ದಸರೆಯ ಆಟದ ಯಶಸ್ಸಿನ ಸುದ್ದಿ ಬೆಂಗಳೂರಿಗೆ ತಲುಪುವುದು ತಡವಾಗಲಿಲ್ಲ. ಇಷ್ಟರಲ್ಲೇ ರಷ್ಯಾ ದೇಶದ (ಆಗಿನ ಯು.ಎಸ್.ಎಸ್.ಆರ್.) ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲು ಆಹ್ವಾನ ಬರಲು, ಮತ್ತೊಮ್ಮೆ ಪ.ಗೋ. ಚುರುಕಾಗಿ ಓಡಾಡಿದ. ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ 'ದಕ್ಷಯಜ್ಞ' ಪ್ರಸಂಗವನ್ನು ಆಡಿ ತೋರಿಸುವುದಕ್ಕೆ 10 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಿದ್ದರು! ( ಆ ರಸ ಸಂಜೆಯಲ್ಲಿನ ಕಾರ್ಯಕ್ರಮಗಳಲ್ಲಿ 10 ನಿಮಿಷದ ಕಾಲಾವಧಿ ವೀಣೆ ದೊರೆಸ್ವಾಮಿಯವರ ಪಂಚವೀಣಾವಾದನಕ್ಕೂ, ಜೌಡಯ್ಯನವರ ಪಿಟೀಲಿಗೂ ದೊರಕಿದ್ದು. ಮೂರನೇ 10 ನಿಮಿಷ ಅವಧಿಯ ಕಾರ್ಯಕ್ರಮವೆಂದರೆ ನಮ್ಮ ದಕ್ಷಯಜ್ಞ ಬಯಲಾಟವೇ. ಚಿತ್ ರ: ಮೈಸೂರು ಸರಕಾರದಿಂದ ಬಂದಿರುವ ಆಮಂತ್ರಣ ಪತ್ರ.).
ಗೋಪಾಲಕೃಷ್ಣನಿಗಿದ್ದ ಸಿನಿಮಾ ತಯಾರಿಕೆಯ ಅನುಭವದಿಂದ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಹತ್ತೇ ನಿಮಿಷಗಳ ಕಾಲಾವಧಿಯಲ್ಲಿ 'ದಕ್ಷಯಜ್ಞ' ಕಥಾ ಭಾಗದ ಪ್ರಮುಖ ಘಟನೆಯನ್ನು ಆಡಿ ತೋರಿಸುವುದು ಸಾಧ್ಯವಾಯಿತು- ಅಷ್ಟೇ ಅಲ್ಲದೆ ಆಟದ ಪ್ರದರ್ಶನವನ್ನು ನೋಡಿ ವಿದೇಶೀ ಅತಿಥಿಗಳೂ, ಸಾವಿರಾರು ಪ್ರೇಕ್ಷಕರೂ ಸಂತೋಷ ಭರಿತರಾದರು. ವಿಠಲ ಶಾಸ್ತ್ರಿಗಳು ಈಶ್ವರನ ಪಾತ್ರದಲ್ಲಿ, ಕೋಳ್ಯೂರು ರಾಮಚಂದ್ರ ಪಾರ್ವತಿಯಾಗಿ, ಬಣ್ಣದ ಮಾಲಿಂಗ ವೀರಭದ್ರನಾಗಿ ನೀಡಿದ ಅಭಿನಯ, ಆ ಚೆಂಡೆಮದ್ದಲೆ, ತಾಳ-ಚಕ್ರತಾಳಗಳ ಹಿಮ್ಮೇಳ, ದೀವಟಿಗೆ, ದೊಂದಿ-ರಾಳದ ಹುಡಿಹಾರಿಸಿದ ಕುಣಿತ ಅದ್ಬುತವಾಗಿತ್ತು. ಅತಿಥಿ ಕ್ರುಶ್ಚೇವ್ ಕುಳಿತಲ್ಲಿಂದ ಎದ್ದು ರಂಗಸ್ಥಳದ ಮೇಲೆ ಬಂದು ಕಲಾವಿರ ಕೈಕುಲುಕಿ ಅಭಿನಂದಿಸಿದರು. ಫೋಟೋ ತೆಗೆಸಿದರು. (ದಿನಾಂಕ 29-11-55ರ ತಾಯಿನಾಡು ದಿನ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಯಿತು.)
ಮರುದಿನ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪೆರ್ವೋಡಿ ಸಂಕಯ್ಯ ಭಾಗವತ ವಿರಚಿತ ಪ್ರಸಂಗವನ್ನೂ, ರಾತ್ರೆ ಮಲ್ಲೇಶ್ವರದ ಕೆನರಾ ಹಾಲ್‌ನಲ್ಲಿ ಕರ್ಣಾವಸಾನ ಪ್ರಸಂಗವನ್ನೂ ಆಡಿ ತೋರಿಸುವ ಮೂಲಕ ಮೈಸೂರು ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ದಕ್ಷಿಣ ಕನ್ನಡದ 'ಯಕ್ಷಗಾನ ಬಯಲಾಟ'ಕ್ಕೊಂದು ಸ್ಥಿರವಾದ ಸ್ಥಾನ ದೊರಕುವಂತಾಯಿತು. ಈ ರೀತಿ, ಬೆಂಗಳೂರು-ಮೈಸೂರಲ್ಲಿ ಯಕ್ಷಗಾನ ಬಯಲಾಟದ ಕೇಳಿ ಬಡಿದ ಮೊದಲಿಗ ಪ.ಗೋಪಾಲಕೃಷ್ಣ ಎಂಬುದೂ, ಆತ ನನ್ನ ಸಹೋದರ ಎಂಬುದೂ ನನಗೊಂದು ಹೆಮ್ಮೆಯ ವಿಚಾರವಾಗಿರುತ್ತದೆ.
ಮುಂದೆ ಪ.ಗೋ. ನೇತೃತ್ವದಲ್ಲಿ, ಭಾರತ ಸರಕಾರದ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಕೂಡ ಬಯಲಾಟ ಪ್ರದರ್ಶನ ನಡೆಯಿತು. ಸುಪ್ರಸಿದ್ಧ ಆಂಗ್ಲ ಸಾಪ್ತಾಹಿಕ 'ಇಲೆಸ್ಟ್ರೇಟೆಡ್ ವೀಕ್ಲಿ’ ಮೊದಲಾದ ಪತ್ರಿಕೆಗಳಲ್ಲಿ ವಿಸ್ತೃತವಾದ ಸಚಿತ್ರ ಬರಹಗಳೂ ಪ್ರಕಟವಾದವು. ಆಕಾಶವಾಣಿಯಲ್ಲಿ ಅನೇಕ ತಾಳಮದ್ದಳೆ ಕಾರ್ಯಕ್ರಮಗಳನ್ನು ಸಹ ಪ.ಗೋ.ಬಿತ್ತರಿಸಿದರು.
ಪದ್ಯಾಣ ಗೋಪಾಲಕೃಷ್ಣ ಅವರ ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. 1928ರಲ್ಲಿ ಜನಿಸಿದ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ 'ವಿಶ್ವ ಕರ್ನಾಟಕ' ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ 'ಶಕ್ತಿ' ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಪ.ಗೋ.
1959 ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. 1963-1964 ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. 1994 ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಬರವಣಿಗೆಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.
1956 ರಿಂದ 1997ನೇ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲವಧಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪ.ಗೋ. ಬರೆದ ಅಂಕಣ ಸಾಹಿತ್ಯವು ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಎಂಬ ಮತ್ತು ಓ.ಸಿ.67 ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ 6 ಅಕ್ಟೋಬರ್ 1976ರಂದು ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಪ.ಗೋಪಾಲಕೃಷ್ಣ. ಪ್ರತಿ ವರ್ಷ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ ನೀಡಲಾಗುತ್ತಿರುವುದೂ ಇಲ್ಲಿ ಸ್ಮರಣಾರ್ಹ.