Select Your Language

Notifications

webdunia
webdunia
webdunia
webdunia

ಸತಿ ಸಾವಿತ್ರಿ ಹಾಟ್ ಆದ ಕಥೆ!!!

ಸತಿ ಸಾವಿತ್ರಿ ಹಾಟ್ ಆದ ಕಥೆ!!!
IFM
ಈಕೆ ಕನ್ನಡತಿ ಅಂತ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಹುಟ್ಟೂರು ಕರ್ನಾಟಕವಾದರೂ ಬೆಳೆದಿದ್ದು ಮುಂಬೈಯಲ್ಲಿ. ಮಾತೃಭಾಷೆ ಕೊಂಕಣಿ. ಇಂತಿಪ್ಪ ಬಾಲಿವುಡ್ ನಟಿ ಅಮೃತಾ ರಾವ್ ಬಗ್ಗೆ ಈಗ ಎಲ್ಲೆಲ್ಲೂ ಮಾತೇ ಮಾತು. ಈವರೆಗೆ ಪಕ್ಕದ್ಮನೆ ಹುಡುಗಿಯಂತಿದ್ದ ಬಿಚ್ಚೋದಕ್ಕೆ ನೋ.. ನೋ.. ಅಂತಿದ್ದ ಅಮೃತಾ ಈಗ ಧಿಡೀರ್ ರಾತ್ರೋರಾತ್ರಿ ತನ್ನ ಹೊಸ ಹಾಟ್ ಲುಕ್‌ನಿಂದ ಬಾಲಿವುಡ್ಡಿಗೆ ಮರಳಿದ್ದಾಳೆ. ಸದ್ಯ ಅನಿಲ್ ಕಪೂರ್ ನಿರ್ಮಾಣದ ಶಾರ್ಟ್‌ಕಟ್ ಎಂಬ ಚಿತ್ರದಲ್ಲಿ ಸದ್ಯದಲ್ಲೇ ತನ್ನ ಗ್ಲ್ಯಾಮರಸ್ ಇಮೇಜ್‌ನೊಂದಿಗೆ ಕಾಣಿಸಿಕೊಳ್ಳುತ್ತಿರುವುದೇ ಸದ್ಯದ ಈ ಸುದ್ದಿಗೆ ಕಾರಣ.

ಏಳು ವರ್ಷಗಳ ಹಿಂದೆ ಅಬ್ ಕೇ ಬರಾಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಅಮೃತಾ ರಾವ್‌ಗೆ ಈಗ 28ರ ಹರೆಯ. 2002ರಲ್ಲಿ ಇಶ್ಕ್ ವಿಶ್ಕ್‌ನಲ್ಲಿ ಶಾಹಿದ್ ಜತೆಗೆ ಕಾಲೇಜು ಲವ್ ಸ್ಟೋರಿಯಲ್ಲಿ ಖ್ಯಾತಿ ಪಡೆದ ಅಮೃತಾ, ಶಾರುಖ್ ಜತೆಗಿನ ಮೈ ಹೂಂ ನಾದಲ್ಲಿಯೂ ವಿಶೇಷವಾಗಿ ಗಮನ ಸೆಳೆದಳು. ನಂತರ ಸಾಮಾಜಿಕ ಚಿತ್ರ ವಿವಾಹ್‌ನಲ್ಲಿ ಪ್ರಬುದ್ಧ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರಳಾದಳು. ಶ್ಯಾಂ ಬೆನಗಲ್ ಅವರ ಕಲಾತ್ಮಕ ಚಿತ್ರ ವೆಲ್‌ಕಂ ಟು ಸಜ್ಜನ್‌ಪುರ್‌ಗೂ ವಿಮರ್ಶಕರಿಂದ ಭೇಷ್ ಎನಿಸಿಕೊಂಡಾಕೆ ಈ ಅಮೃತಾ. ಇಷ್ಟೇ ಅಲ್ಲ. ಈವರೆಗೆ ಬಾಲಿವುಡ್ಡಿನಲ್ಲಿ ಏಕೈಕ ಮಾಧುರಿ ದೀಕ್ಷಿತ್‌ರ ಬಹುದೊಡ್ಡ ಅಭಿಮಾನಿಯಾಗಿದ್ದ ಕಲಾಕಾರ ಎಂ.ಎಫ್. ಹುಸೇನ್ ಈಗ ಅಮೃತಾ ರಾವ್ ಎಂಬ ಸ್ನಿಗ್ಧ ಸರಳ ಸುಂದರಿಗೆ ಮನಸೋತಿದ್ದಾರಂತೆ. ಇಂತಿಪ್ಪ ಅಮೃತಾ ಜತೆಗೆ ಒಂದಿಷ್ಟು ಹರಟೆ...

ಅಮೃತಾ ರಾವ್ ಎಂದರೆ ಸತಿ ಸಾವಿತ್ರಿ ಎಂಬ ಇಮೇಜ್ ಇದೆಯಲ್ಲ ಯಾಕೆ?
(ನಗುತ್ತಾ) ಹೌದು. ಹೀಗೆ ಮಾತಾಡಿಕೊಳ್ಳುತ್ತಿರುವ ಬಗ್ಗೆ ಗೊತ್ತಿದೆ. ಅದು ಯಾಕೆಂದರೆ, ನಾನು ಮನೆಯಲ್ಲಿರುವಾಗ ಸೀರೆ ಉಟ್ಟಿರುತ್ತೇನೆ. ಜತೆಗೆ ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿ ಬಾಚಿ ಕಟ್ಟಿಕೊಂಡಿರುತ್ತೇನೆ. ಹಣೆಯಲ್ಲಿ ಪುಟ್ಟ ಬಿಂದಿ ಇಡುತ್ತೇನೆ. ನನ್ನ ಲೆನ್ಸ್ ಬದಲಾಗಿ ಒಮ್ಮೊಮ್ಮೆ ಕನ್ನಡಕವನ್ನೇ ಹಾಕಿಕೊಂಡಿರುತ್ತೇನೆ. ಈ ವೇಷವನ್ನು ಹಲವರು ನೋಡಿದ್ದಾರೆ. ಅದಕ್ಕೇ ಇರಬೇಕು, ನನ್ನನ್ನು ಸತಿ ಸಾವಿತ್ರಿ ಎಂದು ಕರೆಯೋದು.

webdunia
IFM
ಶಾರ್ಟ್‌ಕಟ್ ಸಿನಿಮಾದಲ್ಲಿ ನಿಮ್ಮ ಸ್ಲಿಮ್ ಟ್ರಿಮ್ ಹಾಟ್ ಲುಕ್ ಬಗ್ಗೆ ಈಗ ಬಾಲಿವುಡ್ಡಿನಲ್ಲಿ ಎಲ್ಲೆಲ್ಲೂ ಅದೇ ಮಾತು. ಏನಿದರ ರಹಸ್ಯ?
ಹೌದು. ಇದರಲ್ಲೇನೂ ರಹಸ್ಯವಿಲ್ಲ. ಅಡುಗೆಮನೆಯಲ್ಲಿದ್ದ ಒಬ್ಬರನ್ನು ಹೊರಜಗತ್ತಿಗೆ ಎಳೆದು ತಂದು ಏನಾದರೂ ಸಾಧಿಸಿದರೆ ಅದಕ್ಕೆ ರಹಸ್ಯ ಹೇಳಬಹುದೇನೋ. ಆದರೆ ನಾನೊಬ್ಬ ನಟಿಯಾಗಿ ನನ್ನದೇ ಆದ ಇಮೇಜ್ ಈವರೆಗೆ ಬೆಳೆಸಿದ್ದೇನೆ. ಉತ್ತಮ ಅವಕಾಶ ಸಿಕ್ಕರೆ, ಹಾಗೂ ನಟಿಯಾಗಿ ನಾನು ಬೆಳೆಯಬೇಕೆಂದರೆ ಬದಲಾಗುತ್ತಿರಬೇಕು. ಹಾಗೆ ನಾನು ಬದಲಾಗಿದ್ದೇನೆ ಅಷ್ಟೆ.

ನಿಮ್ಮ ಈ ಹೊಸ ಅವತಾರಕ್ಕೆ ನಿಮಗೆ ಸಾಕಷ್ಟು ಹೊಗಳಿಕೆ ಮೆಸೇಜ್‌ಗಳು ಬರುತ್ತಿರಬಹುದು ಅಲ್ಲವೇ?
ಹೌದು. ಪ್ರತಿ ದಿನ 10ರಲ್ಲಿ ಏಳು ಮೆಸೇಜ್‌ಗಳಾರೂ ನನ್ನ ಹೊಸ ಲುಕ್ ಬಗ್ಗೆ ಇರುತ್ತೆ. ಜಾಹಿರಾತು ಕಂಪನಿಗಳು, ಜಿಮ್‌ ತರಬೇತುದಾರರು ಸೇರಿದಂತೆ ಎಲ್ಲರೂ ನನ್ನ ಹೊಸ ಲುಕ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನನ್ನನ್ನು ಸೆಕ್ಸೀಯಾಗಿ ಕಾಣುವಂತೆ ಮಾಡಿದ ಶಾರ್ಟ್‌ಕಟ್‌ ಚಿತ್ರದ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾಗೆ ಈ ಕ್ರೆಡಿಟ್ ಸಲ್ಲಬೇಕು.

ಈ ಹೊಸ ಅವತಾರದ ಆಯ್ಕೆ ಯಾಕೆ ಮಾಡಿದ್ರಿ? ಬಾಲಿವುಡ್‌ನಲ್ಲಿ ನಿಲ್ಲಲು ಗ್ಲ್ಯಾಮರಸ್ ಆಗಿ ಕಾಣಿಸಿಕೊಳ್ಳದೆ ವಿಧಿಯಿಲ್ಲ ಅಂತಲೋ?
ಖಂಡಿತ ಅಲ್ಲ. ಈ ಚಿತ್ರದ ಪಾತ್ರ ನಾನು ಈವರೆಗೆ ಮಾಡದಂತಹುದು. ನಾನು ಎಲ್ಲ ತರಹದ ಪಾತ್ರಗಳಲ್ಲೂ ಮಾಡಲು ಇಷ್ಟಪಡುತ್ತೇನೆ. ಇಂತಹ ಸಿನಿಮಾಗಳಲ್ಲಿ ಮೊದಲು ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ. ಬಳಸುತ್ತಿದ್ದೇನೆ ಅಷ್ಟೆ.

webdunia
IFM
ನಿಮ್ಮ ಹೆಸರು ಶಾಹಿದ್ ಕಪೂರ್, ಹರ್ಮಾನ್ ಬೇವಾಜಾ ಜತೆಗೆ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿತ್ತಲ್ಲ?
ಹೌದು. ಗಾಸಿಪ್ ಕಾಲಂನಲ್ಲಿ ಕಂಡರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ನಾನು. ನಾನು ಏನೂಂತ ನನಗೆ ನನ್ನ ಮನೆಯವರಿಗೆ ಗೊತ್ತು. ಬಹುಶಃ ಶಾಹಿದ್ ಜತೆಗೆ ಕಾಣಿಸಿಕೊಂಡದ್ದು ಯಾಕೆ ಎಂದು ನನಗೀಗ ಅರ್ಥವಾಗುತ್ತಿದೆ. ಅದೊಂದು ದಿನ ಶಾಹಿದ್ ಶೂಟಿಂಗ್ ಸೆಟ್‌ಗೆ ಹೊಸ ಬೈಕ್ ತೆಗೆದುಕೊಂಡು ಬಂದಿದ್ದ. ಅವನ ಅಮ್ಮನೂ ಇದ್ದರು. ಸೆಟ್‌ನಲ್ಲಿ ಶೂಟಿಂಗ್ ಮುಗಿದ ತಕ್ಷಣ ನನ್ನ ಬಳಿ ಒಂದು ರೈಡ್ ಹೋಗಿ ಬರೋಣ್ವಾ ಎಂದ. ಸರಿ ಎಂದು ನಾನು ಬೈಕ್ ಹತ್ತಿದೆ. ಬೀಚ್‌ವರೆಗೂ ಬೈಕ್‌ನಲ್ಲಿ ಒಂದು ಸವಾರಿ. ತುಂಬ ಚೆನ್ನಾಗಿತ್ತು ಆ ಸವಾರಿ. ಇಷ್ಟಕ್ಕೇ ಗಾಸಿಪ್ ಕಾಲಂಗಳು ನಮ್ಮ ಬಗ್ಗೆ ಬರೆದ್ರು ಅಷ್ಟೆ. ಹೆಚ್ಚೇನೂ ಇಲ್ಲ.

ಸದ್ಯಕ್ಕೆ ನಿಮ್ಮ ಜೀವನದಲ್ಲಿ ಯಾರು ಎಂಟ್ರಿ ಪಡೆದಿದ್ದಾರೆ?
ನಾನು ಇನ್ನು 10 ವರ್ಷಗಳಿಗೆ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದೇನೆ. ನನ್ನ ಜೀವನದಲ್ಲಿ ಯಾರೂ ಎಂಟ್ರಿ ಪಡೆದಿಲ್ಲ ಕೂಡಾ. ನನ್ನ ವಿಶೇಷ ಆದ್ಯತೆ ನನ್ನ ಕೆಲಸ ಅಷ್ಟೆ.

ಈವರೆಗೆ ಮಾಧುರಿ ದೀಕ್ಷಿತ್‌ರನ್ನೇ ಅಪಾರವಾಗಿ ಇಷ್ಟಪಡುತ್ತಿದ್ದ ಖ್ಯಾತ ಕಲಾಕಾರ ಎಂ.ಎಫ್.ಹುಸೇನ್ ಈಗ ನಿಮ್ಮನ್ನು ನೆಚ್ಚಿಕೊಂಡಿದ್ದಾರಂತಲ್ಲ?
ಹೌದು. ಹುಸೇನ್ ನನ್ನ ವಿವಾಹ್ ಚಿತ್ರ ನೋಡಿ ತುಂಬ ಇಷ್ಟಪಟ್ಟಿದ್ದಾರೆ. ವಿವಾಹ್‌ನಲ್ಲಿ ಭಾರತೀಯ ನಾರಿಯೇ ಮೈವೆತ್ತಂತಿರುವ ನನ್ನ ರೂಪ ಹಾಗೂ ಮೌನವೇ ಮಾತಾಗುವ ನನ್ನ ಅಭಿನಯಕ್ಕೆ ಅವರು ಮನಸೋತಿದ್ದಾರೆ ಎಂದು ತಿಳಿಯಿತು. ಇದು ನನಗೊಂದು ಹೆಮ್ಮೆಯ ಹಾಗೂ ಖುಷಿಯ ವಿಚಾರ.

ಅನಿಲ್ ಕಪೂರ್ ನಿಮ್ಮಲ್ಲಿ ಮಾಧುರಿ ದೀಕ್ಷಿತ್‌ರನ್ನು ಕಂಡಿದ್ದಾರೆ. ಏನಂತೀರಾ ಇದಕ್ಕೆ?
ನನಗನಿಸುವುದು ಪ್ರತಿಯೊಬ್ಬರಲ್ಲೂ ಅವರದ್ದೇ ಆದ ವಿಶೇಷತೆಗಳಿರುತ್ತದೆ. ಅವರನ್ನು ಇನ್ನೊಬ್ಬರಿಗೆ ಹೋಲಿಸುವುದು ನನ್ನ ಮಟ್ಟಿಗೆ ಸರಿಕಾಣುವುದಿಲ್ಲ. ಆದರೂ, ಅನಿಲ್ ಕಪೂರ್ ನನ್ನಲ್ಲಿ ಮಾಧುರಿಯನ್ನು ಕಂಡಿದ್ದು ಖುಷಿಯ ವಿಚಾರವೇ. ಅನಿಲ್‌ಗೆ ತುಂಬಾ ಥ್ಯಾಂಕ್ಸ್.

ಶಾರ್ಟ್‌ಕಟ್‌ನಲ್ಲಿ ನಿಮ್ಮ ಮಾನಸಿ ಪಾತ್ರ ನಿಮ್ಮ ಹಳೆಯ ಇತರ ಪಾತ್ರಗಳಿಗಿಂತ ಹೇಗೆ ಭಿನ್ನ?
ಮಾನಸಿ ಮನೆಯಲ್ಲಿ ಸಾಕಷ್ಟು ಒತ್ತಡಗಳನ್ನು ಹೊಂದಿರುವ ಕುಟುಂಬದಿಂದ ಬಂದವಳು. ಆದರೆ ತನ್ನದೇ ಶಕ್ತಿ, ವ್ಯಕ್ತಿತ್ವವನ್ನು ಹೊಂದಿದಾಕೆ. ಹಾಗೂ ತನ್ನ ಕಾಲ ಮೇಲೆ ನಿಲ್ಲುವ ಅಪಾರ ಆಥ್ಮವಿಶ್ವಾಸವನ್ನೂ ಹೊಂದಿದಾಕೆ. ಹಾಗಿದ್ದಾಗ ಆಕೆ ತನ್ನ ಕುಟುಂಬ ವಿರುದ್ಧ ನಡೆದುಕೊಳ್ಳಬೇಕಾಗುತ್ತದೆ. ಇದೊಂದು ಗಟ್ಟಿತನ ಹೊಂದಿರುವ ಮಹಿಳೆಯ ಪಾತ್ರ. ನಾನು ಈವರೆಗೆ ಇಂತಹ ಪಾತ್ರದಲ್ಲಿ ಅಭಿನಯಿಸಿಲ್ಲ. ಇಂತಹ ಪ್ರಬುದ್ಧ ಪಾತ್ರ ನನಗಿಷ್ಟ.

ಅಮೃತಾ ರಾವ್ ಹಾಗಾದರೆ ಈಗ ಶಾರ್ಟ್‌ಕಟ್ ಮೂಲಕ ಹೊಸ ಸ್ಟೈಲ್ ಸೃಷ್ಟಿಸಲಿದ್ದಾಳೆ?
ಹೌದು. ಅದು ನನಗಿಷ್ಟ ಕೂಡಾ. ಈ ಹಿಂದೆ ಇಶ್ಕ್ ವಿಶ್ಕ್‌ನಲ್ಲೂ ಗುಂಗುರು ಕೂದಲ ವಿಶೇಷ ಹೇರ್‌ಸ್ಟೈಲ್‌ನಿಂದಾಗಿ ಹವಾ ಸೃಷ್ಟಿಸಿದ್ದೆ. ಮತ್ತೆ ಮೈ ಹೂಂ ನಾದಲ್ಲಿ ಮೂಗುತಿಯಿಂದಾಗಿ ಕಾಲೇಜು ಹುಡುಗಿಯರಲ್ಲಿ ಮತ್ತೆ ಹೊಸ ಸ್ಟೈಲ್ ಸೃಷ್ಟಿಸಿದೆ. ಈಗ ಮತ್ತೆ ಶಾರ್ಟ್‌ಕಟ್ ಕೂಡಾ ಅದೇ ತರಹದ ಸ್ಟೈಲ್ ಸೃಷ್ಟಿಸುತ್ತದೆ ಅಂತ ನಂಬಿಕೆಯಿದೆ. ಹೊಸ ಹೊಸ ಸ್ಟೈಲ್ ಮೂಲಕ ನನ್ನನ್ನು ಪ್ರತಿ ಸಿನಿಮಾದಲ್ಲೂ ತೋರಿಸಿದ ನಿರ್ದೇಶಕರಿಗೆ ನಾನು ಥ್ಯಾಂಕ್ಸ್ ಹೇಳಲೇಬೇಕು.
webdunia
IFM

Share this Story:

Follow Webdunia kannada