Select Your Language

Notifications

webdunia
webdunia
webdunia
webdunia

ಪ್ರೇಮದ ಹುಚ್ಚಿಗೆ ಹತ್ತು ಮುಖ!

ಪ್ರೇಮದ ಹುಚ್ಚಿಗೆ ಹತ್ತು ಮುಖ!
ನಾಗೇಂದ್ರ ತ್ರಾಸಿ

ND
ಹಿಂದೆಂದೂ ಈ ತೆರನಾದ ಆದ್ಯತೆ ಪ್ರೇಮಿಗಳ ದಿನಾಚರಣೆಗೆ ಸಿಕ್ಕಿಲ್ಲ, ಈ ಬಾರಿ ಶ್ರೀರಾಮಸೇನೆಯ ಅಬ್ಬರದಿಂದಾಗಿ ಆ ಸಂದರ್ಭ ಒದಗಿ ಬಂದಿದೆ. ಇಂದು ಎಲ್ಲವೂ ವಿವಾದದ ಕೇಂದ್ರ ಬಿಂದುವಾಗುತ್ತಿರುವುದು ಸ್ಪಷ್ಟ. ಸಾಮಾನ್ಯ (?!) ವಿಷಯ ಕೂಡ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ಅದಕ್ಕೀಗ ಪ್ರೇಮಿಗಳ ದಿನಾಚರಣೆಯೂ ಸೇರ್ಪಡೆಗೊಂಡಿದೆ. ಪ್ರೇಮಕ್ಕೂ ದಿನಾಚರಣೆ ಬೇಕಾ ?ಎಂಬ ಪ್ರಶ್ನಿಸಿಕೊಳ್ಳಬೇಕಾಗಿದೆ. ಪ್ರೇಮಿಸಿಲ್ಲ ಎಂಬ ಒಂದೇ ಕಾರಣಕ್ಕೆ ಮುಗ್ದ ಯುವತಿಯರ ಮುಖದ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣವೂ ನಮ್ಮ ಕಣ್ಣ ಮುಂದಿದೆ...ಇದ್ಯಾವ ಪ್ರೇಮ ? ಲಂಗು-ಲಗಾಮಿಲ್ಲದ ಪ್ರೇಮದ ಹುಚ್ಚಿಗೆ ಸಿಕ್ಕಿ ಛಿದ್ರವಾಗುವ ಬದುಕಿನ ಬಗ್ಗೆಯೂ ಆಲೋಚಿಸಬೇಕಾಗಿದೆ. ಪ್ರೇಮದ ಹುಚ್ಚಿಗೆ ಹತ್ತು ಮುಖಗಳು...ಅದರಲ್ಲಿ ಪ್ರೀತಿ, ವಿಶ್ವಾಸ, ವ್ಯಾಮೋಹ, ನಿರೀಕ್ಷೆ, ಮೋಸ, ಹಪಾಹಪಿ, ವೈರಾಗ್ಯ, ಆತ್ಮಹತ್ಯೆ, ನಿರಾಸೆ...ಹೀಗೆ ಎಲ್ಲವೂ ಇದೆ.

ಘಟನೆ-1: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿನ ಹಿಂದೂ ವಿದ್ಯಾರ್ಥಿಯೊಬ್ಬ ಮುಸ್ಲಿಮ್ ಯುವತಿಯನ್ನು ಪ್ರೀತಿಸುತ್ತಾನೆ. ಅದು ಕೊನೆಗೆ ಮದುವೆ ಹಂತಕ್ಕೆ ತಲುಪಿದಾಗ ಉದ್ಭವಿಸಿದ್ದೇ ವಿವಾದ. ಹುಡುಗಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗತೊಡಗಿ ಇಡೀ ಸಮುದಾಯವೇ ತಿರುಗಿ ಬಿದ್ದಿತ್ತು. ಬಳಿಕ ಹುಡುಗನನ್ನು ಅಪಹರಿಸಲಾಯಿತು. ಈ ಘಟನೆಯಲ್ಲಿ ಇಡೀ ಊರಿಗೆ ಊರೇ ಒಗ್ಗಟ್ಟಾಗಿತ್ತು, ಅಲ್ಲಿ ಹಿಂಸಾಚಾರ ನಡೆಯುವ ಮೂಲಕ ಪ್ರಥಮ ಬಾರಿಗೆ ಪ್ರೇಮ ಪ್ರಕರಣದಿಂದ ಕುಂದಾಪುರ ತಾಲೂಕು ಕರ್ಫ್ಯೂ ಹೇರಿಕೆ ಕಂಡಿತ್ತು. ಎಲ್ಲಾ ವಿರೋಧ-ಅಡೆ ತಡೆಗಳ ನಡುವೆಯೂ ಇಬ್ಬರ ವಿವಾಹವನ್ನು ನೆರವೇರಿಸಲಾಗಿತ್ತು. ಈ ರೋಚಕ ಪ್ರಸಂಗ ಪತ್ರಿಕೆಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು.

ಘಟನೆ-2: ವೃತ್ತಿಯಿಂದ ನಿವೃತ್ತಿಯಾಗಲು ಕೆಲವೇ ವರ್ಷ ಬಾಕಿ ಇತ್ತು. ಕಾಲೇಜಿನಲ್ಲಿ ಅವರಿಗೆ ಒಳ್ಳೇ ಹೆಸರಿತ್ತು. ಆದರೆ ಮಾಡುವುದೇನು...ಬೆಳೆದು ನಿಂತ ಮಗ ಹಾಗೂ ಹೆಂಡತಿ ಹೇಗಾದರು ಮಾಡಿ 'ನಮ್ಮ ಮನೆಯವರಿಗೆ ಬುದ್ಧಿ ಹೇಳಿ' ಎಂದು ಗೋಗರೆಯುತ್ತಿದ್ದರು. ಕಾಲೇಜಿನ ಉಪನ್ಯಾಸಕರಾಗಿದ್ದ ಪ್ರೊಫೆಸರ್ ತನ್ನದೇ ವಿದ್ಯಾರ್ಥಿನಿಯೊಬ್ಬಳ ಪ್ರೇಮಪಾಶಕ್ಕೆ ಬಿದ್ದಿದ್ದರು! ಈ ವಿಚಾರದಲ್ಲಿ ಅವರು ಯಾರ ಮಾತನ್ನು ಕೇಳಲು ಸಿದ್ಧರಿರಲಿಲ್ಲವಾಗಿತ್ತು. ಅರವತ್ತಕ್ಕೆ ಅರಳು-ಮರಳು ಎನ್ನುತ್ತಾರೆ ಬಹುಶಃ ಇಂತಹ ಘಟನೆಯನ್ನು ನೋಡಿಯೇ ಹೇಳಿರಬೇಕು ಎಂದು ಹಂಗಿಸಿದವರೇ ಹೆಚ್ಚು. ಪ್ರಕರಣ ಕೆಲವು ವರ್ಷಗಳ ನಂತರ ಸುಖಾಂತ್ಯ ಕಂಡಿತ್ತು.

ಘಟನೆ-3: ಅವರದ್ದು ಸರಾಸರಿ ಹತ್ತು ವರ್ಷಗಳ ಪ್ರೇಮ. ಅಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲವಾಗಿತ್ತು. ಜಾತಿ-ಮತ-ಭೇದಕ್ಕೆ ಅವಕಾಶ... ಊಹೂಂ ಕೇಳಲೇಬಾರದು. ಆದರ್ಶದ ಕನಸು ಹೊತ್ತು ಪ್ರೇಮದ ಯಾತ್ರೆಯಲ್ಲಿ ಪಯಣಿಸಿದ್ದರು. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆಯಲ್ಲ, ಅದು ದಾಟಲು ಆರಂಭವಾದಾಗ ಹುಡುಗಿ ಕೇಳುತ್ತಿದ್ದದ್ದು ಒಂದೇ ಮಾತು. ಯಾವಾಗ ಮದುವೆ ಮಾಡಿಕೊಳ್ಳುತ್ತಿ ಅಂತ? ಆತನಲ್ಲಿ ಸ್ಪಷ್ಟ ಉತ್ತರ ಇರುತ್ತಿರಲಿಲ್ಲ, ಕಾದು....ಕಾದು ಸುಸ್ತಾದ ಆಕೆ ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದಳು... ಹತ್ತು ವರ್ಷಗಳ ಸುದೀರ್ಘ ಪ್ರೇಮ ಸಂಬಂಧ (!) ತೊರೆದು ನೋವು, ನಿರಾಸೆಯ ಜತೆಗೆ ಹಸೆಮಣೆ ಏರಿದ್ದಳು.

ಪ್ರೇಮದ ಬಗ್ಗೆ ರಜನೀಶ್ ಮಾತನಾಡಿದಷ್ಟು ಯಾರು ಮಾತನಾಡಿರಲಿಕ್ಕಿಲ್ಲ. ಉಳಿದಂತೆ ಎಲ್ಲ ಮತ-ಧರ್ಮದ ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿಗಳು ಪ್ರೇಮದ ವಿರೋಧಿಗಳೇ ! ಯಾರು ಮೊದಲು ತನ್ನನ್ನು ತಾನು ಪ್ರೀತಿಸಿಕೊಳ್ಳಲಾರನೋ ಆತ ಮತ್ತೊಬ್ಬರಿಗೂ ಪ್ರೇಮವನ್ನೀಯಲಾರ. 'ಸ್ವಪ್ರೇಮ' ಎಂಬುದನ್ನು ತಿಳಿಯುವವರೆಗೆ ಪ್ರೇಮ ಎಂದರೇನು ಎಂಬುದರ ಅರ್ಥ ಆಗುವುದು ಕಷ್ಟ.

ಪ್ರೇಮವನ್ನು ಹುಟ್ಟು ಹಾಕಲು ಏನೊಂದೂ ಪ್ರಯತ್ನ ಮಾಡಬೇಕಾಗಿಲ್ಲ. ಅದು ಹೂವಿನಂತೆ ಸಹಜವಾಗಿ ಅರಳುವುದು. ಈ ಪ್ರೇಮದ ಪುಷ್ಪ ಅರಳಲು ಒಂದು ವಿಶಿಷ್ಟವಾದ ಪರಿವೇಶ ಬೇಕಾಗುವುದು. ನಿಜಕ್ಕೂ ನಾವು ನಮ್ಮ ಅಜ್ಞಾನದಲ್ಲಿ ಯಾವುದನ್ನು ಪ್ರೇಮವೆಂದು ತಿಳಿವೆವೋ ಅದು ಕೇವಲ ಒಂದು ಸಂಬಂಧ-ಒಂದು ನಂಟು. ನಾವು ನಮ್ಮ ಜಾಗೃತಿಯ ಚೈತನ್ಯಾವಸ್ಥೆಯಲ್ಲಿ ಯಾವುದನ್ನು ತಿಳಿಯುವೆವೋ ಅದು ಯಾವುದೊಂದು ಸಂಬಂಧವಾಗಿ, ನಂಟಾಗಿ ಉಳಿಯದು. ಅದರ ಗುಣವಂತಿಕೆಯೇ ಬದಲಾಗುವುದು. ಆಗ ನಾನು ನಿಮ್ಮನ್ನು ಪ್ರೇಮಿಸುತ್ತೇನೆ ಎಂಬುದು ಇರದು....ನಾನೇ ಪ್ರೇಮಿ ಎಂದೆನ್ನಬೇಕಾಗುತ್ತದೆ! ಪ್ರೇಮ ಸಂಕೀರ್ಣವಾದದ್ದು, ಅದು ಕಾಲ-ದೇಶವನ್ನು ಮೀರಿರುವುದು. ಅದಕ್ಕೆ ದಿನ...ಗಂಟೆ...ವರ್ಷದ ಪರಿಧಿ ಬೇಕಾಗಿಲ್ಲ....

Share this Story:

Follow Webdunia kannada