'ಯಾರೇ ಕೂಗಾಡಲಿ'ಯಲ್ಲಿ ಪುನೀತ್ 'ಅನ್ನಿಯನ್' ಖದರ್!
, ಶನಿವಾರ, 20 ಅಕ್ಟೋಬರ್ 2012 (14:06 IST)
ವಿಕ್ರಮ್ ನಟಿಸಿದ್ದ ತಮಿಳಿನ 'ಅನ್ನಿಯನ್' ಮೆಚ್ಚದವರು ಯಾರು? ಅದರಲ್ಲೂ ವಿಕ್ರಮ್ ರೂಪಾಂತರಗೊಳ್ಳುವ ಸನ್ನಿವೇಶವಂತೂ ರೋಮಾಂಚನಗೊಳಿಸುವಂತದ್ದು. ಈಗ ಅಂತಹುದೇ ಒಂದು ಗೆಟಪ್‌ನಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ!ಹಾಗೆಂದು 'ಅನ್ನಿಯನ್' ಕನ್ನಡಕ್ಕೆ ರಿಮೇಕ್ ಆಗುತ್ತಿದೆಯೇ ಎಂಬ ಶಂಕೆ ಬೇಡ. ರಿಮೇಕ್ ಹೌದು, ಆದರೆ ಅನ್ನಿಯನ್ ಅಲ್ಲ. ಇದು 'ಪೊರಾಲಿ'. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಸಮುತ್ತಿರಕನಿ ನಿರ್ದೇಶನದ 'ಪೊರಾಲಿ' ಕನ್ನಡದಲ್ಲಿ 'ಯಾರೇ ಕೂಗಾಡಲಿ' ಆಗುತ್ತಿದೆ. ಮೂಲ ಚಿತ್ರದ ನಿರ್ದೇಶಕರೇ ಇಲ್ಲೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಈ ಚಿತ್ರದ ಸ್ಟಿಲ್ ಒಂದು ಈಗ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಪುನೀತ್ ವ್ಯಗ್ರರಾಗಿರುವ ರೀತಿಯಲ್ಲಿ ಚಿತ್ರಿತವಾಗಿರುವ ಸನ್ನಿವೇಶವಿದು. ಇದು 'ಅನ್ನಿಯನ್' ಪಾತ್ರವನ್ನು ಹೋಲುತ್ತಿರುವುದರಿಂದ ಅಪ್ಪು ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಅದರಲ್ಲೂ 'ಪರಮಾತ್ಮ'ದಂತಹ ಸಾಫ್ಟ್ ಚಿತ್ರಗಳನ್ನು ಇಷ್ಟಪಡದ ಪ್ರೇಕ್ಷಕರಿಗೆ ಪುನೀತ್ ರಾ ಲುಕ್ ತುಂಬಾ ಇಷ್ಟವಾಗಬಹುದು ಎಂಬ ನಿರೀಕ್ಷೆಗಳಿವೆ.ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ 'ಯಾರೇ ಕೂಗಾಡಲಿ'ಯಲ್ಲಿ ಪುನೀತ್‌ಗೆ ಭಾವನಾ ನಾಯಕಿ. ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ಲೂಸ್ ಮಾದ ಯೋಗೇಶ್ ನಟಿಸುತ್ತಿದ್ದಾರೆ. ಅವರಿಗೆ ಸಿಂಧು ಲೋಕನಾಥ್ ನಾಯಕಿ. ಚಾರ್ಮಿ ಕೌರ್ ಐಟಂ ಹಾಡೊಂದರಲ್ಲಿ ಕುಣಿದು ಹೋಗಿದ್ದಾರೆ.ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನು ಕೆಲವೇ ದಿನಗಳ ಶೂಟಿಂಗ್ ಮುಗಿದರೆ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸವಷ್ಟೇ ಬಾಕಿ ಉಳಿಯುತ್ತದೆ. ಈಗಾಗಲೇ ಡಬ್ಬಿಂಗ್ ಶುರುವಾಗಿದೆಯಂತೆ. ಹಾಗಾಗಿ ವರ್ಷಾಂತ್ಯದೊಳಗೆ ಚಿತ್ರ ತೆರೆಗೆ ಬರಬರಬಹುದು.