ಹಳ್ಳಿಗಾಡಲ್ಲೊಂದು ಸಂಚಾರಿ ತಾಳ ಮದ್ದಳೆ ಯಾತ್ರೆ
ಚಿತ್ರ, ವರದಿ: ಚಂದ್ರಶೇಖರ ಏತಡ್ಕ
"
ಇದು ಸರಿಯಾದ ಸುಸಂಸ್ಕೃತ ಜನರಿಗೆ ತಲುಪಿದರೆ ಸಾಕು. ಸಿಳ್ಳೆ ಹೊಡೆಯೋರು ಬೇಡ, ಇದು ಸಾಂಸ್ಕೃತಿಕ ತಿರುಗಾಟ. ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮವಾಗುವುದು ಬೇಡ... ಮದುವೆ ಮನೆಯಲ್ಲಿ, ಜಾತ್ರೆಯಲ್ಲಿ, ಭೂತಕೊಲದ ಎಡೆಯಲ್ಲಿ ತಾಳ ಮದ್ದಳೆ... ನಾವು ಇದಕ್ಕೆ ಖಂಡಿತ ವಿರೋಧಿಸುತ್ತೇವೆ..."ಹೀಗೆನ್ನುತ್ತಾ ಪ್ರಾಸ್ತಾವಿಕ ನುಡಿಯಲ್ಲೇ ಏನೋ ಗಂಭೀರವಾದ ಮಾತನ್ನು ಏರು ಧ್ವನಿಯಲ್ಲಿ ಹೇಳುತ್ತಾ ಒಂದು ಬಲವಾದ ಆಯಾಮ ಸೃಷ್ಟಿ ಮಾಡುವವರು 'ಸಂ ಯ ಮಂ' [ಸಂಚಾರಿ ಯಕ್ಷಗಾನ ಮಂಡಳಿ] ನೇತೃತ್ವ ವಹಿಸಿದ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರು. ಹೀಗನ್ನುತ್ತಲೇ ಸಂಚಾರಿ ಕಲಾವಿದರೆಲ್ಲರೂ ತಾಳಮದ್ದಳೆಗಾಗಿ ವಿನ್ಯಾಸಗೊಳಿಸಿದ ವಿಶಿಷ್ಟ ಎತ್ತರದ ಪೀಠ ಏರುತ್ತಾರೆ. ಇಲ್ಲಿ ಲೈಟಿಂಗ್, ಕಲಾವಿದರ ಹಾವಭಾವ ಎಲ್ಲವೂ ಸ್ಪೆಷಲ್... ''
ಕಾವ್ಯವು ಕಲೆಯಾಗಿ ಅರಳಿ ನಿಲ್ಲುವ ಕಮನೀಯ ಕರ್ಮ ಯಕ್ಷಗಾನ ತಾಳಮದ್ದಲೆ. ಒಂದು ವಚೋ ವಿಲಾಸ ವೈಖರಿ. ಇಲ್ಲಿ ತರ್ಕ, ಶಾಸ್ತ್ರ, ಕಾವ್ಯ, ದರ್ಶನ, ವ್ಯಂಗ್ಯ, ವಿಡಂಬನೆ, ಸ್ವಸ್ಥಾಪನೆ, ಅನ್ಯಾಕ್ರಮಣ ಮುಂತಾದುವುಗಳ ಹಾಸು ಬೀಸುಗಳಿವೆ. ಕವಿಯ ಕಿರು ಪದ್ಯಗಳಿಗೆ ವಿಸ್ತೃತ ವ್ಯಾಖ್ಯಾನ ನೀಡುವ, ತನ್ಮೂಲಕ ಪಾತ್ರಗಳನ್ನು ಅನನ್ಯವಾಗಿ ಕಡೆದು ನಿಲ್ಲಿಸುವ ಅರ್ಥಗಾರಿಕೆ ಇಲ್ಲಿಯ ವಿಶೇಷತೆ'' ಎನ್ನುತ್ತಾರೆ ಅಲ್ಲಿಗೆ ಆಗಮಿಸಿದ್ದ, ಯಕ್ಷಗಾನ ಛಂದಃಶಾಸ್ತ್ರದಲ್ಲಿ ಡಾಕ್ಟರೇಟು ಪದವಿ ಗಳಿಸಿದ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್. ಈ ತಂಡದವರು ಏತಡ್ಕದಲ್ಲಿ ಪ್ರಸ್ತುತಪಡಿಸಿದ ಕಥಾಭಾಗ 'ಶರಸೇತು ಭಂಗ'. ಅರ್ಜುನನಾಗಿ ಮಲ್ಪೆ ಸಾಮಗರು, ಹನುಮಂತನಾಗಿ ಪ್ರೊ| ಎಂ.ವಿ.ಹೆಗಡೆ ದಂತೆಕ್ಕಲ್ಲು, ಪೂಕಳ ಲಕ್ಷ್ಮೀ ನಾರಾಯಣ ಅವರ ಬಡ ಬ್ರಾಹ್ಮಣ, ನಿಟ್ಟೂರು ಅನಂತ ಹೆಗಡೆಯವರ ಕೃಷ್ಣ... ಮೂರು ಘಂಟೆಯಲ್ಲಿ ಸವಿಯಾದ ತಾಳಮದ್ದಳೆಯನ್ನು ಜನಮೆಚ್ಚುವ ಹಾಗೆ ನೀಡುವಲ್ಲಿ ಈ ಪುಟ್ಟ ತಂಡ ಯಶಸ್ವಿಯಾಗಿದೆ. ರಸಾತ್ಮಕ, ಕಾವ್ಯಾತ್ಮಕ, ಭಾವಾನಾತ್ಮಕ ಅಂಶಗಳು ಕೂಡ ಇಲ್ಲಿ ಸಾಕಷ್ಟಿದ್ದವು.ತಾಳಮದ್ದಳೆಗಳಲ್ಲಿ ಸಾಧಾರಣವಾಗಿ ಕಾಣಸಿಗದ 'ದೃಶ್ಯಾತ್ಮಕ ನಾಟಕೀಯ ಕೈಕರಣ'ವನ್ನು ಹೆಚ್ಚು ಬಳಸುತ್ತಾರೆ ಇವರು. ಪ್ರೇಕ್ಷಕರನ್ನು ಕಾಲ್ಪನಿಕ ಲೋಕದೊಳಗೆ ಹಿಡಿದಿರಿಸಿಕೊಳ್ಳಲು ಈ ನಟನೆಗಳು ತಪ್ಪಲ್ಲ. ತಾಳಮದ್ದಳೆ ವಾಚ್ಯ ಮಾತ್ರ ಅಲ್ಲ ಎನ್ನುವುದನ್ನು ಸಾಮಗರು ತೋರಿಸಿಕೊಡುತ್ತಿದ್ದಾರೆ ಎಂದು ಅನಿಸದೇ ಇರಲಿಲ್ಲ.ಸಂಚಾರಿ ತಂಡದಲ್ಲಿ ಕಲಾವಿದರು ಮಾತ್ರ ಅಲ್ಲ, ಪೂರಕವಾಗಿ ಜನರೇಟರ್, ಬೆಳಕಿನ ವ್ಯವಸ್ಥೆಯೂ ಇದೆ. ಹಾಗಾಗಿ ಸಂಘಟಕರು ಪರದಾಡಿ ಸುಸ್ತು ಹೊಯ್ದು ಕೊಳ್ಳಬೇಕಾಗಿಲ್ಲ. ಉತ್ತಮ ಕಲಾವಿದರನ್ನು ಹೊಂದಾಣಿಸಿಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಇರದು. ಈ ದೃಷ್ಟಿಯಿಂದಲೂ 'ಸಂ ಯ ಮಂ' ಯಶಸ್ವಿಯಾಗಿದೆ ಅನ್ನಿಸುತ್ತದೆ. ಈ ನೂತನ ಕಲ್ಪನೆ ಸಂಘಟಕರ ಹೊರೆಯನ್ನೂ ಕಡಿಮೆಗೊಳಿಸುತ್ತದೆ. ಭಾಗವತರಾದ ಧರ್ಮಶಾಲಾ ಗಜಾನನ ಹೆಗಡೆ ಪದ ಸುಶ್ರಾವ್ಯವಾಗಿತ್ತು. ಜೂನ್ 29 ರಂದು ಉಡುಪಿ ಜಿಲ್ಲೆಯ ಕೋಟದಿಂದ ತಿರುಗಾಟ ಆರಂಭವಾಗಿ ಅಕ್ಟೋಬರ್ 18 ರಂದು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆಯಲ್ಲಿ ಸಮಾರೋಪ. ಕಾಸರಗೋಡು ಜಿಲ್ಲೆಯ ಪೆರ್ಲ, ಪೈವಳಿಕೆ, ಬಾಯಾರು, ಕೊಲ್ಲಂಗಾನ, ಕಳತ್ತೂರು ಕಡೆಗಳಲ್ಲೂ ಪ್ರದರ್ಶನ ನೀಡಿದ್ದಾರೆ.'
ಮಕ್ಕಳನ್ನು ಒತ್ತಾಯಕ್ಕಾದರೂ ತಾಳಮದ್ದಲೆಗೆ ಕರೆತನ್ನಿ... ರುಚಿ ಹತ್ತಿಸಿ... ಭಾರತ ದೇಶದ ಸಾಂಸ್ಕೃತಿಕ ರಾಯಭಾರಿಗಳಾಗುತ್ತಾರೆ. ಯಾರೋ ಯಾರದೋ ಹಿಂದೆ ಓಡಿಹೋದರು ಅಂತ ಆಮೇಲೆ ಹೊಡ್ಕೊಳ್ಳಬೇಡ್ರಿ... ಸಾಮಗರು ಪ್ರಸ್ತಾವನೆಯಲ್ಲಿ ಗುಡುಗಿದ ಮಾತು ಅವರ ಸಂಚಾರದ ತಾಳಮದ್ದಲೆ ಮೇಳದ ಕಾಳಜಿ ಬಿಂಬಿಸುವಂತಿತ್ತು. 'ಇಷ್ಟು ಕನಿಷ್ಠ ವೆಚ್ಚದಲ್ಲಿ ಒಂದು ಸುಂದರ ತಾಳೆಮದ್ದಲೆ ಆಗುವುದಿಲ್ಲ... ತಲೆಬಿಸಿ ಇಲ್ಲದೆ'... ಹೀಗೆ ಎಂದಿದ್ದರು ಮಾತಿನ ಮಧ್ಯೆ ಪೂಕಳದವರು. ತಿರುಗಾಟದ ಮೇಳಕ್ಕೆ ಬನ್ನಿ ಎಂದವರು ಕೈಕೊಟ್ಟಿದ್ದರು. ಆ ದಿನವನ್ನು ಏತಡ್ಕದವರು ಬಳಸಿಕೊಂಡಿದ್ದರು. ವಿಚಿತ್ರ ಏತಡ್ಕ ಸಾಂಸ್ಕೃತಿಕ ವೇದಿಕೆ ಕಾಸರಗೋಡು, ವಿವೇಕಾನಂದ ಯುವ ಕೇಂದ್ರ ಏತಡ್ಕ, ಶಂಕರಿ ಅಮ್ಮ ಕೈಂತಜೆ, ಊರ ಹತ್ತು ಸಮಸ್ತರು ಕೇವಲ ಎರಡು ದಿನದ ಕಾಲಾವಧಿಯಲ್ಲಿ ಒಟ್ಟು ಸೇರಿ ಸಾರ್ಥಕ ಕಲಾ ಸೇವಗೆ ಕೈಜೋಡಿಸಿದ್ದವು.