Webdunia - Bharat's app for daily news and videos

Install App

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 5- ಕರ್ಣನಿಂದಾಗಿ ಕಣ್ಣೀರು ಬಂತು

Webdunia
[ ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ. ಇದರ ನಿರೂಪಣೆ ಪ.ಗೋ.- ಸ ಂ]

[ ಕಳೆದ ವಾರದಿಂದ ಮುಂದುವರಿದುದ ು]

WD
'' ಅಡವಿ ಗಿಡ ಮರ ಕಲ್ಲು ನೋಡಿದರೆಯರಸಿನದ ಪುಡಿಯಂತೆ ತೋರುತಿದೆ ತಮ್ಮಾ! ಒಡಲೊಳುರಿ ತಾಪ ಬೇರ್ವಿಡಿದು ಜಠರಾಗ್ನಿಯಲಿ ನಡುಗುತಿದೆ ಕೈ ಕಾಲು ತಮ್ಮಾ'' ಎಂದು ಸೀತೆಯನ್ನು ಕಳೆದುಕೊಂಡ ಶ್ರೀರಾಮ ಹಂಬಲಿಸುತ್ತಾನೆ. ಲಕ್ಷ್ಮಣನೊಡನೆ ಅಳಲನ್ನು ತೋಡಿಕೊಳ್ಳುತ್ತಾನೆ. ಪದ್ಯದ ತರುವಾಯ, ರಾಮನ ಉದ್ವೇಗದ ಸಂಪೂರ್ಣ ಚಿತ್ರಣವಾಗಬೇಕಾದರೆ- ತಾಳಮದ್ದಳೆಯ (ಕುಳಿತು ಮಾತನಾಡುವ- ವೇಷವಿಲ್ಲದ) ರಾಮ ಬಹಳ ಮಾತುಗಳನ್ನು ಖರ್ಚು ಮಾಡಬೇಕಾಗುತ್ತದೆ. ಭಾವನೆಗಳು ಮೂಡದೆ ಬರಿಯ ಮಾತುಗಳನ್ನೇ ಹೊರಡಿಸುವವನು ರಾಮನಾಗಿದ್ದರೆ, ಪ್ರೇಕ್ಷಕರಲ್ಲಿ ಪ್ರತಿಕ್ರಿಯೆ ಮೂಡಿಸುವ ಪ್ರಯತ್ನ ನಿರರ್ಥಕ ಎನಿಸುತ್ತದೆ,

ಶೃಂಗಾರ ರಸದ ನಿರೂಪಣೆ ಇರುವ ಪಾತ್ರಗಳಲ್ಲೂ ಅಂತಹುದೇ ಅನುಭವ. ''ಕಾಮಸನ್ನಿಭ ಮಾತ ಕೇಳೂ! ನಿನ್ನೊಳ್! ಕಾಮಿಸಿ ಕಾಮಿಸಿ ಬಂದೆ ಕೃಪಾಳೂ!!'' ಎಂದು ಮಾಯಾ ಶೂರ್ಪನಖಿಯು ಲಕ್ಷ್ಮಣನೊಡನೆ ನುಡಿದ ಸನ್ನಿವೇಶದಲ್ಲಿ ಬರಿ ಮಾತಿನ ಬರಡುತನವನ್ನೂ ಕಂಡುಕೊಳ್ಳುವಂತಾಗಿತ್ತು.

WD
ಅತೃಪ್ತಿ
ವೀರರಸದ ಸಂದರ್ಭಗಳಲ್ಲೂ ಅದೇ ತೊಡಕು, ಒಂದೆರಡು ಸನ್ನೆಗಳು, ಎರಡು ಮೂರು ಮಾತುಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದಾದ ಕೆಲಸಕ್ಕೆ ಬಹಳ ಮಾತುಗಳನ್ನೇ ವೆಚ್ಚ ಮಾಡಿದ ತರುವಾಯವೂ 'ಇದು ಸಾಕಾಗಲಿಲ್ಲ!' ಎಂದು ಅತೃಪ್ತಿ.

'' ಅರ್ಥ ಉದ್ದವಾಯಿತು.'' ಎಂಬ ಮಾತು ಕೇಳಿ ಬಂದರೆ ಅದರಲ್ಲಿ ಆಶ್ಚರ್ಯವೇನು?

ಇಂತಹುದೇ ವಿಚಾರಗಳ ಚರ್ಚೆ ಜಿಜ್ಞಾಸೆಗಳು ಗೆಳೆಯರೊಂದಿಗೆ ಆಗಾಗ ನಡೆಯುತ್ತಿದ್ದವು.

' ತಾಳ ಮದ್ದಳೆಗೆ ಅದರದೇ ಆದ ಆಕರ್ಷಣೆ ಇದೆ. ಶ್ರಾವಕರ ಕಲ್ಪನಾಶಕ್ತಿಗೂ ಸಾಕಷ್ಟು ಕೆಲಸ ಕೊಡುವ ಕಲೆ ಅದು. ಸಾಮಾನ್ಯ ಕೂಟದಲ್ಲೂ ಬೆಳಗಿನವರೆಗೆ ಕುಳಿತು ಆನಂದಿಸಬಹುದ ಾo ಆಕರ್ಷಣೆಯನ್ನು ಒದಗಿಸಲು ಸಾಧ್ಯ. ಸರಿಯಾದ ಹಿಮ್ಮೇಳವಿದ್ದರೆ, ತಾಳಮದ್ದಳೆಯಲ್ಲೇ ಬಹಳ ಮನರಂಜನೆ ಸಿಗುತ್ತದೆ' ಎಂದು ವಾದಿಸುವ ಗೆಳೆಯರೂ ಇದ್ದರು.

ಆದರೆ ಮನರಂಜನೆ, ಕಲಾನುಭವದ ಸುಖ, ಪಂಡಿತ ಪಾಮರಾದಿ ಸಕಲರಿಗೂ ದೊರಕಬೇಕಿದ್ದರೆ, ತನ್ನ ಮನಸ್ಸಿನಲ್ಲಿ ಮೂಡಿದ ಎಲ್ಲ ಭಾವನೆಗಳನ್ನೂ ಕಲಾವಿದನು ಪ್ರದರ್ಶಿಸಬೇಕಾಗಿದ್ದರೆ, ಅದಕ್ಕೆ 'ರಂಗಸ್ಥಳ'ವೇ ಸರಿಯಾದ ಸ್ಥಳವೆಂಬ ಭಾವನೆ ನನ್ನಲ್ಲಿ ಬಲಗೊಂಡಿತ್ತು.

ಆದುದರಿಂದ, ಯಕ್ಷಗಾನ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿ ಹಿಂದಿರುಗುವಾಗ, ಅತೃಪ್ತಿಯ ಹೊರೆ ನನ್ನ ಮೇಲೆ ಒತ್ತಡವನ್ನೇ ಹೇರುತ್ತಿತ್ತು.

ಕರ್ಣನ ರಥ
ದೀಪಾವಳಿಯ ಹಬ್ಬಕ್ಕೆ ಎರಡು ದಿನವಿತ್ತು. ಮನೆ ಬಳಿಯ ಕನ್ಯಾನದಲ್ಲಿ ಗೆಳೆಯರ ಕೂಟದವರು ತಾಳಮದ್ದಳೆ ಕೂಟವನ್ನು ಎಂದಿನಂತೆ ಏರ್ಪಡಿಸಿದ್ದರು.

ಅಂದಿನ ಪ್ರಸಂಗ ಕರ್ಣಪರ್ವ. ಸಾಮಾನ್ಯವಾಗಿ ಆಗಾಗ ಜರುಗುತ್ತಲಿದ್ದ ಕೂಟಗಳಿಂದ ಆ ದಿನದ ಕೂಟಕ್ಕೆ ಅದೇನೋ ಒಂದು ಹೆಚ್ಚಿನ ಆಕರ್ಷಣೆ- ಅಂದಿನ ಒಂದು ಹಬ್ಬದ ದಿನದಿಂದಾಗಿ ಬಂದಿತ್ತು. ನನಗಂದು ಕರ್ಣನ ಪಾತ್ರ ದೊರೆತಿತ್ತು. ಕರ್ಣನ ಸೇನಾಧಿಪತ್ಯದ ಮೊದಲ ದಿನ ಕಳೆದು, ರಾತ್ರಿಯಾದಾಗ ''ಇರುಳಿನ ಒಡ್ಡೋಲಗ''ವನ್ನು ಕೌರವನು ಕರೆಯುವಂತಾದ ಪರಿಸ್ಥಿತಿ. 'ತಲೆಯ ಮುಸುಕಿನ! ಕೈಯ ಕದಪಿನ! ನೆಲನ ನೋಟದ! ಪೊತ್ತ ದುಗುಡದ' ಅಂಗಾಧಿಪತಿಯ ಆ ದಿನದ ಸೋಲಿನ ದುಃಖವನ್ನು ಅನುಭವಿಸುತ್ತಾ ಮೌನದಿಂದ ನಿಂತಿದ್ದಾನೆ. ಮಾತನಾಡಿಸಲು ಬಂದ ಕೌರವನಿಗೆ ಉತ್ತರವನ್ನೀಯಲಾರ.

'' ಏನಾಯಿತಿಂದಿನಾಹವದಿ ಕಲಿ ಕರ್ಣ?'' ಎಂದು ಪ್ರಶ್ನಿಸಿದ ಕೌರವ. ಉತ್ತರವಿಲ್ಲ.

'' ಮಾನನಿಧಿಗಳಿಗೇತಕೀ ಪರಿಯ ಮೌನ'' ಎಂದರೂ ನಿರುತ್ತರ.

'' ಧುರಧುರಂಧರರಿಂಗೆ ಬರಿದೆ ದುಗುಡವೇಕೆ? ನಿನ್ನ ವಿಕ್ರಮಕ್ಕೆ ಕುಂದು ಬರುವಂತಹ ವಿಚಾರವಾದರೂ ಏನು? ಮನೋವ್ಯಥೆಯನ್ನು ಬಿಡು. ನಿನಗಾಗಬೇಕಾದುದನ್ನು ನನ್ನೊಡನೆ ಹೇಳು'' ಎನ್ನುತ್ತಾನೆ ಕೌರವ. (ಮುಂದಿನ ಪುಟಕ್ಕೆ)

WD
( ಕರ್ಣನ ಆಗಿನ ಅವಸ್ಥೆಯನ್ನು ಯಶಸ್ವಿಯಾಗಿ ನಿರೂಪಿಸಲು ಕೌರವನ ಮಾತುಗಳಿಂದ ಮಾತ್ರವಲ್ಲವೆ ಸಾಧ್ಯ?) ಮುಂದೆ- ''ರಾಯ ಕೇಳಿಂದು ರಿಪುರಾಜೀವ ಕರಿಯೆಂಬ! ದಾಯತಕೆ ಕುಂದೆನಗೆ ಬಂದಿತೊಂದರಲಿ!! ಬಾಯಿಂದ ಪೇಳಿದರೆ ಬಪ್ಪುದೇ ಸಾರಥಿಗು! ಪಾಯವಿಲ್ಲದರಿಂದ ಪಿಸುಣ ನಾನಾದೆ'' ಎಂದ ಕರ್ಣ. ಅನಂತರ ''ಸಾರಥಿಯು ತನಗೋರ್ವ ಸಾಧ್ಯನಾದರೆ ನಾಳೆ! ಭೂರಿ ರಿಪುಬಲವೆಲ್ಲ ಭಂಗಿಸುವೆ ಕ್ಷಣದಿ'' ಎಂದು ನುಡಿಯುತ್ತಾನೆ. ಶಲ್ಯನನ್ನು ತನಗೆ ಸಾರಥಿಯಾಗಿಸಿಕೊಡೆಂದು ಕೇಳುತ್ತಾನೆ. ಭಾರ್ಗವನಲ್ಲಿ ತಾನು ಶಸ್ತ್ರ ವಿದ್ಯಾಭ್ಯಾಸ ಮಾಡಿದ ಹಿನ್ನೆಲೆಯ ಕುರಿತೂ ವಿವರಿಸುತ್ತಾನೆ.

( ಕಮಲಗಳಿಂದ ತುಂಬಿದ ಸರೋವರದಲ್ಲಿ ಮದ್ದಾನೆಯ ಚೆಲ್ಲಾಟ... ಬರಿ ಮಾತಿನಿಂದ ಅದನ್ನು ಹೇಗೆ ನಿರೂಪಿಸಲಿ?...ದುಂಬಿಯಾಗಿ ಬಂದ ದೇವೇಂದ್ರ ನನ್ನ ತೊಡೆಯನ್ನು ಕಡಿದ... ಸುರಿಯುತ್ತಿರುವ ರಕ್ತದ ಶೈತ್ಯದಿಂದ ತೊಡೆಯಲ್ಲಿ ತಲೆ ಇರಿಸಿ ಮಲಗಿದ ಗುರುವಿಗೆ ಎಚ್ಚರವಾದಾಗ ಲೋಕವೇ ಕುಸಿದಂತಾಯಿತು ನನಗೆ.... ನನ್ನ ಮಾನಸಿಕ ಯಾತನೆಯನ್ನು ಯಾವ ಮಾತಿನಲ್ಲಿ ಬಿಂಬಿಸಲಿ?)

ಪ್ರಸಂಗದುದ್ದಕ್ಕೂ ಇಂತಹುದೇ ತೊಳಲಾಟ ನನಗೆ ಬಂದೊದಗಿತ್ತು. ನಮ್ಮವರೇ ಆದರೂ, ಕ್ಷಮೆ ಕೊಡಲಾರದ ವಿಮರ್ಶಕ ವರ್ಗದವರಿಂದ ತುಂಬಿದ ಆ ಸಭೆಯಲ್ಲಿ ಭಾವಪೂರ್ಣವಾಗಿ ಪಾತ್ರ ನಿರ್ವಹಣೆ ಮಾಡಬೇಕಿತ್ತು.

ಎಷ್ಟೇ ಒದ್ದಾಟವಾದರೂ ತೋರಿಸಿಕೊಳ್ಳದೆ, ಅಂದು ಕರ್ಣನ ರಥವನ್ನು ಸಾಗಿಸಿದೆ. ಇಲ್ಲದ ತಳಮಳ- ಸಲ್ಲದ ಭಯಗಳಿಂದಾಗಿ ಮಾತುಗಳು 'ನಾಟಕೀಯ' ಮಟ್ಟಕ್ಕೆ ಹರಿದಿರಬೇಕು. ಕಥೆ ಮುಕ್ಕಾಲು ಭಾಗ ಕಳೆದರೂ ತೂಕಡಿಸುವವರಾಗಲೀ, ಸೋತು ಮಲಗಿರುವವರಾಗಲಿ ಕಂಡುಬರಲಿಲ್ಲ. ಆಸಕ್ತಿಯಿಂದ ಅರ್ಥ ಕೇಳುವವರೇ ಹೆಚ್ಚಾಗಿ ಕಾಣಿಸಿದರು. ಪಾತ್ರ ನಿರೂಪಣೆ ಸರಯಾಗಿಯೇ ಆಗುತ್ತಿರಬೇಕು ಎಂದುಕೊಂಡೆ.

ಕೊನೆಯಲ್ಲಿ-
'' ಕವಚಕುಂಡಲಗಳನು ಧಾರೆ ಎರೆದುಕೊಡಲು ನೀರು ಸಿಗದಿರುವಾಗ, ಎದೆಯ ಅಮೃತಕಲಶವನ್ನೇ ಬಗೆದುಕೊಡು'' ಎಂದ ವೃದ್ಧ ಬ್ರಾಹ್ಮಣ ಹರಿ ಎಂದು ತಿಳಿದು ಅವನನ್ನು ಸ್ತುತಿಸಿದಾಗ, ನನಗೆ ಅಂದು ವಿಶೇಷ ಸ್ಪೂರ್ತಿಯನ್ನಿತ್ತ ಪರಮಾತ್ಮನನ್ನೇ ನಾನು ಮನಸಾರೆ ವಂದಿಸಿದ್ದೆ.

ಕೇಳಿದವರು ಕೆಲವರು ಕಣ್ಣೊರಸಿಕೊಂಡುದನ್ನೂ ಅಂದು ಕಂಡೆ. ನನ್ನೆದೆಯಲ್ಲಿ ಅದುಮಿ ಹಿಡಿದಿದ್ದ ದುಃಖ ಅವರ ಕಣ್ಣುಗಳಿಂದ ಚಿಮ್ಮಿತ್ತು ಎಂದೇ ನನಗನ್ನಿಸಿತು.

WD
ಕೂಟ ಚದುರಿತ್ತು.

ಬೆಳಕು ಹರಿದ ಕೂಡಲೇ, ಮನೆಗಳಿಗೆ ಓಟ ಕೀಳಬೇಕಾದ ಪರಿಸ್ಥಿತಿ ಇಲ್ಲದ ಕೆಲವರು ಗೆಳೆಯರು ತಾಳಮದ್ದಳೆ ನಡೆದಲ್ಲೇ ಚಾಪೆಗಳಲ್ಲಿ ಕುಳಿತಿದ್ದೆವು. ಹತ್ತಿರದ ಹೋಟೆಲಿನಿಂದ ಕಾಫಿ-ತಿಂಡಿ ತರಿಸಿ ಹರಟೆಗಳನ್ನು ಕೊಚ್ಚಲು ಪ್ರಾರಂಭಿಸಿದ್ದೆವು.

ಒಂದೇ ದಾರಿ
'' ವಿಠಲಣ್ಣನ ಅರ್ಥ ಬಹಳ ಒಳ್ಳೆಯದಿತ್ತು!'' ಎಂದನೊಬ್ಬ ಗೆಳೆಯ. ಪ್ರಶಂಸೆ ನನಗೂ ಬೇಡವಾಗಿರಲಿಲ್ಲ. ಆದರೂ-

ವಿಮರ್ಶೆಯ ಮಾತೇನಾದರೂ ಬರುವುದೇ? ಎಂದು ನಾನು ಇನ್ನೊಬ್ಬ ಗೆಳೆಯರಾದ ಕೆ. ಪಿ. ಗೋಪಾಲಕೃಷ್ಣ ಭಟ್ಟರ ಮುಖ ನೋಡಿದೆ. ನನ್ನ ನಿರೀಕ್ಷೆ ತಪ್ಪಾಗಿರಲಿಲ್ಲ.

'' ಎಷ್ಟೆಂದರೂ, ಇದು ಅರ್ಧ ತೃಪ್ತಿಯ ಸಾಧನೆ'' ಎಂದೇ ಅವರು ನುಡಿದರು. ಅಲ್ಲಿಗೇ ಆ ಮಾತು ಮುರಿದರು.

ಇತರರೆಲ್ಲ ಹೊರಟು ನಿಂತಾಗ, ನಾನು ಅಲ್ಲಿಂದ ಹೊರಟೆ. ಅವರೂ ನನ್ನೊಂದಿಗೆ ಸ್ಪಲ್ಪ ದೂರ ಬಂದರು.

' ಕವಿಗಳು ಚಿತ್ರಿಸಿದ ಪಾತ್ರಗಳ ನಿಜ ವರ್ಣನೆ ಬರಿಯ ಅರ್ಥಗಾರಿಕೆಯಿಂದ ಆಗುವುದೊ? ಇಲ್ಲವೊ? ಎಂದು ಹೇಳುವ ಶಕ್ತಿ ಇದ್ದವನು ನಾನಲ್ಲ. ಆದರೆ, ಕವಿಗೆ ಅಪಚಾರವಾಗದಂತೆ ಪಾತ್ರಚಿತ್ರಣದ ಕೆಲಸವಾಗಬೇಕಾದರೆ, ತಾಳಮದ್ದಳೆ ಅದಕ್ಕೆ ಸಾಧನವೇ ಅಲ್ಲ' ಎಂಬ ಮಾತುಗಳನ್ನು ಮತ್ತೂ ಒಂದು ಬಾರಿ ನನ್ನ ತಲೆಯಲ್ಲಿ ತುಂಬಿದರು.

'' ನಾನು ಇನ್ನೇನು ತಾನೆ ಮಾಡಲು ಸಾಧ್ಯ?'' ಎಂದೆ.

'' ಇದಕ್ಕೆ ಇರುವುದು ಒಂದೇ ದಾರಿ. ಆ ದಾರಿಯಲ್ಲಿ ಹೋಗುವ ಧೈರ್ಯ ನಿನಗೆ ಇದೆಯೆ?''

WD
'' ಅದೇನು?''

'' ಯಾವುದಾದರೂ ಮೇಳಕ್ಕೆ ಸೇರಿಕೊಳ್ಳುವುದು. ವೇಷಧಾರಿಯಾಗುವುದು.''

'' ಹಾಂ!''

ನನ್ನ ಉದ್ಗಾರಕ್ಕೆ ಪ್ರಬಲವಾದ ಕಾರಣ ಇತ್ತು. [ಮುಂದಿನ ವಾರಕ್ಕ ೆ]

ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997) ಮತ್ತು ರೇಖಾ ಚಿತ್ರಗಳು: ಹರಿಣಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments