Select Your Language

Notifications

webdunia
webdunia
webdunia
webdunia

ಗಣೇಶ್ ಗೆದ್ರೆ 'ರೋಮಿಯೋ', ಸೋತ್ರೆ ದೇವದಾಸ್!

ಗಣೇಶ್ ಗೆದ್ರೆ 'ರೋಮಿಯೋ', ಸೋತ್ರೆ ದೇವದಾಸ್!
, ಬುಧವಾರ, 18 ಏಪ್ರಿಲ್ 2012 (11:55 IST)
SUJENDRA
'ಮಳೆ'ಯಲ್ಲಿ ನೆಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಸೋಲು ಶೀತ-ನೆಗಡಿ ಎಲ್ಲವನ್ನೂ ತರುತ್ತಿದೆ. ಅವರ ಯುಗ ಮುಗಿಯೋದು ಗ್ಯಾರಂಟಿಯಾಗಿದೆ. ಅದೂ 11 ಸಿನಿಮಾಗಳು ನಿರಂತರವಾಗಿ ಸೋತ ನಂತರವೂ ಗೆಲುವಿನ ಬಾಗಿಲನ್ನು ಎಷ್ಟೆಂದು ತಟ್ಟಬಹುದು? ಹಾಗೆಂದೇ ಈ ಬಾರಿ ಫೀಲ್ಡಿಗಿಳಿದಿರುವ ಗಣೇಶ್, 'ರೋಮಿಯೋ' ಚಿತ್ರದಲ್ಲಿ ಹೇಗಾದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅದರ ಮೊದಲ ಅಂಗವೇ ಪ್ರಚಾರಕ್ಕಾಗಿ ಪಾಪ್ ಸ್ಟೈಲ್ ಹಾಡು!

'ರೋಮಿಯೋ'ದಲ್ಲೂ ಸೋತರೆ ಗಣೇಶ್ ನಾಯಕರಾಗಿ ಸೋತ ಚಿತ್ರಗಳ ಸಂಖ್ಯೆ 12ಕ್ಕೇರುತ್ತದೆ. ಅದೂ ಬೆನ್ನು ಬೆನ್ನಿಗೆ ಸೋತ ಸಿನಿಮಾಗಳು. ಅಚ್ಚರಿಯೆಂದರೆ, ಇದರ ಅರ್ಧದಷ್ಟು ಅಂದರೆ ಆರು ಸಿನಿಮಾಗಳು ಗೆದ್ದಿರುವ ಕ್ರೆಡಿಟ್ ಗಣೇಶ್ ಹೆಸರಿನಲ್ಲಿರೋದು. ಅವು ಅವರ ಆರಂಭದ ದಿನಗಳು. ಆಗ ಗಣೇಶ್ ಸಿನಿಮಾಗಳೆಂದರೆ ಭಾರೀ ಕ್ರೇಜ್ ಇತ್ತು.

ಗಣೇಶ್ ನಾಯಕನಾಗಿ ನಿರ್ಮಾಪಕ ಲಾಭ ಪಡೆದ ಕೊನೆಯ ಚಿತ್ರ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ'. ಅದರ ನಂತರ ನಾಗಶೇಖರ್ ಅರಮನೆ, ಡಿ. ರಾಜೇಂದ್ರಬಾಬು ಬೊಂಬಾಟ್, ರವಿವರ್ಮ ಸಂಗಮ, ದಯಾಳ್ ಪದ್ಮನಾಭನ್ ಸರ್ಕಸ್, ದೇವರಾಜ್ ಫಳನಿ ಉಲ್ಲಾಸ ಉತ್ಸಾಹ, ಪ್ರೀತಮ್ ಗುಬ್ಬಿ ಮಳೆಯಲಿ ಜೊತೆಯಲಿ, ಮುಸ್ಸಂಜೆ ಮಹೇಶ್ ಏನೋ ಒಂಥರಾ, ಅವರದ್ದೇ ನಿರ್ದೇಶನದ ಕೂಲ್, ಸುನಿಲ್ ಕುಮಾರ್ ಸಿಂಗ್ ಮದುವೆ ಮನೆ, ಎಸ್. ನಾರಾಯಣ್ ಶೈಲೂ ಮತ್ತು ಮುಂಜಾನೆ -- ಹೀಗೆ ಸಾಲು ಸಾಲು ಸೋಲು.

ಸದ್ಯ ಗಣೇಶ್ ಕೈಯಲ್ಲಿ ಮಿ. 420 ಮತ್ತು ಸಕ್ಕರೆ ಎಂಬ ಎರಡು ಚಿತ್ರಗಳಿವೆ. ಇನ್ನೊಂದು 'ಮರೆಯುವ ಮುನ್ನ' ಎಂಬ ಪ್ರೊಜೆಕ್ಟ್ ಸಣ್ಣದಾಗಿ ಸದ್ದು ಮಾಡುತ್ತಿದೆ.

ಪ್ರಚಾರಕ್ಕೆಂದೇ ಪಾಪ್ ಗೀತೆ..!
ಕನ್ನಡದಲ್ಲಿ ಪ್ರಚಾರಕ್ಕೆಂದೇ ಹಾಡುಗಳನ್ನು ಮಾಡುವುದು ತುಂಬಾ ಅಪರೂಪ. ಆದರೆ 'ರೋಮಿಯೋ' ಟೀಮ್ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ. ಅದೂ ಪಾಪ್ ಶೈಲಿಯ ಕನ್ನಡ ಹಾಡು. ಅರ್ಜುನ್ ಜನ್ಯಾ ಸಂಗೀತದ ಈ ಹಾಡಿಗೆ ಸ್ವತಃ ಗಣೇಶ್, ಅರ್ಜುನ್ ಜನ್ಯಾ ಸೇರಿದಂತೆ ರಂಗಾಯಣ ರಘು, ಸಾಧು ಕೋಕಿಲಾ ದನಿಯಾಗಿದ್ದಾರೆ. ಕೊನೆಗೆ ಹಾಡಿನಲ್ಲಿ ಕುಣಿದಿರುವುದು ಕೂಡ ಅವರೇ ಅಂತೆ.

ಕಂಠೀರವ ಸ್ಟುಡಿಯೋದಲ್ಲಿ ವಿಶಿಷ್ಟವಾಗಿ ಚಿತ್ರಿಸಲಾಗಿರುವ ಈ ಹಾಡಿಗೆ ಪಾಪ್ ಸ್ಪರ್ಶ ನೀಡಲಾಗಿದೆ. ಗ್ರಾಫಿಕ್ಸ್ ಸೇರಿಸಿ ಶ್ರೀಮಂತಗೊಳಿಸಿರುವುದು ಕೂಡ ವಿಶೇಷ. ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ ಸಿನಿಮಾದಲ್ಲಿ ಎಲ್ಲಾದರೂ ಸೇರಿಸುವ ಯೋಚನೆಯೂ ಚಿತ್ರತಂಡಕ್ಕಿದೆ.

ಅಂದ ಹಾಗೆ, 'ರೋಮಿಯೋ' ಚಿತ್ರವನ್ನು ನಿರ್ದೇಶಿಸಿರುವುದು ಪಿ.ಸಿ. ಶೇಖರ್. ಮಲಯಾಳಂ ಕುಟ್ಟಿ 'ಜಾಕಿ' ಭಾವನಾ ನಾಯಕಿ. ನವೀನ್ ಮತ್ತು ರಮೇಶ್ ಕುಮಾರ್ ಎಂಬುವವರು ನಿರ್ಮಾಪಕರು. ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ರೊಮ್ಯಾಟಿಕ್ ಕಥೆಯಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಅತ್ಯುತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. 'ರೋಮಿಯೋ' ಮೂಲಕ ಗಣೇಶ್‌ಗೆ ಹಿಡಿದಿರುವ ಸೋಲಿನ ಗ್ರಹಚಾರ ಬಿಡುಗಡೆಯಾಗಲಿದೆ ಎಂದೇ ನಿಕಟ ಮೂಲಗಳು ಹೇಳುತ್ತಿವೆ. ಗುಡ್ ಲಕ್ ಗಣೇಶ್.

Share this Story:

Follow Webdunia kannada