುಡಿಮೆ, ಆಹಾರ ಪದ್ಧತಿಯಲ್ಲಿನ ಏರುಪೇರು, ಪೌಷ್ಟಕಾಂಶಗಳ ಕೊರತೆಯಿಂದಾಗಿ ದೇಹವೇ ನಿಶ್ಯಕ್ತಿಯಿಂದ ಕೂಡಿರುವ ಈ ಕಾಲದಲ್ಲಿ ಕೂದಲನ್ನು ಸಂಪೂರ್ಣವಾಗಿ ಆರೈಕೆ ಮಾಡುವುದಂತೂ ಅತ್ಯಂತ ಪ್ರಯಾಸದ ಕೆಲಸ. ಒಮ್ಮೆ ಕೂದಲ ಸೌಂದರ್ಯವು ಹಾಳಾಯಿತೆಂದಾದಲ್ಲಿ ಅದನ್ನು ನೈಜ ರೂಪಕ್ಕೆ ತರುವುದು ಅತ್ಯಂತ ಕಷ್ಟಕರ. ಕಾಂತಿಯುತ ಮತ್ತು ಆರೋಗ್ಯ ಕೂದಲ ಬೆಳವಣಿಗೆಗೆ ನೆಲ್ಲಿಕಾಯಿಯು ಸಾಂಪ್ರದಾಯಿಕ ಪರಿಹಾರವಾಗಿದೆ.

ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ನಿಯಮಿತವಾದ ಆಮಲಕ್ಕಿ ಸೇವನೆಯು ನಿಮ್ಮ ಕೂದಲ ಬೆಳವಣಿಗೆಯಲ್ಲಿ ಧನಾತ್ಮಕವಾಗಿ ಕೆಲಸಮಾಡುವುದರೊಂದಿಗೆ ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಅಷ್ಟುಮಾತ್ರವಲ್ಲದೆ ನೆಲ್ಲಿಕಾಯಿಯ ಕೆಲವು ಗೃಹ ಔಷಧಿಯಿಂದ ಕೂದಲ ನರೆತ ಸಮಸ್ಯೆಯೂ ಪರಿಹಾರಗೊಳ್ಳುತ್ತದೆ. ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ನೆರಳಿನಲ್ಲಿ ಒಣಗಿಸಿ, ಈ ತುಂಡುಗಳು ಕರಕಲಾಗುವವರೆಗೆ ತೆಂಗಿನೆಣ್ಣೆಯಲ್ಲಿ ಹಾಕಿ ಕುದಿಸಿ. ಈ ಗಾಢಬಣ್ಣದ ಎಣ್ಣೆಯು ಕೂದಲಿನ ನೆರೆತವನ್ನು ತಡೆಗಟ್ಟಲು ಉತ್ತಮ ಔಷಧಿ.

ಕೇವಲ ಕೂದಲಿನ ಪೋಷಣೆಗೆ ಮಾತ್ರವಷ್ಟೇ ನೆಲ್ಲಿಕಾಯಿ ಸೀಮಿತವಾಗಿಲ್ಲ. ನಮ್ಮ ದೇಹದ ರೋಗನಿರೋಧಕ ಶಕ್ತಿಯಂತೆ ಕೆಲಸ ಮಾಡುವ ನೆಲ್ಲಿಕಾಯಿಯನ್ನು ಹಲವು ರೋಗಗಳಿಗೆ ಔಷಧವಾಗಿ ಬಳಸಲಾಗುತ್ತದೆ. ವಿಟಮಿನ್ 'ಸಿ' ಕೊರತೆಯಿರುವವರಿಗೆ ನೆಲ್ಲಿಕಾಯಿ ರಾಮಬಾಣ. ನೆಲ್ಲಿಕಾಯಿ ಹೇರಳವಾದ 'ಸಿ' ಪೋಷಕಾಂಶವನ್ನು ಹೊಂದಿದೆ. ಈ ಪೋಷಕಾಂಶವನ್ನು ನೆಲ್ಲಿಕಾಯಿಯು ನೈಸರ್ಗಿಕ ರೂಪದಲ್ಲಿ ಅತಿ ಹೆಚ್ಚಾಗಿ ಹೊಂದಿದ್ದು, ಜೀಟನ್ ಜಿರೋಬೋಸೈಡ್ ಮತ್ತು ನ್ಯೂಕ್ಲಿಯೋಸೈಡ್ ಎಂದು ಗುರುತಿಸಲಾದ ಸೈಟೋಕೈನ್ ಪದಾರ್ಥಗಳನ್ನು ಇದು ಒಳಗೊಂಡಿದೆ. ತ್ರಿಫಲ ಚೂರ್ಣ ಬ್ರಹ್ಮ ರಸಾಯನ, ಚ್ಯವನಪ್ರಾಶದಂತಹ ಮಹಾನ್ ಔಷಧಿಗಳಲ್ಲಿ ನೆಲ್ಲಿಕಾಯಿಯನ್ನು ಮುಖ್ಯಪದಾರ್ಥವಾಗಿ ಬಳಸಲಾಗುತ್ತದೆ.

ಒಣಗಿದ ನೆಲ್ಲಿಕಾಯಿಯು ರಕ್ತಸಾರ, ಅತಿಬೇಧಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆಮಲಕ್ಕಿಯು ಏಕಾಣು ಜೀವನಿರೋಧಕವಾಗಿದ್ದು, ಅದರ ಚೊಗರು ಗುಣವು ಸೋಂಕನ್ನು ತಡೆಗಟ್ಟಿ ಆಲ್ಸರ್ ಹುಣ್ಣು ಮಾಗಲು ಸಹಾಯ ಮಾಡುತ್ತದೆ. ಅಲ್ಲದೆ ಬಿಳಿಸೆರಗು, ಮಲಬದ್ಧತೆ, ಮುಂತಾದ ಅನೇಕ ಕಾಯಿಲೆಗಳಿಗೆ ಇದನ್ನು ಪ್ರಭಾವೀ ಔಷಧಿಯಾಗಿ ಬಳಸಲಾಗುತ್ತದೆ.

ನೆಲ್ಲಿಕಾಯಿ ನೆನೆಸಿದ ನೀರಿನಿಂದ ಮುಂಜಾನೆ ಮುಖ ತೊಳೆಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಆ ನೀರನ್ನು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ನೆಲ್ಲಿಕಾಯಿ ಒಂದು ತಂಪಾದ ಚೊಗರು, ವಾತಹರ, ಜೀರ್ಣಕಾರಕ, ವಿರೇಚಕ, ರೋಚಕ, ಹಾಗೂ ವಾಜೀಕಾರಕ ಔಷಧಿಯಾಗಿದ್ದು, ಜ್ವರಹರ, ಉರಿ ಶಮನ ಮತ್ತು ಮೂತ್ರಹರ ಗುಣಗಳನ್ನೂ ಹೊಂದಿದೆ.

ನಮ್ಮ ದೇಹವನ್ನು ಅತಿಯಾಗಿ ಕಾಡುವ ಆಸ್ತಮಾ, ಶ್ವಾಸಕೋಶ ಸಂಬಂಧೀ ಕಾಯಿಲೆಗಳು, ಅಜೀರ್ಣ, ಅತಿ ಆಮ್ಲೀಯತೆ, ಅಲ್ಸರ್‌ನಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು, ರಕ್ತಹೀನತೆ, ಮಧುಮೇಹ, ರಕ್ತಸ್ರಾವ ಸಮಸ್ಯೆ, ಸ್ತ್ರೀಯರಸಮಸ್ಯೆ, ಕಣ್ಣಿನ ಕಾಯಿಲೆಗಳು ಮತ್ತು ಚರ್ಮಸಂಬಂಧೀ ಕಾಯಿಲೆಗಳ ನಿವಾರಣೆಗೆ ನೆಲ್ಲಿಕಾಯಿಯು ಒಂದು ಉತ್ತಮ ಔಷಧವಾಗಿದೆ. ಅತಿ ಆಮ್ಲೀಯತೆ ಉಂಟಾದ ಸಂದರ್ಭದಲ್ಲಿ ಒಂದು ಗ್ರಾಂ ನೆಲ್ಲಿಪುಡಿಯನ್ನು ಸ್ವಲ್ಪ ಸಕ್ಕರೆ ಸೇರಿಸಿ ಹಾಲು ಅಥವಾ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಕುಡಿಯುತ್ತಿದ್ದರೆ ಈ ತೊಂದರೆಯಿಂದ ಶಮನ ದೊರೆಯುತ್ತದೆ. ಅಲ್ಲದೆ ದೇಹದ ಎಲ್ಲಾ ವಿಷಶಕ್ತಿಗಳನ್ನು ಹೊರಹಾಕಿ ದೇಹದಲ್ಲಿ ನಿರೋಧಕ ಶಕ್ತಿಯನ್ನು ತುಂಬುತ್ತದೆ.

ಇಷ್ಟು ಮಾತ್ರವಲ್ಲದೆ ನೆಲ್ಲಿಕಾಯಿಯನ್ನು ಉಪ್ಪಿನಕಾಯಿಯಾಗಿ, ತರಕಾರಿಯಾಗಿ ಅನೇಕ ವೇಳೆ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಸ್ವಲ್ಪ ನೀರಿನಲ್ಲಿ ಮೆತ್ತಗಾಗುವವರೆಗೆ ಉಪ್ಪು ಹಾಕಿ ಬೇಯಿಸಿ ಬಳಸಬಹುದಾಗಿದೆ.

ಒಟ್ಟಾರೆ ಹಸಿರು ಔಷಧಿಗಳ ರಾಜನೆಂದೇ ಕರೆಯಬಹುದಾದ ನೆಲ್ಲಿಕಾಯಿಯು ನಮ್ಮ ದೇಹದ ರಕ್ಷಣಾ ಪಡೆಯಂತೆ ಕೆಲಸ ಮಾಡುತ್ತದೆ. ಹಾಗಾಗಿ ಪ್ರತಿದಿನ ಆಮಲಕ್ಕಿ ಸೇವನೆಯನ್ನು ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಲ್ಲಿ, ಆರೋಗ್ಯಕರ ದೇಹವನ್ನು ಹೊಂದುವುದರಲ್ಲಿ ಸಂಶಯವಿಲ್ಲ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

Show comments