ವಾಯು ಬಾಧೆ ಮುಕ್ತಿಗೆ ಪವನಮುಕ್ತಾಸನ
ಪವನಮುಕ್ತ ಅಂದರೆ ಸಂಸ್ಕೃತದಲ್ಲಿ 'ವಾಯು ಮುಕ್ತ' ಎಂಬರ್ಥ. ದೇಹದಲ್ಲಿರುವ ಬೇಡವಾದ ವಾಯುವನ್ನು ದೇಹದಿಂದ ಹೊರಹಾಕುವ ಆಸನಕ್ಕೆ ಪವನಮುಕ್ತಾಸನ ಎಂಬ ಹೆಸರು. ಈ ಆಸನವು ಯೋಗಿಯ ಜೀರ್ಣಾಂಗಗಳಿಗೆ ವ್ಯಾಯಾಮ ನೀಡುತ್ತದೆ.ವಿಧಾನ ನೆಲದ ಮೇಲೆ ಅಂಗಾತ ಮಲಗಿ. ನಿಮ್ಮೆರಡೂ ಬದಿಗೆ ಉದ್ದಕ್ಕೆ ತೋಳುಗಳನ್ನು ಚಾಚಿ. ಅಂಗೈ ಕೆಳಮುಖವಾಗಿರಬೇಕು. ಕಾಲುಗಳನ್ನು ಹಿಂದಕ್ಕೆ ಮಡಿಚಿ. ಅಂಗಾಲುಗಳು
ನೆಲದ ಮೇಲೂರಿರಲಿ. ನಿಧಾನಕ್ಕೆ ದೀರ್ಘವಾಗಿ ಉಸಿರಾಡಿ. ಉಸಿರನ್ನು ಹೊರಬಿಡುತ್ತಾ ಕೆಳಗಿನ ಚಲನವಲನಗಳನ್ನು ಮುಂದುವರಿಸಿ. ಪಾದಗಳನ್ನು ಒಳಮುಖವಾಗಿ ಎಳೆಯಿರಿ. ಚಿತ್ರದಲ್ಲಿರುವಂತೆ ಕಾಲುಗಳನ್ನು ಮಡಿಚಿ.ಮಡಚಿರುವ ಮೊಣಕಾಲುಗಳನ್ನು ಎದೆಯತ್ತ ಎಳೆಯಿರಿ. ಅಂಗೈಗಳನ್ನು ನೆಲಕ್ಕೂರಿ ಭುಜಗಳು ಮತ್ತು ತಲೆಯನ್ನು ನೆಲದಿಂದ ಮೇಲಕ್ಕೆತ್ತಿ. ಮತ್ತೊಮ್ಮೆ ಅಂಗೈಗಳನ್ನು ನೆಲಕ್ಕೆ ಒತ್ತಿ ನಿಮ್ಮ ನಿತಂಬ ಮತ್ತು ನಡುವನ್ನು ಮೇಲಕ್ಕೆತ್ತಿ. ಮೊಣಕಾಲುಗಳು ಮತ್ತು ಪಾದಗಳನ್ನು ಜೋಡಿಸಿಡಬೇಕು. ಆದರೆ ತಲೆಯನ್ನು ಬಾಗಿಸಬೇಡಿ. ನಿಮ್ಮ ಕೈಗಳಿಂದ ಮಡಿಚಿದ ಕಾಲುಗಳನ್ನು ತಬ್ಬಿ. ನಿಧಾನಕ್ಕೆ ಉಸಿರನ್ನು ಹೊರಬಿಡುತ್ತಾ ಮೊಣಕಾಲುಗಳನ್ನು ಎದೆಯ ಎತ್ತರಕ್ಕೆ ತನ್ನಿ. ತಲೆಯನ್ನು ಕೆಳತರದೆಯೇ ಮೊಣಕಾಲು ಮತ್ತು ಪಾದಗಳನ್ನು ಜತೆಯಾಗಿಸಿ. ಉಸಿರನ್ನು ತಡೆಹಿಡಿದು ಈ ಭಂಗಿಯಲ್ಲಿ ಸುಮಾರು ಐದು ಸೆಕುಂಡುಗಳ ಕಾಲ ಇರಿ. ಸಂಪೂರ್ಣವಾಗಿ ಉಸಿರು ಹೊರಬಿಡಿ. ಮತ್ತೊಮ್ಮೆ ಉಸಿರು ಒಳಗೆಳೆಯುತ್ತಾ, ನಿಧಾನಕ್ಕೆ ನಿಮ್ಮ ತಲೆಯನ್ನು ಹಿಂದಕ್ಕೆ ತಂದು ನೆಲದ ಮೇಲಿರಿಸಿ. ಅದೇಕಾಲಕ್ಕೆ ನಿಮ್ಮ ಕೈಗಳ ಒತ್ತಡವನ್ನು ಕಾಲುಗಳಮೇಲೆ ಹಾಕಿ. ನಿಮ್ಮ ತೋಳುಗಳು ಮೊಣಕಾಲಿನ ಕೆಳ ಭಾಗದಲ್ಲಿ ಕಾಲುಗಳನ್ನು ಮಡಿಚಿದ ಸ್ಥಿತಿಯಲ್ಲಿ ಇರಬೇಕು. ಬಳಿಕ ನಿಧಾನವಾಗಿ ನಿಮ್ಮ ಕಾಲು ಮತ್ತು ಕೈಗಳನ್ನು ನೆಲದ ಮೇಲೆ ಚಾಚಿರಿ. ಆಸನದ ಬಳಿಕ ವಿಶ್ರಾಂತಿ ಪಡೆಯಿರಿ.ಅನುಕೂಲಗಳು ಯಾವುದೇ ವಯೋಮಾನದವರು ಈ ಆಸನದ ಅನುಕೂಲವನ್ನು ಪಡೆಯಬಹುದಾಗಿದೆ. ಇಳಿವಯಸ್ಸಿನಲ್ಲೂ ಇದರ ಅಭ್ಯಾಸ ಮುಂದುವರಿಸಬಹುದಾಗಿದೆ. ವಾಯು ಸಂಬಂಧಿ ಸಮಸ್ಯೆಗಳು ಈ ಆಸನದ ಅಭ್ಯಾಸದಿಂದ ಶಮನಗೊಳ್ಳುತ್ತವೆ. ಈ ಆಸನದ ಪ್ರಮುಖ ಉದ್ದೇಶವೇ ವಾಯು ತನ್ನಿಂತಾನೆ ಮುಕ್ತವಾಗುವುದು. ಈ ಆಸನಾಭ್ಯಾಸವು ಯೋಗಿಯ ಕಿಬ್ಬೊಟ್ಟೆ ಮತ್ತು ದೊಡ್ಡಕರುಳಿನಲ್ಲಿ ಶೇಖರವಾಗಿರುವ ಗಾಳಿಯನ್ನು ಹೊರಹಾಕುತ್ತದೆ.