Webdunia - Bharat's app for daily news and videos

Install App

ಮಹಿಳೆಯರು ಎಷ್ಟು ಸುರಕ್ಷಿತ.... ?

Webdunia
ಮಂಗಳವಾರ, 28 ಫೆಬ್ರವರಿ 2017 (15:20 IST)
ಹೆಣ್ಣಿಗೆ ಭಾರತೀಯ ಸಮಾಜದಲ್ಲಿ ಅದೆಷ್ಟು ಗೌರವ, ಪೂಜನೀಯ ಸ್ಥಾನ... ಆಕೆ ಪ್ರೀತಿಯ ತಾಯಿ, ಅಕ್ಕ, ತಂಗಿ, ಪ್ರಿಯೆ, ಪ್ರಿಯತಮೆ ಹೀಗೆ ಎಲ್ಲ ಸ್ಥಾನವನ್ನೂ ಅಲಂಕರಿಸುತ್ತಾಳೆ. ಆದರೆ ಪುರುಷ ಪ್ರಧಾನ(!!) ವ್ಯವಸ್ಥೆಯಲ್ಲಿ ಇಂದಿಗೂ ಹೆಣ್ಣು ಅನುಭವಿಸುತ್ತಿರುವ ಯಾತನೆ, ನೋವುಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಮಹಿಳಾ ದಿನಾಚರಣೆ (ಮಾ.8) ಅಂಗವಾಗಿ ಒಂದು ಬರಹ ಇಲ್ಲಿದೆ...
ಹೆಣ್ಣು ನಾಲ್ಕು ಗೋಡೆ ಮಧ್ಯೆಯೇ ವಾಸಿಸಬೇಕಾದವಳಲ್ಲ, ಆಕೆಗೂ ಸ್ವಾತಂತ್ರ್ಯ, ಹಕ್ಕು, ಸ್ಥಾನಮಾನದ ಅಗತ್ಯ ಇದೆ ಎಂಬಂತಹ ಮಾತುಗಳು ಬಹಳ ಹಿಂದಕ್ಕೆ ಹೋಗಿವೆ. ಅಂತಹ ವಾತಾವರಣ ಬಹಳಷ್ಟು ಕಡಿಮೆಯಾಗಿದೆ. ಇಂದು ಮಹಿಳೆಯರು ನಾಲ್ಕು ಗೋಡೆಯನ್ನು ಯಶಸ್ವಿಯಾಗಿ ದಾಟಿ ಮುಖ್ಯವಾಹಿನಿಗೆ ಬಂದಿದ್ದಾರೆ. ಸ್ವಾತಂತ್ರ್ಯ, ಹಕ್ಕು ಎಲ್ಲವೂ ದೊರೆತಿದೆ ಎಂಬಂತಹ ನಿಟ್ಟುಸಿರುವ ಬಿಡುವ ವಾತಾವರಣ ಭಾರತದಲ್ಲಿ (ಸ್ಥಳೀಯವಾಗಿಯಾಗಲಿ) ಸೃಷ್ಟಿಯಾಗಿದೆಯೇ ಎಂಬುದನ್ನು ವಿಶ್ಲೇಷಿಸಬೇಕಾಗಿದೆ. ಇಂದು ಸ್ವಾತಂತ್ರ್ಯ, ಹಕ್ಕುಗಳಿಗಿಂತ ಮಹಿಳೆಯರ ಪಾಲಿಗೆ ಬೇರೆಯದೆ ತೆರನಾದ ಸಮಸ್ಯೆಗಳು ಆವರಿಸಿಕೊಂಡು ಬಿಟ್ಟಿವೆ ಎನ್ನುವುದಕ್ಕೆ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಗಮನಿಸಿದರೆ ಸಾಕು, ಹೆಚ್ಚಿಗೆ ಏನೂ ಹೇಳಬೇಕಾದ ಅವಶ್ಯಕತೆ ಇಲ್ಲ..
 
ಘಟನೆ 1 : ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಪತಿ ಈಗ ನನ್ನ ಕಣ್ಣ ಮುಂದೆಯೇ ಆರಾಮವಾಗಿದ್ದಾನೆ. ಅವನ ವಿಕೃತಿಗೆ ನನ್ನ ಬದುಕೇ ಬಲಿಯಾಯಿತು. ಆ ಬಗ್ಗೆ ಆತನಿಗೆ ಯಾವುದೇ ಅಳುಕಿಲ್ಲ. ಈ ಘಟನೆ ನಂತರ ನನಗೆ ಯಾರೂ ಮನೆಯನ್ನು ಬಾಡಿಗೆಗೆ ನೀಡಲಿಲ್ಲ. ಹತ್ತಾರು ಮನೆಗಳ ಬಾಗಿಲು ಬಡಿದರೂ ಮನೆ ಸಿಗಲಿಲ್ಲ, ನನಗೆ ಮನೆ ನೀಡದಿರಲು ಕಾರಣವಾದರೂ ಏನು ಎಂದು ಅಲವತ್ತುಕೊಂಡಾಕೆ ಗಂಡನ ಆಸಿಡ್ ದಾಳಿಗೆ ತುತ್ತಾದ ನತದೃಷ್ಟೆ ಶಾಂತಿ. 
 
ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪಿಗಳಿಗೆ ಒಂಬತ್ತು ವರ್ಷ ಕಳೆದರೂ ಶಿಕ್ಷೆಯಾಗಿಲ್ಲ ಎಂದು ಕಣ್ಣೀರು ಸುರಿಸಿದಾಕೆ ಹಸೀನಾ. ಇವರೆಲ್ಲ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಆಸಿಡ್ ದಾಳಿ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಭಾಗವಹಿಸಿ ವಿಕೃತ ಪುರುಷನ ಕ್ರೌರ್ಯಕ್ಕೆ ಬಲಿಯಾದ ನೋವಿನ ಘಟನೆಯ ಸುರುಳಿಯನ್ನು ಬಿಚ್ಚಿಟ್ಟಿದ್ದರು.
 
ಘಟನೆ 2: ಒಬ್ಬಂಟಿ ಆದಿವಾಸಿ ಮಹಿಳೆಯನ್ನು ಅಸ್ಸಾಂನ ಗುವಾಹಟಿಯಲ್ಲಿ ಹಾಡಹಗಲೇ ಎಲ್ಲರೆದುರಲ್ಲೇ ಬೆತ್ತಲೆಗೊಳಿಸಿ ಅಟ್ಟಾಡಿಸುತ್ತಿರುವ ಪುರುಷನ ಅಮಾನವೀಯ ಕ್ರೌರ್ಯದ ದೃಶ್ಯವನ್ನು ಸಿಎನ್‌‌ಎನ್ ಹಾಗೂ ಟೈಮ್ಸ್ ದೃಶ್ಯ ಮಾಧ್ಯಮಗಳು ಪದೇ, ಪದೇ ತೋರಿಸುತ್ತಿದ್ದವು.
 
ಒಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಆಕೆಯನ್ನು ಗೋಳುಹೊಯ್ದುಕೊಳ್ಳುವುದು ಇದು ನಾಗರಿಕ ಸಮಾಜದ ಲಕ್ಷಣಗಳಾ? ಬಳಿಕ ಆಯೋಗ, ದೂರು-ದುಮ್ಮಾನಗಳು ಅಂತ ಗಮನಸೆಳೆದಾಗ ಮುಖ್ಯಮಂತ್ರಿಗಳು ಆಕೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಆರೋಪಿಗಳನ್ನು ಬಂಧಿಸಿದರು.
 
ಮಾನ ಎಲ್ಲರಿಗೂ ಒಂದೇ, ಆಕೆಯ ದಯನೀಯ ಸ್ಥಿತಿಯನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದರು. ಹಾಗೆ ಹೋದ ಮಾನ ಪರಿಹಾರ ಕೊಟ್ಟರೆ ಮತ್ತೆ ವಾಪಸು ಬರುತ್ತದೆಯಾ... ಯಾವ ಪರಿಹಾರ ಆಕೆಯ ಮಾನಸಿಕ ನೋವು, ಯಾತನೆಗಳನ್ನು ನೀಗಿಸುತ್ತದೆ...?
 
ಅದರಂತೆಯೇ ಹೊಸ ವರ್ಷದ ಅಮಲಿನಲ್ಲಿ ಮುಂಬೈಯಲ್ಲಿ ಪಡ್ಡೆಗಳು ನಡೆಸಿದ ಮಹಿಳೆಯರ ಮೇಲಿನ ಚುಡಾಯಿಸುವ ಘಟನೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಗೋವಾ ಕಡಲ ಕಿನಾರೆಯಲ್ಲೂ ಅದೇ ತೆರನಾದ ಘಟನೆ ನಡೆಯಿತು. ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಯಿತು. ಹೀಗೆ ಸಾಲು, ಸಾಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಮಾನವೀಯ ಕೃತ್ಯಕ್ಕೆ ಸರಿಯಾದ ಕಾನೂನಾದರೂ ಬಂದಿದೆಯಾ? ವರದಕ್ಷಿಣೆ ಹಿಂಸೆಗೆ ಬಲಿಯಾಗುವವರ ಸಂಖ್ಯೆ ಇಂದಿಗೂ ಮುಂದುವರಿದಿದೆ.
 
ಭಾರತದಲ್ಲಿ ನಡೆಯುತ್ತಿರುವ ಆಸಿಡ್ ದಾಳಿ ಪ್ರಕರಣಗಳಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ. ಈವರೆಗೆ 58 ಪ್ರಕರಣಗಳು ನಡೆದಿವೆ. ಹೀಗೆ ಪುರುಷನ ವಿಕೃತಿಯ ದಾಳಿಗೆ ಸಿಲುಕಿದವರಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಆಸಿಡ್ ದಾಳಿಯಿಂದ ಬದುಕುಳಿದ ಯುವತಿಯರು, ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ.

ಇದೀಗ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ (ರಾತ್ರಿ ಪಾಳಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಬಗ್ಗೆ) ಐಟಿ-ಬಿಟಿ, ಕಾಲ್ ಸೆಂಟರ್, ಬಿಪಿಒಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಕುರಿತು ವಿಶೇಷ ಕಾನೂನು ಜಾರಿಗೆ ತರಲು ಆಗ್ರಹಿಸುವುದಾಗಿ ಹೇಳಿದೆ.

ಆದರೆ ಇತ್ತೀಚೆಗಷ್ಟೇ ಬಿಪಿಒ ಉದ್ಯೋಗಿ ಪ್ರತಿಭಾ ಹತ್ಯೆ ಪ್ರಕರಣದಲ್ಲಿ, ಮಹಿಳಾ ಸಿಬ್ಬಂದಿಯ ರಕ್ಷಣೆ ಕುರಿತು ಹೊಣೆಯನ್ನು ಕಂಪೆನಿ ಅಥವಾ ಸಾರಿಗೆ ಸೌಲಭ್ಯವನ್ನು ಒದಗಿಸುವ ಸಂಸ್ಥೆ ಹೊರಬೇಕೆ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿತ್ತು.( ಈ ಬಗ್ಗೆ ಸ್ಪಷ್ಟ ನಿಲುವು ನೀಡುವಂತೆ ಸುಪ್ರೀಂಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಆಯೋಗ ಹೇಳಿದೆ). ಮೇರಾ ಭಾರತ್ ಮಹಾನ್ !!!..

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments