ಕನ್ನಡದಲ್ಲಿ ಸುದೀಪ್ ಜೊತೆ ಅವಕಾಶ ಸಿಕ್ಕರೆ ನಟಿಸುವೆ: ಸಮಂತಾ
ಬೆಂಗಳೂರು , ಬುಧವಾರ, 24 ಜುಲೈ 2013 (14:55 IST)
ಈ ಬಾರಿಯ ಫಿಲಂಫೇರ್ ಅವಾರ್ಡ ಸಮಾರಂಭದಲ್ಲಿ ತೆಲುಗು ಹಾಗೂ ತಮಿಳಿನ ಎರಡು ಚಿತ್ರಗಳ ಅತ್ಯುತ್ತಮ ನಟಿ ಎಂದು ಪ್ರಶಸ್ತಿ ಪಡೆದುಕೊಂಡವರು ನಟಿ ಸಮಂತಾ. ಕಳೆದ ವರ್ಷ ತೆರೆಕಂಡ ಈಗ ಹಾಗೂ ನೀತಾನೇ ಎನ್ ಪೊನ್ವಸಂತಂ ಚಿತ್ರಗಳಲ್ಲಿ ನಟಿಸಿದ್ದಕ್ಕೆ ಈ ಪ್ರಶಸ್ತಿ ದೊರೆತಿದೆ. ಆ ಸಂತಸವನ್ನು ಅವರು ಹಂಚಿಕೊಂಡಿದ್ದು ಹೀಗೆ...ಎರಡು ಪ್ರಶಸ್ತಿಯನ್ನು ಒಂದೇ ಬಾರಿಗೆ ಪಡೆಯುವಾಗ ಸಂತೋಷದ ಜೊತೆ ಭಯವೂ ಆಯಿತು. ಪೋಷಕರ ಸಾನಿಧ್ಯದಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯವಾಗಿದ್ದು ಖುಷಿ ಕೊಟ್ಟರೆ ಇನ್ನು ಮುಂದಿನ ಚಿತ್ರಗಳ ಆಯ್ಕೆ ಬಗ್ಗೆ ಭಯವೂ ಆಯಿತು. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿರುವುದಂತೂ ನಿಜ. ಸುದೀಪ್ ಅದ್ಭುತ ನಟ. ಅವರನ್ನು ಈ ಸಮಾರಂಭದಲ್ಲಿ ನಾನು ಮಿಸ್ ಮಾಡಿಕೊಂಡೆ. ಗೌತಮ್ ಮೆನನ್ ನಿರ್ದೇಶನದ ಯೇ ಮಾಯೇ ಚೇಸಾವೆ ಚಿತ್ರಕ್ಕೆ ನನಗೆ ಮೊದಲ ಫಿಲಂಫೇರ್ ಅವಾರ್ಡ ಸಿಕ್ಕಿತ್ತು. ಈಗ ಅವರೇ ನಿರ್ದೇಶಿಸಿರುವ ನೀತಾನೇ ಎನ್ ಪೊನ್ವಸಂತಂ ಚಿತ್ರಕ್ಕೆ ಮತ್ತೊಮ್ಮೆ ಪ್ರಶಸ್ತಿ ಬಂದಿದೆ. ಗೌತಮ್ ಸರ್ಗೆ ನಾನು ಸದಾ ಋಣಿ. ಈ ಪ್ರಶಸ್ತಿಯ ಗೌರವ ಅವರಿಗೇ ಸಲ್ಲಬೇಕು. ಸದ್ಯಕ್ಕೆ ಎರಡು ವರ್ಷಗಳಿಗಾಗುವಷ್ಟು ತಮಿಳು ಹಾಗೂ ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಕನ್ನಡದಲ್ಲಿ ನಟಿಸಲು ನನಗೂ ಇಷ್ಟವೇ. ಆದರೆ ನಾಯಕನಾಗಿ ಸುದೀಪ್ ಇದ್ದರೆ ಬಹಳ ಖುಷಿ ಪಡುತ್ತೇನೆ ಎಂದಿದ್ದಾರೆ ಸಮಂತಾ.