Select Your Language

Notifications

webdunia
webdunia
webdunia
webdunia

ಮುಸ್ಸಂಜೆಯಲ್ಲಿ ಅನು ಪ್ರಭಾಕರ್ - ರಮೇಶ್ 'ತುಂತುರು'

ಮುಸ್ಸಂಜೆಯಲ್ಲಿ ಅನು ಪ್ರಭಾಕರ್ - ರಮೇಶ್ 'ತುಂತುರು'
WD
ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು -- ಅಮೃತವರ್ಷಿಣಿ ಚಿತ್ರದ ಕಲ್ಯಾಣ್ ಹಾಡಿನ ಈ ಸಾಲುಗಳು ಅದೆಷ್ಟು ಕೇಳಿದರೂ ಮತ್ತೆ ಮತ್ತೆ ಹೊಸ ಅರ್ಥಗಳನ್ನೇ ಕೊಡುತ್ತಾ ಹೋಗುತ್ತದೆ. ಈಗ ಅದೇ ಸಾಲನ್ನಿಟ್ಟುಕೊಂಡು ರಮೇಶ್ ಅರವಿಂದ್ ಮತ್ತು ಅನು ಪ್ರಭಾಕರ್ ಒಂದಾಗುತ್ತಿದ್ದಾರೆ. ಮುಸ್ಸಂಜೆ ಮಹೇಶ್ ಈ ಚಿತ್ರದ ನಿರ್ದೇಶಕರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಮೇಶ್-ಅನು ಪ್ರಭಾಕರ್ ಎಂದಾಗ ಪಕ್ಕನೆ ನೆನಪಾಗುವುದು 'ಶಾಪ'. ಶ್ರೀರಸ್ತು ಶುಭಮಸ್ತು, ಬಿಸಿ ಬಿಸಿ ಚಿತ್ರಗಳಲ್ಲೂ ಈ ಜೋಡಿ ಕ್ಲಿಕ್ಕಾಗಿತ್ತು. ಅದನ್ನೇ ಮುಂದಿಟ್ಟುಕೊಂಡು 'ತುಂತುರು' ಮಾಡಲು ಹೊರಟಿದ್ದಾರೆ ಮುಸ್ಸಂಜೆ ಮಹೇಶ್. ಫ್ಯಾಮಿಲಿ ಚಿತ್ರವಾದರೂ, ರಮೇಶ್‌ಗೆ ಹೊಂದುವ ಮಟ್ಟದ ಆಕ್ಷನ್ ಇಲ್ಲಿದೆಯಂತೆ.

ಮಹೇಶ್ ಅವರದ್ದು ಒಂದು ರೀತಿಯಲ್ಲಿ ಯಶಸ್ಸಿಗಾಗಿ ಪರದಾಟ. ಮೊನ್ನೆ ತಾನೇ ಬಿಡುಗಡೆಯಾದ 'ಸಂಕ್ರಾಂತಿ'ಯೂ ಅವರ ಕೈ ಹಿಡಿಯಲಿಲ್ಲ. ಇತ್ತ ರಮೇಶ್‌ರದ್ದೂ ಅದೇ ಕಥೆ. ಭಾರೀ ಭರವಸೆಯಿಂದ 'ನಮ್ಮಣ್ಣ ಡಾನ್' ಮಾಡಿ, ಪ್ರಚಾರ ಮಾಡಿದರೂ ಪ್ರೇಕ್ಷಕ ಮಹಾಶಯ ಕ್ಯಾರೇ ಅಂದಿಲ್ಲ.

ರಮೇಶ್-ಅನು ಜೋಡಿಯೇನೋ ಸರಿ, ಆದ್ರೆ ಸೆಕ್ಸ್ ಬಾಂಬ್ ರಿಷಿಕಾ ಸಿಂಗ್ ಕಥೆಯೇನು? ಈ ಪ್ರಶ್ನೆಗೆ ಉತ್ತರಿಸಲು ಸದ್ಯಕ್ಕೆ ನಿರ್ದೇಶಕರು ತಯಾರಿಲ್ಲ. ಅದು ಸಸ್ಪೆನ್ಸ್ ಅಂತೆ. ರಿಷಿಕಾ ಅವರದ್ದು ರಮೇಶ್ ತಂಗಿಯ ಪಾತ್ರ. ಆಕೆಯ ಗೆಳೆಯ ಅನಿಲ್. ತಂಗಿಯ ಪಾತ್ರವೆಂದ ಕೂಡಲೇ ತೀರಾ ಹೀಗಳೆದು ನೋಡಬೇಕಿಲ್ಲ, ಇಲ್ಲಿ ರಿಷಿಕಾ ಪಾತ್ರ ತುಂಬಾ ವಿಭಿನ್ನವಾಗಿದೆ. ಅದನ್ನು ಚಿತ್ರ ಬಿಡುಗಡೆಯಾದ ಮೇಲೆಯೇ ನೋಡಿ ಅನ್ನುತ್ತಾರೆ ನಿರ್ದೇಶಕರು.

ಹೆಸರಿಗೆ ತಕ್ಕಂತೆ 'ತುಂತುರು' ಚಿತ್ರವನ್ನು ಬಹುತೇಕ ಮಳೆಯಲ್ಲೇ ಚಿತ್ರೀಕರಿಸುತ್ತಿರುವುದು ವಿಶೇಷ. ಇಡೀ ಚಿತ್ರದ ಶೇ.80ರಷ್ಟು ಭಾಗ ಮಳೆಯಂತೆ. ಅಂದರೆ ಮಳೆಯ ಹುಚ್ಚು ಮಹೇಶ್‌ಗೂ ಬಡಿದಿದೆ ಎಂದಾಯಿತು. ಮಳೆಯಲ್ಲಿ ಮಿಂದೆದ್ದ ಯೋಗರಾಜ್ ಭಟ್ ಫಿಲಾಸಫಿಯಲ್ಲಿದ್ದರೂ, ಇತರರು ಬಿಡುತ್ತಿಲ್ಲ. ಕೇಳಿದರೆ, ಕಥೆಗೆ ಪೂರಕ ಎಂದು ಬಿಡುತ್ತಾರೆ.

ಈ ಚಿತ್ರದಲ್ಲಿ ರಮೇಶ್ ತನ್ನ ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ. ಅವರದ್ದಿಲ್ಲಿ ಕ್ಲೀನ್ ಶೇವ್ ಮಾಡಿಕೊಂಡ ಪಾತ್ರ. ಅಂದರೆ ಅವರ ಟ್ರೇಡ್ ಮಾರ್ಕ್ ಮೀಸೆಯೇ ಇರುವುದಿಲ್ಲ. ಸೋಮಶೇಖರ್ ಎಂಬವರು 'ತುಂತುರು' ನಿರ್ಮಾಪಕರು. ಶ್ರೀಧರ್ ಸಂಗೀತ ನೀಡಿದ್ದಾರೆ. ಈಗಾಗಲೇ ಒಂದು ಸುತ್ತಿನ ಚಿತ್ರೀಕರಣ ಮುಗಿಸಿರುವ ಮಹೇಶ್ ಟೀಮ್, ಇನ್ನೊಂದು ಸುತ್ತಿಗೆ ರೆಡಿಯಾಗಿದೆ.

Share this Story:

Follow Webdunia kannada