ಬಂಗಾರಪ್ಪ ವಿಧಿವಶ: ಸೊರಬ ಬಂದ್-ಬಿಕ್ಕಿಬಿಕ್ಕಿ ಅತ್ತ ನಟ ಬಾಲರಾಜ್
ಬೆಂಗಳೂರು , ಮಂಗಳವಾರ, 27 ಡಿಸೆಂಬರ್ 2011 (12:00 IST)
ಸಾರೆಕೊಪ್ಪದ ಸರದಾರ, ಸಮಾಜವಾದಿ ನಾಯಕರಾಗಿ ಹಿಂದುಳಿದ ವರ್ಗಗಳ ಜನಪ್ರಿಯ ರಾಜಕಾರಣಿಯಾಗಿದ್ದ ಬಂಗಾರಪ್ಪ (79) 26ರ ಮಧ್ಯರಾತ್ರಿ ವಿಧಿವಶರಾಗಿದ್ದು, ಆ ಮೂಲಕ ರಾಜ್ಯ ಪ್ರಮುಖ ನಾಯಕನೊಬ್ಬನನ್ನು ಕಳೆದುಕೊಂಡಂತಾಗಿದೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಬಂಗಾರಪ್ಪ ಕರ್ನಾಟಕದ 12ನೇ ಮುಖ್ಯಮಂತ್ರಿಯಾಗಿ (1990-1992) ಕಾರ್ಯನಿರ್ವಹಿಸಿದ್ದರು. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಶ್ರಯ, ಆರಾಧನಾ, ವಿಶ್ವ ಎಂಬ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ದೀನ ದಲಿತ ಕಾರ್ಮಿಕರ ಹಿತ ರಕ್ಷಿಸಿದ್ದರು. ಕೆಲದಿನಗಳಿಂದ ತೀವ್ರ ಮಧುಮೇಹದಿಂದ ಬಳಲುತ್ತಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದಾರು ದಿನಗಳಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಈ ನಡುವೆ ಕಿಡ್ನಿವೈಫಲ್ಯವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು. ಬಂಗಾರಪ್ಪನವರ ಅವಧಿಯಲ್ಲಿನ ಗ್ರಾಮೀಣ ಕೃಪಾಂಕ ನೀತಿಯಡಿ ಹಲವಾರು ಗ್ರಾಮೀಣ ಯುವಕರು ಉಚಿತವಾಗಿ ಹಲವು ಸರ್ಕಾರಿ ಹುದ್ದೆಗಳಿಗೆ ನೇಮಕವಾಗಿದ್ದರು. ಇವರ ಮಗಳು ಗೀತಾ ವರನಟ ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಅವರನ್ನು ವರಿಸುವ ಮೂಲಕ ಬೀಗರಾಗಿದ್ದರು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುಟ್ಟಗ್ರಾಮ ಕುಬಟೂರಿನಲ್ಲಿ 1932ರಲ್ಲಿ ಹುಟ್ಟಿದ ಬಂಗಾರಪ್ಪ ಹೋರಾಟದ ಮೂಲಕ ರಾಜಕೀಯ ರಂಗ ಪ್ರವೇಶಿಸಿದವರು. ಕಾನೂನು ಪದವೀಧರರಾದ ಅವರು 1967ರಲ್ಲಿ ಪ್ರಜಾಸೋಷಿಯಲಿಷ್ಟ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.ನಂತರ ಅವರು ಗೃಹ, ಕೃಷಿ, ಕಂದಾಯ, ತೋಟಗಾರಿಕೆ ಹೀಗೆ ನಾನಾ ಖಾತೆಗಳನ್ನು ನಿಭಾಯಿಸಿ ವರ್ಣರಂಜಿತ ರಾಜಕಾರಣಿ ಎನಿಸಿಕೊಂಡು ಸಾಕಷ್ಟು ಏಳು-ಬೀಳು ಕಂಡುಕೊಂಡಿದ್ದರು.ಸೊರಬದಲ್ಲಿ ಸ್ವಯಂಪ್ರೇರಿತ ಬಂದ್:ನೆಚ್ಚಿನ ನಾಯಕ, ಹಿರಿಯ ರಾಜಕಾರಣಿ ಎಸ್.ಬಂಗಾರಪ್ಪ ನಿಧನದ ಹಿನ್ನೆಲೆಯಲ್ಲಿ ಬಂಗಾರಪ್ಪ ಅಭಿಮಾನಿಗಳು ಸೋಮವಾರ ಸೊರಬದಲ್ಲಿ ಸ್ವಯಂಪ್ರೇರಿತರಾಗಿ ಬಂದ್ ನಡೆಸಿದರು. ಅಂಗಡಿ-ಮುಂಗಟ್ಟು ಮುಚ್ಚುವ ಮೂಲಕ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.ಬಿಕ್ಕಿಬಿಕ್ಕಿ ಅತ್ತ ನಟ ಬಾಲರಾಜ್:ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸದಲ್ಲಿ ಇಡಲಾಗಿತ್ತು. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹಿರಿಯ ರಾಜಕಾರಣಿಗಳಾದ ಎಸ್ಸೆಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಕೆಶಿ, ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ನಟ ಬಾಲರಾಜ್ ಅವರು ಬಂಗಾರಪ್ಪನವರ ಪಾರ್ಥಿವ ಶರೀರರಕ್ಕೆ ಅಂತಿಮ ನಮನ ಸಲ್ಲಿಸಿದ ಸಂದರ್ಭದಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಬಂಗಾರಪ್ಪ ಪತ್ನಿಗೆ ಪುತ್ರರಾದ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ, ನಟ, ಅಳಿಯ ಶಿವರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರು ಸಾಂತ್ವನ ಹೇಳಿದರು.ನಾಳೆ ಕುಬಟೂರಿನಲ್ಲಿ ಅಂತ್ಯಕ್ರಿಯೆ:ಬಂಗಾರಪ್ಪನವರ ಹುಟ್ಟೂರಾದ ಕುಬಟೂರಿನ ಲಕ್ಕವಳ್ಳಿ ಫಾರಂನಲ್ಲಿ ಮಂಗಳವಾರ ಸಂಜೆ 5.30ಕ್ಕೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂದು ಬೆಂಗಳೂರಿನ ಸದಾಶಿವನಗರದಲ್ಲಿನ ನಿವಾಸದಲ್ಲಿ ಬಂಗಾರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಂಜೆವರೆಗೆ ಅವಕಾಶ ಕಲ್ಪಿಸಲಾಗಿದೆ.ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಷ್ಟೇ ಅಲ್ಲ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ಘೋಷಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆ ಸರ್ಕಾರಿ ರಜೆ ಘೋಷಣೆ ಮಾಡುವುದಾಗಿ ಹೇಳಿದೆ.