ಮನವ ಮುಟ್ಟಿದವನಿಗೆ...

ಸಪ್ನಾ
WD
ನನ್ನ ಡಿಯರ್,

ಹೇಗಿದ್ದೀಯ ಎಂದು ಕೇಳುವುದಿಲ್ಲ. ಯಾಕಂದ್ರೆ ನಿನ್ನನ್ನು ಪ್ರತಿಕ್ಷಣ ನೋಡಲಾಗದಿದ್ದರೂ ಪ್ರತಿ ದಿನ ನೋಡುತ್ತೇನಲ್ಲ ಹಾಗಾಗಿ. ನಿನ್ನೊಂದಿಗೆ ಸಿಕ್ಕಿದರೆ ಮಾತೂ ಆಡುತ್ತೇನೆ. ನಿನ್ನ ಆ ಕಣ್ಣರಳಿಸಿ ನಗುವ ಶೈಲಿಯನ್ನು ಶುಭೋದಯವಾಗಿ ನಾನು ಪ್ರತಿ ದಿನ ಕಾಣದಿದ್ದರೆ ಆ ನಗುವಿನ ಕಾಣುವಿಕೆಗಾಗಿ ಪ್ರಯತ್ನಿಸುತ್ತೇನೆ, ಸೋತರೆ ಪರಿತಪಿಸುತ್ತೇನೆ, ಆನಂತರದ ಗಳಿಗೆ ಎಲ್ಲವೂ ಶೂನ್ಯ ನನಗೆ. ನೀನು ಕೆಲವೊಮ್ಮೆ ನಾಟಕೀಯವಾಗಿ ನಮಸ್ಕಾರ ಮಾಡುವ ರೀತಿ ನನಗೆ ತುಂಬಾ ಇಷ್ಟ.

ನೀನು ಯಾಕೆ ಎಲ್ಲಾ ಹುಡುಗರಂತೆ ಇಲ್ಲ - ಸ್ವಲ್ಪ ಸ್ಪೆಶಲ್ ಆಗಿದ್ದೀಯ? ಅಥವಾ ನನಗೆ ಅನ್ನಿಸುವುದು ಹಾಗೆಯಾ? ನೀನು ಏನು ಮಾಡಿದರೂ ಇಷ್ಟವಾಗ್ತೀಯ, ನನ್ನ ಮನ ಗೆಲ್ತೀಯ, ಮನ ಮುಟ್ತೀಯ. ನನ್ನಲ್ಲಿರುವ ಈ ಭಾವನೆಗೆ ನಾನೇ ಒಂದು ಹೆಸರು ನೀಡಲಿಲ್ಲ. ಇನ್ನು ನಿನ್ನ ಕೇಳಿ ಪ್ರಯೋಜನವೇನು ಅಲ್ವಾ ಡಿಯರ್? ಈ ಭಾವನೆಗಳನ್ನು ನಿನ್ನಲ್ಲಿ ಹೇಳಿಕೊಳ್ಳಲಾಗದೆ ಒದ್ದಾಡುತ್ತಿದ್ದೇನೆ. ಆದರೂ ಕೆಲವೊಮ್ಮೆ ನನ್ನ ಗೆಳತಿಯರು ಹೇಳುವಂತೆ ಇದು ಪ್ರೀತಿ ಇರಬಹುದೇನೋ.

ಹೌದು ನನಗೂ ಇತ್ತೀಚೆಗೆ ಗೊತ್ತಾಗಿದೆ ಪ್ರೀತಿಯ ಸ್ಪರ್ಶಗಳೇ ಇವು ಎಂದು. ಇದನ್ನು ನೀನೇ ನನ್ನಲ್ಲಿ ಮೂಡಿಸಿದ್ದು. ಇಂತಹ ಭಾವನೆಗಳಿಲ್ಲದ ನನ್ನದೇ ಪ್ರಪಂಚದಲ್ಲಿ ನಾನಿದ್ದೆ. ಆದರೆ ಆ ದಿನಗಳಲ್ಲಿ ನೀನು ಏನೇನೋ ಮೋಡಿ ಮಾಡಿ ನನ್ನನ್ನು ನಿನ್ನೆಡೆ ಸೆಳೆಯಲು ಪ್ರಯತ್ನಿಸಿದೆ. ನಾನೋ ಬಲುಬೇಗ ಸಿಲುಕಿದೆ ನಿನ್ನ ಪ್ರೀತಿಯ ಬಲೆಯಲ್ಲಿ. ಆದರೆ ಈಗ ಯಾಕೆ ಏನಾಗಿದೆ? ನಿನ್ನ ಆ ಸರ್ಕಸ್ ಈಗ ಎಲ್ಲಿ ಹೋಗಿದೆ? ನನ್ನ ಗಮನವನ್ನು ನಿನ್ನೆಡೆ ಸೆಳೆಯಲು ಮಾಡಿದ ಆ ಹಾವಭಾವಗಳು ಈಗ ಕೆಲಸ ಮಾಡುವುದಿಲ್ವಾ? ಈಗ ನಾನು ನಿನ್ನೊಡನೆ ಮಾತನಾಡ್ಬೇಕು, ನನ್ನ ಭಾವನೆಗಳನ್ನು ಹಂಚಿಕೊಳ್ಳಬೇಕು ಎಂದು ಎಷ್ಟು ಸಲ ಪ್ರಯತ್ನಿಸಿದರೂ ನೀನು ಮಾತ್ರ ಏನೂ ಆಗಿಲ್ಲವೇನೋ, ನನಗೂ ನಿನಗೂ ಏನೂ ಸಂಬಂಧವಿಲ್ಲವೇನೋ ಎಂಬಂತೆ ಆಡುತ್ತಿರುತ್ತೀಯಲ್ಲ ಯಾಕೆ?

ನಿನ್ನ ಬಗ್ಗೆ ಕನಸು ಕಟ್ಟಿ, ನಿನ್ನ ಬಗ್ಗೆಯೇ ಚಿಂತಿಸಿ ನಿದ್ದೆ ಮಾಡದೆ ರಾತ್ರಿ ಕಳೆಯುವ ಹಾಗೆ ಆಗಿದೆಯಲ್ಲ. ಇದೆಲ್ಲ ನಿನಗೆ ಅರ್ಥ ಆಗೋದಿಲ್ವಾ? ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಯಾಕೆ ಗೊತ್ತಾ? ನೀನು ಇತರ ಹುಡುಗಿಯರೊಂದಿಗೆ ಓವರ್ ಆಗಿ ಬೆರೀತೀಯಂತೆ, ನೀನು ಸರಿ ಇಲ್ವಂತೆ ಎಂದೆಲ್ಲ ನಿನ್ನ ಬಗ್ಗೆ ಕೆಲವರು ಇಲ್ಲ ಸಲ್ಲದ ಅಪವಾದ ಹೊರಿಸುತ್ತಾರೆ. ಹೇಳು ಡಿಯರ್ ಹೌದಾ? ಈ ನನ್ನ ಪುಟ್ಟ ಹೃದಯಕ್ಕೆ ಅದನ್ನು ಅರಗಿಸಿಕೊಳ್ಳೋ ಶಕ್ತಿ ಇಲ್ಲ. ಹಾಗೇನೂ ಇಲ್ಲ, ನೀನು ತುಂಬಾ ಒಳ್ಳೆಯ ಹುಡುಗ ಅಲ್ವಾ?

ನಿನ್ನೊಂದಿಗೆ ಮಾತನಾಡುತ್ತೇನೆ. ಆದರೆ ಎಂದೂ ಈ ನನ್ನ ಭಾವನೆಗಳನ್ನು ಹೇಳಿಕೊಂಡಿಲ್ಲ. ಕಾರಣ ಗೊತ್ತಾ? ಒಂದು ವೇಳೆ ನೀನು ನನ್ನ ಪ್ರೀತಿಯನ್ನು ನಿರಾಕರಿಸಿದರೆ ಎಂಬ ಭಯ. ನೀನು ನಿರಾಕರಿಸಿದ ನಂತರ ನನಗೇನೂ ಉಳಿಯುವುದಿಲ್ಲ, ಈ ಜಗತ್ತಿನಲ್ಲಿ ಎಲ್ಲವೂ ಶೂನ್ಯವಾಗುತ್ತದೆ. ಪ್ರೀತಿಯನ್ನು ಹೇಳಿಕೊಳ್ಳಲು ವ್ಯಾಲೆಂಟೈನ್ಸ್ ದಿನವೇ ಆಗಬೇಕಾಗಿಲ್ಲ. ಬೇರೆ ದಿನಗಳಲ್ಲೂ ಹೇಳಬಬಹುದು ಅಲ್ವಾ ಡಿಯರ್? ಯಾಕಂದ್ರೆ ಹೇಳಿಕೊಳ್ಳಬೇಕೆಂಬ ದಿನ ಹತ್ತಿರ ಬಂದ ಹಾಗೆ ನನಗೆ ಭಯ ಪ್ರಾರಂಭವಾಗುತ್ತದೆ. ಹಾಗಾಗಿ ಆ ದಿನವನ್ನು ಮುಂದೂಡುತ್ತಾ ಬರಬಹುದಲ್ವ!!ಯಾವತ್ತಾದ್ರೂ ನೀನು ನನ್ನನ್ನು ಸ್ವೀಕರಿಸುತ್ತೀಯ ಎಂಬ ಆ ಒಂದು ಕಲ್ಪನೆಯೇ ಸಾಕು ನನಗೆ ನೆಮ್ಮದಿಯಾಗಿರಲು, ಕನಸು ಕಾಣಲು...

ನೀನು ನನ್ನಿಂದ ತುಂಬ ತುಂಬಾ ದೂರ ಹೋಗುತ್ತಿದ್ದೀಯ ಎಂದು ನನಗೂ ತಿಳಿದಿರುವ ವಾಸ್ತವ. ಆದರೆ ಏನು ಮಾಡಲಿ ನಿನ್ನ ಈ ಮೋಸವನ್ನು ನನ್ನ ಮನಸ್ಸು ಒಪ್ಪುವುದೇ ಇಲ್ಲ. ಯಾವಾಗಲೂ ನಿನಗೇ ಸಪೋರ್ಟ್ ನೀಡುತ್ತದೆ! ಬಹುಶಃ ಅದಕ್ಕೇ ಇರಬೇಕು ನಿಜವಾದ ಪ್ರೀತಿ ಎನ್ನುವುದು. ಏನೇ ಆಗಲಿ ಡಿಯರ್, ನಾನು ಎಂದೆಂದಿಗೂ ನಿನ್ನವಳೇ. ಯಾವತ್ತು ಬಂದರೂ ನಿನಗಾಗಿ ಕಾಯುತ್ತಿರುತ್ತೇನೆ....

ಆದರೆ 'ಕಾಲ' ಯಾರನ್ನು ಬದಲಾಯಿಸುತ್ತದೆ ಎಂಬುದು ತಿಳಿದಿಲ್ಲ......
ಇಂತೀ ನಿನ್ನ
ಎಂದೆಂದಿಗೂ ಮರೆಯದವಳು