Select Your Language

Notifications

webdunia
webdunia
webdunia
webdunia

ವೀರಪ್ಪನ್ ಕಥೆ ಕದ್ದು ರಮೇಶ್ 'ಅಟ್ಟಹಾಸ'ಗೈದರೇ?

ವೀರಪ್ಪನ್ ಕಥೆ ಕದ್ದು ರಮೇಶ್ 'ಅಟ್ಟಹಾಸ'ಗೈದರೇ?
SUJENDRA
'ಅಟ್ಟಹಾಸ'ದಲ್ಲಿ ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ನಕ್ಕೀರನ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ ಬೆನ್ನಿಗೆ ನಿರ್ದೇಶಕ ಎಎಂಆರ್ ರಮೇಶ್ ಇನ್ನೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತ್ರಕರ್ತರೊಬ್ಬರು ಬರೆದ ಪುಸ್ತಕವನ್ನು ಓದಿ, ಅದೇ ಕಥೆಯನ್ನು ಕ್ರೆಡಿಟ್ ಕೊಡದೆ ಸಿನಿಮಾ ಮಾಡಿದ್ದಾರೆ ಎಂಬ ಆರೋಪವೀಗ ಅವರ ಮೇಲೆ ಬಂದಿದೆ.

ಇದರೊಂದಿಗೆ ಭೀಮಾ ತೀರದಲ್ಲಿ, ದಂಡುಪಾಳ್ಯ, ಕಠಾರಿ ವೀರ ಸುರಸುಂದರಾಂಗಿ ಚಿತ್ರಗಳ ನಂತರ ಇನ್ನೊಂದು ಕನ್ನಡ ಚಿತ್ರಕ್ಕೆ ವಿವಾದದ ಕೆಸರು ಮೆತ್ತಿಕೊಂಡಿದೆ.

ಈಗ 'ಅಟ್ಟಹಾಸ' ಚಿತ್ರದ ವಿರುದ್ಧ ಸಿಡಿದೆದ್ದಿರುವುದು ಮೈಸೂರಿನ ಪತ್ರಕರ್ತ ಟಿ. ಗುರುರಾಜ್. ಕಿಶೋರ್ ನಾಯಕನಾಗಿರುವ ಈ ಚಿತ್ರದ ಕಥೆ ನನ್ನದು, ನನ್ನ ಅನುಮತಿಯಿಲ್ಲದೆ ರಮೇಶ್ ಕದ್ದು ಸಿನಿಮಾ ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ.

ಪತ್ರಕರ್ತನ ವಾದವೇನು?
ನಾನು ಕೆಲವು ವರ್ಷಗಳ ಹಿಂದೆ ನರಹಂತಕ ವೀರಪ್ಪನ್ ಬಗ್ಗೆ 'ರುದ್ರ ನರ್ತನ' ಎಂಬ ಪುಸ್ತಕವೊಂದನ್ನು ಬರೆದಿದ್ದೆ. ಇದಕ್ಕಾಗಿ ಹಲವು ಪೊಲೀಸ್ ಅಧಿಕಾರಿಗಳ ಸಂದರ್ಶನ ನಡೆಸಿದ್ದೆ. ವೀರಪ್ಪನ್‌ನಿಂದ ತೊಂದರೆಗೊಳಗಾದವರನ್ನೂ ಭೇಟಿ ಮಾಡಿದ್ದೆ.

ಈ ಪುಸ್ತಕವನ್ನು ಓದಿದ್ದ ನಿರ್ದೇಶಕ ಎಎಂಆರ್ ರಮೇಶ್ ನನ್ನನ್ನು ಒಂದು ಸಲ ಮೈಸೂರಿನಲ್ಲೇ ಭೇಟಿ ಮಾಡಿದ್ದರು. ನಾನು ವೀರಪ್ಪನ್ ಕುರಿತ ಸಿನಿಮಾ ಮಾಡುತ್ತಿದ್ದೇನೆ, ನಿಮ್ಮ ಪುಸ್ತಕವನ್ನು ಓದಿದ್ದೇನೆ, ತುಂಬಾ ಮಾಹಿತಿಗಳಿವೆ. ಪುಸ್ತಕ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು.

ಆದರೆ ನನ್ನ ಅನುಮತಿಯನ್ನೇ ಪಡೆಯದೇ ಅದೇ ಕಥೆಯನ್ನು ರಮೇಶ್ ತನ್ನ ಸಿನಿಮಾದಲ್ಲಿ ಬಳಸಿಕೊಂಡರು. ಕನಿಷ್ಠ ಚಿತ್ರದ ಮುಹೂರ್ತಕ್ಕೂ ಕರೆಯುವ ಸೌಜನ್ಯ ತೋರಲಿಲ್ಲ. ಯಾಕೆ ಹೀಗೆ ಮಾಡಿದಿರಿ ಎಂದು ಕರೆ ಮಾಡಿದರೆ, ನೀವ್ಯಾರು ಎಂದೇ ಮಾತಿಗೆ ಶುರುವಿಟ್ಟರು. ಅವರ ವರ್ತನೆ ನನಗೆ ಸರಿ ಕಾಣಲಿಲ್ಲ.

ನಂತರ ನಾನು ಈ ಸಂಬಂಧ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ದೂರು ನೀಡಿದೆ. ಅಲ್ಲಿ ಸಂಧಾನ ಸಭೆಯೂ ನಡೆಯಿತು. ಆಗ, ನನ್ನನ್ನು ಭೇಟಿ ಮಾಡಿರುವುದನ್ನು ನಿರ್ದೇಶಕರು ಒಪ್ಪಿಕೊಂಡರೂ, ಕಥೆ ಬಳಸಿಕೊಂಡಿಲ್ಲ ಎಂದು ವಾದಿಸಿದರು. ನಂತರ ಸಂಘದ ಅಧ್ಯಕ್ಷರ ಒತ್ತಡಕ್ಕೆ ಮಣಿದು, "ಸಂಭಾವನೆ ಬೇಡ, ಕಥೆಯ ಕ್ರೆಡಿಟ್ ಕೊಡಿ" ಎಂದು ಕೇಳಿದೆ. ಇದಕ್ಕೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಅತ್ತ ನಿರ್ದೇಶಕರ ಸಂಘವು ಕೋರ್ಟ್‌ಗೆ ಹೋಗುವಂತೆ ನನಗೆ ಸಲಹೆ ನೀಡಿದೆ.

ಆದರೆ ಅದಕ್ಕೂ ಮೊದಲು ಮಾಧ್ಯಮದ ಮುಂದೆ ವಿಷಯವನ್ನು ಪ್ರಸ್ತಾಪಿಸುವ ನಿಟ್ಟಿನಲ್ಲಿ ವಿವರಿಸಿದ್ದೇನೆ. ನನಗೆ ಅನ್ಯಾಯವಾಗಿದೆ. ಈಗ ರಮೇಶ್ ನನ್ನ ಸಂಪರ್ಕಕ್ಕೂ ಸಿಗುತ್ತಿಲ್ಲ. ಮಾಧ್ಯಮಗಳಿಂದಲೂ ನ್ಯಾಯ ಸಿಗದೇ ಇದ್ದರೆ ಕೋರ್ಟ್ ಮೊರೆ ಹೋಗುತ್ತೇನೆ.

ಹೀಗೆಂದು ಉದ್ದುದ್ದ ಪತ್ರ ಬರೆದಿರುವ ಪತ್ರಕರ್ತ ಗುರುರಾಜ್, ಅವರು ರಮೇಶ್ ಜತೆ ನಡೆಸಿರುವ ಸಂಭಾಷಣೆಯ ಧ್ವನಿಮುದ್ರಿಕೆಯನ್ನೂ ಸಾಕ್ಷಿಗಿರಲಿ ಎಂದು ರವಾನಿಸಿದ್ದಾರೆ.

Share this Story:

Follow Webdunia kannada