Select Your Language

Notifications

webdunia
webdunia
webdunia
webdunia

ಅಪೌಷ್ಠಿಕತೆಯಲ್ಲೂ ಭಾರತ ನಂ.1!

ಅಪೌಷ್ಠಿಕತೆಯಲ್ಲೂ ಭಾರತ ನಂ.1!
ಹಲವು ವಿಷಯಗಳಲ್ಲಿ ವಿಶ್ವದಲ್ಲಿ ನಂ.1 ಆಗಿರುವ ಭಾರತ ಈಗ ಪೌಷ್ಠಿಕತೆಯ ಕೊರತೆಯಿಂದ ಬಳಲುತ್ತಿರುವ ಅತಿ ಹೆಚ್ಚು ಜನರಿರುವ ದೇಶ ಎಂಬ ಹೊಸ ನಂ.1 ಪಟ್ಟವನ್ನೂ ಗಿಟ್ಟಿಸಿದೆ. ಬಡವರ್ಗದವರಿರುವ ಭಾರತದಲ್ಲಿ 230 ಮಿಲಿಯನ್ ಮಂದಿ ಅಪೌಷ್ಠಿಕ ಆಹಾರ ಸೇವಿಸುತ್ತಿರುವವರು ಎಂಬುದು ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ. ಇದರ ಪ್ರಕಾರ ಈ ಅಪೌಷ್ಠಿಕತೆಯಿಂದ ಶೇ.50ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ.

ಆಹಾರದ ಬೆಲೆ ಏರಿಕೆಯಿಂದ ಭಾರತದ ಹಳ್ಳಿಗಳಲ್ಲಿ 1.5 ಮಿಲಿಯನ್‌ಗೂ ಹೆಚ್ಚು ಮಂದಿ ಪೌಷ್ಠಿಕ ಆಹಾರವಿಲ್ಲದೆ ಬಳಲುತ್ತಿದ್ದಾರೆ. ಜುಲೈ 2008ರಿಂದ ಜನವರಿ 2009ರವರೆಗೆ ಶೇ.5ರಷ್ಟು ಆಹಾರದ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣ. 2008-09ರ ಧಾನ್ಯಗಳ ಕೊಯ್ಲು 228 ಮಿಲಿಯನ್ ಟನ್ ಇರಬಹುದೆಂದು ಅಂದಾಜಿಸಲಾಗಿದ್ದು, 2015ಕ್ಕೆ 250 ಮಿಲಿಯನ್ ಟನ್ ಬೇಕಾಗುವ ನಿರೀಕ್ಷೆಯಿದೆ. ಜಾಗತಿಕ ಹಸಿವಿನ ಪಟ್ಟಿಯಲ್ಲಿ 119 ದೇಶಗಳ ಪೈಕಿ ಭಾರತ 94ನೇ ಸ್ಥಾನದಲ್ಲಿದೆ ಎಂದು ವರದಿ ಹೇಳುತ್ತದೆ.
PTI
ಯುನೈಟೆಡ್ ನೇಷನ್ಸ್ ವರ್ಲ್ಡ್ ಫುಡ್ ಪ್ರೋಗ್ರಾಮ್ ವರದಿಯ ಪ್ರಕಾರ, ಪ್ರಪಂಚದ ಅಪೌಷ್ಠಿಕ ಮಂದಿಯ ಜನಸಂಖ್ಯೆಯಲ್ಲಿ ಶೇ.27 ಭಾಗ ಭಾರತದ ಮಂದಿ ಭಾರತವರಾದರೆ, ಅದರಲ್ಲಿ ಶೇ.43 ಮಂದಿ ಮಕ್ಕಳು ಎಂಬ ವಿಷಯ ಗಮನಾರ್ಹ. ಈ ಪ್ರಮಾಣ ವಿಶ್ವದಲ್ಲೇ ಅತಿ ಹೆಚ್ಚು. ಶೇ.70 ಮಂದಿಗೂ ಹೆಚ್ಚು ಮಕ್ಕಳು ಎನಿಮಿಯಾ ರೋಗದಿಂದ ಬಳಲಿದರೆ, ಅದರಲ್ಲಿ ಶೇ.80 ಮಂದಿಗೆ ವಿಟಮಿನ್‌ಯುಕ್ತ ಆಹಾರ ಸಿಗುವುದಿಲ್ಲ. ದಾಖಲೆಗಳ ಪ್ರಕಾರ ಕಳೆದ ಆರು ವರ್ಷಗಳಲ್ಲಿ ಎನಿಮಿಯಾ ರೋಗಿಗಳ ಸಂಖ್ಯೆ ಶೇ.6ರಷ್ಟು ಹೆಚ್ಚಿದೆ. 19 ರಾಜ್ಯಗಳ ಪೈಕಿ 11 ರಾಜ್ಯಗಳಲ್ಲಿ ಶೇ.80ಕ್ಕೂ ಹೆಚ್ಚು ಮಕ್ಕಳು ಎನಿಮಿಯಾದಿಂದ ಬಳಲುತ್ತಿದ್ದಾರೆ.

ಆದರೆ ಕಳೆದ ಆರು ವರ್ಷಗಳಿಂದ ನಿಶಕ್ತಿಯಿಂದ ಬಳಲುತ್ತಿರುವ ಮಹಿಳೆಯ ಪ್ರಮಾಣ ಶೇ.40ರಷ್ಟೇ ಇದೆ. ಅಸ್ಸಾಂ, ಬಿಹಾರ, ಮಧ್ಯಪ್ರದೇಶ, ಹರ್ಯಾಣಗಳಲ್ಲಿ ಈ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತದ ಪ್ರತಿ ಎರಡು ಮಕ್ಕಳಲ್ಲಿ ಒಂದು ಮಗು ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ, ಹುಟ್ಟುವ ಮಕ್ಕಳಲ್ಲಿ ಶೇ.30 ಮಂದಿ ಹುಟ್ಟುವಾಗಲೇ ಅಪೌಷ್ಟಿಕತೆಯನ್ನು ಹೊಂದಿರುತ್ತಾರೆ. ಇದಕ್ಕೆಲ್ಲ ಕಾರಣ, ಸರಿಯಾಗಿ ನಡೆಯದಿರುವ ಆಹಾರ ವಸ್ತುಗಳ ವಿತರಣೆ ಕಾರ್ಯ, ಮಾಹಿತಿಯ ಕೊರತೆ, ಭ್ರಷ್ಟಾಚಾರ, ಅಳತೆ- ತೂಕದಲ್ಲಿ ವ್ಯತ್ಯಾಸ ಎಂದು ವರದಿ ಅಂದಾಜಿಸಿದೆ.

ಬಡತನ ರೇಖೆಗಿಂತ ಕೆಳಗಿರುವ ಮಂದಿಗೆ ತಿಂಗಳಿಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಇದರ ಪ್ರಕಾರ ಐದು ಮಂದಿಯಿರುವ ಮನೆಗೆ ಎರಡು ಕೆಜಿಯಂತೆ ನೀಡಿದಂತಾಯಿತು. ಆದರೆ, ಐಸಿಎಂಆರ್ ನಿಗದಿಯ ಪ್ರಕಾರ ದಿನಕ್ಕೆ ಒಬ್ಬನಿಗೆ 330 ಗ್ರಾಂ ಬೇಕಾಗುತ್ತದೆ. ಈ ಲೆಕ್ಕಾಚಾರದಿಂದ ನೋಡಿದರೆ ಒಂದು ಮನೆಗೆ 11 ಕೆಜಿ ಧಾನ್ಯ ನೀಡಬೇಕಾಗುತ್ತದೆ ಎನ್ನುತ್ತದೆ ವರದಿ.

ಅಲ್ಲದೆ, ಈ ವರದಿಯ ಪ್ರಕಾರ, ಶೇ.80ರಷ್ಟು ಮಂದಿಗೆ ಶೌಚಕ್ರಿಯೆಗೂ ಟಾಯ್ಲೆಟ್ ಸೌಲಭ್ಯವಿಲ್ಲ. ಛತ್ತೀಸ್‌ಘಡ್, ಒರಿಸ್ಸಾ, ಜಾರ್ಖಂಡ್, ಮಧ್ಯಪ್ರದೇಶಗಳಲ್ಲಿ ಈ ಪ್ರಮಾಣ ಶೇ.90ಕ್ಕೇರಿದೆ. ಸಮೀಕ್ಷೆಯಲ್ಲಿ ಬೆಳಕಿಗೆ ಬಂದ ವಿಚಾರಗಳಿಂದಾಗಿ, ಸರ್ಕಾರಕ್ಕೆ ಬಡತನ ಹಾಗೂ ಹಸಿವು ಎಂದರೇನು ಎಂದು ಪ್ರಶ್ನಿಸಿರುವ ಈ ವರದಿ, ಪ್ರತಿಯೊಬ್ಬನಿಗೂ ನೀಡುವ ಪೌಷ್ಠಿಕ ಆಹಾರದ ಭದ್ರತೆ ಕೇವಲ ಆಹಾರ ನೀಡುವುದರಿಂದ ಸಾಧ್ಯವಿಲ್ಲ. ದೈಹಿಕ, ಆರ್ಥಿಕ ಹಾಗೂ ಸಾಮಾಜಿಕ ನೆಲೆಗಳನ್ನೂ ಒಳಗೊಳ್ಳುತ್ತದೆ. ಸಮತೋಲನ ಆಹಾರ, ಶುಚಿಯಾದ ಕುಡಿಯುವ ನೀರು, ಶೌಚ, ಹಾಗೂ ಪ್ರಾಥಮಿಕ ಆರೋಗ್ಯ ಸೌಲಭ್ಯಗಳೂ ಇದರಲ್ಲೇ ಒಳಗೊಳ್ಳುತ್ತದೆ. ಇದನ್ನು ಪಡೆಯುವ ಹಕ್ಕು ಮಹಿಳೆ, ಮಗು ಹಾಗೂ ಪುರುಷರಿಗಿದೆ ಎಂದು ತಿಳಿಸಿದೆ.

Share this Story:

Follow Webdunia kannada